ಅಥವಾ
(220) (73) (20) (3) (8) (5) (0) (0) (17) (4) (3) (15) (0) (0) ಅಂ (31) ಅಃ (31) (141) (1) (59) (8) (0) (12) (0) (14) (0) (0) (0) (0) (1) (0) (0) (66) (0) (14) (5) (89) (68) (1) (50) (40) (85) (1) (5) (0) (34) (11) (24) (1) (81) (57) (0)

ಪದದಿಂದ ಪ್ರಾರಂಭವಾಗುವ ವಚನಗಳು:

ನಡೆನುಡಿಯಿಲ್ಲದ ಘನವು ನಡೆನುಡಿಗಡಿಯಿಟ್ಟು ಬಂದರೆ ಎನ್ನ ಸಡಗರ ಹೆಚ್ಚಿತ್ತು ನೋಡಾ ! ಬಡಿವಾರದ ಬಲವಯ್ಯಾ, ಕರ್ತು ಭೃತ್ಯಕಳೆ ಉನ್ನತವಾಗಿ ಶಕ್ತಿಯನು ಮುಕ್ತಿದಾಯಕ ಮುನಿಸಿಲ್ಲದೆ ಮುಂದುವರಿ. ನಾದ ಬಿಂದು ಕಳೆ ನವೀನವಯ್ಯಾ. ಮೂದೇವರೊಡೆಯ ಶರಣು ಶರಣು ಕರುಣಾನಿದ್ಥಿ ಗುರುನಿರಂಜನ ಚನ್ನಬಸವಲಿಂಗಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ನಕಾರಪಂಚಾಕ್ಷರವ ನೋಡಲು ಓಂಕಾರದೊಡಲೊಳಗಾಗಿ ಕಾಣಿಸಿಕೊಳ್ಳುತ್ತಿಹವು. ಮಕಾರಪಂಚಾಕ್ಷರವ ನೋಡಲು ಓಂಕಾರದೊಡಲೊಳಗಾಗಿ ಕಾಣಿಸಿಕೊಳ್ಳುತ್ತಿಹವು. ಶಿಕಾರಪಂಚಾಕ್ಷರವ ನೋಡಲು ಓಂಕಾರದೊಡಲೊಳಗಾಗಿ ಕಾಣಿಸಿಕೊಳ್ಳುತ್ತಿಹವು. ವಕಾರಪಂಚಾಕ್ಷರವ ನೋಡಲು ಓಂಕಾರದೊಡಲೊಳಗಾಗಿ ಕಾಣಿಸಿಕೊಳ್ಳುತ್ತಿಹವು. ಯಕಾರಪಂಚಾಕ್ಷರವ ನೋಡಲು ಓಂಕಾರದೊಡಲೊಳಗಾಗಿ ಕಾಣಿಸಿಕೊಳ್ಳುತ್ತಿಹವು. ಇಂತು ಪಂಚಾಕ್ಷರದ ನೆಲೆಯ ಮೇಲೆ ಓಂಕಾರವ ನೋಡಲು ಗುರುನಿರಂಜನ ಚನ್ನಬಸವಲಿಂಗಾ ತಾನಾಗಿ ಕಾಣಿಸಿಕೊಳ್ಳುತಿರ್ದ ಶರಣನು.
--------------
ದೇಶಿಕೇಂದ್ರ ಸಂಗನಬಸವಯ್ಯ
ನಡೆಯಲರಿಯದೆ ನಡೆವರಯ್ಯಾ ತನುವಿಡಿದು, ನೋಡಲರಿಯದೆ ನೋಡುವರಯ್ಯಾ ಮನವಿಡಿದು, ಮುಟ್ಟಲರಿಯದೆ ಮುಟ್ಟುವರಯ್ಯಾ ಪ್ರಾಣವಿಡಿದು, ವಾಸಿಸಲರಿಯದೆ ವಾಸಿಸುವರಯ್ಯಾ ಭಾವವಿಡಿದು, ಕಾಣಲರಿಯದೆ ಕಾಣುವರಯ್ಯಾ ಜೀವವಿಡಿದು, ಹೋಗಿ ಬರುವ ದಾರಿಯ ಸುಖಿಗಳಿಗೆತ್ತಣ ಶರಣಸ್ಥಲವಯ್ಯಾ, ಗುರುನಿರಂಜನ ಚನ್ನಬಸವಲಿಂಗಕ್ಕಂಗವಾದ ಅಸಮಜ್ಞಾನರಿಗಲ್ಲದೆ.
--------------
ದೇಶಿಕೇಂದ್ರ ಸಂಗನಬಸವಯ್ಯ
ನಡೆದು ಕಂಡವರೆಂದು ನುಡಿದು ಸಿಲುಕಿ ಬಿದ್ದು ಹೋಗುವ ಪಾತಕರು ಒಡೆಯನವಸರವನವರೆತ್ತ ಬಲ್ಲರೋ ! ಮಾಂಸಕ್ಕೆ ಬಿದ್ದ ಶುನಿಭಾವದಂತೆ ಕೊಡುಕೊಳ್ಳೆ ಬೆಳೆಯುಂಟು ಕಾಲನಲ್ಲಿ, ಅರಿದು ಮರೆದವರಂತಲ್ಲ ಕೊಡುಕೊಳ್ಳೆ ಬೆಳೆಯುಂಟು ಗುರುನಿರಂಜನ ಚನ್ನಬಸವಲಿಂಗಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ನಿಜವಕೊಟ್ಟು ಗಜಬಜೆಯನೆಸಗಲುಂಟೆ ? ಒಡಲಕಿಚ್ಚಿನ ತುಡುಗು ಬೆಡಗಿನೊಳಗಿಲ್ಲ ಉಪದೇಶ. ನಿನ್ನ ಸಂಸಾರ ನಿನ್ನುದ್ದ, ನಿಃಸಂಸಾರಿಗಳ ತಗುಲಿಕೊಳ್ಳದಿರು. ಕೊಟ್ಟವರಾರು ಕೊಂಡವರಾರು ? ಹಮ್ಮು ಬಿಮ್ಮು ಹವಣಿಸಿಕೊ ಗುರುನಿರಂಜನ ಚನ್ನಬಸವಲಿಂಗಸಹಿತ ಗುರುವೆನಿಸುವರೆ.
--------------
ದೇಶಿಕೇಂದ್ರ ಸಂಗನಬಸವಯ್ಯ
ನುಡಿವನಯ್ಯಾ ಶರಣನು ತನ್ನಡಿಗೆರಗಿ ನಿಂದ ನಿರ್ಮಲರಿಗೊಲಿದು. ನುಡಿವನಯ್ಯಾ ಶರಣನು ಭಕ್ತಿತ್ರಯದ ಯುಕ್ತರ ಕೂಡಿ. ನುಡಿವನಯ್ಯಾ ಶರಣನು ಮಹಾನುಭಾವರ ಪ್ರಸಂಗಕ್ಕೆ ಅಭಿನ್ನಮುಖದಿಂದೆ. ನುಡಿವನಯ್ಯಾ ಶರಣನು ಗುರುನಿರಂಜನ ಚನ್ನಬಸವಲಿಂಗ ತಾನಾಗಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ನೀರುಕಲೆತ ಭೂಮಿಯ ಆಸೆಯ ಮರೆದಲ್ಲಿ ಪುಷ್ಪವರಳಿತ್ತು, ಪೂರ್ಣಿಮೆಯ ಚಂದ್ರ ಮೂಡಿಬರಲು ಸಣ್ಣಬಾವಿಯ ಶಿಲೆಯ ಜಲವುಕ್ಕಿ ಹಾದಿಯಮೇಲೆ ಸುರಿಯೆ ಎಡೆಯಾಡುವ ಸಕಲ ತಿಂಥಿಣಿ ಪ್ರಮಥಗಣವಾದುದು ಕಂಡು ಗುರುನಿರಂಜನ ಚನ್ನಬಸವಲಿಂಗವಾಗಿ ಮರೆದಿರ್ದನು.
--------------
ದೇಶಿಕೇಂದ್ರ ಸಂಗನಬಸವಯ್ಯ
ನಾವು ಗುರುಲಿಂಗಜಂಗಮಪ್ರಸಾದಿಗಳೆಂದು ಹೇಳಿಕೊಂಡು ನಡೆವ ಅಬದ್ಧ ಮೂಢಮನುಜರನೇನೆಂಬೆನಯ್ಯಾ! ಗುರುಪ್ರಸಾದಿಯಾದಡೆ, ಕಾಯಗುಣವಳಿದು ಪರಸ್ತ್ರೀಸಂಗ ಪರದ್ರವ್ಯ ಅಪಹರಣ ಅಭಕ್ಷಭಕ್ಷಣ ಹಿಂಸಾದಿಗಳನಳಿದುಳಿದಿರಬೇಕು. ಲಿಂಗಪ್ರಸಾದಿಯಾದಡೆ ಹುಸಿ ನಿಷ್ಠುರಾದಿ ವಾಕ್‍ದೋಷಂಗಲನಳಿದಿರಬೇಕು. ಜಂಗಮಪ್ರಸಾದಿಯಾದಡೆ ಆಸೆ ಆಮಿಷ ದುರ್ಮೋಹಾದಿಗಳನಳಿದಿರಬೇಕು. ಇಂತಲ್ಲದೆ ಕರಣತ್ರಯವಳಿಯದೆ ಕರ್ಮತ್ರಯವನುಂಬ ಕಾಳಕೂಳರಿಗೆ ತ್ರಿವಿಧಪ್ರಸಾದವೆಲ್ಲಿ ಹದಯ್ಯಾ? ನಮ್ಮ ಗುರುನಿರಂಜನ ಚನ್ನಬಸವಲಿಂಗದ ನಿಜಪ್ರಸಾದಿಗಳಿಗಲ್ಲದೆ.
--------------
ದೇಶಿಕೇಂದ್ರ ಸಂಗನಬಸವಯ್ಯ
ನಾದಸುಖವಿಡಿದು ಸಾದ್ಥಿಸಿ ಮಾಡಿಕೊಂಡವನಲ್ಲ ಶರಣ. ಬಿಂದುವಿನಲ್ಲಿ ಸುಖವಿಡಿದು ಸಂಕೋಚಿಸಿ ಮಾಡಿಕೊಂಡವನಲ್ಲ ಶರಣ. ಕಳೆಯ ಸುಖವಿಡಿದು ಕಂಡು ಕಂಡು ಮಾಡಿಕೊಂಡವನಲ್ಲ ಶರಣ. ವೃಷಿಕಂಗಳ ಸುಖವಿಡಿದು ಮಾಟದಲ್ಲಿ ನಿಂತು ಮಾಡಿಕೊಂಡವನಲ್ಲ ಶರಣ. ಗುರುನಿರಂಜನ ಚನ್ನಬಸವಲಿಂಗದಂಗ ಸುಖಿಯಾಗಿರ್ದ ಪ್ರಸಾದಿ ಶರಣ.
--------------
ದೇಶಿಕೇಂದ್ರ ಸಂಗನಬಸವಯ್ಯ
ನಾದ-ಬಿಂದು-ಕಲಾಸಂಚ ನಿರಂಜನಲಿಂಗವನು ಪರಮಗುರುಮುಖದಿಂದೆ ಸಾದ್ಥಿಸಿ, ಕರಕಂಜದೊಳಗಿರಿಸಿ, ಉರವಣಿ ಬಟ್ಟೆಗಳ ಸವರಿ, ಕಳೆವ ಕರಡವಿಯೊಳೆಸೆವುತ, ಪರಿಪರಿಯಿಂದೆ ಅಣುಮಾತ್ರ ಮೂರು ವಿದ್ಯೆಕೆ ಮರವೆಯ ತಾರದೆ, ಎಡಬಲದ ನಡೆನುಡಿ ಜಾಣರನೊಳಕೊಳ್ಳದೆ ಹಿಡಿತ ಬಿಡಿತಗಳರಿದು, ಜರೆದು ನೂಂಕುತ ಹಿಡಿದುಕೊಂಬುತ ಶರಣು ಶರಣೆಂದು ಬೆರೆದು ಬೆರಗಾಗಿರ್ಪ ಗುರುನಿರಂಜನ ಚನ್ನಬಸವಲಿಂಗದಲ್ಲಿ ಪರಮಮಾಹೇಶ್ವರ.
--------------
ದೇಶಿಕೇಂದ್ರ ಸಂಗನಬಸವಯ್ಯ
ನೀಲಲೋಚನೆಯಮ್ಮನವರ ಮನೆಯಲ್ಲಿ ನಿರ್ಮಲಪ್ರಸಾದವ ಕಂಡು ನಿತ್ಯ ಸೇವಿಸಿ ಸುಖಾನಂದಸುಗ್ಗಿಯೊಳೋಲಾಡುತಿರ್ದೆನು. ನಾಗಲಾಂಬಿಕೆಯವರ ಮನೆಯಲ್ಲಿ ಚಿತ್ಕಲಾಪ್ರಸಾದವ ಕಂಡು ನಿತ್ಯ ಸೇವಿಸಿ ಸುಖಾನಂದಸುಗ್ಗಿಯೊಳೋಲಾಡುತಿರ್ದೆನು. ಅಕ್ಕಮಹಾದೇವಿಯವರ ಮನೆಯಲ್ಲಿ ನಿರಂಜನಪ್ರಸಾದವ ಕಂಡು ನಿತ್ಯ ಸೇವಿಸಿ ಸುಖಾನಂದಸುಗ್ಗಿಯೊಳೋಲಾಡುತಿರ್ದೆನು. ಮುಕ್ತಾಯಕ್ಕಳ ಮನೆಯಲ್ಲಿ ನಿರವಯ ಸಂವಿತ್ಪ್ರಭಾನಂದಪ್ರಸಾದವ ಕಂಡು ನಿತ್ಯ ಸೇವಿಸಿ ಗುರುನಿರಂಜನ ಚನ್ನಬಸವಲಿಂಗದಲ್ಲಿ ಸುಖಾನಂದಸುಗ್ಗಿಯೊಳೋಲಾಡುತಿರ್ದೆನು.
--------------
ದೇಶಿಕೇಂದ್ರ ಸಂಗನಬಸವಯ್ಯ
ನಕಾರದೊಳಗೆ ಓಂಕಾರವ ಕಂಡೆ, ಮಕಾರದೊಳಗೆ ಓಂಕಾರವ ಕಂಡೆ, ಶಿಕಾರದೊಳಗೆ ಓಂಕಾರವ ಕಂಡೆ, ವಕಾರದೊಳಗೆ ಓಂಕಾರವ ಕಂಡೆ, ಯಕಾರದೊಳಗೆ ಓಂಕಾರವ ಕಂಡೆ. ಓಂಕಾರದೊಳಗೆ ಪಂಚಾಕ್ಷರವ ಕಂಡು, ನಮೋ ನಮೋ ಎನುತಿರ್ದೆ ಕಾಣಾ ಗುರುನಿರಂಜನ ಚನ್ನಬಸವಲಿಂಗಾ ನಿಮ್ಮೊಳಗೆ ನೀವೆಯಾಗಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ನಡೆಯಲರಿಯದ ನಡೆಯ ನಡೆದನಯ್ಯಾ. ನುಡಿಯಲರಿಯದ ನುಡಿಯ ನುಡಿದನಯ್ಯಾ. ಮಾಡಬಾರದ ಮಾಟವ ಮಾಡಿದನಯ್ಯಾ. ನೋಡಬಾರದ ನೋಟವ ನೋಡಿದನಯ್ಯಾ. ಕೂಡಬಾರದ ಕೂಡವ ಕೂಡಿದನಯ್ಯಾ. ಗುರುನಿರಂಜನ ಚನ್ನಬಸವಲಿಂಗದಂಗವಾಗಿ ಶರಣನು.
--------------
ದೇಶಿಕೇಂದ್ರ ಸಂಗನಬಸವಯ್ಯ
ನಿತ್ಯಾನಂದ ಸುಖಮುಖ ಶರಣರು ನುಡಿವರು- ಕಾಯಕಳೆ ಸಂಗಮನೆಂದರೆ ಗುರುವಿಹೀನನೆಂದು. ಮನಕಳೆ ಸಂಗಮನೆಂದರೆ ಲಿಂಗವಿಹೀನನೆಂದು. ಪ್ರಾಣಕಳೆ ಸಂಗಮನೆಂದರೆ ಜಂಗಮವಿಹೀನನೆಂದು. ಭಾವಕಳೆ ಸಂಗಮನೆಂದರೆ ಪ್ರಸಾದವಿಹೀನನೆಂದು, ಅರುಹಿನ ಕಳೆ ಸಂಗಮನೆಂದರೆ ಗುರುನಿರಂಜನ ಚನ್ನಬಸವಲಿಂಗದಲ್ಲಿ ಪಾದೋದಕ ಸಂಬಂದ್ಥಿ ಭಕ್ತನೆಂದು.
--------------
ದೇಶಿಕೇಂದ್ರ ಸಂಗನಬಸವಯ್ಯ
ನರಮುನಿಗಳರಿಯರು ನಿಮ್ಮಂತುವ, ಸುರಪಾದಿ ಸಕಲಮನು ಷಡ್‍ದರ್ಶನಗಳರಿಯರು, ನಿಮ್ಮ ಪದಬೆರೆಯರು. ಹದುಳಿಗರ ಸದುಹೃದಯ ನಿವಾಸ, ಮುದದಿಂದೊಲಿದೆನ್ನ ಕರಸರಸಿಜಕ್ಕೈತಂದು, ಘನಸಾರಾಯದನುವಿನೊಳು ನೆರೆದು ಪರಿಣಾಮಿಸುವ ಪರಮಮೂರುತಿ, ನಿಮಗೆ ಶರಣು ಶರಣೆಂಬೆನನುದಿನ ಗುರುನಿರಂಜನ ಚನ್ನಬಸವಲಿಂಗಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ನಡೆಯೆನಗೆ ಬಾರದಯ್ಯಾ ಕ್ರಿಯಾತೊಡರುಗೊಂಡು. ನುಡಿಯೆನಗೆ ಬಾರದಯ್ಯಾ ಮನದ ತಿರುಳ ಬಿಚ್ಚಿ. ನೋಟವೆನಗೆ ಬಾರದಯ್ಯಾ ಮನನದ ತಿರುಳ ತೆಗೆದು. ಕೂಟವೆನಗೆ ಸೊಗಸದಯ್ಯಾ ಮನನೀಯದ ತಿರುಳ ತೆಗೆದಿಟ್ಟು. ಇದು ಕಾರಣ ಗುರುನಿರಂಜನ ಚನ್ನಬಸವಲಿಂಗಾ, ನಿಮ್ಮೊಳಗಿರ್ದ ಶರಣಂಗೆ ನೀವೆಯಾದಿರಾಗಿ, ನಾನು ನೀನೆಂಬ ಕುರುಹಿಲ್ಲವಯ್ಯಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ನಡೆನಡೆದು ನಡೆಗಳುಡುಗಿ ನುಡಿನುಡಿದು ನುಡಿಗಳುಡುಗಿ ಕಡುತವಕ ಕಡೆಗಿಟ್ಟು ಕಾಣದಿರ್ದ ಶರಣನಖಂಡಿತನೆಂದು ಕಲ್ಪನೆಗೆ ತಂದು ನುಡಿವ ನರರುಗಳಿಗೆ ನರಕವೇ ಕಡೆಗಿಂಬು ಕಾಣಾ ಗುರುನಿರಂಜನ ಚನ್ನಬಸವಲಿಂಗಸಾಕ್ಷಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ನಕಾರ ಮಕಾರವನೆಯ್ದಿ, ಮಕಾರ ಶಿಕಾರವನೆಯ್ದಿ, ಶಿಕಾರ ವಕಾರವನೆಯ್ದಿ, ವಕಾರ ಯಕಾರವನೆಯ್ದಿ, ಯಕಾರ ಓಂಕಾರವನೆಯ್ದಿ, ಓಂಕಾರ ನಿರಂಜನವನೆಯ್ದಿ, ನಿರಾಮಯವಾಗಿ ನಿಸ್ಥಲ ನಿಜವಾದುದ ಗುರುನಿರಂಜನ ಚನ್ನಬಸವಲಿಂಗ ತಾನೆ ಬಲ್ಲ.
--------------
ದೇಶಿಕೇಂದ್ರ ಸಂಗನಬಸವಯ್ಯ
ನಿಜಕ್ರಿಯಾಸುಜ್ಞಾನ ಸುವಿಲಾಸನೊಮ್ಮೆ ಜಡಕ್ರಿಯಾ ತೊಡರೊಳು ಬೀಳ, ಅಡಿಯಿಡನೊಮ್ಮೆ ಅಗಣಿತ ಕಟ್ಟುವ್ರತ ಕಾವಳಿಗೆ, ಅರಿಯನೊಮ್ಮೆ ನಿಸ್ಸೀಮ ಬರಿ ನಿಯಮಬದ್ಧ ಬಣತೆಯ, ಹುಡಿ ನುಡಿಯನೊಮ್ಮೆ, ಹಸನವಿಡಲರಿಯ. ಗುರುನಿರಂಜನ ಚನ್ನಬಸವಲಿಂಗಾ ನಿಮ್ಮ ನಾಮಸುಖಿ ಶರಣ.
--------------
ದೇಶಿಕೇಂದ್ರ ಸಂಗನಬಸವಯ್ಯ
ನೆನವು ನಿರಂತರ ನಿಜಾನಂದಶರಣನು ಖಂಡಿತವಳಿದುಳಿದು ಕಾಣಿಸಿಕೊಂಬನು. ಹರಿದುಹತ್ತಿದ ಕ್ರಿಯಾಸನ್ನಿಹಿತ ಗುರುವೆಂಬೆನು. ಮರೆದು ನೆರೆದ ಜ್ಞಾನಸನ್ನಿಹಿತ ಲಿಂಗವೆಂಬೆನು. ಜರೆದುಳಿದ ಭಾವಸನ್ನಿಹಿತ ಜಂಗಮವೆಂಬೆನು. ಗುರುನಿರಂಜನ ಚನ್ನಬಸವಲಿಂಗಕ್ಕೆಯಿಲ್ಲದೆ ನಡೆನುಡಿ ಗಂಬ್ಥೀರ ಮಹೇಶ್ವರನು.
--------------
ದೇಶಿಕೇಂದ್ರ ಸಂಗನಬಸವಯ್ಯ
ನವಭಕ್ತಿರಸವಕೊಂಡು ಶಿವಪ್ರಸಾದವನಿತ್ತ ಬಳಿಕ ಆ ಪ್ರಸಾದವನೊಂದೆರಡು ಮೂರಾರು ಮತ್ತೆ ಮುಖಮುಖವರಿದು ವೇದ್ಥಿಸಿದಲ್ಲಿ ಕಿರಿಕುಳವಲ್ಲುಂಟೆ ? ಬರಿಕುಳವಿಲ್ಲುಂಟೆ ? ಕುಳಂಗಳ ನಿಲಿಸಿ ಕೂರ್ಪರೊಳು ಬೆರೆದು ಕೂಡಬಾರದು. ಅದು ಕಾರಣ ಸೂತ್ರದ ಸುಳುಹು ಕಳಚಲಾಗದು ಕನಸಿನಲ್ಲಿ. ಕಾರಣಮೂರ್ತಿಯ ಕಲ್ಪಿತಕ್ಕೆ ಇದೇ ಕುರುಹು ಗುರುನಿರಂಜನ ಚನ್ನಬಸವಲಿಂಗದಲ್ಲಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ನೀರೊಳು ಬಿದ್ದು ನೀರಪುಳವ ಭಕ್ಷಿಸುವ ಕುಕ್ಕುಟ ಕ್ಷೀರವನೀಂಟಬಲ್ಲುದೆ ಹೇಳಾ? ತಿಪ್ಪೆಯಕೆದರಿ ಮಲಪುಳವ ತಿಂಬ ಕೋಳಿ ಮಧುರಾಮೃತಸುಖವ ಬಲ್ಲುದೆ ಹೇಳಾ? ಮಾಯಾಮೋಹ ವಿಷಯರಸವನೀಂಟುವ ಜೀವ ಜಾತಿಗಳು, ಆದಿಗುರು ಕರುಣಾಮೃತ ಅನಾದಿ ಮಹಾನುಭಾವ ಜಂಗಮಪ್ರಸಾದಸೇವಿಪ ಸುಖವನವರೆತ್ತಬಲ್ಲರು ಹೇಳಾ? ಗುರುನಿರಂಜನ ಚನ್ನ ಬಸವಲಿಂಗ ಚಿದಾಂಶಿಕರಲ್ಲದೆ.
--------------
ದೇಶಿಕೇಂದ್ರ ಸಂಗನಬಸವಯ್ಯ
ನಿಜಲಿಂಗೈಕ್ಯ ನಿಜಲಿಂಗೈಕ್ಯರೆಂದು ನುಡಿದುಕೊಂಬ ಕಡುಮಂದಮತಿಗಳನೇನೆಂಬೆನಯ್ಯಾ. ಸತ್ವ-ರಜ-ತಮ ಗಿರಿಯ ಗವಿಯ ಹೊಕ್ಕು ಗಬ್ಬುಗೊಂಡು ಗರಳಘಾತದೊಳು ಮುಳುಗಿದ ವಿಹಂಗಗತಿಗಳೆತ್ತಬಲ್ಲರಯ್ಯಾ ನಿಮ್ಮ ಶರಣನ ಲಿಂಗೈಕ್ಯದ ಘನವ ! ಪತಂಗ ಜಲದಲ್ಲಿ ಮುಳುಗಬಾರದು, ಅನಿಮಿಷನು ಅಗ್ನಿಯಲ್ಲಿ ಮುಳುಗಬಾರದು ಗುರುನಿರಂಜನ ಚನ್ನಬಸವಲಿಂಗ ನಿಮ್ಮ ನೀವೇ ಬಲ್ಲಿರಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ನಾದಬಿಂದುಕಲಾತೀತವಾದ ಅವಿರಳ ಪ್ರಕಾಶಲಿಂಗವ ರೂಪನರಿದು ಅರ್ಚಿಸಬಾರದು ನೋಡಾ. ಆದಿಮಧ್ಯಾಂತಶೂನ್ಯ ಲಿಂಗವ ಸಾಧಿಸಿ ತಂದು ಪೂಜಿಸಬಾರದು ನೋಡಾ. ಶೂನ್ಯ ನಿಃಶೂನ್ಯ ಗತಿಶೂನ್ಯಲಿಂಗವ ಮತಿನಾಮವಿಟ್ಟು ಅರಿದರ್ಚಿಸಬಾರದು ನೋಡಾ. ಇಲ್ಲ ಇಲ್ಲದ ಲಿಂಗವನಲ್ಲಲ್ಲಿಗೆ ತಂದು ಮೆಲ್ಲಮೆಲ್ಲನೆ ಪೂಜಿಸುವರಂಗದಲ್ಲಿ ಬೆಳಗುವ ಪರಿಯ ನೋಡಾ. ಸದಾಚಾರ ಸುಖಪ್ರಿಯ ಸುಲಲಿತ ನೋಡಾ ನಮ್ಮ ಸದ್ಗುರು ಚನ್ನವೃಷಭೇಂದ್ರಲಿಂಗವು.
--------------
ದೇಶಿಕೇಂದ್ರ ಸಂಗನಬಸವಯ್ಯ
ನಾಸಿಕದಲ್ಲಿ ಆಚಾರಲಿಂಗವನರಿದರ್ಪಿಸಿಕೊಂಡು ಅನ್ಯವಾಸನೆಯ ನೆನೆವ ಮನ ಶೂನ್ಯ ಕಾಣಾ. ಜಿಹ್ವೆಯಲ್ಲಿ ಗುರುಲಿಂಗವನರಿದರ್ಪಿಸಿಕೊಂಡು ಅನ್ಯರುಚಿಯ ಭಾವಿಪ ಮನ ಶೂನ್ಯ ಕಾಣಾ. ನೇತ್ರದಲ್ಲಿ ಶಿವಲಿಂಗವನರಿದರ್ಪಿಸಿಕೊಂಡು ಅನ್ಯದೃಷ್ಟಿಗೆಳಸುವ ಮನವಿರಹಿತ ಕಾಣಾ. ತ್ವಕ್ಕಿನಲ್ಲಿ ಜಂಗಮಲಿಂಗವನರಿದರ್ಪಿಸಿಕೊಂಡು ಅನ್ಯಸ್ಪರ್ಶನಕ್ಕಾಸ್ಪದವಾದ ಮನ ನಾಸ್ತಿ ಕಾಣಾ. ಶೋತ್ರದಲ್ಲಿ ಪ್ರಸಾದಲಿಂಗವನರಿದರ್ಪಿಸಿಕೊಂಡು ಅನ್ಯಶಬ್ದರಮಿಸಲು ಮನವಿಲ್ಲ ಕಾಣಾ. ಹೃದಯದಲ್ಲಿ ಮಹಾಲಿಂಗವನರಿದರ್ಪಿಸಿಕೊಂಡು ಅನ್ಯಪರಿಣಾಮಕ್ಕೆಳಸುವ ಮನವಿರಹಿತ ಕಾಣಾ. ಕಾಯ ಕಾರಣ ಪ್ರಾಣಶೂನ್ಯ ಲಿಂಗಮಯ ಗುರುನಿರಂಜನ ಚನ್ನಬಸವಲಿಂಗಾ, ನಿಮ್ಮ ಪ್ರಸಾದಿ.
--------------
ದೇಶಿಕೇಂದ್ರ ಸಂಗನಬಸವಯ್ಯ

ಇನ್ನಷ್ಟು ...