ಅಥವಾ
(220) (73) (20) (3) (8) (5) (0) (0) (17) (4) (3) (15) (0) (0) ಅಂ (31) ಅಃ (31) (141) (1) (59) (8) (0) (12) (0) (14) (0) (0) (0) (0) (1) (0) (0) (66) (0) (14) (5) (89) (68) (1) (50) (40) (85) (1) (5) (0) (34) (11) (24) (1) (81) (57) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಜಡಶೀಲಗಳ ಹೊತ್ತು ಕೆಡುವೊಡಲಹೊರೆವ ತುಡುಗುಣಿಗಳಾಚಾರಕ್ಕಗಣಿತ ನೋಡಾ ನಮ್ಮ ವೀರಮಾಹೇಶ್ವರನು. ಮನದಿಚ್ಫೆಗನುವಾದ ತನುಸುಖಪದಾರ್ಥವನು ದಿನದಿನಕ್ಕೆ ವ್ರತವೆಂದು ತಿನಬಂದ ಶುನಕನಲ್ಲ ನೋಡಾ ನಮ್ಮ ವೀರಮಾಹೇಶ್ವರನು. ಮುಟ್ಟುತಟ್ಟುಗಳಿಂದೆ ಕೆಟ್ಟೆನಲ್ಲಾಯೆಂದು ಕಟ್ಟುಕಾವಲಿಗೊಂಡು ಕೆಟ್ಟಸಿಟ್ಟುಗಳಿಂದೆ ಬಟ್ಟೆಯನು ಹಿಡಿವ ಪಟ್ಟುಗುಡುವನಂತಲ್ಲ ನೋಡಾ ನಮ್ಮ ವೀರಮಾಹೇಶ್ವರನು. ಮತ್ತೆಂತೆಂದೊಡೆ : ಪರಧನ ಪರಸತಿ ಪರಹಿಂಸೆ ಪರನಿಂದೆ ಪರದೈವ ಪರಸಮಯಾದಿ ದುರಾಸೆವಿಡಿದು ನಡೆಯದಿಹುದೇ ಶೀಲ ನೋಡಾ ನಮ್ಮ ವೀರಮಾಹೇಶ್ವರಂಗೆ. ತನು ಮನ ಪ್ರಾಣಾದಿ ಸಕಲ ಕರಣಾದಿ ಗುಣವಳಿದು ಗುರುನಿರಂಜನ ಚನ್ನಬಸವಲಿಂಗನ ನೆನಹು ಬಿಡದಿಹುದೇ ವ್ರತ ನೋಡಾ ನಮ್ಮ ವೀರಮಾಹೇಶ್ವರಂಗೆ.
--------------
ದೇಶಿಕೇಂದ್ರ ಸಂಗನಬಸವಯ್ಯ
ಜೀವಪರಮನೊಂದು ಮಾಡಬೇಕೆಂಬುದೊಂದು ಕುರುಹು. ಜ್ಞಾನ ಕ್ರಿಯೆಯಿಂದೆ ಕೂಡಬೇಕೆಂಬುದೊಂದು ಕುರುಹು ನಾನೇನಾಗಬೇಕೆಂಬುದೊಂದು ಕುರುಹು. ಇದು ಕಾರಣ ಕುರುಹಳಿದಲ್ಲದೆ ಇರವಾಗಬಾರದು. ಗುರುನಿರಂಜನ ಚನ್ನಬಸವಲಿಂಗಾ ನಿಮ್ಮೈಕ್ಯಂಗೆ ಜೀವನಿಲ್ಲ, ಪರಮನಿಲ್ಲ, ಜ್ಞಾನವಿಲ್ಲ, ಕ್ರಿಯೆಯಿಲ್ಲ, ನಾನು ಇಲ್ಲ ನೀನು ಇಲ್ಲ ತಾನು ತಾನಾಗಿರ್ಪನು ಕಾಣಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಜಲಧಿಯೊಳಗೆ ಬಿದ್ದ ಜಲಗಲ್ಲ ತೆಗೆದು ಕಾಣಬಾರದು. ಜ್ವಾಲಾದ್ರಿಗಿಟ್ಟ ಅರಗಿನಂಬ ತೆಗೆದು ಕಾಣಬಾರದು. ಫಲವಾದಾಗ ಪರಾಗವ ತರಿಸಿ ಕಾಣಲುಬಾರದು. ಗುರುನಿರಂಜನ ಚನ್ನಬಸವಲಿಂಗವೆರೆದ ಶರಣನ ತಂದು ಕಾಣಲುಬಾರದು.
--------------
ದೇಶಿಕೇಂದ್ರ ಸಂಗನಬಸವಯ್ಯ
ಜಾತಿ ಗೋತ್ರ ಕುಲ ಆಶ್ರಮ ವರ್ಣ ನಾಮ ನಿರಂಜನಲಿಂಗಸನ್ನಿಹಿತನಾದ ಶರಣನು ಪಂಚಸೂತಕವನರಿಯದೆ ಪಂಚಬ್ರಹ್ಮ ತಾನೆಯಾಗಿ ಪರಮಾನಂದಸುಖಮುಖಿಯಾಗಿರ್ದನಲ್ಲದೆ ಷಡ್ಭ್ರಮೆಯಲ್ಲಿ ನಿಂದು ಪಂಚಸೂತಕದ ವರ್ತನೆಯಲ್ಲಿ ಬೆಂದು ಒಡಲಗೊಂಡು ಹೋಗುವ ಜಡಪಾತಕನಂತಲ್ಲ ಕಾಣಾ ಗುರುನಿರಂಜನ ಚನ್ನಬಸವಲಿಂಗಾ ನಿಮ್ಮ ಶರಣ.
--------------
ದೇಶಿಕೇಂದ್ರ ಸಂಗನಬಸವಯ್ಯ
ಜಾಗ್ರಪತಿಯ ವ್ಯವಹಾರ ಕತ್ತಲ ಬೆಳಗಾಯಿತ್ತು. ಸ್ವಪ್ನಕರ್ತುವಿನ ಕಳವಳ ಸರಿದು ಸಮವೇದಿಸಿತ್ತು. ಸುಷುಪ್ತಾಳ್ದನ ಸೊಗಸುರಿದು ನಿಂದಿತ್ತು. ಮೂವರ ಹಿಂದೆ ಸಂದಲ್ಲಿ ಬಂದಿತ್ತು ಗುರುನಿರಂಜನ ಚನ್ನಬಸವಲಿಂಗದ ಬೆಳಗು.
--------------
ದೇಶಿಕೇಂದ್ರ ಸಂಗನಬಸವಯ್ಯ
ಜಾಗ್ರದಲ್ಲಿ ಉದರಾವಸರಕ್ಕೆ ಕುದಿಕುದಿದು ಕೆಡಹುತ್ತಿಹುದು. ಸ್ವಪ್ನದಲ್ಲಿ ಮಲತ್ರಯರತಿವೊಂದಿ ಭುಂಜಿಸಿ ಮುಳುಗಿಸುತ್ತಿಹುದು. ಸುಷುಪ್ತಿಯಲ್ಲಿ ದುರ್ಗಾಡಾಂಧಕಾರ ಕವಿದು ಪರವಶವನೆಯ್ದಿಸುತ್ತಿಹುದು. ಇಂತಿಹ ಅವಿದ್ಯಾಂಗನೆಯ ಕಳೆದುಳಿವ ಕಣ್ಣುಳ್ಳ ಹಿರಿಯರ ನಾನಾರನು ಕಾಣೆನಯ್ಯಾ, ನಿರಂಜನ ಚನ್ನಬಸವಲಿಂಗಾ ನಿಮ್ಮ ಶರಣನಲ್ಲದೆ.
--------------
ದೇಶಿಕೇಂದ್ರ ಸಂಗನಬಸವಯ್ಯ
ಜ್ಞಾನಿಗುರುವರನ ಕರಕಂಜೋದಯ ಶರಣ ತನ್ನ ಕರಕಂಜದೊಳಿಷ್ಟಗುರುವರನರಿದು, ಸುಜ್ಞಾನಪ್ರಭೆಯೊಳಗೆ ಸುಳಿದಾಡುವ ಪರಿಯ ನೋಡಾ. ಪೃಥ್ವಿಯಂಗವ ಧರಿಸಿ ಪಂಚಾಚಾರವಿಡಿದು ಸಂಚರಿಸುವ ಭಕ್ತನ ಸವಿಯ ನೋಡಾ. ಅಪ್ಪುವಿನಂಗವ ಧರಿಸಿ ನಿಷ್ಪತ್ತಿ ನಿಜವಿಡಿದು ನಿರ್ಮಲ ಗಮನದೊಳೊಪ್ಪುವ ನಿಲುವಿನ ನಿಃಕಳಂಕವ ನೋಡಾ. ತೇಜಾಂಗವ ಧರಿಸಿ ಮಾಜದರುವಿಡಿದು ಸೋಜಿಗಸುಖವಿತ್ತು ಕೊಂಬ ಸಾವಧಾನಿಯ ಸಮ್ಮಿಶ್ರವ ನೋಡಾ. ಅನಿಲಂಗವ ಧರಿಸಿ ಯಜನದನುವರಿವಿಡಿದು ಭಜನೆ ಭಾವವನಳಿದು ಮೂಜಗವರಿದು ಬೆಳಗುವ ಕಳೆವರನ ನೋಡಾ. ಅಂಬರಂಗವ ಧರಿಸಿ ಪರನಾದ ಪ್ರಭೆವಿಡಿದು ಚಿದ್ವೈತ ಗಮನಾದ್ವೈತ ಸುಖಸಂಬಂಧದ ಸುಳುಹ ನೋಡಾ. ಆತ್ಮಾಂಗವ ಧರಿಸಿ ಅನನ್ಯಕಳೆವಿಡಿದು ಸಮರಸದೊಳಿಪ್ಪ ಸದ್ಭಕ್ತನ ಚರಾಂಗದಲ್ಲಿ ಬೆಳಗುವ ಚನ್ನಬಸವಲಿಂಗದ ನಿಲುವ ನೋಡಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಜಂಗಮವಿರಹಿತ ಲಿಂಗಾರ್ಪಿತ ಸಂಗವಿಲ್ಲದ ಸತಿಪತಿಯಂತೆ ಸುಖವೆಲ್ಲಿಹದೊ! ಕಂಗಳರಿಯದ ನೋಟ ಕನಸಿನೊಳಗಿನ ಬೇಟ ನಿಜವೆಲ್ಲಿಹದೊ! ಇದು ನಿಜವಲ್ಲ, ಗುರುನಿರಂಜನ ಚನ್ನಬಸವಲಿಂಗಕ್ಕೆ ದೂರ.
--------------
ದೇಶಿಕೇಂದ್ರ ಸಂಗನಬಸವಯ್ಯ
ಜೀವಪರಮರನೊಂದುಮಾಡಿ ಕಾಣಬೇಕೆಂಬ ಸಂದೇಹಸೂತಕಭಾವಕ್ಕೆ ಅತೀತ ಕಾಣಾ. ಅಭಿನ್ನವಸ್ತುವ ಭಿನ್ನವಿಡುವ ಬಗೆಯೆಂತು? ಭಿನ್ನವಾಗಿರ್ದ ಜೀವ ಶಿವನಾಗುವ ಬಗೆಯೆಂತು? ಹಗಲಿರುಳುವೊಂದಾದರೆ ಕಾಣಬಹುದು ಗುರುನಿರಂಜನ ಚನ್ನಬಸವಲಿಂಗ ಸಾಕ್ಷಿಯಾಗಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ಜಾಗ್ರ ಸ್ವಪ್ನ ಸುಷುಪ್ತಿ ತೂರ್ಯ ತೂರ್ಯಾತೀತ ನಿರಂಜನಲಿಂಗವ ಪಡೆದ ಅಗಣಿತಪ್ರಸಾದಿಯು ತಾನು ತನ್ನಾನಂದಕ್ಕೆ ಅಡಿಯಿಟ್ಟು ನಡೆವಲ್ಲಿ, ತನ್ನ ಪದದನುವನರಿದು ಸಾಕಾರ, ನಿರಾಕಾರ, ನಿರ್ಮಾಯಕ್ಕಿತ್ತು, ಅರಿದರಿದುಕೊಂಡಾನಂದಿಸುವನಲ್ಲದೆ, ಅಘಭರಿತ ಜಗಭಂಡ ಜಂಗುಳಿಗಳಂತೆ, ಮಣ್ಣಿನ ಕರ್ಮದಲ್ಲಿ ನಿಂದು, ಹೆಣ್ಣಿನ ಮೋಹದಲ್ಲಿ ಸಿಲ್ಕಿ, ಹೊನ್ನಿನಾಸೆಯಲ್ಲಿ ಮುಳುಗಿ ಚನ್ನಗುರುಲಿಂಗ ಜಂಗಮಕ್ಕಿತ್ತು ಕೊಂಬ ಉನ್ನತಪ್ರಸಾದಿಗಳೆಂದು, ಕುನ್ನಿಗಳ ಧ್ವನಿ ಸಹಜದಂತಿರುವರಲ್ಲಾ, ಗುರುನಿರಂಜನ ಚನ್ನಬಸವಲಿಂಗಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಜನನ ಸ್ಥಿತಿ ಮರಣವಿರಹಿತನಾಗಿರ್ದುದೇ ಪ್ರಸಾದಕಾಯವಯ್ಯಾ. ಅದೆಂತೆಂದೊಡೆ, ಜನನಭಾವವಳಿದು ಪುನರ್ಜನನಭಾವ ನಿಂದುದೇ ಶುದ್ಧಶೇಷಾಂಗವು. ಮಾಯಾಸಂಸಾರ ಸ್ಥಿತಿಭಾವವಳಿದು ಲಿಂಗಭೋಗೋಪಭೋಗಿಯಾಗಿಹುದೇ ಸಿದ್ಧಶೇಷಾಂಗವು. ಮಾಯಾಸಂಸಾರ ಸ್ಥಿತಿಭಾವವಳಿದು ಲಿಂಗಭೋಗೋಪಭೋಗಿಯಾಗಿಹುದೇ ಸಿದ್ಧಶೇಷಾಂಗವು. ಕಾಲ ಮರಣ ಭಾವವಳಿದು ಮನ ನಿರಂಜನ ಮಹಾಜ್ಞಾನೈಕ್ಯವಾದುದೇ ಪ್ರಸಿದ್ಧಶೇಷಾಂಗವು. ಈ ತ್ರಿವಿಧಾಂಗ ಸಂಗಸದ್ಭಕ್ತಿಪ್ರಿಯ ಪಂಚಾಕ್ಷರಮೂರ್ತಿಲಿಂಗವು.
--------------
ದೇಶಿಕೇಂದ್ರ ಸಂಗನಬಸವಯ್ಯ
ಜಾಗ್ರಾವಲಂಬನವನು ಸ್ವಪ್ನ ತಾನೊಳಕೊಂಡು, ಸ್ವಪ್ನಾವಲಂಬನವನು ಸುಷುಪ್ತಿ ತಾನೊಳಕೊಂಡು, ತೂರ್ಯ ತೂರ್ಯಾತೀತ ಸಹಜಾನಂದಮಯವಾದಂತೆ, ಆಚಾರಲಿಂಗಾವಲಂಬನವನು ಸುಜ್ಞಾನಲಿಂಗ ತಾನೊಳಕೊಂಡು, ಸುಜ್ಞಾನಲಿಂಗಾವಲಂಬನವನು ಆತ್ಮಲಿಂಗವೊಳಗೊಂಡು ಪರಿಪೂರ್ಣ ಪರಮಾನಂದ ಪರವಶದೊಳೋಲಾಡುತಿರ್ದನು ಗುರುನಿರಂಜನ ಚನ್ನಬಸವಲಿಂಗದೊಳಗೆ.
--------------
ದೇಶಿಕೇಂದ್ರ ಸಂಗನಬಸವಯ್ಯ
ಜ್ಞಾನವನಂತರಂಗಕಿತ್ತು, ಕ್ರೀಯವ ಬಹಿರಂಗಕಿತ್ತು, ಸರ್ವಾಚಾರಸಂಪತ್ತಿನೊಳಗಿರಿಸಿದ ಕ್ರಿಯಾಘನಗುರುವಿನ ತೆಗೆದುಹಾಕಿ ನಾವು ಲಿಂಗಜಂಗಮಸನ್ನಿಹಿತರೆಂದಡೆ ಆ ನಾಲಿಗೆ ಕೀಳದಿಹರೆ ಕಾಲನವರು ? ಆ ಮಹಾಗುರುವಿನ ಸದ್ಭಾವಲಿಂಗವನರ್ಚಿಸುವಲ್ಲಿ ಖಂಡಿಸದಿಹರೆಯಮನವರು? ಆ ಗುರುಜ್ಞಾನ ಭಸಿತವನು ಧರಿಸಿದಲ್ಲಿ ಚರ್ಮವ ಹೆರಜಿ ಬಿಸಾಟರೆ ಅಂತಕನವರು? ಆ ಗುರುಕಟಾಕ್ಷಮಣಿಯ ಧರಿಸಿದಲ್ಲಿ ಕಡಿಕಡಿದು ಕಡೆಗಿಡರೆ ಯಮನವರು ? ಆ ಆದಿಯ ಗುರುನಾಮಾಮೃತವ ಸೇವಿಸುವರ ಹೃದಯವನಿರಿದು ಕೆಡಹದಿಹರೆ ದಂಡಧರನವರು ? ಆ ಅವಿರಳ ಗುರುವಿನ ಪರಮಾನಂದ ಪಾದೋದಕವ ಕೊಂಬ ಮಾನವರ ಬಾಧಿಸರೆ ಕೀನಾಶನವರು ? ಆ ಮಹಾಜ್ಞಾನಿ ಗುರುವಿನ ಮಹದಾನಂದಪ್ರಸಾದವ ಸೇವಿಸುವ ಭಾವವನು ಶೋಕಾಗ್ನಿಯಿಂದೆ ನೋಯಿಸದಿಹರೆ ನಿರಯಪತಿಯವರು ? ಇದು ಕಾರಣ ಗುರುವ ಜರಿದು ನೆರೆದು ಮಾಡುವ ಮಾಟವೆಲ್ಲ ವೈತರಣಿಯಕೂಟ ಇದಕ್ಕೆ ನೀವೇ ಸಾಕ್ಷಿ ಗುರುನಿರಂಜನ ಚನ್ನಬಸವಲಿಂಗಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಜ್ಞಾನವಿಕೃತಭಾವವುಳ್ಳರೆ ಪ್ರಕಾಶತ್ವ ಶೂನ್ಯವಾಗಿಹುದು; ಅಲ್ಲಿ ಸ್ವಯಜಂಗಮವೆನಲಿಲ್ಲ. ವರ್ತನವಿಕೃತಭಾವವುಳ್ಳರೆ ಪ್ರಮೋದತ್ವ ಪ್ರವರ್ತನತ್ವ ನಾಸ್ತಿಯಾಗಿಹುದು; ಅಲ್ಲಿ ಚರಜಂಗಮವೆನಲಿಲ್ಲ. ಮೋಹನವಿಕೃತಭಾವವುಳ್ಳರೆ ಪ್ರಮೋದತ್ವ ವಿರಹಿತವಾಗಿಹುದು; ಅಲ್ಲಿ ಪರಜಂಗಮವೆನಲಿಲ್ಲ. ಇದು ಕಾರಣ ತ್ರಿವಿಧವಿರ್ದು ತ್ರಿವಿಧನಾಸ್ತಿಯಾದಲ್ಲಿ ತ್ರಿವಿಧನುಗ್ರಹ ಮಾಡಿದರೆ ತ್ರಿವಿಧ ದ್ರೋಹತಪ್ಪದು, ಗುರುನಿರಂಜನ ಚನ್ನಬಸವಲಿಂಗಕ್ಕೆ ನೀಡಬೇಕಾದರೆ ಅರಸಿ ಕಂಡು ಮಾಡಬೇಕು, ಸ್ಥಲಕ್ಕೆ ಸನುಮತ.
--------------
ದೇಶಿಕೇಂದ್ರ ಸಂಗನಬಸವಯ್ಯ