ಅಥವಾ
(220) (73) (20) (3) (8) (5) (0) (0) (17) (4) (3) (15) (0) (0) ಅಂ (31) ಅಃ (31) (141) (1) (59) (8) (0) (12) (0) (14) (0) (0) (0) (0) (1) (0) (0) (66) (0) (14) (5) (89) (68) (1) (50) (40) (85) (1) (5) (0) (34) (11) (24) (1) (81) (57) (0)

ಪದದಿಂದ ಪ್ರಾರಂಭವಾಗುವ ವಚನಗಳು:

ವಿಶ್ವನ ಕಾರ್ಯವ ಕೆಡಿಸಿ ಕಂಡಲ್ಲಿ ತೈಜಸನ ಕಾರ್ಯಕಳವಳ ಕಡೆಗಾಯಿತ್ತು. ಪ್ರಾಜÕನ ಪರಿಣಾಮ ನಿಜ ಪರಿಣಾಮದ ನಿಲವು ನಿಜವಾದಲ್ಲಿ ಗುರುನಿರಂಜನ ಚನ್ನಬಸವಲಿಂಗಾ ನಿಮ್ಮ ಶರಣ.
--------------
ದೇಶಿಕೇಂದ್ರ ಸಂಗನಬಸವಯ್ಯ
ವಾಯುಭೂತ ಕರಣೇಂದ್ರಿಯವಿಷಯವೆಂಬ ಪಂಚಪಂಚತತ್ವ ಪದಾರ್ಥಗಳೆಂಬುದೊಂದು ಭಾವ. ತಾನೆಂಬುದೊಂದು ಭಾವ, ಇದಿರೆಂಬುದೊಂದು ಭಾವ, ಕೊಡಬೇಕೆಂಬುದೊಂದು ಭಾವ, ಕೊಳ್ಳಬೇಕೆಂಬುದೊಂದು ಭಾವ. ಈ ಭಾವಂಗಳೈದರ ತೋರಿಕೆಯನರಿದು ಮರೆದಲ್ಲಿ ಮಹಾಮಹಿಮ ಗುರುನಿರಂಜನ ಚನ್ನಬಸವಲಿಂಗ ತಾನಾದ ಶರಣ.
--------------
ದೇಶಿಕೇಂದ್ರ ಸಂಗನಬಸವಯ್ಯ
ವಡಬಾಗ್ನಿಯೆದ್ದು ಕಡಲನೆಲ್ಲ ಹೀರಿದರೆ ಮಡದಿ ಪುರುಷರ ಪಡಿಪಾಟಯೇನೆಂಬೆನಯ್ಯಾ. ಹಡೆದ ಮಗನ ಹದ್ದು ನುಂಗಿದರೆ ಇದ್ದವರೆಲ್ಲಯೆದ್ದು ಬಂದಾರು ಗುರುನಿರಂಜನ ಚನ್ನಬಸವಲಿಂಗದಲ್ಲಿಗೆ.
--------------
ದೇಶಿಕೇಂದ್ರ ಸಂಗನಬಸವಯ್ಯ
ವಂಚನೆವಿರಹಿತ ಕಾಯ ಉಪಚಾರಕ್ಕತಿ ಸೌಖ್ಯವಯ್ಯಾ. ಚಂಚಲವಿಲ್ಲದ ಮನ ಅನುಕೂಲಗತಿ ರಮ್ಯವಯ್ಯಾ. ಭಿನ್ನಭ್ರಾಮಕವಳಿದ ಭಾವ ಸ್ನೇಹಸೌಖ್ಯಾನಂದವಯ್ಯಾ. ಈ ತ್ರಿವಿಧವಳಿದುಳಿದು ನಿಂದ ನಿಯತನಯ್ಯಾ ನಾನು ಗುರುನಿರಂಜನ ಚನ್ನಬಸವಲಿಂಗಕ್ಕೆ ಅಭಿನ್ನಭಾವಿ ನಾನು, ಬಾರಯ್ಯಾ ತಂದೆ.
--------------
ದೇಶಿಕೇಂದ್ರ ಸಂಗನಬಸವಯ್ಯ
ವೇಷಕ್ಕೆ ತಕ್ಕ ಭಾಷೆಯುಳ್ಳರೆ ಹಿರಿಯರು ಮೆಚ್ಚುವರು. ರಾಜಂಗೆ ಯಾಚಕತನ ಹೀನ, ಅಂಗದ ಮೇಲೆ ಲಿಂಗಸನ್ನಿಹಿತನಾಗಿ ಶಿವಜ್ಞಾನ ಬೀಜ, ಭಕ್ತನ ಬಂಧುತ್ವ, ದ್ರವ್ಯತ್ರಯಲಿಂಗಾರ್ಪಣವೆಂಬ ತ್ರಿವಿಧಾಚರಣೆಸಂಪನ್ನ ವೀರಮಾಹೇಶ್ವರ ವೇಷವ ಹೊತ್ತುಕೊಂಡು, ಕಾಸು ವಿಷಯಾದಿಗಳಿಗಾಸೆಮಾಡಿ, ಜಡಸಂಸಾರದೊಳಗಿರ್ಪ ಜನರಿಗೆ ಕೈಯಾಂತು ಬೇಡಿ ಬೆಂಡಾಗಿ ತಿರುಗಿ ಹೊತ್ತುಗಳೆದರೆ ಹಳಸಿತ್ತು ವೇಷ, ಮುಳಿಸಿತ್ತು ಭಾಷೆ, ಮುಂದೆ ಕೆಡಹಿತ್ತು ಆಸೆ ದುರ್ಗತಿ ಗುರುನಿರಂಜನ ಚನ್ನಬಸವಲಿಂಗವನರಿಯದೆ.
--------------
ದೇಶಿಕೇಂದ್ರ ಸಂಗನಬಸವಯ್ಯ
ವರ್ಷಾಕಾಲದಿ ಭೂಮಿ ಬೆದೆಗೊಂಡಲ್ಲಿ ಬಿತ್ತುವರು. ಅಂಕುರಿಸಿ ಬಂದಲ್ಲಿ ಪರ್ಣವಾಗುವ ವಿಚಾರ ಮುಂದುಗೊಂಡಿಪ್ಪುದು. ಪರ್ಣಗಂಡ ಮತ್ತೆ, ಹೊಡೆ ಕುಸುಮ ದೃಷ್ಟದಾಗಿಂಗೆ ವಿಚಾರ ಮುಂದುಗೊಂಡಿಪ್ಪುದು, ಹೊಡೆಕುಸುಮಗಂಡ ಮತ್ತೆ ಮೊದಲೆಂಬ ವಿಚಾರ ಮುಂದುಗೊಂಡಿಪ್ಪುದು. ಮೊದಲಗಂಡ ಮತ್ತೆ ಏನುವನರಿಯದೆ ತಾನಾಗಿರ್ದ ಗುರುನಿರಂಜನ ಚನ್ನಬಸವಲಿಂಗಾ ನಿಮ್ಮಂತೆ.
--------------
ದೇಶಿಕೇಂದ್ರ ಸಂಗನಬಸವಯ್ಯ
ವೇದಾಗಮ ಸಾಕ್ಷಿಯ ಘನವೆಂದು ನುಡಿವರು, ನುಡಿದ ನುಡಿಯೇನೆಂದರಿಯರು. ಇದು ಏನು ಹೇಳಾ ಪಶುಭಾವ ? ಐವತ್ತೆರಡಕ್ಷರವನುದಯಿಸುವುದೇ ವೇದ ? ನುಡಿಯುವುದೇ ಆಗಮ ? ಬೇರರಸಲೇನು ಕಸಮನುಜರಿರಾ, ನಿಮ್ಮ ಕುರುಹು ಕುರುಹನರಿಯದೆ ಕುರಿಗಳಾದವು. ಕಳೆದುಳಿದು ಬನ್ನಿರಿ, ಗುರುನಿರಂಜನ ಚನ್ನಬಸವಲಿಂಗವಾಗಬೇಕಾದಡೆ ಕಳೆ ನಾದ ಬಿಂದುವನರಿಯಿರಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ವೀರಮಾಹೇಶ್ವರರುಗಳೆಂಬ ಪೋರಜಂಗುಳಿಗಳನೇನೆಂಬೆನಯ್ಯಾ ? ಮಣ್ಣವಿಡಿದು ಬಣ್ಣಗೆಟ್ಟು ಬರಿಯ ಬಸಿರ ಹೊರೆಯಲಿಕ್ಕೆಂದು, ಕಾಸು ವಿಷಯಾದಿ ಗೃಹ ಕ್ಷೇತ್ರಕ್ಕೆ ಮೆಚ್ಚಿ ಗುರುಹಿರಿಯನರಿಯದೆ ಹೋರಾಡಿ ಹೊಲಬುಗೆಟ್ಟು ಹೋಗುವ ಮಲಬದ್ಧ ಮೂಢರು ವೀರಮಾಹೇಶ್ವರರಪ್ಪರೆ ? ಕನ್ಯೆಯರೊಲವಿಂಗೆ ಕಲೆತು ಮನ್ನಣೆಮರ್ಯಾದೆಗಳ ಹರಿದು, ಚುನ್ನಾಟದ ಕುನ್ನಿಗಳಂತೆ ಬೆನ್ನಹತ್ತಿ ತಿರುಗುವ ಶುನಿಸಂಬಂಧಿಗಳನೆಂತು ಮಾಹೇಶ್ವರರೆಂಬೆನಯ್ಯಾ ? ಹೊನ್ನ ಹಿಡಿದು ಅನ್ಯರಿಗೆ ಬಡ್ಡಿಯ ಕೊಟ್ಟು, ಬಂಧನವ ಮಾಡಿ ತಂದು ಕೂಡಹಾಕಿ, ಬಂದ ಜಂಗಮಕ್ಕೊಂದು ಕಾಸನೀಯದೆ ಬೆಂದವೊಡಲಿಗೆ ಸಂದಿಸದೆ, ಹಂದಿ ನಾಯಿಯಂತೆ ಸಾವ, ಹೆಂದ ಮೂಢರು ಮಾಹೇಶ್ವರರಪ್ಪರೆ ? ಇಂತು ತ್ರಿವಿಧದೊಳಗಿರ್ದ ತ್ರಿವಿಧವನರಿಯದ ತ್ರಿವಿಧ ಮಲಭುಂಜಕರನೆಂತು ಮಾಹೇಶ್ವರರೆಂಬೆನಯ್ಯಾ ಗುರುನಿರಂಜನ ಚನ್ನಬಸವಲಿಂಗಾ ?
--------------
ದೇಶಿಕೇಂದ್ರ ಸಂಗನಬಸವಯ್ಯ
ವಾಚಕ ಮಾನಸ ಕಾಯಕಶುದ್ಭವಾದುದೇ ಜಂಗಮಸ್ಥಲವು. ಕಾಯಕ್ಕುಪಚಾರ, ವಾಚಕ್ಕೆ ನವೀನಭಾವ, ಮನಕ್ಕೆ ಸಂತೋಷವ ಕೊಡಬಲ್ಲರೆ ಭಕ್ತ. ಈ ಉಭಯದಲೊದಗಿದ ಪಾದೋದಕ ಪ್ರಸಾದ ಅದು ತಾನೆ ಗುರುನಿರಂಜನ ಚನ್ನಬಸವಲಿಂಗ ಬೇರಿಲ್ಲ.
--------------
ದೇಶಿಕೇಂದ್ರ ಸಂಗನಬಸವಯ್ಯ
ವಲ್ಲಭನ ಒಲುಮೆಯ ವನಿತೆಯರು ಬನ್ನಿರವ್ವ, ಸಲುಗೆಯ ಮಾತಿನ ಸವಿಯ ಕೇಳಿರವ್ವ. ಬೆಚ್ಚಿ ಬೆರಗಾಗಿ ಹೇಳದಿರಿರವ್ವ. ಲಕ್ಷಪತಿ ಏನು ಕಾರಣ ಬಂದಿರ್ದನವ್ವ? ನಲ್ಲನ ಹಾವುಗೆಯಬೆಳಗು ಭುವನಾದಿ ಆಕಾಶಕ್ಕೆ ಮುಸುಕಿತ್ತು. ಮುಕುಟದ ಬೆಳಗು ಸಪ್ತದ್ವೀಪ ಸಮುದ್ರಂಗಳನೆಲ್ಲ ಮುಸುಕಿತ್ತು. ಹೇಮ ರಜತ ಮಂದರಾದ್ರಿಗಳ ಸುತ್ತಮುತ್ತಲಿರುವ ಮನು ಮುನಿ ದೇವತೆಗಳಾದಿ ಸಕಲಸಂದೋಹವೆಲ್ಲ ಬೆಳಗಿನೊಳು ನಿಂದು. ಹರಹರ ಶಿವಶಿವ ಜಯಜಯವೆನಲಾನು ಉಬ್ಬಿ ಕೊಬ್ಬಿ ಶರಣೆನ್ನಲಾರದೆ ಕೂಡಿ ನೆರೆಯಲು, ಅರಿಯದ ಸುಖವ ಕಂಡು ಮರೆದಿರ್ದೆ ಕಾಣಿರವ್ವ ಗುರುನಿರಂಜನ ಚನ್ನಬಸವಲಿಂಗದಲ್ಲಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ವರುಷದಬ್ಬರದೊಳುದುರಿಬಿದ್ದು ಒದರುವ ಮಂಡೂಕಾಳಿಯಂತೆ, ಹರಗುರುವಾಕ್ಯಾನುಭಾವದುಲುಹನೆಬ್ಬಿಸಿ ಉದರಪೋಷಣದ ಅನುವಿಡಿದು, ಅಬ್ಬರಿಸಿ ಹೇಳಿ ಅನಾಚಾರ ವರ್ತನೆಯೊಳ್ಮುಳುಗಿ ಘನಗಂಭೀರ ಶರಣಪದ ಸನ್ನಿಹಿತರೆಂದರೆ, ಯಮನಾಳು ಸೀಳಿ ಬಂಧಿಸರೇ, ಗುರುನಿರಂಜನ ಚನ್ನಬಸವಲಿಂಗಾ.
--------------
ದೇಶಿಕೇಂದ್ರ ಸಂಗನಬಸವಯ್ಯ