ಅಥವಾ
(220) (73) (20) (3) (8) (5) (0) (0) (17) (4) (3) (15) (0) (0) ಅಂ (31) ಅಃ (31) (141) (1) (59) (8) (0) (12) (0) (14) (0) (0) (0) (0) (1) (0) (0) (66) (0) (14) (5) (89) (68) (1) (50) (40) (85) (1) (5) (0) (34) (11) (24) (1) (81) (57) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಮುತ್ತೈದೆ ಸತ್ಯಕ್ಕಗಳಿರಾ ! ನಿತ್ಯರೆನ್ನ ಮನೆಗೆ ಕರ್ತುವಾಗಿ ಬಂದರೆ ಅರ್ಥವನೀವೆ. ಅವರಿರತಕ್ಕ ಇಚ್ಫೆ ಬಾರದಮುನ್ನ ಎಚ್ಚರವನೀವುತ ಬನ್ನಿರೆ. ಪಂಚವರ್ಣದಾಭರಣವ ನಿಮ್ಮ ಕೈಯಿಂದೆ ಕೊಡಿಸುವೆ, ನಾನಚ್ಚತಗೊಂಬೆ ಎನ್ನ ಬಯಕೆಯನೊಯ್ದೊಪ್ಪಿಸಿ ಅವರ ಸಮರಸಾನಂದವೆನಗಿತ್ತಡೆ ನಿಮ್ಮ ಕೈಯಲ್ಲಿ ನಿರಂತರ ಗುರುನಿರಂಜನ ಚನ್ನಬಸವಲಿಂಗ.
--------------
ದೇಶಿಕೇಂದ್ರ ಸಂಗನಬಸವಯ್ಯ
ಮಹದಲ್ಲಿ ಮನಮುಳುಗಿಸಿದ ಮಹಾಂತನ ಬಗೆಗೊಳ್ಳದೆ ಬೊಗಳಲಾಗದು. ಅದೇನು ಕಾರಣವೆಂದೊಡೆ, ಲಿಂಗದೊಳಗಿರ್ದು ಬಲ್ಲಂತೆ ನಡೆವನು ಬಲ್ಲಂತೆ ನುಡಿವನು. ಬಲ್ಲಂತೆ ಸಕಲ ವ್ಯವಹಾರದೊಳಗಿರ್ದರು ಎಂತಿರ್ದಂತೆ ನಿಜವು ತಾನೆ ಗುರುನಿರಂಜನ ಚನ್ನಬಸವಲಿಂಗಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಮನದಲ್ಲಿ ಉಕಾರಸ್ವರೂಪವಾದ ಇಷ್ಟಲಿಂಗವನರಿದರ್ಚಿಸಬಲ್ಲಾತನೆ ಭಕ್ತ. ಮನದಲ್ಲಿ ಸಕಾರಸ್ವರೂಪವಾದ ಪ್ರಾಣಲಿಂಗವನರಿದರ್ಚಿಸಬಲ್ಲಾತನೆ ಭಕ್ತ. ಮನನೀಯದಲ್ಲಿ ಕ್ಷಕಾರಸ್ವರೂಪವಾದ ಭಾವಲಿಂಗವನರಿದರ್ಚಿಸಬಲ್ಲಾತನೆ ಭಕ್ತ. ತ್ರಿವಿಧಲಿಂಗವನರಿದರ್ಚಿಸಬಲ್ಲಾತಂಗಲ್ಲದೆ ಭಕ್ತಿಸ್ಥಲವಿಲ್ಲ ಕಾಣಾ ಗುರುನಿರಂಜನ ಚನ್ನಬಸವಲಿಂಗಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಮೂರುಠಾವಿನ ಬೆಂಕಿ ಮುಂದುವರಿದುರಿವ ಅರಣ್ಯದೊಳಗೊಬ್ಬ ಸೂಳೆ ಆರಾರ ಉಳ್ಳವರನೊತ್ತೆಯ ಕೊಳ್ಳುತ್ತ ತನ್ನ ಸುಖವ ತೋರುತ್ತ ನಗಿಸುತ್ತ, ದುಃಖವನುಣಿಸುತ್ತಲಳಿಸುತ್ತ ಬಗೆ ಬಗೆ ಬಣ್ಣತೆಯ ತೊಡಿಸಿ, ಕುಣಿಸುವ ಕುವರಿಯ ಕಾಲದೊಡರಿನೊಳಿರ್ದು ಹಿರಿಯರೆನಿಸಿಕೊಂಬ ಕುರಿಮಾನವರ ನೋಡಿ ಮರುಗುತಿರ್ದೆನು ಕಾಣಾ ನಿರಂಜನ ಚನ್ನಬಸಲಿಂಗಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಮಾಟದೊಳು ಮರೆದರಿಯದಂದು ಚಿರಹೃದಯದಿಂದೊಡೆದು ಮೂಡಿ, ಪರಿಭವಂಗಳ ಹರಿದ ಇರವರಿಸಬೇಕೆಂದು ಪರಮಪಾವನ ಗುರುಕರುಣಾಮೃತವಾಗಿ ಬಂದ ಚಿದ್ರುದ್ರಾಕ್ಷಿಯನೊಲಿದು ನಲಿನಲಿದು ಧರಿಸಿ, ಮಲಮಾಯಾಮದಕರ್ಮಶೂನ್ಯನಾದೆ ಗುರುನಿರಂಜನ ಚನ್ನಬಸವಲಿಂಗದಲ್ಲಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ಮುನ್ನೂರು ಮುನ್ನೂರು ಮುನ್ನೂರು ವಾಸನೆಯನಳಿದುಳಿದ ವಾಸನೆಯ ಲತೆಗಳೊಳ್ಬೆಳೆದ ಅತಿಶಯಾನಂದರೂಪವನರಿಯಲಾರಳವಲ್ಲ ನೋಡಾ. ಭೂಚರರರಿಯರು ಖೇಚರರರಿಯರು ಪೆರ್ಚಲದಾಶ್ರಯವಗೊಂಡಾಯಸವನುಂಬ ಅರೆಮರುಳರಂತಿರಲಿ ಧರೆಯೊಳಿಪ್ಪ ನರರೆತ್ತ ಬಲ್ಲರು ಹೇಳಾ ! ನಿಮ್ಮ ಶರಣರ ಘನವ ಗುರುನಿರಂಜನ ಚನ್ನಬಸವಲಿಂಗಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಮೂರುಕಾಲ ಮಣಿಯನೇರಿ ಹತ್ತಿಯನರೆವ ಹೆಂಗಳೆಯ ಚಿತ್ತ ಕಾಲವಿಡಿದು, ಕಾಳವಿಸರ್ಜಿಸಿ ಅರಳೆಯ ತನ್ನತ್ತಲೆಳಹುವದು. ಕ್ರಿಯಾಪಾದ ಜ್ಞಾನಪಾದ ಚರ್ಯಾಪಾದವೆಂಬ ಪಾದತ್ರಯದಮೇಲಿರ್ದ ಶರಣನ ಚಿತ್ತ, ಸೂಕ್ಷ್ಮಸುವಿಚಾರವಿಡಿದು ಕರಣೇಂದ್ರಿಯ ವಿಷಯಕಾಠಿಣ್ಯ ಪ್ರಕೃತಿಯ ದೂಡುತ್ತ ಸ್ವಚ್ಫ ಸೂಕ್ಷ್ಮತರಭಾವವೇದಿ ಮಹಾಘನ ಪ್ರಕಾಶವ ನೆರೆಯಲೆಳಹುವುದು ಗುರುನಿರಂಜನ ಚನ್ನಬಸವಲಿಂಗ ಸಾಕ್ಷಿಯಾಗಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ಮೊದಲಿಂದತ್ತಲರಿಯದೆ, ಕಡೆಯಿಂದ ಮೇಲೆ ಕಾಣದೆ, ಚದುರಿನ ಹದನ ಸದನ ಸಂಭ್ರಮಕ್ಕೆ ಒದಗಿ ಬಿದ್ದೊರಲಿದರು ಅಜ ವಿಷ್ಣು ಇಂದ್ರಾದಿ ಸಕಲ ಸಂದೋಹ. ಉಳಿದ ಉಚ್ಛಿಷ್ಟ ಬಚ್ಚಲದೊಳು ಬಿದ್ದ ಪ್ರಾಣಿಗಳಂತಿರಲಿ, ಮತ್ತೆ ಕೋಟಲೆಯ ಕಳೆದು ರಾಟಣವ ಹರಿದು, ನಿಜಬೇಟವರಿದು ನಿರ್ಮಲವನರ್ಪಿಸಿ, ನಿರಾವಯವ ಕೊಂಡಾಡುವ ನಿಜಪ್ರಸಾದಿಗಲ್ಲದೆ ಅಸಾಧ್ಯ ಕಾಣಾ ಗುರುನಿರಂಜನ ಚನ್ನಬಸವಲಿಂಗ.
--------------
ದೇಶಿಕೇಂದ್ರ ಸಂಗನಬಸವಯ್ಯ
ಮಿಥ್ಯಭಾವವನು ತತ್ತರಿದಂದು, ಕಲ್ಪಕಳೆಯನಳಿದುಳಿದಂದು, ಸತ್ತವರೆದ್ದು ಬಂದಂದು, ಸಂಬಂಧಸುಖಸಮ್ಮುಖದ ಸಂಗದ ಸವಿಯ ನೋಡಾ. ಧರೆ ಗಗನದ ಮಧ್ಯ ಜಗಜಗಿಸುತಿರ್ದ ಷಡುದರ್ಶನ ಮೂಲಮುಖಸುಯಿಧಾನವಿಡಿದು, ಚೆಲುವಾಂಗ ಪ್ರಾಣಾತ್ಮಪ್ರಿಯ ಸಿದ್ಧಲಿಂಗಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಮಹಾಜ್ಞಾನಿ ಜಂಗಮಲಿಂಗ ತಾನು ಲೋಕಪಾವನವಾಗಿ ನಡೆನುಡಿಗಳರಿದಾಚರಿಸುವಲ್ಲಿ, ಜಿಹ್ವೆಯಲ್ಲಿ ಹುಸಿನುಡಿಯಿಲ್ಲದೆ ತನ್ನ ತಾ ನುಡಿಯುತಿರ್ದ ಕಾಣಾ. ಕಂಗಳಲ್ಲಿ ಬ್ಥಿನ್ನದೃಷ್ಟಿಯಿಲ್ಲದೆ ತನ್ನ ತಾ ನೋಡುತಿರ್ದ ಕಾಣಾ. ಶ್ರೋತ್ರದಲ್ಲಿ ಬ್ಥಿನ್ನಶಬ್ದವಿಲ್ಲದೆ ತನ್ನ ತಾ ಕೇಳುತಿರ್ದ ಕಾಣಾ. ತ್ವಕ್ಕಿನಲ್ಲಿ ಬ್ಥಿನ್ನ ಸೋಂಕಿಲ್ಲದೆ ತನ್ನ ತಾ ಸೋಂಕುತಿರ್ದ ಕಾಣಾ. ಘ್ರಾಣದಲ್ಲಿ ಬ್ಥಿನ್ನವಾಸನೆಯಿಲ್ಲದೆ ತನ್ನ ತಾನ್ವಾಸಿಸುತಿರ್ದ ಕಾಣಾ. ಹೃದಯದಲ್ಲಿ ಮಾಯಾಸುಖವಿಲ್ಲದೆ ತನ್ನ ತಾ ಸುಖದಲ್ಲಿರ್ದ ಕಾಣಾ. ಗುರುನಿರಂಜನ ಚನ್ನಬಸವಲಿಂಗಾ ಮತ್ತೆ ಮರಣವಿಲ್ಲದೆ ನಿಮ್ಮಲ್ಲಿ ತನ್ನೊಳೈಕ್ಯ ಕಾಣಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಮಡುವಿನೊಳು ನಿಂದು ಹರಿವ ನೀರ ಮುಟ್ಟಿ ಬೇರೊಬ್ಬನ ಕೂಡ ಹಾದರವ ಮಾಡುವಳ ಕಂಡು, ಬಯಲೊಳಗೆ ನಿಂದು ಎಲ್ಲಗಳು ಅಹುದೆಂದು ಕೆಟ್ಟ ಕಣ್ಣಿನಿಂದ ಜರಿಯುತಿರ್ದನೊಬ್ಬ ಸುಳ್ಳ. ಗಾಳಿ ಮೊಟ್ಟೆಯ ಕಟ್ಟಿ ಕಾಳೋರಗನ ಹೆಡೆಯನೆತ್ತಿ ಮನೆ ಮನೆ ತಿರಿದುಂಡು ಹೋಗಿ ಬರುವನೊಬ್ಬ ಭ್ರಾಂತ. ಹೆಂಗಸು ಗಂಡಸು ಕಷ್ಟಿಗನು ಇವರ ಕಂಡು ನಗುತ ಮಾಡಿಕೊಂಡಿರ್ದ ಗುರುನಿರಂಜನ ಚನ್ನಬಸವಲಿಂಗದಲ್ಲಿ ಅಬ್ಥಿನ್ನ ಭಕ್ತ.
--------------
ದೇಶಿಕೇಂದ್ರ ಸಂಗನಬಸವಯ್ಯ
ಮೂರ್ತಿಬ್ರಹ್ಮ, ಪಿಂಡಬ್ರಹ್ಮ, ಕಲಾಬ್ರಹ್ಮ, ಆನಂದಬ್ರಹ್ಮ, ವಿಜ್ಞಾನಬ್ರಹ್ಮ, ಪರಬ್ರಹ್ಮಸ್ವರೂಪವಾದ ಷಟ್ಪ್ರಣಮವನು ಅಂಗ, ಆತ್ಮ, ಪ್ರಾಣ, ಕರಣ, ವಿಷಯತೃಪ್ತಿಸಂಬಂಧವೆಂದು ಎನ್ನ ಮನದ ಕೊನೆಯಲ್ಲಿ ಮಡುಗಿ, ಮರೆಯದವಧರಿಸೆಂದುಪದೇಶವನಿತ್ತ ಮಹಾಘನ ಗಂಬ್ಥೀರ ಸದ್ಗುರುನಾಥನ ಪ್ರಸಾದವನು ಹೆರೆಹಿಂಗದವಿರಳಕ್ರಿಯೆಯಿಂದೆ ಅವಧರಿಸಿ ಮುಖದಿಂ ಸೇವಿಸಿ, ಬಾಹ್ಯಾಂತಸುಖಿಯಾಗಿರ್ದೆನು ನಿರಂಜನ ಚನ್ನಬಸವಲಿಂಗ ಸನ್ನಿಹಿತನಾಗಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ಮೊದಲೆನ್ನ ಕೈವಶವಾಗಿರ್ದ ಪುರುಷನ ಕಣ್ಣಸನ್ನೆಯಲ್ಲಿರಿಸಿಕೊಂಡಳೆಮ್ಮಕ್ಕ ; ಇದು ನೀತಿಯೇ ? ಕಾಮಿಸಿ ಕಲ್ಪಿಸಿ ಒಲಿಸಿಕೊಂಡವಳಕ್ಕ ; ಇದು ನೀತಿಯೇ ? ಒಳಗೊಳಗೆ ಮಾತನಾಡಿ ಮೋಹಿಸಿಕೊಂಡವಳಕ್ಕ ; ಇದು ನೀತಿಯೇ ? ಇದನರಿದು ಮುನಿಸನುಳಿಸಿ ಹಿರಿಯಕ್ಕನೊಲುಮೆಯೊಳು ಪರಸ್ತ್ರೀಯಾಗಿ ಪರಿಪರಿಯಿಂದೆ ಅವರ ಮೇಲೆ ನೆರೆದರೆ ಮರುಳುಗೊಂಡೆನ್ನೊಳಗಾದರು, ಗುರುನಿರಂಜನ ಚನ್ನಬಸವಲಿಂಗಕ್ಕೆ ಪರಿಣಾಮವಾಯಿತ್ತು.
--------------
ದೇಶಿಕೇಂದ್ರ ಸಂಗನಬಸವಯ್ಯ
ಮುತ್ತುಂಡ ಉದಕವ ತಂದು ಕಾಣಲುಂಟೆ ? ಉರಿಯುಂಡ ಕರ್ಪುರವ ತಂದು ಕಾಣಲುಂಟೆ ? ಗುರುನಿರಂಜನ ಚನ್ನಬಸವಲಿಂಗಾ ನೀನುಂಡ ಶರಣನ ತಂದು ಕಾಣಲುಂಟೆ ಮೂರು ಲೋಕದೊಳಗೆ.
--------------
ದೇಶಿಕೇಂದ್ರ ಸಂಗನಬಸವಯ್ಯ
ಮಾಡುವ ಕೈ ಉಚ್ಫಿಷ್ಟ, ನೋಡುವ ಕಣ್ಣು ಉಚ್ಫಿಷ್ಟ, ಕೊಡುವ ಭಾವ ಉಚ್ಫಿಷ್ಟವಾಗಿರ್ದು, ಮಾಡಿದರೇನು ನೋಡಿದರೇನು ಕೊಟ್ಟರೇನು ಕಳ್ಳನ ಉದ್ಯೋಗಕೆ ಜನ ಮೆಚ್ಚದು ಗುರುನಿರಂಜನ ಚನ್ನಬಸವಲಿಂಗಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಮಾಡೆನೆಂಬುವರೆ ಕಾಯವಿಲ್ಲ, ನೋಡೆನೆಂಬುವರೆ ಕಂಗಳಿಲ್ಲ, ನೆನೆದೆನೆಂಬುವರೆ ಮನವಿಲ್ಲ, ಕೂಡೆನೆಂಬುವರೆ ಭಾವವಿಲ್ಲ, ಕೊಡಲಿಲ್ಲ ಕೊಳಲಿಲ್ಲ, ಕಾಯಕಂಗಳು ಮನ ಭಾವ ನೀವೆಯಾಗಿ ಗುರುನಿರಂಜನ ಚನ್ನಬಸವಲಿಂಗವೆಂಬುವರೆ ತೆರಹಿಲ್ಲ.
--------------
ದೇಶಿಕೇಂದ್ರ ಸಂಗನಬಸವಯ್ಯ
ಮೂರುತನುವಿನ ಮೇಲೆ ತೋರುವ ಆಲಿಕಲ್ಲಿನಂತದಲ್ಲಿರ್ದ ಸಾರಾಯಗೊಂಡು ತೋರುವ ಸೂರ್ಯಕಿರಣವ ಸೇವಿಸುವ ನಿತ್ಯಾನಂದಸುಖಿ ನಿಮ್ಮ ಶರಣ ಗುರುನಿರಂಜನ ಚನ್ನಬಸವಲಿಂಗಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಮುಗ್ಧನಾಗಿ ಮುಕ್ತಿಯ ಪಡೆಯಬೇಕೆಂದು ಸ್ಥೂಲತತ್ವದ ಇಂದ್ರಿಯಂಗಳೆಲ್ಲ ಸೂಕ್ಷ್ಮತತ್ವದ ಕರಣಂಗಳ ಕೈಯಲ್ಲಿ ವಿಷಯಂಗಳೆಂಬ ಕಾರಣತತ್ವದ ಮೂಲದಲ್ಲಿ ಭ್ರಾಂತಿ ದುಸ್ಸಾರದೊಳು ಮುಳುಗಿ ತೇಕಾಡುತ್ತಿಹ ಸಕಲ ಗಂಜಳದ ಗುಂಜುವಾಗಿಹವು. ಇಂತು ಭರಿತವಾದ ಸೋಂಗಿಗನು ಆಯಾಸಗೊಂಡು ಸುಮ್ಮನಿರ್ದಡೆ ಮುಗ್ಧವಾದಾನೆಯೆ ? ಆಗನು. ನಾಲಿಗೆ ಬಿದ್ದಂದು ಬಾಯಿಮುಗ್ಧ, ಕಂಗಳು ಹೋದಂದು ನೋಟಮುಗ್ಧ, ಕರ್ಣದ್ವಾರ ಕಟ್ಟಿದಂದು ಕಿವಿಮುಗ್ಧ, ಕಾಲ ಕೂಡಿದಂದು ಸರ್ವಾಂಗಮುಗ್ಧ. ಹೀಗಲ್ಲ ನಿಮ್ಮ ಶರಣ ಗುರುನಿರಂಜನ ಚನ್ನಬಸವಲಿಂಗಾ, ನಿಮ್ಮಲ್ಲಿ ಅಜಗಣ್ಣನೊಬ್ಬನೆ ಮುಗ್ಭನು.
--------------
ದೇಶಿಕೇಂದ್ರ ಸಂಗನಬಸವಯ್ಯ
ಮದ ಮೋಹ ರಾಗ ವಿಷಾದ ತಾಪ ಶೋಕ ವೈಚಿಂತೆಯೆಂಬ ಸಪ್ತ ಮಲವನು, ಸಮತಾಜಲದಿಂದೆ ತೊಳೆದು ಭಾವನಿರ್ಮಲವ ಮಾಡಿ ಪರಶಿವಾನಂದಸ್ವರೂಪವು ಸಂಬಂಧವಾದ ಬಳಿಕ ಭಾವಲಿಂಗೈಕ್ಯ ತಾನೆ ನೋಡಾ. ತನುವ್ಯಸನ ಮನವ್ಯಸನ ಧನವ್ಯಸನ ಉತ್ಸಾಹವ್ಯಸನ ರಾಜ್ಯವ್ಯಸನ ವಿಶ್ವಾಸವ್ಯಸನ ಸೇವಕವ್ಯಸನವೆಂಬ ಸಪ್ತವ್ಯಸನವನು ವಿನಯಜಲದಿಂದೆ ತೊಳೆದು ಮನ ನಿರ್ಮಲ ಮಾಡಿ ಪರಶಿವನ ಚಿತ್ಸ್ವರೂಪ ಸಂಯೋಗವಾದ ಬಳಿಕ ಪ್ರಾಣಲಿಂಗೈಕ್ಯ ತಾನೇ ನೋಡಾ. ರಸ ರುಧಿರ ಮಾಂಸ ಮೇದಸ್ಸು ಅಸ್ತಿ ಮಜ್ಜೆ ಶುಕ್ಲವೆಂಬ ಸಪ್ತಧಾತುವಿನ ಕಳಂಕವ ಕರುಣಜಲದಿಂದೆ ತೊಳೆದು ತನು ನಿರ್ಮಲ ಮಾಡಿ ಪರಶಿವನ ಸತ್ತುರೂಪ ಸಮರಸವಾದ ಬಳಿಕ ಇಷ್ಟಲಿಂಗೈಕ್ಯ ತಾನೆ ನೋಡಾ. ಇದು ಕಾರಣ ಗುರುವಿನಿಂದುದಿಸಿ ಅಷ್ಟಾವರಣದಲ್ಲಿ ಬೆಳೆದು ಮಹಾಲಿಂಗೈಕ್ಯ ಮಹಾತ್ಮನಿಗೆ ಸಕಲ ಪ್ರಕೃತಿಯೊಂದುವೇಳೆ ಬೆರಸಲುಂಟೆ ? ಭೂಮಲದೊಳೆದ ಜಲ ಶರಧಿಯೋಳ್ವೆರಸಿ ಶರಧಿಯಾದಂತೆ ಶರಣ ಜ್ಞಾನಶರಧಿಯೊಳ್ವೆರೆದ ಕರಣವೆಲ್ಲ ಕಿರಣಮಯವಾಗಿ ಕೂಡೆ ಗುರುನಿರಂಜನ ಚನ್ನಬಸವಲಿಂಗವ ಬೆರಸಿ ಬೇರಿಲ್ಲದಿರ್ದವು.
--------------
ದೇಶಿಕೇಂದ್ರ ಸಂಗನಬಸವಯ್ಯ
ಮನವೆಂಬ ಮಾಯೋಚ್ಫಿಷ್ಟವದು ಸಂಸಾರ ಕುಳಿಯೊಳು ಬಿದ್ದು ಹೊರಳುವ ಇರುಳುಗಳ್ಳ ಮರುಳಮಾನವರಿಗೆತ್ತಣ ಮಾತಯ್ಯಾ. ನಿಮ್ಮ ಮಹಾನುಭಾವರ ಸುಜ್ಞಾನಕ್ರಿಯೆಯೆತ್ತ, ಭವದ ಬೆಳೆಯೆತ್ತ ? ನಿರಂಜನ ಚನ್ನಬಸವಲಿಂಗಾ, ನಿಮ್ಮ ನಿರವಯ ನಿಜಸಮಾಧಿಯೆತ್ತ, ವೈತರಣಿ ದುರ್ಗತಿಗಳೆತ್ತ ?
--------------
ದೇಶಿಕೇಂದ್ರ ಸಂಗನಬಸವಯ್ಯ
ಮಾತು ಮಾತಿನ ತೂತಜ್ಞಾನಿಗಳಿಗೆತ್ತಣ ಶರಣಸ್ಥಲವಯ್ಯಾ? ಸೋತು ನಡೆಯರು ಗುರುಹಿರಿಯರಿಗೆ ಖ್ಯಾತಿಯ ಮುಂದಿಟ್ಟು ಮಲತ್ರಯದಾಸೆಯೊಳು ಮುಳುಗಿ. ಇತರರ್ಗೆ ನೀತಿ ನೂತನದಿಂದೆ ಜರಿದು ತನ್ನನರಿಯದೆ ಭಿನ್ನವಿಟಟು ಮನಗೂಡಿ ಚರಿಸುವ ಶುನಕರು ಶರಣರೆಂದರೆ ಸರಿಯಪ್ಪುದೆ? ನಾಚಿಕೆಯಿಲ್ಲದ ನಾಡಭೂತಗಳನೆನಗೊಮ್ಮೆ ತೋರದಿರಯ್ಯಾ ನಿಮ್ಮ ಧರ್ಮ ಗುರುನಿರಂಜನ ಚನ್ನಬಸವಲಿಂಗಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಮಾಡಲರಿಯೆನಯ್ಯಾ ಮಾಟದ ಸುಖವೆನಗೆ ಮುಂದಿಲ್ಲವಾಗಿ. ನೋಡಲರಿಯೆನಯ್ಯಾ ನೋಟದಸುಖವೆನಗೆ ಮುಂದಿಲ್ಲವಾಗಿ. ಕೂಡಲರಿಯೆನಯ್ಯಾ ಕೂಟದ ಸುಖವೆನಗೆ ಮುಂದಿಲ್ಲವಾಗಿ. ಇದು ಕಾರಣ, ಅಚ್ಚೊತ್ತಿರ್ದ ಲಿಂಗವನಗಲಿ ಮಾಟಕೂಟಕಿಂಬುಗಾಣದೆ ಎಂತಿರ್ದಂತೆ, ಗುರುನಿರಂಜನ ಚನ್ನಬಸವಲಿಂಗ ನಿಮ್ಮೊಳೈಕ್ಯ ಕಾಣಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಮೂಲ ಜ್ಞಾನೋದಯವಾದುದೊಂದು, ಆ ಸಂಬಂಧವನಳಿದುಳಿದುದೊಂದು, ಗುರುಕಾರುಣ್ಯವಾಗಿ ಬಂದುದೊಂದು, ಭಕ್ತನಾಗಿ ಬಹುವಿಧದಲ್ಲಿ ಆಚರಿಸಿ ಅವಿರಳಸುಖ ಪ್ರಸನ್ನತ್ವವನು ಪಡೆದುದೊಂದು. ಈ ಚತುರ್ವಿಧದಂಗಸಂಗಸಂಪನ್ನ ನಮ್ಮ ಗುರುನಿರಂಜನ ಚನ್ನಬಸವಲಿಂಗವು.
--------------
ದೇಶಿಕೇಂದ್ರ ಸಂಗನಬಸವಯ್ಯ
ಮಾರ್ಗಕ್ರೀಗಳನಡಗಿಸಿಕೊಂಡು ಮೀರಿದಕ್ರಿಯೆಯಲ್ಲಿ ನಿಂದು ಸಮರಸವಾದ ಶರಣ, ತಾನೇನು ಭಕ್ತಿಕ್ರೀಯಲ್ಲಿರ್ದಡು ತಾನಳಿದಿಹನು ; ತಾನೇನು ವ್ಯಾಪಾರದೊಳಿರ್ದಡು ಹುಸಿವಿರಹಿತನು ; ತಾನೇನನ್ಯತ್ರ ಚರಿಸಿದಡೆಯು ಬೇಡ ಮರೆದಿಹನು. ತಾನೆಂತಿರ್ದಡೆಯು ಬೇಡಿದರಿಲ್ಲೆನ್ನ ಮರೆದಿಹನು. ಈ ಚತುರ್ವಿಧದಲ್ಲಿರ್ದು ಗುರುನಿರಂಜನ ಚನ್ನಬಸವಲಿಂಗವಾಗಿಹನು.
--------------
ದೇಶಿಕೇಂದ್ರ ಸಂಗನಬಸವಯ್ಯ
ಮಾಡಲಿಲ್ಲದ ತನುವನು ಮಾಡಿಕೆಡಹಿದರು. ಮಾಡಲಿಲ್ಲದ ಮನವನು ಮಾಡಿಕೆಡಹಿದರು. ಮಾಡಲಿಲ್ಲದ ಪ್ರಾಣವನು ಮಾಡಿಕೆಡಹಿದರು. ಕೂಡಲಿಲ್ಲದ ಆತ್ಮನನು ಕೂಡಿಕೆಡಹಿದರು. ಗುರುನಿರಂಜನ ಚನ್ನಬಸವಲಿಂಗಾ ನೀ ಸಾಕ್ಷಿಯಾಗಿ.
--------------
ದೇಶಿಕೇಂದ್ರ ಸಂಗನಬಸವಯ್ಯ

ಇನ್ನಷ್ಟು ...