ಅಥವಾ
(220) (73) (20) (3) (8) (5) (0) (0) (17) (4) (3) (15) (0) (0) ಅಂ (31) ಅಃ (31) (141) (1) (59) (8) (0) (12) (0) (14) (0) (0) (0) (0) (1) (0) (0) (66) (0) (14) (5) (89) (68) (1) (50) (40) (85) (1) (5) (0) (34) (11) (24) (1) (81) (57) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಇಷ್ಟಲಿಂಗವ ಹಿಡಿದು ಕಷ್ಟಯೋನಿಗೆ ತಿರುಗುವ ಕೆಟ್ಟ ಪಾತಕರ ನೋಡಲಾಗದು. ಜಂಗಮವೆಂದು ಮಾಡಲಾಗದು ಪೂಜೆಯ. ನಮಿಸಿಕೊಳ್ಳಲಾಗದು ಹರನೆಂದು. ಅದೇನು ಕಾರಣವೆಂದೊಡೆ : ತನುಮನಭಾವನಷ್ಟವಾದಿಷ್ಟಲಿಂಗಜಂಗಮವು ಪೂಜೆಗೆ ಯೋಗ್ಯ. ತನುಮನಭಾವವು ತ್ರಿವಿಧಮಲದಲ್ಲಿ ಮುಳುಗಿ ಮಲರೂಪಮನುಜರಿಗೆ, ಗುರುನಿರಂಜನ ಚನ್ನಬಸವಲಿಂಗವೆಂದೊಡೆ ನಾಚಿಕೆಗೊಂಡಿತ್ತು ಆಚಾರ.
--------------
ದೇಶಿಕೇಂದ್ರ ಸಂಗನಬಸವಯ್ಯ
ಇಂದ್ರಿಯಂಗಳ ಗಮನಗೆಡದೆ ಕರಣಂಗಳ ಸೂತಕ ಕಡೆಗಾಗದೆ ಆತ್ಮನ ಕುರುಹು ಅಡಗದೆ ಬರಿದೆ ಭ್ರಮೆಗೊಂಡು ಹಿರಿಯತನವ ಹೊತ್ತರಲ್ಲ ! ಮತ್ತೆ ಪೂರ್ವ ಮೊತ್ತದ ಬರಿವಿದ್ಯೆ ಬಂಧನಕ್ಕೆರಗಿ ಸಂದಿನ ಕಿಚ್ಚಿನಲ್ಲಿ ಬೆಂದರಲ್ಲ! ಒಂದುವನರಿಯದೆ ಹಿಂದಿನ ಸರಮಾಲೆಯ ಸಂಕೋಲೆಯೊಳಗಾಗಿ ಭೋಗವನರಿವರು ಕಾಣಾ ಪಂಚಾಕ್ಷರಮೂರ್ತಿಲಿಂಗವೆ.
--------------
ದೇಶಿಕೇಂದ್ರ ಸಂಗನಬಸವಯ್ಯ
ಇಳೆಯಮೇಲೆ ಎಲುವಾಲದ ಮರನಿರ್ದುಫಲವೇನು ? ಸಾರಾಯಹೀನ ಕಾಯದಮೇಲೆ ಲಾಂಛನವಿರ್ದು ಫಲವೇನು ? ಭಕ್ತಿ ಜ್ಞಾನ ವೈರಾಗ್ಯಹೀನ ಭಾರ ಭಾರ ಭವಭಾರ ಕಾಣಾ ಗುರುನಿರಂಜನ ಚನ್ನಬಸವಲಿಂಗಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಇಕ್ಷುವಿನೊಳಗೆ ಶರ್ಕರವ ಕಾಣಬಹುದಲ್ಲದೆ, ಶರ್ಕರದೊಳಗೆ ಇಕ್ಷುವಿನ ಕಂಡವರುಂಟೆ ? ಕ್ಷೀರದೊಳಗೆ ಘೃತವ ಕಾಣಬಹುದಲ್ಲದೆ, ಘೃತದೊಳಗೆ ಕ್ಷೀರವ ಕಂಡವರುಂಟೆ ? ಶುಕ್ತಿಯೊಳಗೆ ಮೌಕ್ತಿಕವ ಕಾಣಬಹುದಲ್ಲದೆ, ಮೌಕ್ತಿಕದೊಳಗೆ ಶುಕ್ತಿಯ ಕಂಡವರುಂಟೆ ? ಸಂಸಾರದೊಳಗೆ ಶರಣನ ಕಾಣಬಹುದಲ್ಲದೆ, ಶರಣನೊಳಗೆ ಸಂಸಾರವ ಕಂಡವರುಂಟೆ? ಮೂರು ಲೋಕದೊಳಗೆ ಇಲ್ಲ ಇಲ್ಲ ಕಾಣಾ ಗುರುನಿರಂಜನ ಚನ್ನಬಸವಲಿಂಗ ಸಂಸಾರ ಶರಣ.
--------------
ದೇಶಿಕೇಂದ್ರ ಸಂಗನಬಸವಯ್ಯ
ಇಂದ್ರಿಯಂಗಳಲ್ಲಿ ಸುಳುಹಿಲ್ಲ, ಕರಣಂಗಳಲ್ಲಿ ಉಲುಹಿಲ್ಲ, ವಿಷಯಂಗಳಲ್ಲಿ ರತಿಯಿಲ್ಲ, ಕಾಯದಲ್ಲಿ ಭಾವವಿಲ್ಲ, ಭಾವದಲ್ಲಿ ಭ್ರಮೆಯಿಲ್ಲ, ಎಂತಿರ್ದಂತೆ ನಿಜ. ಗುರುನಿರಂಜನ ಚನ್ನಬಸವಲಿಂಗಾ, ನಿಮ್ಮ ಶರಣ ಗಜಭಕ್ತಕಂಪಿತದಂತೆ ಇರ್ದ ನೋಡಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಇಂದ್ರಿಯವನರಿಯದೆ ಲಿಂಗವ ಬಲ್ಲ ಶರಣ, ಕರಣವನರಿಯದೆ ಲಿಂಗವ ಬಲ್ಲ ಶರಣ, ವಿಷಯಂಗಳವನರಿಯದೆ ಲಿಂಗವ ಬಲ್ಲ ಶರಣ, ತನ್ನನರಿಯದೆ ಗುರುನಿರಂಜನ ಚನ್ನಬಸವಲಿಂಗವ ಬಲ್ಲ ಶರಣ.
--------------
ದೇಶಿಕೇಂದ್ರ ಸಂಗನಬಸವಯ್ಯ
ಇಂದ್ರಿಯಂಗಳುಂಟು ಭಾವನಾಸ್ತಿ. ಕರಣಂಗಳುಂಟು ಮನನಾಸ್ತಿ. ವಿಷಯಂಗಳುಂಟು ಪ್ರಾಣನಾಸ್ತಿ. ಇದು ಕಾರಣ, ಗುರುನಿರಂಜನ ಚನ್ನಬಸವಲಿಂಗಾ ನೀನುಂಟು ಶರಣನಾಸ್ತಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ಇರುಳಿನಿಂದೆದ್ದು ಬಂದು ಸತ್ತು, ಹುಟ್ಟಿ, ತಾಯಿ ಭಾವನ ಮಗನ ಹಡೆದಾಳು ನೋಡ ! ಹಡೆದ ಮಗನ ಕೈಯಲ್ಲಿ ಹಿಡಿದು ಬೀದಿ ಬಾಜಾರ ಕೇರಿ ಕೇರಿಯಲ್ಲಿ ಮುದ್ದಾಡಲು, ಮಾತೆಯ ತರ್ಕೈಸಿ ಒಳಗೊಯ್ದು ನೆರೆದು ಹೆರೆಹಿಂಗದೆ ಮಾವ ಮುತ್ತೆಯರಿಗೊಂದಾಗಿ ಮಾಡಿ ಶರಣೆಂದರೆ ನಿರಂಜನ ಚನ್ನಬಸವಲಿಂಗಕ್ಕೆ ಪರಿಣಾಮವಾಯಿತ್ತು.
--------------
ದೇಶಿಕೇಂದ್ರ ಸಂಗನಬಸವಯ್ಯ
ಇಕ್ಷುವಿನ ಭಾವ ತಪ್ಪಿ ಗುರುವಿನೊಳೈಕ್ಯವೆಂಬುದೊಂದು ಹುಸಿ, ಚಂದನದ ಭಾವ ತಪ್ಪಿ ಲಿಂಗದೊಳೈಕ್ಯವೆಂಬುದೊಂದು ಹುಸಿ, ಹೇಮದ ಭಾವ ತಪ್ಪಿ ಜಂಗಮದೊಳೈಕ್ಯವೆಂಬುದೊಂದು ಹುಸಿ, ಅದೆಂತೆಂದೊಡೆ, ಶುದ್ಭ ಸಿದ್ಧ ಪ್ರಸಿದ್ಧ ಸಂಬಂಧವಿಲ್ಲವಾಗಿ ಗುರುನಿರಂಜನ ಚನ್ನಬಸವಲಿಂಗವೆಂಬ ಮಹಾಘನ ಪ್ರಸಾದದೊಳೈಕ್ಯವೆಂದಿಗೂ ಇಲ್ಲ ನೋಡಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಇಹದ ಪ್ರಸಾದಭೋಗ, ಪರದ ನಿಜಮೋಕ್ಷ, ಮಧ್ಯಸುಖಮಯವೆಂಬ - ಈ ತ್ರಿವಿಧ ಚರಿತೆಯೊಳಗೆ ಬೇಡ ಬೇಡ ಭಕ್ತಭವಿಯ ಶಿವಾನುಭಾವ. ಬರಿಯ ಗೋಷಿ*ಯ ಬಯಲುರತಿಯ ಸಂಸಾರ ಸುಖವ ಸದ್ಭಕ್ತಿ ತನುದಂಡನೆ ಗುರುನಿರಂಜನ ಚನ್ನಬಸವಲಿಂಗ ಸನ್ನಿಹಿತ ಹುಚ್ಚು ಮರುಳು.
--------------
ದೇಶಿಕೇಂದ್ರ ಸಂಗನಬಸವಯ್ಯ
ಇರ್ದ ಸಂಸಾರವನೊದ್ದುಕಳೆಯದೆ ಇಲ್ಲದ ಶುದ್ಧನ ಮಾಡಿದೆನೆಂಬ ನುಡಿ ಅಶುದ್ಧ ಕಾಣಾ. ಅದೆಂತೆಂದೊಡೆ, ಕಾಯಕ್ಕುಪದೇಶವ ಮಾಡಿದಡೆ ಆ ಕಾಯವು ಗುರುಲಿಂಗ ಚರಭಕ್ತಿ ಸಾಕಾರ ನಿರಾಕಾರಸನ್ನಿಹಿತ ನೋಡಾ. ಭಾವಕ್ಕುಪದೇಶವ ಮಾಡಿದಡೆ ಆ ಭಾವ ಚರಗುರು ಲಿಂಗಭಕ್ತಿ ಸಾಕಾರ ನಿರಾಕಾರಸನ್ನಿಹಿತ ನೋಡಾ. ಬೆಂಕಿಯಿಲ್ಲದೆ ಸದೆಯ ದಹಿಸಿದವರುಂಟೆ ? ನಿನ್ನ ನಿಷೆ* ಆತನ ಸ್ಪಷ್ಟ, ನೀನು ನಿನ್ನಂತೆ ಆತ ತನ್ನಂತೆ. ನಮ್ಮ ಗುರುನಿರಂಜನ ಚನ್ನಬಸವಲಿಂಗ ಸಹಜನಂತೆ.
--------------
ದೇಶಿಕೇಂದ್ರ ಸಂಗನಬಸವಯ್ಯ
ಇಂದ್ರಿಯವಿಷಯಂಗಳನರಿಯದ ತತ್ವ ಇಷ್ಟಲಿಂಗದ ನೆಲೆವನೆ. ಇಂದ್ರಿಯವಿಷಯಂಗಳನರಿಯದ ತತ್ವ ಪ್ರಾಣಲಿಂಗದ ನೆಲೆವನೆ. ಇಂದ್ರಿಯವಿಷಯಂಗಳನರಿಯದ ತತ್ವ ಭಾವಲಿಂಗದ ನೆಲೆವನೆ. ಮತ್ತೆ ಇಂದ್ರಿಯವಿಷಯಂಗಳನರಿಯದ ತತ್ವ ಪಂಚಾಕ್ಷರಮೂರ್ತಿಲಿಂಗವ ಹಿಂಗದಂಗವದೆ ನಿರುತ ಕಾಣಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಇಲಿ ಬೆಕ್ಕ ನುಂಗಿ ಕರಿಯಿರುವೆಯೊಳಡಗಿ ನೀರಸಕ್ಕರೆಯ ಸವಿವುದ ಕಂಡೆ. ಕಲ್ಲುಹೋರಿನಲ್ಲಿ ನಿಶಾಕರನುದಯವಾಗಿ ಬೆಳುದಿಂಗಳದೊಳಗೆ ದಿವಾಕರನುದಯವಾದುದ ಕಂಡೆ. ಬಿಸಿಲು ಆವರಿಸಿದಲ್ಲಿ ಇಲಿ ಸತ್ತು, ಮಾರ್ಜಾಲವೆದ್ದು, ಕರಿಯಿರುವೆಯ ಕೊಡಹಿ, ನೀರಸಕ್ಕರೆಯ ಚರಣದಲ್ಲೊದೆದು ಕಲ್ಲುಹೋರು ಕರಗಿ ಕಸವಳಿದಲ್ಲಿ ಬಯಲಬೊಂಬೆಯ ಸಂಗವಮಾಡಿ ನಿರ್ವಯಲರೂಪು ಸುತನ ಹಡೆದುದ ನೋಡಿ ರತಿತ್ರಯವೇದಿ ಕುಚಗಳನೊತ್ತಿ ನೆರೆಯಲಾಗಿ ಸತಿಪತಿ ತೋರಲೊಲ್ಲದೆ ಸ್ತ್ರೀಯಳಿದು ಪುರುಷನಾಗಿ ಸತ್ತಲ್ಲಿ ಗುರುನಿರಂಜನ ಚನ್ನಬಸವಲಿಂಗ ತಾನೆ.
--------------
ದೇಶಿಕೇಂದ್ರ ಸಂಗನಬಸವಯ್ಯ
ಇಷ್ಟಲಿಂಗವನು ಅಂಗದ ಮೇಲೆ ಧರಿಸಿಕೊಂಡು ಸೃಷ್ಟಿಯೊಳುಳ್ಳ ಸ್ಥಾವರಕ್ಕೆ ಮೆಚ್ಚಿ ಮಾಡಿ, ಮುಕ್ತಿಯ ಕಂಡವರುಂಟೆ ಮೂಜಗದೊಳಗೆ ? ಬಲ್ಲರೆ ಹರಗುರುವಾಕ್ಯದಲ್ಲಿ ತೋರಿ ನಾಚಿಸುವುದು, ಇಲ್ಲದಿರ್ದಡೆ ನಿಮ್ಮ ಮುಖದಲ್ಲಿ ಮಾಯೋಚ್ಫಿಷ್ಟ. ಅದಲ್ಲದೆ ಶೈವರಿಗೆ ಸಲ್ಲುವ ಮಾರ್ಗ ನಮಗುಂಟೆಂದು ಬರುನುಡಿಯ ಬೊಗಳಿದರೆ ಕತ್ತೆ ನಾಯಿ ಗೂಗಿಗಳೆಂದು ಹರಿದುನೂಕುವನತ್ತ ಗುರುನಿರಂಜನ ಚನ್ನಬಸವಲಿಂಗ ಸಾಕ್ಷಿಯಾಗಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ಇಂದ್ರಿಯಾನಂದವೆಂಬಲಿಂಗಸನ್ನಿಹಿತ ಅಯತವೆಂಬ ಶರಣ ನೋಡಾ. ಪ್ರಾಣಾನಂದವೆಂಬಲಿಂಗಸಮೇತ ಸ್ವಾಯತನೆಂಬ ಶರಣ ನೋಡಾ. ಜ್ಞಾನಾನಂದವೆಂಬಲಿಂಗಸಂಯುಕ್ತ ಸನ್ನಿಹಿತನೆಂಬ ಶರಣ ನೋಡಾ. ಭಾವಾನಂದವೆಂಬಲಿಂಗಸಂಯುಕ್ತ ಕಳಾಗ್ರಾಹಕನೆಂಬ ಶರಣ ನೋಡಾ. ತೂರ್ಯಾನಂದವೆಂಬಲಿಂಗಸಮೇತ ಮನೋಮಗ್ನತೆಯೆಂಬ ಶರಣ ನೋಡಾ. ಮಹದಾನಂದವೆಂಬಲಿಂಗಸನ್ನಿಹಿತ ಘನಸಮರಸವೆಂಬ ಶರಣ ನೋಡಾ. ಗುರುನಿರಂಜನ ಚನ್ನಬಸವಲಿಂಗಸನ್ನಿಹಿತ ನಿರ್ಮಾಯನೆಂಬ ಶರಣ ನೋಡಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಇಡಹೇಳಿದೊಡವೆಯ ಕೊಡುವಾತನ ಭಾವ ಹೋಲಲರಿಯರು. ಕಡಬಡ್ಡಿಯ ಕೊಡುವನ ಹೃದಯದಂತೆ ಲೋಕ ಲೌಕಿಕ ಪ್ರಾಣಿಗೆ ಯಾಕೆ ಸ್ಥಲ ? ಏನು ಕಾರಣ ಹೇಳಾ ಗುರುನಿರಂಜನ ಚನ್ನಬಸವಲಿಂಗಾ !
--------------
ದೇಶಿಕೇಂದ್ರ ಸಂಗನಬಸವಯ್ಯ
ಇಪ್ಪತ್ತೈದು ಬಿಳಿಯ ಮೂರುಗಾಲಿಯ ರಥದ ಮೇಲೆ ಮುತ್ತಿನ ಚಂಡು ಕೈಯಲ್ಲಿ ಹಿಡಿದು ಕಾಸಭೋಗದ ತೋಂಟದೊಳಗೆ ಕದಳಿಯ ಬನವ ಸುತ್ತಿ ವಯ್ಯಾಳಿಯ ಮಾಡುವ ವೀರಮಾಹೇಶ್ವರ ರಾಹುತನ ನೋಡಲು ಕಾಲಿಲ್ಲದೆ ನಡೆವರಿಗೆ ಪ್ರಿಯ, ಕೈಯಿಲ್ಲದೆ ಮುಟ್ಟುವರಿಗೆ ಸ್ನೇಹ, ಕಣ್ಣಿಲ್ಲದೆ ನೋಡುವರಿಗೆ ಪ್ರೀತ, ಕಿವಿಯಿಲ್ಲದೆ ಕೇಳುವರಿಗೆ ಸುಖ, ಬಾಯಿಲ್ಲದೆ ಸವಿವರಿಗೆ ಮಚ್ಚು, ಗುರುನಿರಂಜನ ಚನ್ನಬಸವಲಿಂಗದಂಗಕ್ಕೆ ಅಚ್ಚು.
--------------
ದೇಶಿಕೇಂದ್ರ ಸಂಗನಬಸವಯ್ಯ
ಇಷ್ಟಲಿಂಗವನರಿಯದೆ ಕಷ್ಟದಿಂದೆ ಕಷ್ಟವ ಕಾಂಬ ಅಷ್ಟಾಂಗಬದ್ಧರು, ಮುಟ್ಟಿ ಮುಟ್ಟಿ ಮುಟ್ಟುವ ಶ್ರೇಷ*ಗತಿಗಳರಿಯಬಲ್ಲರೆ ? ಮರಳಿ ಮರಳಿ ಹಗಲಿರುಳು ನೆರೆದಿರುವ ಬರಿ ಸಿರಿಸಂಪನ್ನರೆತ್ತ ? ಇಂದು ರವಿ ಕಳೆಯಗಲದೆ ಕಂಡು ಸುಖಿಸುವ ಮಹಾನುಭಾವಿ ಮಹೇಶ್ವರನೆತ್ತ? ಗುರುನಿರಂಜನ ಚನ್ನಬಸವಲಿಂಗದಲ್ಲಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ಇಹ-ಪರದ ಪರಿಮಳನಲ್ಲ, ಪುಣ್ಯ-ಪಾಪದ ಪರಿಮಳನಲ್ಲ, ಮಾಟ-ನೋಟದ ಪರಿಮಳನಲ್ಲ, ಕೋಟಲೆ ಕೂಟದ ಪರಿಮಳನಲ್ಲ, ಗುರುನಿರಂಜನ ಚನ್ನಬಸವಲಿಂಗಕ್ಕೆ ಸಲ್ಲಿದ ಪರಿಮಳ ಕಾಣಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಇತರನರಿಯದ ಇತರ ಮರೆಯದ ಪತಿವ್ರತಾಂಗನೆಯೆನಿಪ, ಖತಿ ಕೇಣಾದಿಗಳ ಜರಿದಿರವನುಳ್ಳ ಪರಮಭಕ್ತನ ಪರಿಯನೇನೆಂದುಪಮಿಸುವೆನಯ್ಯಾ? ಹತ್ತಿ ಹತ್ತಿ ಬಂದು ಸುತ್ತಲಿಕ್ಕಿ ಎತ್ತಿ ಮುಳುಗುವ ನಿತ್ಯಭಕ್ತಂಗೆ ನಮೋ ನಮೋ ಎಂಬೆನಯ್ಯಾ ಗುರುನಿರಂಜನ ಚನ್ನಬಸವಲಿಂಗಾ.
--------------
ದೇಶಿಕೇಂದ್ರ ಸಂಗನಬಸವಯ್ಯ