ಅಥವಾ
(220) (73) (20) (3) (8) (5) (0) (0) (17) (4) (3) (15) (0) (0) ಅಂ (31) ಅಃ (31) (141) (1) (59) (8) (0) (12) (0) (14) (0) (0) (0) (0) (1) (0) (0) (66) (0) (14) (5) (89) (68) (1) (50) (40) (85) (1) (5) (0) (34) (11) (24) (1) (81) (57) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಪ್ರಾಣಲಿಂಗಸಂಬಂದ್ಥಿಯಾದ ಮಹಾತ್ಮನು ಅರಿಷಡ್ವರ್ಗಂಗಳರಿಯ, ಕ್ಷುತ್ತು ಪಿಪಾಸು ಶೋಕ ಮೋಹ ಜರೆ ಮರಣ ಗುಣತ್ರಯದೊಳೊಂದಿ ನಿಲ್ಲ. ತನುತ್ರಯ ಮಲತ್ರಯ ಈಷಣತ್ರಯ ಜೀವತ್ರಯ ಅವಸ್ಥಾತ್ರಯವೆಂಬ ಪಂಚದಶ ಮಾಯಾಪಟಲ ಹರಿದು ಮರೆದು ಮಹಾಘನ ಬೆಳಗಿನ ಸುಖವ ಸುಗ್ಗಿಯೊಳಿರ್ದು ಪ್ರಾಣಲಿಂಗವನರ್ಚಿಸುತ್ತಿಹನು ಭಕ್ತಿತ್ರಯಗೂಡಿ ಗುರುನಿರಂಜನ ಚನ್ನಬಸವಲಿಂಗದಲ್ಲಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ಪಂಚಗೋಮಯವ ತಂದು ಪಂಚಪ್ರಣವ ಶಿಖಾಗ್ನಿಯಿಂದೆ ದಹಿಸಿ, ವಂಚನೆಯಳಿದುಳಿದು ವರ್ಮವರಿದು ಸ್ಥಾನವು ಧೂಳನ ಧಾರಣವಾದ ಮಹಾಘನಮಹಿಮ ಶಿವಶರಣಂಗೆ ನಮೋ ನಮೋ ಎಂಬೆನಯ್ಯಾ ನಿರಂಜನ ಚನ್ನಬಸವಲಿಂಗಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಪೃಥ್ವಿಯನರಿಯಲುಬಾರದು ನಕಾರ, ಅಪ್ಪುವನರಿಯಲುಬಾರದು ಮಕಾರ, ಅಗ್ನಿಯನರಿಯಲುಬಾರದು ಶಿಕಾರ, ವಾತವನರಿಯಲುಬಾರದು ವಕಾರ, ಅಂಬರವನರಿಯಲುಬಾರದು ಯಕಾರ, ಭಾವವನರಿಯಲುಬಾರದು ಓಂಕಾರ. ಇದು ಕಾರಣ ಷಡ್ಬ್ರಹ್ಮರೂಪ ಚನ್ನಬಸವಲಿಂಗ ಅರಿದು ಅರಿಯದಿರಲುಬೇಕು ಭಕ್ತ.
--------------
ದೇಶಿಕೇಂದ್ರ ಸಂಗನಬಸವಯ್ಯ
ಪೂರ್ವದಂದುಗವನಳಿದು ಪುನರ್ಜಾತನಾದ ಶರಣನು ತನ್ನ ತ್ರಿವಿಧಮುಖಭಕ್ತಿಯ ಮಾಡುವಲ್ಲಿ ಪೂರ್ವದಂದುಗ ಬೆರಸಿದರೆ ತಿರುಗ ಬಟ್ಟೆ ಸವೆಯದು. ಮೇಲುಗತಿಮತಿಗಳಸುಖ ದೊರೆಯದು. ಬಿಟ್ಟುದ ಬೆರೆಸಿದರೆ, ಹಿಡಿದು ಹರಿಸದೆ ದಾರಿಕಾರರ ಹೆಜ್ಜೆಗೆ ಶಿರಬಾಗದೆ ತಾನಿಲ್ಲದೆ ಮಾಡುವ ಮಾಟ ಸಕಲರ ಸಂಬೇಟ ನಿಜತತ್ವದ ಕೂಟ ಗುರುನಿರಂಜನ ಚನ್ನಬಸವಲಿಂಗ ನಿಮ್ಮಲ್ಲಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ಪರಮಚೈತನ್ಯ ಜಂಗಮವ ನೆರೆಯರಿದು ಇರವಿನೊಳು ಹಿರಿದು ಹೆಚ್ಚಿ ನಿತ್ಯಕಾಲದಿಂದಿತ್ತು ಕೊಂಬ ಪರಿಣಾಮಿಯ ಪಾದಕ್ಕೆ ನಮೋ ನಮೋ ಎಂಬೆನಯ್ಯಾ ಗುರುನಿರಂಜನ ಚನ್ನಬಸವಲಿಂಗಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಪರಧನಕ್ಕೆ ಇಚ್ಫೈಸುವನ್ನಕ್ಕರ, ಪರಸ್ತ್ರೀಗೆ ಮೋಹಿಸುವನ್ನಕ್ಕರ, ಪರದೈವವ ಭಜಿಸುವನ್ನಕ್ಕರ, ಪರಪಾಕವ ಕೊಂಬನ್ನಕ್ಕರ, ಪರಹಿಂಸೆಗೆಡದನ್ನಕ್ಕರ ಮಹೇಶ್ವರನೆನಲಾಗದು. ಹುಸಿ ನಾಶವಾಗದನ್ನಕ್ಕರ, ಕಳವು ಕುಚೇಷ್ಟೆಯ ನೀಗದನ್ನಕ್ಕರ, ಉಪಾಧಿಯನುಸರಣೆಯ ದಾಟದನ್ನಕ್ಕರ ಮಹೇಶ್ವರನೆನಲಾಗದು. ಭವಿಯಸಂಪರ್ಕ ಬಿಚ್ಚದನ್ನಕ್ಕರ, ವೇಷಗಳ್ಳರ ಜರಿದು ನೂಕದನ್ನಕ್ಕರ, ಲೋಕಲೌಕಿಕಚರಿಯ ಹರಿಯದನ್ನಕ್ಕರ, ಸ್ವತಂತ್ರತ್ವಾನುಭಾವಿಯಾಗದನ್ನಕ್ಕರ ಮಹೇಶ್ವರನೆನಲಾಗದು. ಗುರುನಿರಂಜನ ಚನ್ನಬಸವಲಿಂಗಕ್ಕೆ ಅಂಗವೆಂದು ನಷ್ಟಬದ್ಧರಿಗೆರಗುವ ಭ್ರಷ್ಟಭವಿಗಳಿಗೊಮ್ಮೆ ಮಹೇಶ್ವರನೆಂದರೆ ಅಘೋರನರಕ ತಪ್ಪದು.
--------------
ದೇಶಿಕೇಂದ್ರ ಸಂಗನಬಸವಯ್ಯ
ಪ್ರಸಾದವ ಪಡೆದವರೆಂದು ಅಗಲತುಂಬ ಒಟ್ಟಿಸಿಕೊಂಡು ಮಿಗೆ ಸೂಸಿ ಜಿಹ್ವೆಲಂಪಟವಿಷಯದೊಳ್ಮುಳುಗಿ, ನೆಗೆನೆಗೆದು ಕೊಂಬ ಭಗಜನಿತ ಬಟ್ಟೆಹರಕರಿಗೆ ಅಪ್ರತಿಮಪ್ರಸಾದ ಸಾಧ್ಯವಹುದೆ ಅನಿಮಿಷಪ್ರಕಾಶ ಆನಂದಮಯಪ್ರಸಾದಿಗಲ್ಲದೆ? ಅನಿಷ್ಟಬದ್ಧರಂತಿರಲಿ; ಗುರುನಿರಂಜನ ಚನ್ನಬಸವಲಿಂಗಕ್ಕೆ ಸಾವಧಾನಭಾವಿಯೇ ಪ್ರಸಾದಿ ಕಾಣಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಪ್ರಸಾದವ ಪಡೆದವರೆಂದು ಬದ್ಧಸಂಕಲ್ಪ ದುರ್ವರ್ತನೆಗಳನೇನೆಂಬೆನಯ್ಯಾ! ಗಣಸಮೂಹದಲ್ಲಿ ಸೌಖ್ಯವಿಲ್ಲೆಂದು ಚಿಕ್ಕ ಬಟ್ಟಲಲ್ಲರ್ಪಿಸಿಕೊಂಡು, ಪೂರ್ವ ಬಳಗಗೂಡಿ ಹಂದಿ ನಾಯಿಯಂತೆ ಒಗೆದಾಡಿ ತಿಂಬುವ ಬೆಂದ ನರಕಿಗಳಿಗೆ ಪ್ರಸಾದವೆಲ್ಲಿ ಹುದಯ್ಯಾ? ಪ್ರಸಾದಿ ಒಮ್ಮೆ ಪ್ರಸಾದವ ಸೇವಿಸಿ, ಒಮ್ಮೆ ಉಚ್ಛಿಷ್ಟಕೂಳ ಸೇವಿಸುವನೆ? ಛೀ ಅದೇತರ ನಡೆನುಡಿ ಅತ್ತ ಹೋಗಿ, ನಮ್ಮ ಗುರುನಿರಂಜನ ಚನ್ನಬಸವಲಿಂಗಶರಣರ ತಿಂಥಿಣಿಯ ಸೋಂಕದೆ.
--------------
ದೇಶಿಕೇಂದ್ರ ಸಂಗನಬಸವಯ್ಯ
ಪ್ರಾಣಲಿಂಗವನು ಮಾಣದೆ ನೋಡಿ, ಹೂಣಿಹೋದ ಜಾಣರ ಕಾಣೆನಯ್ಯಾ ಮೂರುಲೋಕದೊಳಗೆ. ಇರ್ದು ಇಲ್ಲದ, ಬಂದು ಬಾರದ, ನಿಂದು ನಿಲ್ಲದ ಚಂದ ಚಂದದ ನಡೆಯೊಳೆಸೆಯುತ, ನುಡಿಯೊಳೊಂದಿದ ಬಿಂದು ಅಲಸದೆ ಹಿಂದು ಹಿಂದನು ಮುಂದು ಮುಂದನು ತಂದು ಆರಾದ್ಥಿಸಿ ಸುಖಿಸುವ ಗುರುನಿರಂಜನ ಚನ್ನಬಸವಲಿಂಗದಲ್ಲಿ ಅನುಭಾವಿಭಕ್ತನಲ್ಲದೆ ಮತ್ತಾರನು ಕಾಣೆನಯ್ಯಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಪೃಥ್ವಿ ಅಂಶವನಳಿದು ಚಿತ್ತ್ಪøಥ್ವಿಯಂಗವಾಗಿ ಭೃತ್ಯಾಚಾರ ನೆಲೆಸಿದುದೇ ಆಚಾರಲಿಂಗಸಂಬಂಧ. ಅಪ್ಪುವಿನಂಶವನಳಿದು ಚಿದಪ್ಪುವೇ ಅಂಗವಾಗಿ ಗಣಾಚಾರ ನೆಲೆಸಿದುದೇ ಗುರುಲಿಂಗಸಂಬಂಧ. ಅಗ್ನಿಯಂಶವನಳಿದು ಚಿದಗ್ನಿಯೇ ಅಂಗವಾಗಿ ಶಿವಾಚಾರ ನೆಲೆಸಿದುದೇ ಶಿವಲಿಂಗಸಂಬಂಧ. ವಾಯುವಿನಂಶವನಳಿದು ಚಿದ್ವಾಯುವೇ ಅಂಗವಾಗಿ ಸದಾಚಾರ ನೆಲೆಸಿದುದೇ ಜಂಗಮಲಿಂಗಸಂಬಂಧ. ಆಕಾಶದಂಶವನಳಿದು ಚಿದಾಕಾಶವೇ ಅಂಗವಾಗಿ ಲಿಂಗಾಚಾರ ನೆಲೆಸಿದುದೇ ಪ್ರಸಾದಲಿಂಗಸಂಬಂಧ. ಇಂತು ಪಂಚಾಚಾರ ಪಂಚತತ್ವವಳಿದುಳಿದು ನೆಲೆಸಿ ಪಂಚಲಿಂಗಸಂಬಂಧವಾದಲ್ಲಿ ಆತ್ಮನಂಶವನಳಿದುಳಿದು ಸರ್ವಾಚಾರಸಂಪತ್ತು ನೆಲೆಸಿ ಮಹಾಲಿಂಗಗುರುನಿರಂಜನ ಚನ್ನಬಸವಲಿಂಗ ಸಂಬಂಧವಾಯಿತ್ತು ಮಾಹೇಶ್ವರಂಗೆ.
--------------
ದೇಶಿಕೇಂದ್ರ ಸಂಗನಬಸವಯ್ಯ
ಪ್ರಾಣವೇ ಲಿಂಗವಾದ ಶರಣಂಗೆ ಕಂಡರು ಕಾಣಬಾರದು, ಕೇಳಿದರು ಕೇಳಬಾರದು, ಹಿಡಿದರು ಹಿಡಿಯಬಾರದು, ಬಂದರು ಬರಬಾರದು, ನಿಂತರು ನಿಲ್ಲಬಾರದು. ಅಂದಂದಿಂಗತ್ತತ್ತ ಇಂದಿಂದಿಂಗಿತ್ತತ್ತ ಸತ್ಯ ಸದಾನಂದ ಗುರುನಿರಂಜನ ಚನ್ನಬಸವಲಿಂಗಾ ನಿಮ್ಮ ಶರಣನಪರಿ ಆಶ್ಚರ್ಯವು.
--------------
ದೇಶಿಕೇಂದ್ರ ಸಂಗನಬಸವಯ್ಯ
ಪಂಚಮೂರ್ತಿಯನೊಳಕೊಂಡಿರ್ದ ಪ್ರಸಾದಮೂರ್ತಿಯ ಪಂಚವಿಧವ ಗರ್ಭೀಕರಿಸಿಕೊಂಡಿರ್ಪ ಬಯಲಾಂಗನು ತನ್ನಂತರಂಗದ ಅವಿರಳಬೆಳಗೆಂದರಿದು ಮನ ಭಾವ ಕರಣದೊಳಾವರಿಸಿ ನೆರೆದು ನಿತ್ಯ ಪರಮಪರಿಣಾಮಿಯಾಗಿರ್ದ ಗುರುನಿರಂಜನ ಚನ್ನಬಸವಲಿಂಗ ತಾನಾಗಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ಪತಿಯ ಮೋಹದ ಮತಿವಂತೆ ಬಾಲೆಯರು ನೀವು ತಲೆಯಲ್ಲಿ ಕೊಡನೀರ ಹೊರಬೇಡಿ. ಮುಂದೆ ಅಹಿತ ಕಾಣಿರೆ, ಕೊಡ ನೀರದೆಡೆಯಾಟದಲ್ಲಿ ಕಾಲ ಸರ್ಪಳಿಗೆ ಕಡುನಾಚಿಕೆ, ಕೈಬಳೆ ಕಾಂತಿಯಡಗುವುದು. ಕಟ್ಟಾಣಿಯೆಳೆಗಳೊಪ್ಪುಗೆಡುವುವು ಕಾಣಿರೆ, ಮೂಗುತಿ ತಾಳಿಗೆ ಮೋಸ ಕಾಣಿರೆ. ಮತ್ತೆಂತೆಂದೊಡೆ, ಆ ಕೊಡನೊಡದು ನೀರ ಹೊರಿಸಿ ತಲೆಯಲ್ಲಿ ತಂದು ಗುರುನಿರಂಜನ ಚನ್ನಬಸವಲಿಂಗಕ್ಕೆ ಅಭಿಷೇಕವದರೊಳು ಮಿಂದರೆ ಸಕಲಾಭರಣ ಸ್ವಯವಾದವು ಮೂಗುತಿ ತಾಳಿಯೊಳು ನೋಡಿರೆ.
--------------
ದೇಶಿಕೇಂದ್ರ ಸಂಗನಬಸವಯ್ಯ
ಪರುಷ-ಕಬ್ಬಿಣ ಸಂಗದಂತಿರ್ಪುದೊಂದಂಗ. ಭ್ರಮರ-ಕಾಪುಳ ಸಂಬಂಧದಂತಿರ್ಪುದೊಂದಂಗ. ಉರಿ-ಕರ್ಪುರ ಯೋಗದಂತಿರ್ಪುದೊಂದಂಗ. ಈ ಬಗೆಯೊಳಿರ್ದು ಇಂತು ಮಾಡಿದ ಮಾಟ ಮಾಡಿತೋರುವುದು ಮಹದಂಗವದು ಸತ್ಯ ಶಾಂತ ವೃಷಭೇಂದ್ರಲಿಂಗದಲ್ಲಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ಪುರುಷನ ಸೋಂಕದೆ ಸಂಗಸಂಯೋಗಸುಖವನರಿದ ಸತಿಯಳ ಕಂಡವರುಂಟೆ ಮಂಡಲದೊಳಗೆ? ಲಿಂಗವನರಿಯದೆ ಚರಗುರುಭಕ್ತಿಯ ಸಾರಾಯಸುಖ ಬೆಳಗಬಲ್ಲೆನೆಂದು ಅಲ್ಲಿಯೇ ಸಂದಿ ಹೋಗುವ ಬಂಧನಬದ್ಧ ಮೂಢ ಪ್ರಾಣಿಯ ಉರದೊಳು ಒಲ್ಲದಿರ್ದನು ಚೆಲುವಾಂಗ ಪ್ರಾಣಾತ್ಮಪ್ರಿಯ ಸಿದ್ಧಲಿಂಗನು ಸನುಮತರ ಸಂಗಸಮತೆಯೊಳಗೆ.
--------------
ದೇಶಿಕೇಂದ್ರ ಸಂಗನಬಸವಯ್ಯ
ಪರಶಿವನಾಮಾಮೃತವೆಂಬ ಪಂಚಾಕ್ಷರವನು ಅವ್ಯಕ್ತಮುಖದಿಂದೆ ಸ್ವೀಕರಿಸಿದೆನಾಗಿ, ಎನ್ನ ಘ್ರಾಣದಲ್ಲಿ ಆಚಾರಲಿಂಗವಾಗಿ ತೋರುತಿರ್ಪುದು. ಎನ್ನ ಜಿಹ್ವೆಯಲ್ಲಿ ಗುರುಲಿಂಗವಾಗಿ ತೋರುತಿರ್ಪುದು. ಎನ್ನ ನೇತ್ರದಲ್ಲಿ ಶಿವಲಿಂಗವಾಗಿ ತೋರುತಿರ್ಪುದು. ಎನ್ನ ತ್ವಕ್ಕಿನಲ್ಲಿ ಜಂಗಮಲಿಂಗವಾಗಿ ತೋರುತಿರ್ಪುದು. ಎನ್ನ ಶ್ರೋತ್ರದಲ್ಲಿ ಪ್ರಸಾದಲಿಂಗವಾಗಿ ತೋರುತಿರ್ಪುದು. ಎನ್ನ ಹೃದಯದಲ್ಲಿ ಮಹಾಲಿಂಗವಾಗಿ ತೋರುತಿರ್ಪುದು. ಎನ್ನ ಬ್ರಹ್ಮಸ್ಥಾನದಲ್ಲಿ ನಿಷ್ಕಲಲಿಂಗವಾಗಿ ತೋರುತಿರ್ಪುದು. ಎನ್ನ ಶಿಖಾಗ್ರದಲ್ಲಿ ನಿಶ್ಶೂನ್ಯಲಿಂಗವಾಗಿ ತೋರುತಿರ್ಪುದು. ಎನ್ನ ಪಶ್ಚಿಮದಲ್ಲಿ ನಿರಂಜನಲಿಂಗವಾಗಿ ತೋರುತಿರ್ಪುದು. ಎನ್ನ ಸರ್ವಾಂಗದಲ್ಲಿ ತೋರಿ ತನ್ನಂತೆ ಮಾಡಿಕೊಂಡಿರ್ಪುದು ಗುರುನಿರಂಜನ ಚನ್ನಬಸವಲಿಂಗದಲ್ಲಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ಪುರುಷನ ಪುಣ್ಯದಿಂದ ಉಟ್ಟಸೀರೆ, ಪುರುಷನ ಪುಣ್ಯದಿಂದಿಟ್ಟಾಭರಣ, ಪುರುಷನ ಪುಣ್ಯದಿಂದಾಯಿತ್ತು ಮುತ್ತೈದೆತನ. ಜವ್ವನದ ಸೊಬಗಿನ ಬೆಳಗ ಪುರುಷನನೊಂಚಿಸಿ ಪರಪುರುಷರ ನೆರೆದರೆ ಪತಿವ್ರತಕ್ಕೆ ಭಂಗ. ಲೋಕದವರಿಗೆ ಹೇಸಿಕ, ಕಡೆಗೆ ನರಕ. ಶಿವನಿಂದಾದ ಸುಜ್ಞಾನತನು, ಶಿವನಿಂದಾದ ಗುರುಕರುಣ, ಶಿವನಿಂದಾದ ಶರಣತ್ವ, ತನ್ನ ತನು ಮನ ಪ್ರಾಣದ ಕಳೆಯ ಬೆಳಗ ವಂಚಿಸಿ ಅನ್ಯದೈವ, ಪರಸಮಯ, ಮಲತ್ರಯಕ್ಕಿಚ್ಛೈಸಿತ್ತದೆ ಸತ್ಪಾತ್ರಕ್ಕೆ ಭಂಗ, ಸಮಯಾಚಾರಕ್ಕೆ ಹೇಸಿಕೆ, ಕಡೆಗೆ ದುರ್ಗತಿ ಕಾಣಾ ಗುರುನಿರಂಜನ ಚನ್ನಬಸವಲಿಂಗಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಪಾವಕವು ಅಪ್ಪುವಿನ ಸಂಗದಲ್ಲಿ ಜ್ಯೋತಿಯನರಿಯಲಿಲ್ಲ. ಜ್ಞಾನಾಜ್ಞಾನಸಂಪರ್ಕದಲ್ಲಿ ನಿಜಜ್ಞಾನದ ನಿಲವನರಿಯಲಿಲ್ಲ. ಭಕ್ತಿಭವಿಸಂಯೋಗದಲ್ಲಿ ಸದಾಚಾರಸೌಖ್ಯವನರಿಯಲಿಲ್ಲ. ಇದು ಕಾರಣ ಭಕ್ತಕಾಯದಲ್ಲಿ ಮನ ಪ್ರಾಣ ಭಾವ ಜಡವಿರಹಿತನಾದನಲ್ಲದೆ, ಗುರುನಿರಂಜನ ಚನ್ನಬಸವಲಿಂಗಾಚಾರವನರಿವ ಪರಿಯೆಂತು ಹೇಳಾ!
--------------
ದೇಶಿಕೇಂದ್ರ ಸಂಗನಬಸವಯ್ಯ
ಪರಮಶಾಂತ ಪರಿಪೂರ್ಣ ಪ್ರಾಣಲಿಂಗಿಯು ಮಹಾನುಭಾವ ಜಂಗಮಲಿಂಗ ಸುಖಮಯವಾದ ಬಳಿಕ ಹುಸಿಯೆಂಬ ಮಸಿಯ ಪೂಸದ, ಆಸೆಯೆಂಬ ಮದ್ದು ತಿನ್ನದೆ, ಭಾಷೆ ಬಣ್ಣಿಗನಾಗದೆ, ಕಣ್ಣುಗೆಟ್ಟು ಮಲತ್ರಯ ಮೋಹಿಯಾಗದೆ, ಸಂದುಸಂಶಯ ಮಂದಮರುಳನಾಗದೆ, ಬೆಂದ ಒಡಲಿಗೆ ಸಂದು ಯಂತ್ರ ಮಂತ್ರ ವೈದ್ಯ ವಶ್ಯಾದಿ ಉಪಾಧಿ ಉಲುಹಿನ ಭ್ರಾಂತನಾಗದೆ, ಸದ್ಭಕ್ತಿ ಸುಜ್ಞಾನ ಪರಮವಿರಾಗತೆಯೆಂಬ ರತ್ನವ ಕಳೆಯದೆ ಡಂಭಕ ಜಡಕರ್ಮವ ಸೋಂಕದೆ ಕರಣಾದಿ ಗುಣಗಳ ಜರಿದು ಏಕಾಂತವಾಸನಾಗಿ ಚರಿಸುತಿರ್ದ ಗುರುನಿರಂಜನ ಚನ್ನಬಸವಲಿಂಗದ ಲೀಲೆಯುಳ್ಳನ್ನಕ್ಕರ.
--------------
ದೇಶಿಕೇಂದ್ರ ಸಂಗನಬಸವಯ್ಯ
ಪ್ರಸಾದಿಯಂಗದಲ್ಲಿ ಮೃದುಕಠಿಣ ಸೀತೋಷ್ಣ ಸುಖಕ್ಕೆಳಸುವ ರತಿಮೋಹವುಂಟೆ? ಇಲ್ಲ. ಅದೇನು ಕಾರಣ, ಜಂಗಮಲಿಂಗಕ್ಕಂಗವಾದಕಾರಣ. ಪ್ರಸಾದಿಯ ಮನದಲ್ಲಿ ಷಡುರಸರುಚಿ ಸೌಖ್ಯಕ್ಕೆ ಇಚ್ಛೈಸುವ ವಿಷಯ ಮೋಹವುಂಟೆ? ಇಲ್ಲ. ಅದೇನು ಕಾರಣ, ಗುರುಲಿಂಗಕ್ಕಂಗವಾದಕಾರಣ. ಪ್ರಸಾದಿಯ ಭಾವದಲ್ಲಿ ಷಡುತೃಪ್ತಿಯ ಸೌಖ್ಯದ ಗ್ರಾಹಕತ್ವವುಂಟೆ? ಇಲ್ಲ. ಅದೇನು ಕಾರಣ, ಮಹಾಲಿಂಕ್ಕಂಗವಾದಕಾರಣ. ಇಂತು ಅಂಗ ಮನ ಭಾವದಿಚ್ಛೆಯನಳಿದುಳಿದ ನಿರ್ಮಲಪ್ರಸಾದಿಯಲ್ಲದೆ ಗುರುನಿರಂಜನ ಚನ್ನಬಸವಲಿಂಗಕ್ಕೆ ಭಕ್ತನಾಗಬಾರದು.
--------------
ದೇಶಿಕೇಂದ್ರ ಸಂಗನಬಸವಯ್ಯ
ಪಂಕ, ಶಿಲೆ, ಸ್ಪಟಿಕ, ತಾಂಬ್ರ, ಲೋಹ, ತಾರೆ, ಹೇಮಾದಿಗಳಿಂದೆ ಮಾಡಿ ಮಾಡುವ ತೋರಿಕೆಯೆಲ್ಲ ಲಿಂಗವೇ ಅಲ್ಲ. ಅವೇ ಲಿಂಗವೆಂದು ನಿಯಮವಿಡಿದು ಇದೇ ಪತ್ರಿ ಇದೇ ಪುಷ್ಪ ಇದೇ ನೀರು ಆಗಬೇಕೆಂದು ಸಾಧಿಸುದ ಭೇದಜೀವಜಂತುಗಳಿಗೆ ಅದೇ ಫಲದಿಂದತ್ತ ಭವ ತಪ್ಪದು ಕಾಣಾ, ಸಾಧ್ಯಸಾಧ್ಯ ಅನುಪಮಲಿಂಗವ ಸಾಧಿಸಿ ಅಂಗ ಮನ ಭಾವ ಸಂಗಸಂಯೋಗಿ ತಾನೆ ಗುರುನಿರಂಜನ ಚನ್ನಬಸವಲಿಂಗವಲ್ಲದೆ ಬೇರಿಲ್ಲ ಕಾಣಾ ಶರಣಂಗೆ.
--------------
ದೇಶಿಕೇಂದ್ರ ಸಂಗನಬಸವಯ್ಯ
ಪೃಥ್ವಿಯೇ ಅಂಗವಾದ ಭಕ್ತನು ಎಲ್ಲಕ್ಕೂ ತಾನೇ ಆಶ್ರಯವಾಗಿಹನು. ತನ್ನಂಗ ಪ್ರಾಣ ಜ್ಞಾನ ಕಳೆವರರಾದ ಗುರುಲಿಂಗಜಂಗಮಕ್ಕೆ ತಾನಲ್ಲದೆ, ಇತರೇತರವಾದ ಬಹುಜನಾದಿಗಳಿಗೆ ನಡೆ ನುಡಿ ನೋಟಕ್ಕಗಣಿತ ಅಗಮ್ಯವಾಗಿರಿಸಿಹನು. ಗುರುನಿರಂಜನ ಚನ್ನಬಸವಲಿಂಗವನರಿವುದಕ್ಕೆ ಆದಿ ತಾನೆ.
--------------
ದೇಶಿಕೇಂದ್ರ ಸಂಗನಬಸವಯ್ಯ
ಪಂಚಾಕ್ಷರವೆ ಪ್ರಾಣವಾಗಿರ್ದ ಪರಮ ಶಿವಭಕ್ತಲಿಂಗಮಹೇಶ್ವರರುಗಳಿಗೆ ಬೆರಸವಿರಹಿತನಡೆ, ಬೆರಸವಿರಹಿತನುಡಿ, ಬೆರಸವಿರಹಿತ ನೋಡಾ. ಬೆರಸವಿರಹಿತನಾಗಿ ಗುರುನಿರಂಜನ ಚನ್ನಬಸವನಲ್ಲಿ ಸದಾಸನ್ನಿಹಿತ.
--------------
ದೇಶಿಕೇಂದ್ರ ಸಂಗನಬಸವಯ್ಯ
ಪ್ರಾಣಲಿಂಗತ್ವ ಲಿಂಗಪ್ರಾಣತ್ವ ಪ್ರಸಾದಮುಕ್ತತ್ವವೆಂಬ ಅನುವನರಿದ ಅಭಿನ್ನಪ್ರಸಾದಿಗೆ ದ್ವೈತಾದ್ವೈತ ಕಷ್ಟ; ಭಾವಿಕರು ಕಾರಣದ ಬರವೆಂದು ಕಾಣಲಿಲ್ಲ. ಅದೇನು ಕಾರಣವೆಂದೊಡೆ: ಅಜಾತ ಅನುಪಮಾನಂದಪ್ರಕಾಶ ಗುರುನಿರಂಜನ ಚನ್ನಬಸವಲಿಂಗ ಪ್ರಾಸದಕ್ಕೆ ಪ್ರಸಾದಿಯಾದ ಕಾರಣ.
--------------
ದೇಶಿಕೇಂದ್ರ ಸಂಗನಬಸವಯ್ಯ
ಪೈರವಿಲ್ಲದ ಭೂಮಿಯ ಕಂಡು ಕೌಲವಿಡಿದನೊಬ್ಬ ಹಲಾಯುಧನು. ಮೂರುತಾಳಿನ ಕೂರಿಗೆಯ ಹೂಡಿ ಬಿತ್ತಲು ಫಲವಂದಂಕುರಿಸಿ ಫಲವಾಗಲು, ನೋಡಿ ಆಡಿ ಪರಿಣಾಮಿಸಿದ ಲೀಲೆಯ ಕುರುಹಿಂಗೆ ಮತ್ತೆ ಕುರುಹು ಕಾಣಬಾರದು. ಸುತ್ತಿದ ಸುಯಿಧಾನದಲತೆ ತೋರದು ಸುಪ್ರಭಾಮಯ ಗುರುನಿರಂಜನ ಚನ್ನಬಸವಲಿಂಗ ತಾನೆ ಆದಿ ಅನಾದಿ.
--------------
ದೇಶಿಕೇಂದ್ರ ಸಂಗನಬಸವಯ್ಯ

ಇನ್ನಷ್ಟು ...