ಅಥವಾ
(220) (73) (20) (3) (8) (5) (0) (0) (17) (4) (3) (15) (0) (0) ಅಂ (31) ಅಃ (31) (141) (1) (59) (8) (0) (12) (0) (14) (0) (0) (0) (0) (1) (0) (0) (66) (0) (14) (5) (89) (68) (1) (50) (40) (85) (1) (5) (0) (34) (11) (24) (1) (81) (57) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಸುಜಾÕನಸತ್ಕ್ರಿಯಾನುಭಾವ ಗುರುಲಿಂಗಜಂಗಮವೆನ್ನ ಅಂಗ ಮನ ಪ್ರಾಣವೆಂದರಿದು, ಕಸಗಳೆದು ವಿಷಯ ಪದಾರ್ಥವನು, ಸುಶೀಲ ಸಾವಧಾನದಿಂದರ್ಪಿಸಿ ಅಸಮಪ್ರಸಾದವಕೊಂಡು, ಪರಮಾನಂದಸುಖಿಮುಖಿಯಾಗಿರ್ದೆನಯ್ಯಾ ಗುರುನಿರಂಜನ ಚನ್ನಬಸವಲಿಂಗಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಸುಚಿತ್ತವನೊಳಕೊಂಡ ಲಿಂಗದ ಕಳೆಯ ನೋಡಾ, ಸುಬುದ್ಧಿಯನೊಳಕೊಂಡ ಲಿಂಗದ ಕಳೆಯ ನೋಡಾ, ನಿರಹಂಕಾರವನೊಳಕೊಂಡ ಲಿಂಗದ ಕಳೆಯ ನೋಡಾ, ಸುಮನವನೊಳಕೊಂಡ ಲಿಂಗದ ಕಳೆಯ ನೋಡಾ, ಸುಜ್ಞಾನವನೊಳಕೊಂಡ ಲಿಂಗದ ಕಳೆಯ ನೋಡಾ, ಸದ್ಭಾವವನೊಳಕೊಂಡ ಲಿಂಗದ ಕಳೆಯ ನೋಡಾ, ಇದು ಕಾರಣ ಎನ್ನ ಸರ್ವಾಂಗವನೊಳಕೊಂಡು ಗುರುನಿರಂಜನ ಚನ್ನಬಸವಲಿಂಗಾ ನಿಮ್ಮ ಕಳೆಯ ನೋಡಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಸಂಸಾರವನೊಪ್ಪಿಸಿದ ನಿರ್ವಾಣಿಗೊಮ್ಮೆ ಮಠವೆಂದಲ್ಲಿ ಗುರುದ್ರೋಹ. ಮಾನಿನಿಯೆಂದಲ್ಲಿ ಲಿಂಗದ್ರೋಹ, ಬಂಗಾರವೆಂದಲ್ಲಿ ಜಂಗಮದ್ರೋಹ. ಎನಲಿಲ್ಲದಿರ್ದಲ್ಲಿ ಅನಿಮಿಷನಾದ ಅನುಪಮಶರಣನೆಂದರಿವುದು ಗುರುನಿರಂಜನ ಚನ್ನಬಸವಲಿಂಗದಲ್ಲಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ಸರ್ಪನ ಗಮನದಂತೆ ಗಮನವುಳ್ಳರೆ ಭಕ್ತನೆಂಬೆ. ನವಿಲಿನ ಕಣ್ಣಿನಂತೆ ಕಣ್ಣುಳ್ಳರೆ ಭಕ್ತನೆಂಬೆ. ಬೆಕ್ಕಿನ ಹೃದಯದಂತೆ ಹೃದಯವುಳ್ಳರೆ ಭಕ್ತನೆಂಬೆ. ಕಾಕನ ಪಿಕನ ಸ್ನೇಹವ ಹಿಂದಿಟ್ಟು, ಸೂರ್ಯಂಗೆ ಕಮಲದ ರೂಪವ ಮುಂದಿಟ್ಟು ಮಾಟವರಿದು ಮಾಡುವಾತನಲ್ಲದೆ ಭಕ್ತನಲ್ಲ ಕಾಣಾ ಗುರುನಿರಂಜನ ಚನ್ನಬಸವಲಿಂಗಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಸತ್ಯಬೆಳಗ ಹೊತ್ತು ಸಮಯಸಂಪನ್ನತೆಯೊಳಗೆ ನಡೆವ ಸಧರ್ಮಿಗಳ ಕಂಡು, ಗಮನಾಗಮನವೆಂದು ನಡೆವಲ್ಲಿ ಬೆಳಗುಗತ್ತಲೆಯಪ್ಪಿ ಸುಳುಹು ಸೂಕ್ಷ್ಮಗೆಟ್ಟು, ಕಳೆ ಕಸವಗೂಡಿ ಕಷ್ಟಕಲ್ಪನೆಯೊಳಗೆ ಕಡೆಗಾಣದಾದರು. ಮತ್ತೆ ಅವರಂಗಚರಿತೆಯನರಿಯದಿರ್ದನು ಚನ್ನ ಬಿಂದು ನಾದ ಕಳೆ ಪ್ರಸನ್ನಮೂರ್ತಿ ಲಿಂಗವು ನಿಜಮಾರ್ಗ ನಿಜಮಾರ್ಗ ನಿಲುವಿನೊಳಗೆ.
--------------
ದೇಶಿಕೇಂದ್ರ ಸಂಗನಬಸವಯ್ಯ
ಸಮ್ಮುಖ ಸಾಕಾರ ಹುಸಿಯೆಂಬುದ ತನುವಿಡಿದು ಕಂಡು, ತನು ಹುಸಿಯೆಂಬುದ ಮನದಲ್ಲಿ ಕಂಡು, ಮನ ಹುಸಿಯೆಂಬುದ ವಿವೇಕವಿಡಿದುಕಂಡು, ವಿವೇಕದ ಮುಂದೆ ಅವಿವೇಕವೆಂಬುದ ಆತ್ಮಜ್ಞಾನದಿಂದ ಕಂಡು, ಆತ್ಮ ಪರಮಾತ್ಮವೆಂಬ ಉಭಯ ಭಾವ ಭ್ರಾಂತಿಯೆಂದು ಕಂಡು, ಕಂಡಮಂಡಲ ಕಾರಣಮೂರ್ತಿ ತಾನೆಂದು ಮರೆದಿರುವ ಮಹಾಂತ ಕಾಣಾ ಗುರುನಿರಂಜನ ಚನ್ನಬಸವಲಿಂಗಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಸದ್ವಾಸನ ಧರ್ಮಚರಿತೆಯ ವರ್ಮವನುಳಿದು ದುಷ್ಕರ್ಮಬಾಧೆಯ ಉರಿಯೊಳು ತೊಳಲುವ ಭಾವ ಭಕ್ತಿತ್ರಯದ ಯುಕ್ತಿಯನರಿವುದು ಚೋದ್ಯ ಕಾಣಾ. ಹಿಡಿದ ಕುರುಹು ಹೊತ್ತ ಹೊರೆ ನಡೆವ ಬಟ್ಟೆ ಮಿಥ್ಯ ಮಾಯಾ ಬದ್ಧ ನೋಡಾ. ಇಂತಿರ್ದ ಅರುವಿಗೆ ಕುರುಹುಗಾಣಿಸದಿರ್ದನು ನಮ್ಮ ಚೆಲುವಾಂಗ ಪ್ರಾಣಾತ್ಮಪ್ರಿಯ ಸಿದ್ಧಲಿಂಗ ಶರಣ ಭಕ್ತಸಂಗದಲ್ಲಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ಸ್ವಪ್ನದ ಸುಖದಣ್ಣಗಳು ಜಾಗ್ರದ ಸುಖವನರಿಯರು, ಮೂರು ಬಣ್ಣದ ಮನೆಯೊಳಿಪ್ಪ ನಾರಿಯ ಸಂಗವ ತೊರೆದು ಮೂರುಪರ್ವತವ ಹಿಡಿದಾಡುವ ಕರಿಯ ಪರಿಯ ಮೋಹದಲ್ಲೆಸೆವರು ನೋಡಾ! ಕಾಲಸಂದಿನ ಬಾಲೆಯೊಳು ಸಿಲ್ಕಿ ಮೇಲು ಕಾಸಾರ ಪದ್ಮಪ್ರಭೆಯೊಳಿರ್ದೆನೆಂಬ ಶಬ್ದಜಾಲಿಗಳನೊದ್ದು ಕೆಡಹುವರು ಕಾಲನವರು, ಗುರುನಿರಂಜನ ಚನ್ನಬಸವಲಿಂಗದತ್ತ ಬರಗೊಡದೆ.
--------------
ದೇಶಿಕೇಂದ್ರ ಸಂಗನಬಸವಯ್ಯ
ಸುಖದುಃಖವನರಿದು ಕೊಡುವರು ಸಕಲಸಂಪನ್ನರು, ಸುಖದುಃಖವ ಕೊಟ್ಟು ಕೊಂಬುವರು ಸಕಲನಿಃಕಲರು. ಸುಖದುಃಖ ಸಹಿತ ಸುಖಿಸುವರು ನಿಮ್ಮೊಳಗೆ ಪ್ರಸಾದಿಗಳು ಗುರುನಿರಂಜನ ಚನ್ನಬಸವಲಿಂಗಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಸಿದ್ಧಾಂತಗಮನದಲ್ಲಿ ಶುದ್ಧಮುಖನಾಗಬೇಕು, ವೇದಾಂತಗಮನದಲ್ಲಿ ಸಿದ್ಧಮುಖನಾಗಬೇಕು, ಯೋಗಮಾರ್ಗದಲ್ಲಿ ಪ್ರಸಿದ್ಧಮುಖನಾಗಬೇಕು. ಈ ತ್ರಿವಿಧಮುಖವೊಂದಾಗಿ ಬಪ್ಪುದೇ ಆಚಾರ. ಈ ಆಚಾರಂಗವೇ ಶಿವನ ಆಲಯ. ಇದು ಸತ್ಯ ನಿತ್ಯ ಕ್ರಿಯಾಜ್ಞಾನಭಾವಮೋಹಿ ನಿಜಲಿಂಗದಲ್ಲಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ಸುಚಿತ್ತ ಸುಬುದ್ಧಿಯೆಂಬ ಹಸ್ತವನು ಸ್ಥೂಲತನುಸನ್ನಿಹಿತವಾಗಿ ಸತ್ಕಳೆಯೊಳೊಪ್ಪುತಿರ್ದನು ಕಾಣಾ. ನಿರಹಂಕಾರ ಸುಮನವೆಂಬ ಹಸ್ತವನು ಸೂಕ್ಷ್ಮತನುಸನ್ನಿಹಿತವಾಗಿ ಚಿತ್ಕಳೆಯೊಳೊಪ್ಪುತಿರ್ದನು ಕಾಣಾ. ಸುಜ್ಞಾನ ಸದ್ಭಾವವೆಂಬ ಹಸ್ತವನು ಕಾರಣತನುಸನ್ನಿಹಿತವಾಗಿ ಆನಂದಕಳೆಯೊಳೊಪ್ಪುತಿರ್ದನು ಕಾಣಾ. ತನುತ್ರಯಸನ್ನಿಹಿತವಾದ ಷಡ್ವಿಧಹಸ್ತದೊಬ್ಬುಳಿಯೊಡವೆರೆದ ಗುರುನಿರಂಜನ ಚನ್ನಬಸವಲಿಂಗದಲ್ಲಿ ಘನಪರಿಣಾಮಿಯಾಗಿ ಒಪ್ಪುತಿರ್ದನು ಕಾಣಾ ಶರಣನು.
--------------
ದೇಶಿಕೇಂದ್ರ ಸಂಗನಬಸವಯ್ಯ
ಸರ್ಪದಷ್ಟ ಸರ್ವಾಂಗತಲೆಗೇರಿ ಲಯವನೈದುವಂತೆ, ಸತ್ಪ್ರಣವ ಸುಖಪ್ರಸನ್ನವೈದಿದ ಶರಣ ಜ್ಞಪ್ತಿಮಹವನೊಡಗೂಡಿ ಮಹಾಗುರುನಿರಂಜನ ಚನ್ನಬಸವಲಿಂಗವಾದುದ- ನೇನೆಂದುಪಮಿಸಬಹುದು ?
--------------
ದೇಶಿಕೇಂದ್ರ ಸಂಗನಬಸವಯ್ಯ
ಸ್ಥೂಲಾಂಗವೆಂಬ ಷಡ್ವಿಧೇಂದ್ರಿಯಂಗಳಲ್ಲಿ ಷಡ್ವಿಧಲಿಂಗವಾಗಿರ್ದ ಇಷ್ಟಲಿಂಗಾಯತನಾಗಿ, ಸೂಕ್ಷ್ಮಾಂಗವೆಂಬ ಷಟ್ಕರಣಂಗಳಲ್ಲಿ ಷಡ್ವಿಧಲಿಂಗವಾಗಿರ್ದ ಪ್ರಾಣಲಿಂಗಸ್ವಾಯತನಾಗಿ, ಕಾರಣಾಂಗವೆಂಬ ಷಡ್ವಿಧವಿಷಯಂಗಳಲ್ಲಿ ಷಡ್ವಿಧಲಿಂಗವಾಗಿರ್ದ ಭಾವಲಿಂಗಸನ್ನಿಹಿತನಾಗಿ. ಈ ತ್ರಿವಿಧಲಿಂಗವೊಂದಾಗಿರ್ದ ಮಹಾಘನಾನಂದ ಪ್ರಭಾನಿತ್ವ ಶರಣನು, ತಾನೆ ನಡೆದುದೆಲ್ಲ ಸತ್ಕ್ರಿಯೆ, ಹಿಡಿದುದೆಲ್ಲ ಸದ್ವೃತ, ನುಡಿದುದೆಲ್ಲ ಪರಮಾನುಭಾವ, ನೆನೆವುದೆಲ್ಲ ಶಿವಮಂತ್ರ, ಧ್ಯಾನಿಸವುದೆಲ್ಲ ಸ್ವಯಮಾನಂದ ಸುಖವು, ನೋಡಿ, ಪರಿಣಾಮಿಸುವುದೆಲ್ಲ ನಿಜಲೀಲೆ ಮತ್ತೇನುಯಿಲ್ಲದ ಎತ್ತೆತ್ತರುವಿನತ್ತತ್ತ, ಗುರುನಿರಂಜನ ಚನ್ನಬಸವಲಿಂಗ ತಾನೇ ಪರಿಪೂರ್ಣ.
--------------
ದೇಶಿಕೇಂದ್ರ ಸಂಗನಬಸವಯ್ಯ
ಸ್ಥೂಲತನುವಿನಲ್ಲಿ ಆಕಾರಸ್ವರೂಪವಾದ ದೀಕ್ಷಾಗುರುವನರಿದರ್ಚಿಸಬಲ್ಲಾತನೆ ಶಿಷ್ಯ. ಸೂಕ್ಷ್ಮ ತನುವಿಲ್ಲಿ ಬಕಾರಸ್ವರೂಪವಾದ ಶಿಕ್ಷಾಗುರುವನರಿದರ್ಚಿಸಬಲ್ಲಾತನೆ ಶಿಷ್ಯ. ಕಾರಣತನುವಿಲ್ಲಿ ಹಂಕಾರಸ್ವರೂಪವಾದ ಮೋಕ್ಷಗುರುವನರಿದರ್ಚಿಸಬಲ್ಲಾತನೆ ಶಿಷ್ಯ. ಈ ತ್ರಿವಿಧವನರಿದರ್ಚಿಸಬಲ್ಲಾತಂಗಲ್ಲದೆ ಶಿಷ್ಯಸ್ಥಲವಿಲ್ಲ ಕಾಣಾ ಗುರುನಿರಂಜನ ಚನ್ನಬಸವಲಿಂಗಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಸತ್ತು ಬದುಕಿ ಬಾಳಿದ ಮಿಥ್ಯಕಾಯನಲ್ಲದ ಸತ್ತು ಬದುಕಿ ಬಾಳಿದ ಚಿತ್ಕಾಯ ಕಾಣಾ. ಗತಿಮತಿ ಗಮನವಿಡಿದು ಕ್ಷಯಪದ ಸಾಧ್ಯನಲ್ಲದ ಗತಿಮತಿ ಗಮನವಿಡಿದು ಅಕ್ಷಯಪದ ಸಾಧ್ಯ ಕಾಣಾ. ನಾದ ಬಿಂದು ಕಳೆಯ ಮುಳುಗಿಸಿ ಬಾಧೆಯನರಿಯದ ನಾದ ಬಿಂದು ಕಳೆಯ ಮುಳುಗಿಸಿ ಅನಾದಿಯನರಿದ ಕಾಣಾ. ಗುರುನಿರಂಜನ ಚನ್ನಬಸವಲಿಂಗಾ, ನಿಮ್ಮ ಶರಣ ಕಾಣಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಸಂಗವನರಿದು ಜರೆದು ಸಂಗಸಂಬಂಧವಾದ ಚಿನುಮಯ ಚನ್ನಮಹೇಶ್ವರನ ತನುಮನಭಾವಂಗಳು ಮತ್ತೊಂದಕ್ಕೆ ಆಸ್ಪದವಿರಹಿತವಾಗಿರ್ದವು. ಅದೆಂತೆಂದೊಡೆ, ಗುರುಭಕ್ತಿಸೇವಾನುಕೂಲಿ ಕಾಯದ ಗತಿಯುಳ್ಳನ್ನಕ್ಕರ ಕಂಡು ಮಾಡಿ ವಿನೋದಿಸಬೇಕೆಂಬುದೊಂದು ನಿರುತ, ಮಂತ್ರ ಧ್ಯಾನ ಜಪ ಸ್ತೋತ್ರಾದಿಗಳಿಂದೆ ಲಿಂಗಾರ್ಚನೆಯವಸರ ಮನವುಳ್ಳನ್ನಕ್ಕರ ಮಾಡಿ ನೋಡಿ ಆನಂದಿಸಬೇಕೆಂಬುದೊಂದು ನಿಷ್ಠೆ. ಅನ್ನ ವಸ್ತ್ರ ಆಭರಣಾದಿ ಹದಿನೆಂಟು ತೆರದ ಭಕ್ತಿಯಾರಾಧನೆ ಪ್ರಾಣಾದಿ ದ್ರವ್ಯವುಳ್ಳನ್ನಕ್ಕರ ಮಾಡಿ ನೀಡಿ ಸುಖಿಸಬೇಕೆಂಬುದೊಂದು ಭಾವದ ನಿರುತ. ಇಂತು ತ್ರಿವಿಧ ಪದದಲ್ಲಿ ತ್ರಿವಿಧ ವಿದ್ಯಾಸನ್ನಿಹಿತನಾಗಿ ಎಡೆದೆರಹಿಲ್ಲದಿರುತಿರ್ದನು ಗುರುನಿರಂಜನ ಚನ್ನಬಸವಲಿಂಗನಲ್ಲಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ಸತ್ತು ಹುಟ್ಟಿ ತ್ರಿವಿಧವನರಿದು, ಸತ್ತು ಹುಟ್ಟಿ ತ್ರಿವಿಧವನರಿದು, ಸತ್ತು ಸತ್ತು ಹುಟ್ಟಿ ಹುಟ್ಟಿ ಸಾವ ಪರಿಯ ಬಲ್ಲರದು ಮಹದಂಗವೆಂಬೆ, ಮಹಾದಾನಿ ಚನ್ನವೃಷಭೇಂದ್ರಲಿಂಗದಲ್ಲಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ಸಂತೆಯ ಬೆವಹಾರಿಯಂತೆ ಅಂತಗತ್ತರೆಯುಳ್ಳರೆ ನಿಜನಿಷ್ಠೆ ಭಕ್ತಿಯೆಂತಪ್ಪುದಯ್ಯಾ? ಛಿದ್ರಭಾವಕ್ಕೆ ಛಿದ್ರವಲ್ಲದೆ ಮುದ್ರೆಮರೆಯ ಭಕ್ತಿಯಿರ್ದಂತೆಯಿರಲು ಗುರುನಿರಂಜನ ಚನ್ನಬಸವಲಿಂಗ ತಾನೆಂಬ.
--------------
ದೇಶಿಕೇಂದ್ರ ಸಂಗನಬಸವಯ್ಯ
ಸತ್ತುಚಿತ್ತಾನಂದ ನಿತ್ಯಪರಿಪೂರ್ಣ ಅಖಂಡಲಿಂಗವನು ಧರಿಸಿಪ್ಪ ಇಂದ್ರಿಯಾನಂದ ಪ್ರಾಣಾನಂದ ಜ್ಞಾನಾನಂದ ಭಾವಾನಂದ ತೂರ್ಯಾನಂದ ಮಹದಾನಂದಸ್ವರೂಪವಾದ ಶರಣನು, ಕಾರಣಕ್ಕೆ ಕಾರ್ಯನಾಗಿ ಲೋಕೋಪಕಾರ ಚರಿಸುವನಲ್ಲದೆ ಪಂಚಭೂತಕಾಯದ ಪಂಚೇಂದ್ರಿಯವಿಷಯಪ್ರಕೃತಿಯೊಳು ಮುಕ್ತನಾಗಿ ಕಾಮಾದಿ ಷಡ್ವರ್ಗಂಗಳಂತರಂಗದಲ್ಲಿ ಮಡಗಿ, ಕೊಟ್ಟವರ ಹೊಗಳಿ, ಕೊಡದವರ ಬೊಗಳಿ, ತಟ್ಟಿ ಬಾಗಿಲಲರಸುವ ತುಡುಗ ಶುನಕನಂತೆ ಧನವನಿತೆಯರಾಸೆ ತಲೆಗೇರಿ ಮನೆಮನೆ ಪಳ್ಳಿ ಪಟ್ಟಣವ ಹುಡುಕುತ್ತ, ಒಡಲ ಹೊರೆದು ಗುಡಿ ಮಳಿಗೆ ಮಠವ ಸೇರಿ ಸತ್ತು ಹೋಗಬಂದ ಮಿಥ್ಯವೇಷಧಾರಿಗಳಂತಲ್ಲ ನೋಡಾ ನಿಮ್ಮ ಶರಣ. ಗುರುನಿರಂಜನ ಚನ್ನಬಸವಲಿಂಗದ ಅಬ್ಥಿಮಾನಿ ಕಾಣಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಸಂಸಾರಸಂಬಂದ್ಥಿಗೆ ಇಷ್ಟಲಿಂಗವೆಲ್ಲಿಹದೊ ! ಪರಸ್ತ್ರೀಕಾಂಕ್ಷೆಭರಿತಗೆ ಪ್ರಾಣಲಿಂಗವೆಲ್ಲಿಹದೊ ! ಅನ್ಯಸ್ಥಾವರಭಾವಸಂಬಂದ್ಥಿಗೆ ಭಾವಲಿಂಗವೆಲ್ಲಿಹದೊ ! ಈಸುವನರಿದು ಮೋಸದೊಳಗಿರ್ದು ಮಹೇಶನಾಮವ ಕಾಣಿಸಿಕೊಂಡರೆ ಈಸುವನೇ ಕಡೆಮೊದಲರಿಯದೆ ಭವಸಾಗರವನು ಗುರುನಿರಂಜನ ಚನ್ನಬಸವಲಿಂಗ ನೀ ಸಾಕ್ಷಿಯಾಗಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ಸದಾತ್ಮರುಗಳಲ್ಲಿ ಅಯ್ಯಾ, ಬಂದವರುಂಟು ಸಂದವರುಂಟು ಯೋನಿಸಂಸಾರ ಮರಣದಲ್ಲಿ. ನಾ ಕಾಣೆನಯ್ಯಾ ಬಂದವರ, ನಾ ನೋಡೆನಯ್ಯಾ ನಿಂದವರ, ನಾನರಿಯೆನಯ್ಯಾ ಸಂದವರ ನಿಮಗಾಗಿ ಚನ್ನ ತ್ರಿವರ್ಣಲಿಂಗವೆ ನಿಮ್ಮವಿಡಿದವರನಲ್ಲದೆ.
--------------
ದೇಶಿಕೇಂದ್ರ ಸಂಗನಬಸವಯ್ಯ
ಸಕಲ ದ್ವಂದ್ವವಾಸನೆಗೆ ಮಾರುತನ ಬಲವೇ ತೋರಿಕೆಯಯ್ಯಾ. ಮಾರುತ ಮಾರಾರಿಯಾದಲ್ಲಿ ತೋರಲಿಲ್ಲ ಗುರುನಿರಂಜನ ಚನ್ನಬಸವಲಿಂಗದಲ್ಲಿ ಶರಣಂಗೆ.
--------------
ದೇಶಿಕೇಂದ್ರ ಸಂಗನಬಸವಯ್ಯ
ಸತ್ತುವೇ ಲಿಂಗ, ಚಿತ್ತುವೇ ಅಂಗ, ಆನಂದವೇ ಸಮರಸ, ನಿತ್ಯವೇ ಪ್ರಸಾದ, ಪರಿಪೂರ್ಣವೇ ಪ್ರಕಾಶ, ಅಖಂಡಮಯ ತಾನಾದ ಶರಣನು. ಉಪಾಧಿ ನಿರುಪಾಧಿಸಹವೆಂಬ ಮಾಟತ್ರಯದ ಕೋಟಲೆಯ ಕಾಣ ನೋಡಾ. ಅಷ್ಟವಿಧಾರ್ಚನೆ ಷೋಡಶೋಪಚಾರವೆಂಬ ಕಷ್ಟಕರ್ಮವ ಹೋದ್ದ ನೋಡಾ. ಕೂಟ ಬಟ್ಟೆಗಳ ಕೂಡೆ ಕೂರ್ಮೆಸುಖಾನುಭಾವ ಕುರುಹಿಟ್ಟು ಹೇಳಿಕೊಳ್ಳನೋಡಾ. ಉಚ್ಛಿಷ್ಟ ವಾಕ್ಯಮಥನವನನುಕರಿಸ ಗುರುನಿರಂಜನ ಚನ್ನಬಸವಲಿಂಗಕ್ಕಂಗವಾಗಿರ್ದ ಅಚ್ಚಶರಣ.
--------------
ದೇಶಿಕೇಂದ್ರ ಸಂಗನಬಸವಯ್ಯ
ಸುಖದುಃಖವನುಂಡು ಕೊಡುವರು ಸಕಲಸಂಪನ್ನರು. ಸುಖದುಃಖವ ಕೊಟ್ಟು ಕೊಂಬುವರು ಸಕಲನಿಃಕಲರು. ಸುಖದುಃಖಸಹಿತ ಸುಖಿಸುವರು ಪ್ರಸಾದಿಗಳು ಗುರುನಿರಂಜನ ಚನ್ನಬಸವಲಿಂಗದಲ್ಲಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ಸುಜ್ಞಾನೋದಯವಾದ ಬಳಿಕ ಸರ್ವಸಂಗಪರಿತ್ಯಾಗವ ಮಾಡಿ ನಿರ್ಮಲಾತ್ಮಕನಾಗಿ ಗುರೂಪಾಸ್ತೆಯ ಮಾಡಿ ನಿಜಲಿಂಗವ ಬೇಡಿಕೊಂಡುದೊಂದು, ಆ ಲಿಂಗಸನ್ನಿಹಿತ ಮಹಾಜ್ಞಾನಜಂಗಮದಲ್ಲಿ ಪರಮಪ್ರಸಾದವ ಬೇಡಿಕೊಂಡುದೊಂದು. ಈ ಉಭಯದ ಮೇಲೆ ಮತ್ತೆಲ್ಲಿಯು ಬೇಡಲರಿಯದೆ ಕೂಡಿ ಹೋದ ಗುರುನಿರಂಜನ ಚನ್ನಬಸವಲಿಂಗ ನಿಮ್ಮೊಳಗೆ ಶರಣ.
--------------
ದೇಶಿಕೇಂದ್ರ ಸಂಗನಬಸವಯ್ಯ

ಇನ್ನಷ್ಟು ...