ಅಥವಾ
(220) (73) (20) (3) (8) (5) (0) (0) (17) (4) (3) (15) (0) (0) ಅಂ (31) ಅಃ (31) (141) (1) (59) (8) (0) (12) (0) (14) (0) (0) (0) (0) (1) (0) (0) (66) (0) (14) (5) (89) (68) (1) (50) (40) (85) (1) (5) (0) (34) (11) (24) (1) (81) (57) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಘನಗಂಬ್ಥೀರಲಿಂಗವೆನ್ನ ಕಾಯದನುವರಿಯಬಂದಬಳಿಕ ಎನ್ನ ಕಾಯದ ರತಿಯ ಕಡೆಗಿಡಲೆನಗೆ ಸೊಗಸದು ಕಾಣಮ್ಮ. ಎನ್ನ ಮನದನುವರಿಯಬಂದಬಳಿಕ ಮನದ ಮಮಕಾರ ಸರಿದರಿಯಲೆನಗೆ ಸೊಗಸದು ಕಾಣಮ್ಮ. ಎನ್ನ ಪ್ರಾಣದನುವರಿಯಬಂದಬಳಿಕ ಪ್ರಾಣದ ಮೋಹವಿತರವೆರಸಲೆನಗೆ ಸೊಗಸದು ಕಾಣಮ್ಮ. ಎನ್ನ ಭಾವದನುವರಿಯಬಂದಬಳಿಕ ಭಾವದ ಭ್ರಾಂತಿ ಪರಿದಾವರಿಸಲೆನಗೆ ಸೊಗಸದು ಕಾಣಮ್ಮ. ಎನ್ನ ಕಾಯ ಮನ ಪ್ರಾಣ ಭಾವವೆಂಬ ಚತುರ್ವಿಧಸಾರಾಯ ಸುಖಲೋಲನಾಗಿರ್ದಬಳಿಕ ಗುರುನಿರಂಜನ ಚನ್ನಬಸವಲಿಂಗವನಗಲಲೆಡೆಗಾಣದೆ ಪರವಶವಾಗಿರ್ದೆ ಕಾಣಮ್ಮ.
--------------
ದೇಶಿಕೇಂದ್ರ ಸಂಗನಬಸವಯ್ಯ
ಘನಸಾರ ಹೇಮ ಮೌಕ್ತಿಕಕ್ಕೆ ಮೊದಲಿಲ್ಲದಂತೆ ತೋರಿದಡಾತನೆಂಬೆ. ಉದಕದಂತಿರ್ದು ವಹ್ನಿಯಂತಾದೊಡಾತನೆಂಬೆ. ದದ್ಧಪಟದ ನಿಲುವು ಸರ್ವಕ್ಕೂ ತೋರಿದಡಾತನೆಂಬೆ, ಗುರುನಿರಂಜನ ಚನ್ನಬಸವಲಿಂಗಕ್ಕಂಗವೆಂಬ ಅನುಪಮಶರಣ.
--------------
ದೇಶಿಕೇಂದ್ರ ಸಂಗನಬಸವಯ್ಯ
ಘನಮಹಿಮ ಶರಣರು ತನ್ನ ಮನೆಗೆ ಗಮನಿಸಿ ಬಂದರೆ, ಅನುವರಿದು ಅವರವರ ಒಡವೆಯ ಅವರವರಿಗಿತ್ತು ವಿನಯ ಮುಂದುಗೊಂಡಿಪ್ಪುದೇ ಸಹಜ. ಒರೆದು ನೋಡಬಂದ ಹಿರಿಯರ ಗರ್ಜನೆಯನು ಸೈರಣೆಯೊಳರ್ಚಿಸಿ, ಸಾವಧಾನಸಖತನ ಮುಂದುಗೊಂಡಿಪ್ಪುದೇ ನಿಜಭಕ್ತಿ. ಕೊಂಡು ಮಾಡಬಲ್ಲ ಪ್ರಚಂಡ ಒಡೆಯರಡಿಯಿಟ್ಟು ಬಂದರೆ ತಡವಿಲ್ಲದರಿದು, ಒಡನಿರ್ದ ಧನವ ವಂಚನೆಯನರಿಯದೆ ಈವುದು ಗುರುನಿರಂಜನ ಚನ್ನಬಸವಲಿಂಗಕ್ಕೆ ಅಭಿನ್ನಭಕ್ತಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ಘನ ಮನವನೊಳಕೊಂಡು, ಮನ ಘನವನೊಳಕೊಂಡು, ಆ ಘನಮನವ ನಿಜವೊಳಕೊಂಡು, ಆ ನಿಜವು ನಿರ್ವಯಲಾದುದು ನೀನು ನಾನೆಂಬ ನಿಲುವಿಗೆ ಸಾಧ್ಯವಾಗಿಹುದು ಗುರುನಿರಂಜನ ಚನ್ನಬಸವಲಿಂಗದೊಳಗೆ.
--------------
ದೇಶಿಕೇಂದ್ರ ಸಂಗನಬಸವಯ್ಯ
ಘ್ರಾಣದೊಳಗೆ ಗಂಧವದೆ ಗಂಧದೊಳಗೆ ಘ್ರಾಣವದೆ. ನಾಲಿಗೆಯೊಳಗೆ ರುಚಿಯದೆ ರುಚಿಯೊಳಗೆ ನಾಲಿಗೆಯದೆ. ಕಂಗಳೊಳಗೆ ರೂಪವದೆ ರೂಪಿನೊಳಗೆ ಕಂಗಳಿವೆ. ತ್ವಕ್ಕಿನೊಳಗೆ ಸ್ಪರ್ಶನವದೆ ಸ್ಪರ್ಶದೊಳಗೆ ತ್ವಕ್ಕಿದೆ. ಕರ್ಣದೊಳಗೆ ಶಬ್ದವದೆ ಶಬ್ದದೊಳಗೆ ಕರ್ಣವದೆ. ಹೃದಯದೊಳಗೆ ಸುಖವದೆ ಸುಖದೊಳಗೆ ಹೃದಯವದೆ. ಇದು ಕಾರಣ ಗುರುನಿರಂಜನ ಚನ್ನಬಸವಲಿಂಗಾ ಶರಣನೊಳಗೆ ನೀವು ನಿಮ್ಮೊಳಗೆ ಶರಣ ಕಾಣಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಘನಮಹಾಪ್ರಕಾಶಲಿಂಗವೆನ್ನ ಕರಸ್ಥಲದಲ್ಲಿ ಮಿನುಗುತ್ತಿರಲು, ಎನ್ನ ಕರ್ಮೇಂದ್ರಿಯಗಳೆಲ್ಲ ಕಳೆದುಳಿದವು, ಎನ್ನ ವಿಷಯಂಗಳೆಲ್ಲ ಸತ್ತುನಿಂದವು, ಎನ್ನ ಧರ್ಮೇಂದ್ರಿಯವೆಲ್ಲ ಅಳಿದುಳಿದವು, ಎನ್ನ ಪ್ರಾಣಾದಿ ವಾಯುಗಳೆಲ್ಲ ಮರೆದುನಿಂದವು. ಎನ್ನ ಕರಣಂಗಳೆಲ್ಲ ಬಿಟ್ಟುನಿಂದವು, ಕ್ರಿಯಾದಿ ಶಕ್ತಿಗಳೆಲ್ಲ ಪ್ರಕಾಶವಾಗಿನಿಂದವು, ನಿರಂಜನ ಚನ್ನಬಸವಲಿಂಗದವಸರಕ್ಕೆ.
--------------
ದೇಶಿಕೇಂದ್ರ ಸಂಗನಬಸವಯ್ಯ
ಘನಮಹಿಮರನುಭಾವದ ಬೆಳಗೆನ್ನ ಕರಸ್ಥಲದಲ್ಲಿ ಇಷ್ಟಲಿಂಗವಾಗಿ ಅನಿಷ್ಟವ ನಷ್ಟಮಾಡಿ ಥಳಥಳನೆ ಹೊಳೆಯುತ್ತಿದೆ ನೋಡಾ. ಚಿನುಮಯ ಶರಣರನುಭಾವದ ಬೆಳಗೆನ್ನ ಮನಸ್ಥಲದಲ್ಲಿ ಪ್ರಾಣಲಿಂಗವಾಗಿ ಪ್ರಾಣನ ಪ್ರಕೃತಿಯ ದಹಿಸಿ ಥಳಥಳನೆ ಬೆಳಗುತ್ತಿದೆ ನೋಡಾ. ಸತ್ಪುರುಷರನುಭಾವದ ಬೆಳಗೆನ್ನ ಭಾವಸ್ಥಲದಲ್ಲಿ ಭಾವಲಿಂಗವಾಗಿ ಸಂಸಾರ ವಿಷಯಭ್ರಾಂತಿಯನಳಿಸಿ ಥಳಥಳನೆ ಹೊಳೆಯುತ್ತಿದೆ ನೋಡಾ. ನಿಜಪ್ರಕಾಶ ಶರಣರನುಭಾವದ ಬೆಳಗೆನ್ನ ಘ್ರಾಣದಲ್ಲಿ ಆಚಾರಲಿಂಗವಾಗಿ ಅನಾಚಾರವನುರುಹಿ ಥಳಥಳನೆ ಹೊಳೆಯುತ್ತಿದೆ ನೋಡಾ. ಸತ್ಯಶರಣರನುಭಾವದ ಬೆಳಗೆನ್ನ ಜಿಹ್ವೆಯ ಸ್ಥಲದಲ್ಲಿ ಗುರುಲಿಂಗವಾಗಿ ಅನೃತವ ನಾಶಮಾಡಿ ಥಳಥಳನೆ ಹೊಳೆಯುತ್ತಿದೆ ನೋಡಾ. ಅನುಪಮ ಶರಣರನುಭಾವದ ಬೆಳಗೆನ್ನ ನಯನ ಸ್ಥಲದಲ್ಲಿ ಶಿವಲಿಂಗವಾಗಿ ದುಶ್ಚಲನೆಯ ದಹಿಸಿ ಥಳಥಳನೆ ಹೊಳೆಯುತ್ತಿದೆ ನೋಡಾ. ಪರಿಪೂರ್ಣ ಶರಣರನುಭಾವದ ಬೆಳಗೆನ್ನ ತ್ವಕ್ಕಿನ ಸ್ಥಲದಲ್ಲಿ ಜಂಗಮಲಿಂಗವಾಗಿ ಭಿನ್ನಭಾವದ ಸೋಂಕನುರುಹಿ ಥಳಥಳನೆ ಹೊಳೆಯುತ್ತಿದೆ ನೋಡಾ. ಪರಮಾನಂದ ಶಣರನುಭಾವದ ಬೆಳಗೆನ್ನ ಶ್ರೋತ್ರಸ್ಥಲದಲ್ಲಿ ಪ್ರಸಾದಲಿಂಗವಾಗಿ ದುಃಶಬ್ದರತಿಯ ನಷ್ಟವ ಮಾಡಿ ಥಳಥಳನೆ ಹೊಳೆಯುತ್ತಿದೆ ನೋಡಾ. ಪರಮಶಾಂತ ಶರಣರನುಭಾವದ ಬೆಳಗೆನ್ನ ಹೃದಯಸ್ಥಲದಲ್ಲಿ ಮಹಾಲಿಂಗವಾಗಿ ಭಿನ್ನದರಿವನುರುಹಿ ಥಳಥಳನೆ ಹೊಳೆಯುತ್ತಿದೆ ನೋಡಾ. ನಿರುಪಮ ಶರಣರನುಭಾವದ ಬೆಳಗೆನ್ನ ಬ್ರಹ್ಮರಂಧ್ರದಲ್ಲಿ ನಿಃಕಲಲಿಂಗವಾಗಿ ಥಳಥಳನೆ ಹೊಳೆಯುತ್ತಿದೆ ನೋಡಾ. ನಿರ್ಮಾಯ ಶರಣರನುಭಾವದ ಬೆಳಗೆನ್ನ ಉನ್ಮನಿಯಲ್ಲಿ ಶೂನ್ಯಲಿಂಗವಾಗಿ ಥಳಥಳನೆ ಹೊಳೆಯುತ್ತಿದೆ ನೋಡಾ. ನಿರವಯ ಶರಣರನುಭಾವದ ಬೆಳಗೆನ್ನ ಪಶ್ಚಿಮದಲ್ಲಿ ನಿರಂಜನಲಿಂಗವಾಗಿ ಥಳಥಳನೆ ಹೊಳೆಯುತ್ತಿದೆ ನೋಡಾ. ಇದು ಕಾರಣ, ಗುರುನಿರಂಜನ ಚನ್ನಬಸವಲಿಂಗಾ ನಿಮ್ಮ ಅಖಂಡ ಶರಣರನುಭಾವದ ಬೆಳಗೆನ್ನ ಕಿಂಚಿತ್ತು ಕಾಣಿಸದೆ ಸರ್ವಾಂಗದಲ್ಲಿ ಥಳಥಳನೆ ಹೊಳೆಯುತ್ತಿದೆ ನೋಡಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಘಟಿತ ನನೆಯನಂತರ ಪರಿಮಳ ವಿಕಸನಮುಖದಿಂದೆ ಪ್ರಬಲಿಸುವಂತೆ, ಸ್ವಾನುಭಾವಸೂತ್ರವರಿದ ಜ್ಞಾನಕಲಾತ್ಮನು ಕಳೆದು ಕಂಡ ಕಾಣಬಾರದ ಕುರುಹ ಒಂದಿಸಿ ಕೂಡಿಕೊಂಡು ಹಿಡಿದು ನಡೆದುಂಬ ನವೀನದ ಬೆಳಗು ನೀನೆ ಗುರುನಿರಂಜನ ಚನ್ನಬಸವಲಿಂಗಾ.
--------------
ದೇಶಿಕೇಂದ್ರ ಸಂಗನಬಸವಯ್ಯ