ಅಥವಾ
(220) (73) (20) (3) (8) (5) (0) (0) (17) (4) (3) (15) (0) (0) ಅಂ (31) ಅಃ (31) (141) (1) (59) (8) (0) (12) (0) (14) (0) (0) (0) (0) (1) (0) (0) (66) (0) (14) (5) (89) (68) (1) (50) (40) (85) (1) (5) (0) (34) (11) (24) (1) (81) (57) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಹೆರೆಹಿಂಗದಾಚಾರ ಅಂಗವೇದಿಯಾಗಿ, ಇತರ ಸಂಗಸಂಯೋಗದತಿಶಯವನಳಿದು ನಿರತಿಶಯ ನಿಜಾನಂದಮಹಿಮನು ನೋಡಾ. ಕರಣವೃತ್ತಿ ಚರಣವ ಕೊಯ್ದು ಅರಿದರ್ಪಿತಮುಖಿ ಅನುಭಾವಿ ನೋಡಾ. ಶಿವಾಣತಿವಿಡಿದು ಸತ್ತುಚಿತ್ತಾನಂದ ನಿತ್ಯದಾಸೋಹಿಯಾಗಿರ್ದ ಗುರುನಿರಂಜನ ಚನ್ನಬಸವಲಿಂಗದಲ್ಲಿ ನೋಡಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಹಾರುವನ ಕೊಂದು ಹಾರುವನಾಗಿ ಕರ್ಮಜ್ಞಾನ ಕಂಡು ಕಾಣಿಸದಿರ್ದು ಕರಗಿದರೆ ಆತನೇ ಗುರುನಿರಂಜನ ಚನ್ನಬಸವಲಿಂಗ.
--------------
ದೇಶಿಕೇಂದ್ರ ಸಂಗನಬಸವಯ್ಯ
ಹುಟ್ಟು ಹೊಂದುಗಳರಿಯದೆ ನೆಟ್ಟನೆ ಹುಟ್ಟಿ ಬಂದವನೆಂದು ಕಾರ್ಯದಲ್ಲಿ ಕರಿದು ಬಿಳಿದು ಕೂಡಿ ಮಾಡಿಕೊಂಡೆನೆಂದರೆ ನಿಜವಾಗಲರಿಯದು. ಭೂಪ ಧನಿಕರು ಕೊಲ್ಲಿಸಿ ಹಾಕುವರು ಗುರುನಿರಂಜನ ಚನ್ನಬಸವಲಿಂಗಾ ನೀ ಸಾಕ್ಷಿಯಾಗಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ಹಿರಿದುಂಟೆಂಬ ನುಡಿ ಚೋದ್ಯವಪ್ಪುದು ಶರಣಂಗೆ. ಅದೇನು ಕಾರಣವೆಂದೊಡೆ, ತನ್ನಿಂದ ತೋರಿದ ಪೃಥ್ವಿ ಅಪ್ಪು ಅಗ್ನಿ ವಾಯು ಆಕಾಶ ಆತ್ಮ ಸೂರ್ಯ ಚಂದ್ರ ತನ್ನಿಂದೆ ತೋರಿದ ಸಕಲಾರಂಭ. ಇದು ಕಾರಣ, ತಾನೊಂದರಿಂದ ತೋರಿದವನಲ್ಲ. ಗುರುನಿರಂಜನ ಚನ್ನಬಸವಲಿಂಗಾ ನಿಮ್ಮ ಶರಣ ಕಾರಣನಹುದು ಕಾರ್ಯನಲ್ಲ.
--------------
ದೇಶಿಕೇಂದ್ರ ಸಂಗನಬಸವಯ್ಯ
ಹೊನ್ನು ಸಂಸಾರವಲ್ಲ, ಹೆಣ್ಣು ಸಂಸಾರವಲ್ಲ, ಮಣ್ಣು ಸಂಸಾರವಲ್ಲ, ಈ ಮೂರರ ಮೇಲಣ ಮೋಹವೆರಸಿದ ಮನವು ಸಂಸಾರ ನೋಡಾ ! ಆ ಮನವನು ಸಂಸಾರ ಮೋಹವನು ಬೇರ್ಪಡಿಸಿ, ತನ್ನ ಕೂಡಿ ನಡೆವ ಗತಿಮತಿಗಳನಾರನು ಕಾಣೆನಯ್ಯಾ ನಿರಂಜನ ಚನ್ನಬಸವಲಿಂಗಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಹರಗುರುವಾಕ್ಯ ಪ್ರಮಾಣವರಿಯದೆ ಅಜ್ಞಾನವಾವರಿಸಿ ವಾರ ತಿಥಿಯೆಂದು, ಸಂಕ್ರಾಂತಿ ಅಮವಾಸ್ಯೆಯೆಂದು ನೇಮಿಸಿ, ಮಾಡಿ ನೀಡಿ ಕರ್ಮ ಕಳೆದೆನೆಂಬ ವರ್ಮಗೇಡಿಗಳ ನೋಡಾ! ಮತ್ತೊಂದು ವೇಳೆ ಜಂಗಮ ಮನೆಗೆ ಬಂದರೆ ಅಡ್ಡಮೋರೆಯಿಕ್ಕುವ ಗೊಡ್ಡು ಮಾದಿಗರ ಶಿವಭಕ್ತರೆಂದರೆ ಅಘೋರ ನರಕವೈ ಗುರುನಿರಂಜನ ಚನ್ನಬಸವಲಿಂಗಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಹಸಿಯ ಜವ್ವನೆಯರ ರಸನೆಯ ನವೀನ ಚಾತುರ್ಯಕ್ಕಂಗ ಮನ ಭಾವವಿತ್ತು, ಆದಿ ಮಧ್ಯ ಅವಸಾನವ ಮರೆದು ಅತ್ತಿತ್ತ ಬಿದ್ದು ಬಳಲುವ ಕತ್ತೆ ನಾಯಿಯ ಕರ್ಮ ಭವಿಗಳಿಗಿನ್ನೆತ್ತಣ ಜ್ಞಾನವಯ್ಯಾ ನಿರಂಜನ ಚನ್ನಬಸವಲಿಂಗಾ ?
--------------
ದೇಶಿಕೇಂದ್ರ ಸಂಗನಬಸವಯ್ಯ
ಹೊಟ್ಟೆಯ ಹೊರೆಯಲಾರದೆ ಕಟ್ಟು ಸಂಸಾರವ ಕಡೆಗಿಟ್ಟು ನೆಟ್ಟನೆ ಜಂಗಮವೇಷವ ಹೊತ್ತು, ಬಟ್ಟೆಯ ಬೆಳಗನರಿಯದೆ ಕಟ್ಟು ಕ್ರಿಯಾರಾಧನೆಯ ತೋರಿ, ಪಡೆದುಂಬ ಭಕ್ತರನರಸಿ, ಕುಟಿಲವೈರಾಗ್ಯದಿಂದವರ ದ್ರವ್ಯವ ಸೆಳೆದುಕೊಂಡು ಮಾಡಿ ನೀಡಿ ಕೊಂಬ ದಾಸೋಹಿಜಂಗಮವೆನಿಸಿ ನಡೆವವರನೆಂತು ಜಂಗಮಲಿಂಗವೆನ್ನಬಹುದು? ಕೆಟ್ಟೊಡಲ ನಷ್ಟಜಂಗುಳಿಗಳ ಎನ್ನತ್ತ ತೋರದಿರಾ ಗುರುನಿರಂಜನ ಚನ್ನಬಸವಲಿಂಗಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಹುಟ್ಟಿದ ಮನೆಯ ಸುಟ್ಟು ನೆರಮನೆಯ ಸುಟ್ಟು ಹೋಗುವಾಹುತಿ ಹೋತ್ರನಂತೆ, ದೇಹಾಬ್ಥಿಮಾನವಿಡಿದು ಉಪದೇಶವಾಗಿ ತನುವಿಕಾರ ಬಿಡದೆ ಗುರುಭಕ್ತಿ ದಹನಮಾಡಿ, ಜಂಗಮಲಿಂಗವ ಕಂಡು ನಿಂದಿಸಿ ಜಂಗಮಭಕ್ತಿಯ ದಗ್ಧಮಾಡಿ ದುರ್ಗತಿಯಕೂಡಿ ಹೋಗುವ ನರಕಜೀವಿಗಳಿಗೆಂತು ಭಕ್ತಿನೆಲೆಗೊಂಬುವುದಯ್ಯಾ? ನಿತ್ಯಾನಂದ ನಿಲುವಿಗೆ ಸತ್ಯವಾಗಿತ್ತಡೆ ಕರ್ತುವಿಗೆ ಭಕ್ತಿ ನಿಜವೆಂಬೆ ಗುರುನಿರಂಜನ ಚನ್ನಬಸವಲಿಂಗಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಹುಸಿ ಕಳವು ಡಂಬಕದ ಸುಳುಹನಳಿದುಳಿದ ಜ್ಞಾನಕಲಾತ್ಮನ ಕಂಡ ಚೌಪೀಠವಾಸನು, ತ್ರಿವಿಧಾನುಗ್ರಹವ ಮಾಡಿ ಕಾಯ ಪ್ರಾಣಾತ್ಮ ಸನ್ನಿಹಿತನಾಗಿ ತಾನೆಂಬ ಭಾವ ತಪ್ಪುವಂತೆಮಾಡಿ ಸಲಹಿದನೆನ್ನ ನಿರಂಜನ ಚನ್ನಬಸವಲಿಂಗವೆಂಬ ಗುರುನಾಥಂಗೆ ಶರಣು ಶರಣು ಶರಣೆನುತಿರ್ದೆನು.
--------------
ದೇಶಿಕೇಂದ್ರ ಸಂಗನಬಸವಯ್ಯ
ಹಿರಿದು ಲಿಂಗವ ಮರೆದ ಕೈಯಲ್ಲಿ ಹಿಡಿದು ಪರಿಪರಿಯಿಂದಾಡುವ ಮಡದಿ ಇವಳಾರಯ್ಯ ! ಸಿರಿವುಳ್ಳ ಹಿರಿಯರ ಬ್ಥಿನ್ನಭಾವದಲ್ಲಿ ಹರಿದು ಹರಿದು ನೆರೆವ ಉರವಣಿಯವಳು ಇವಳಾರಯ್ಯಾ ! ತುಂಬಿದ ಪುರದೊಳಗೆ ಸಂಭ್ರಮಸುಖಿ ಗುರುನಿರಂಜನ ಚನ್ನಬಸವಲಿಂಗಕ್ಕೊಂದಿಟ್ಟು ತಾನೊಂದಾಡುವ ಸಗುಣಶೌರಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ಹಿಂದೆ ಮುಂದೆ ನಷ್ಟವಾಗದೆ ನಿಂದುಂಬ ನಿಃಕಾರಣ ಮಿಥ್ಯ ಬದ್ಭರಿಗೆ, ನಿಜಕಾರಣದ ಗತಿಮತಿಗಳತಿಶಯ ಬರಲರಿಯದು. ಅವರಂತಿರಲಿ, ಅನಿತ್ಯವ ನಿತ್ಯ ಮಾಡಿ, ಕೊಟ್ಟು ಕೊಂಬ ಭೃತ್ಯಭಾವಿಯಾದ ಸತ್ಯಸಾವಧಾನಿಗಲ್ಲದೆ. ಗುರುನಿರಂಜನ ಚನ್ನಬಸವಲಿಂಗಾ ನಿಮ್ಮ ವಿನಯಪ್ರಸಾದಿ ಸಾಮಾನ್ಯವೆ ?
--------------
ದೇಶಿಕೇಂದ್ರ ಸಂಗನಬಸವಯ್ಯ
ಹುಟ್ಟಿಬಂದ ಮನೆಯ ಸುಟ್ಟು ತಾಯಿಯ ಸಂಗ ಮಾಡಿದರೊಂದು ಕೂಸು ಹುಟ್ಟಿ ಕೈಯೊಳಗೆ ನಿಂದು ಮೈಯನೆಲ್ಲ ಮುಟ್ಟಿತ್ತು ಇದೇನು ಹೇಳಾ ! ನಾ ನೋಡಿ ಹೆಣ್ಣಾಗಿ ಬಗೆಬಗೆಯಾಟದಿಂದೆ ಸೊಗಸು ತೋರಿದರೆ ನೆಲಮನೆಯೊಳಿಪ್ಪ ಬಳಿವಿಡಿಯೆ ಭೋಗವ ನೆಗಹಿ ತೋರಿದನು ಮೇಲುಮನೆಯಲ್ಲಿ ಗುರುನಿರಂಜನ ಚನ್ನಬಸವಲಿಂಗ.
--------------
ದೇಶಿಕೇಂದ್ರ ಸಂಗನಬಸವಯ್ಯ
ಹಿಂದನರಿಯದೆ, ಮುಂದನರಿಯದೆ, ಈಗನರಿಯದೆ, ಆಗಿ ಬಂದವರೆಂದು ಅರಿದು ಮರೆದು ಹರಿದು ಮಾಡುವ ಕುರಿಗಳಿಗೆತ್ತಣ ದೇವತ್ವವಯ್ಯಾ! ಬರಿಯ ಭ್ರಾಂತಿಗಳಿಗೆತ್ತಣ ಭಕ್ತತ್ವವಯ್ಯಾ! ಮಾಡಲರಿಯದೆ ಮಾಡುವರು, ನೀಡಲರಿಯದೆ ನೀಡುವರು. ಬೇಡಿ ಉಣಲರಿಯದೆ ಬೇಡಿ ಉಂಬುವ ನಾಡಮಾನವರ ನಡೆನುಡಿಗತ್ತತ್ತಲಾಗಿರ್ದ ನಮ್ಮ ಗುರುನಿರಂಜನ ಚನ್ನಬಸವಲಿಂಗ.
--------------
ದೇಶಿಕೇಂದ್ರ ಸಂಗನಬಸವಯ್ಯ
ಹಿಡಿದು ಬಂದು ಹೊಡದಾಡಿ ಹೊಲಬುದಪ್ಪಿ ಮಡಿದು ಹೋಗುವ ಮರುಳು ಭೂತಗಳು ಮನೆ ಗ್ರಾಮ ದೇಶಂಗಳೆಲ್ಲ ತುಂಬಿ ಸೂಸುತಲಿಪ್ಪುದು. ನಾನಿವರ ನೆರೆಹೊರೆಗಂಜಿ ಅರಸಿ ಕಂಡು ಮೊರೆಹೊಕ್ಕು ಬದುಕಿದೆ ಶಾಂತ ಐವರ್ಣಸಂಜ್ಞೆದೇವನ.
--------------
ದೇಶಿಕೇಂದ್ರ ಸಂಗನಬಸವಯ್ಯ
ಹಿಡಿದು ಬಳಸುವನಲ್ಲ ಬಿಟ್ಟು ನಡೆವನಲ್ಲ. ಕುಂಟಕುರುಡರ ನಂಟುತನದವನಲ್ಲ. ಎಂಟರಲ್ಲಿ ನಿಂದು ಎಂಟೆಂಬ ತುಂಟನಲ್ಲ. ಪಂಚರತಿ ಪ್ರಾಣವೇದಿ ಪಂಚಾರತಿ ಬೆಳಗ ಕಳೆದವನಲ್ಲ. ಪಂಚಗತಿಯ ಮತಿಯಿಂದೆ ಕೈಯಲ್ಲಿ ಪಿಡಿದು ಅತಿಶಯದ ಭಾವದಿಂದೆ ಅತಿಶಯದೊಳಾನಂದಮಯ ನಿಮ್ಮ ಶರಣ ಗುರುನಿರಂಜನ ಚನ್ನಬಸವಲಿಂಗಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಹೆಜ್ಜೆದಪ್ಪಿ ನಡೆವಂಗೆ ಇಹಪರದ ಸುಖವಿಲ್ಲ, ಮಾತುತಪ್ಪಿ ನುಡಿವಂಗೆ ಮುಂದೆ ನಿಲುವಿಲ್ಲ, ತಾ ಕೆಟ್ಟು ತಾನಾದಲ್ಲಿ ಮತ್ತೆ ಗುರುನಿರಂಜನ ಚನ್ನಬಸವಲಿಂಗವಿಲ್ಲದ ಶರಣನದ್ವೈತ.
--------------
ದೇಶಿಕೇಂದ್ರ ಸಂಗನಬಸವಯ್ಯ
ಹಾಳೂರೊಳಗೆ ಬಾಳುವೆಮಾಡುವಳೊಬ್ಬಳು ನಾರಿ. ಮೊದಲ ಮಗನ ಕೈಗಳಲ್ಲಿ ಗಂಡನ ಕಣ್ಣು ನೋಡಾ. ಆ ಕಣ್ಣ ಮೇಲೆ ಬಾಯಿತೆರೆದು ಮೂಗಿಲಿ ಕೊಂಬ ಮುಸುಕಲಿಯೊಳಗಿರ್ದು ಕಣ್ಣನೆತ್ತಿ ಕಡೆಗಂಡು ಕರಗಿದೆಯೆಂಬ ನಡುಮಾತಿನತ್ತತ್ತ ಗುರುನಿರಂಜನ ಚನ್ನಬಸವಲಿಂಗಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಹಾರುವನ ಕೈಯಿಂದ ಪಂಚಾಂಗವನರಿದು ವರ್ತಿಸಬಾರದು ಸದಮಲಲಿಂಗಸಮೇತರು. ಜಂಗಮದಮುಖದಿಂದ ಪಂಚಾಂಗವನರಿದು ವರ್ತಿಸುವುದು ಗುರುಕರಸಂಜಾತರು. ಇದು ಕಾರಣ, ಎನಗೆ ಮದುವೆಯ ಉತ್ಸಾಹಕಾರ್ಯ ಮುಂದಿಲ್ಲ; ನಾನು ಹೋಗಿ ಹಾರುವನ ಕಂಡು ಬರಲಿಲ್ಲ. ಮತ್ತೆ ಬರುವವರೆಲ್ಲ ಜಂಗಮದ ನುಡಿಯನರಿದು ಬನ್ನಿ, ಎನಗೆ ಜಂಗಮವ ಕೇಳಲು ಮನವಿಲ್ಲ. ಗುರುನಿರಂಜನ ಚನ್ನಬಸವಲಿಂಗವ ಬಿಡಲುಬಾರದು ಕಾಣಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಹೊನ್ನಿರ್ದು ಪರಧನಕಿಚ್ಫೆಯ ಮಾಡಿಸುವುದು. ಹೆಣ್ಣಿರ್ದು ಪರಸ್ತ್ರೀಯರ ಇಚ್ಫೆಯ ಮಾಡಿಸುವುದು. ಮಣ್ಣಿರ್ದು ಪರಭೂಮಿಗೆ ಇಚ್ಫೆಯ ಮಾಡಿಸುವುದು. ಸುರನರಾದಿ ಸಕಲರಲಿ ಇವುಗಳಿಚ್ಫೆಯ ಕಳೆವ ಧೀರರನಾರನು ಕಾಣೆನಯ್ಯಾ ನಿರಂಜನ ಚನ್ನಬಸವಲಿಂಗಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಹಿಂದೇನರಿಯದೆ, ಮುಂದೆ ತಿಳಿಯದೆ, ಸಂದಿನ ಮಂಜಿನ ಸುಖದಲ್ಲಿರ್ದು, ನಿರಂಜನಲಿಂಗಸನ್ನಿಹಿತರೆಂಬವ ನಂಜುಭಾವರ ನಡೆನುಡಿಯ ಕಂಡು, ಬಿಡುಮುಖದಿಂದೆ ಗಹಗಹಿಸುವರಯ್ಯಾ ಪ್ರಾಣಲಿಂಗಿಗಳು. ಗುರುನಿರಂಜನ ಚನ್ನಬಸವಲಿಂಗದಡಿಗತ್ತತ್ತ ಬೇಡವೆಂದು ನೂಂಕುವರಯ್ಯಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಹುಸಿಗಲತ ಕ್ರಿಯೆಯು ಹಸಿಯ ಮಡಕೆಯೊಳುದಕವ ತುಂಬಿದಂತೆ. ಹುಸಿಗಲತ ಜ್ಞಾನವು ಮಲಗಪ್ಪಡವ ತೊಳೆದು ಲೇಸನರಸುವಂತೆ. ಹುಸಿಗಲತ ಸ್ನೇಹವು ಮುಳ್ಳನಟ್ಟ ನೋವಿನಿಂದ ಗಿರಿಯನಡರುವಂತೆ. ಹುಸಿಗಲತ ಗುರುನಿರಂಜನ ಚನ್ನಬಸವಲಿಂಗವೆನಗೊಶಗತವೆಂದರೆ ಹಸಗೆಟ್ಟ ಹೆಣನ ಮೋಹಿಸುವ ರುಚಿಯಂತೆ ಸಂಬಂಧ.
--------------
ದೇಶಿಕೇಂದ್ರ ಸಂಗನಬಸವಯ್ಯ
ಹೆಳವರೈವರ ತಲೆಯಲ್ಲಿ ಹಾಲು ಸಕ್ಕರೆ ಕೂಡಿ ಕುಡಿಯಬಲ್ಲ ಕುಲಜನೇ ಶರಣ ತಾನೇ ಗುರುನಿರಂಜನ ಚನ್ನಬಸವಲಿಂಗವು.
--------------
ದೇಶಿಕೇಂದ್ರ ಸಂಗನಬಸವಯ್ಯ
ಹಿಡಿದು ನಡೆಯುತ ಮಾಡಿದರೆ ಬ್ರಹ್ಮಪದ ತಪ್ಪದು, ಹಿಡಿದು ನೋಡುತ ಮಾಡಿದರೆ ವಿಷ್ಣುಪದ ತಪ್ಪದು, ಹಿಡಿದು ನುಡಿಯುತ ಮಾಡಿದರೆ ರುದ್ರಪದ ತಪ್ಪದು, ಈ ತ್ರಿವಿಧ ಪದಗತಿಯುಳ್ಳಾತಗೆ ಗುರುನಿರಂಜನ ಚನ್ನಬಸವಲಿಂಗವು ನಿತ್ಯಸಮ್ಮುಖ ಸಾಕ್ಷಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ಹೊರಗೊಳಗೆ ನಾನು ನೀನಾದ ಬಳಿಕ ಪೃಥ್ವಿಯಲ್ಲಿ ಭಾವಶುದ್ಧವಾಯಿತ್ತು, ಅಪ್ಪುವಿನಲ್ಲಿ ಮನಶುದ್ಧವಾಯಿತ್ತು, ಅಗ್ನಿಯಲ್ಲಿ ಚಿತ್ತಶುದ್ಧವಾಯಿತ್ತು, ವಾಯುವಿನಲ್ಲಿ ಪ್ರಾಣಶುದ್ಧವಾಯಿತ್ತು, ಆಕಾಶದಲ್ಲಿ ಜ್ಞಾನಶುದ್ಧವಾಯಿತ್ತು, ಆತ್ಮನಲ್ಲಿ ಅರಿವು ಶುದ್ಧವಾಯಿತ್ತು. ಇದು ಕಾರಣ ಶುದ್ಧಸಿದ್ಧಪ್ರಸಿದ್ಧ ಪ್ರಭುವಿನಲ್ಲಿ ಭಕ್ತಿ ಶುದ್ಧವಾಯಿತ್ತು.
--------------
ದೇಶಿಕೇಂದ್ರ ಸಂಗನಬಸವಯ್ಯ

ಇನ್ನಷ್ಟು ...