ಅಥವಾ
(220) (73) (20) (3) (8) (5) (0) (0) (17) (4) (3) (15) (0) (0) ಅಂ (31) ಅಃ (31) (141) (1) (59) (8) (0) (12) (0) (14) (0) (0) (0) (0) (1) (0) (0) (66) (0) (14) (5) (89) (68) (1) (50) (40) (85) (1) (5) (0) (34) (11) (24) (1) (81) (57) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಭಿನ್ನವಳಿದು ತನ್ನನರಿದು ತಾನಾದ ಶರಣನು ಸಚರಾಚರವೆಲ್ಲ ತನ್ನ ನಿರ್ಮಿತವೆಂದು ಕಾಂಬುವನಲ್ಲದೆ ಬೇರೊಂದು ಕುರುಪಿಟ್ಟು ಹೇಳುವನಲ್ಲ ಕಾಣಾ. ಅಕಾಯಚರಿತ್ರನಾದ ಅನುಪಮಸುಖಿ ತನಗೊಮ್ಮೆ ಹಿರಿದುಕಿರಿದು ಉತ್ತಮ ಮಧ್ಯಮ ಕನಿಷ್ಠವೆಂಬವೇನು ಕಾಣದಿರ್ದವು ನೋಡಾ. ಈ ನಿಲವು ನಿಲುಕದ ಕುಲಾದಿ ಮದಯುಕ್ತರು ಶರಣಸ್ಥಲವ ತೋರಿ ನಡೆವರು. ಇವರೆತ್ತ ಹೋಗುವರು ಎತ್ತ ಬರುವರು ಹೇಳಾ ಗುರುನಿರಂಜನ ಚನ್ನಬಸವಲಿಂಗಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಭಕ್ತನ ಶ್ರದ್ಧೆ ಗುರುಲಿಂಗಜಂಗಮವೇ ಪ್ರಾಣವೆಂಬುದು. ಭಕ್ತನ ನಿಷ್ಠೆ ಪಂಚಾಕ್ಷರಿಯೇ ಪ್ರಾಣವೆಂಬುದು. ಭಕ್ತನ ಸಾವಧಾನ ಪ್ರಸಾದವೇ ಪ್ರಾಣವೆಂಬುದು. ಭಕ್ತನ ಅನುಭಾವ ರುದ್ರಾಕ್ಷಿಯೇ ಪ್ರಾಣವೆಂಬುದು. ಭಕ್ತನ ಆನಂದ ಪಾದೋದಕವೇ ಪ್ರಾಣವೆಂಬುದು. ಭಕ್ತನ ಸಮರಸ ಶ್ರೀ ವಿಭೂತಿಯೇ ಪ್ರಾಣವೆಂಬುದು. ಇಂತು ಅಷ್ಟಾವರಣ ಪ್ರಾಣವಾಗಿ, ನಡೆಯೇ ಪ್ರಕಾಶವಾಗಿರ್ದ ನಮ್ಮ ಗುರುನಿರಂಜನ ಚನ್ನಬಸವಲಿಂಗ ಮೆಚ್ಚುವಂತೆ.
--------------
ದೇಶಿಕೇಂದ್ರ ಸಂಗನಬಸವಯ್ಯ
ಭೂತ ಚಿದ್ಭೂತವಾಗಿ ಚಿಲ್ಲಿಂಗದಲ್ಲಡಗಿತ್ತು ಚಿದ್ಬಯಲಾಗಿ. ಇಂದ್ರಿಯ ಚಿದೇಂದ್ರಿಯವಾಗಿ ಚಿಲ್ಲಿಂಗದಲ್ಲಡಗಿತ್ತು ಚಿದ್ಬಯಲಾಗಿ. ಕರಣ ಚಿತ್ಕರಣವಾಗಿ ಚಿಲ್ಲಿಂಗದಲ್ಲಡಗಿತ್ತು ಚಿದ್ಬಯಲಾಗಿ. ವಿಷಯ ಚಿದ್ವಿಷಯವಾಗಿ ಚಿಲ್ಲಿಂಗದಲ್ಲಡಗಿತ್ತು ಚಿದ್ಬಯಲಾಗಿ. ವಾಯು ಚಿದ್ವಾಯುವಾಗಿ ಚಿಲ್ಲಿಂಗದಲ್ಲಡಗಿತ್ತು ಚಿದ್ಬಯಲಾಗಿ. ಸಕಲವೆಲ್ಲ ನಿಃಕಲವಾಗಿ ನಿರಂಜನದಲ್ಲಡಗಿತ್ತು ನಿರವಯವಾಗಿ, ಗುರುನಿರಂಜನ ಚನ್ನಬಸವಲಿಂಗಾ ನಿಮ್ಮ ನಾಮ ನಿರ್ನಾಮವಾಗಿ ನಿರ್ವಯಲಾದುದು.
--------------
ದೇಶಿಕೇಂದ್ರ ಸಂಗನಬಸವಯ್ಯ
ಭಕ್ತಿ ಜ್ಞಾನ ವೈರಾಗ್ಯವುಳ್ಳಾತನೆ ಗಂಬ್ಥೀರ, ಭಕ್ತಿ ಜ್ಞಾನ ವೈರಾಗ್ಯವಿಲ್ಲದೆ ಅಂಗಮೂರರ ಸಂಗಸೌಖ್ಯವನರಿಯಬಾರದು. ಅದೆಂತೆಂದೊಡೆ:ಅಡಿಯಿಟ್ಟು ಬಂದ ಗುರುಲಿಂಗಜಂಗಮಕ್ಕೆ ಸ್ಥೂಲತನುತ್ರಯವ ಸೂರೆಮಾಡಿದ ಬರವನರಿದು ಸಮುಖರತಿ ಸಂಧಾನಸುಖವನರಿಯಬಲ್ಲರೆ ಭಕ್ತಿಗಂಬ್ಥೀರನಹುದೆಂಬೆ. ಸೂಕ್ಷ್ಮತನುವ ಸುಜ್ಞಾನದೊಳಿಟ್ಟು ಸುಯಿಧಾನವೆರೆದು ಅವರಂತಸ್ಥಕ್ಕೊತ್ತೆಗೈದು ಒಲುಮೆಯ ಬರವನರಿದು ಘನರತಿಸಂಬಂಧಸುಖವನರಿಯಬಲ್ಲರೆ ಜ್ಞಾನಗಂಭೀರನೆಂಬೆ. ಕಾರಣತನುವನು ನಿಃಸಂಕಲ್ಪ ನಿರ್ವಂಚನೆ ನಿರ್ಭೇದವೆಂಬ ಸತ್ಯಜ್ಞಾನದಲ್ಲಿರಿಸಿ ಮಿಥ್ಯಮಮಕಾರವ bs್ಞೀದಿಸಿ ಸದ್ಭಾವಗೂಡಿ ಅವರ ಮಹಾನುಭಾವಕ್ಕೊತ್ತೆಗೈದು ಹರುಷರಸಬರವನರಿದು ನಿರ್ಭಾವರಸವೆತ್ತಿ ನಿರ್ವಾಣಸುಖಸಮರಸವ ಬಲ್ಲರೆ ಆತ ವೈರಾಗ್ಯ ಗಂಬ್ಥೀರನೆಂಬೆ. ಈ ಸೌಭಾಗ್ಯತ್ರಯವನುಳ್ಳಾತನೆ ಚೆಲುವಂಗ ಪ್ರಾಣಾತ್ಮಪ್ರಿಯ ಸಿದ್ಧಲಿಂಗ ತಾನೆ ಬೇರಿಲ್ಲ.
--------------
ದೇಶಿಕೇಂದ್ರ ಸಂಗನಬಸವಯ್ಯ
ಭೂಮಿಯನುರುಹಿ ತನ್ನ ನೋಡಿ ಅರ್ಚಿಸುವರಾರಯ್ಯಾ? ಜಲವ ದಹಿಸಿ ತನ್ನ ನೋಡಿ ಅರ್ಚಿಸುವರಾರಯ್ಯಾ? ಅನಲನ ಸುಟ್ಟು ತನ್ನ ನೋಡಿ ಅರ್ಚಿಸುವರಾರಯ್ಯಾ? ಅನಿಲವ ದಗ್ಧ ಮಾಡಿ ತನ್ನ ನೋಡಿ ಅರ್ಚಿಸುವರಾರಯ್ಯಾ? ಭಾವ ದಹನವ ಮಾಡಿ ತನ್ನ ನೋಡಿ ಅರ್ಚಿಸುವರಾರಯ್ಯಾ? ಕರ್ತಾರನ ಕರ್ಮವನುರುಹಿ ತನ್ನ ನೋಡಿ ಅರ್ಚಿಸುವರಾರಯ್ಯಾ? ಸಕಲವನುರುಹಿ ಬೆಳಗ ಮಾಡಿ ಕೂಡ ಅರ್ಚಿಸುವರಾರಯ್ಯಾ? ಅಪ್ರತಿಮಶರಣರಲ್ಲದೆ ಗುರುನಿರಂಜನ ಚನ್ನಬಸವಲಿಂಗದಲ್ಲಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ಭಕ್ತಿಯೇ ವಿಗ್ರಹ, ಜ್ಞಾನವೇ ಪ್ರಾಣ, ವೈರಾಗ್ಯವೇ ಗಮನ. ಇಂಬಿಲ್ಲ ಇಂಬಿಲ್ಲ ನೋಡುವರೆ ನುಡಿಸುವರೆ. ಎಲೆದೋರದ ವೃಕ್ಷ ಫಲವಾಗಿ ಕಾಣಿಸಿಕೊಳ್ಳದು. ಬಂದರೇನು ನಿಂದರೇನು ಭೋಗಿಸಿದರೇನು ಅಂದಂದಿಗೆ ಆರೂಢ ತಾನೆ ಗುರುನಿರಂಜನ ಚನ್ನಬಸವಲಿಂಗ.
--------------
ದೇಶಿಕೇಂದ್ರ ಸಂಗನಬಸವಯ್ಯ
ಭವಿಯ ಸಂಪರ್ಕವನರಿಯದ ಕಾಯ, ಪರಸ್ತ್ರೀಯ ಸಂಗಕ್ಕೆಳಸದ ಮನ, ಅನ್ಯಧನಮೋಹವನರಿಯದ ಪ್ರಾಣ, ಪರದೈವವನರಿಯದ ಭಾವ, ಅನ್ಯಹಿಂಸೆಯನರಿಯದ ಆತ್ಮಸಯವಾದ ನಿಲುವಿಗೆ ಭಕ್ತಿಬೆರಸಿಪ್ಪುದು. ಅಂಗಲಿಂಗವ ಹಿಂಗದೆ ಮರೆದು ಸಂಗಸುಯಿಧಾನಿ ಗುರುನಿರಂಜನ ಚನ್ನಬಸವಲಿಂಗವಿಡಿದು.
--------------
ದೇಶಿಕೇಂದ್ರ ಸಂಗನಬಸವಯ್ಯ
ಭೂಮಿಯ ಕುಟ್ಟಿ ಶೋಧಿಸಿ ಕಂಡು, ನೀರಜಲದಲ್ಲಿ ತೊಳೆದು ಹೊಳವಮಾಡಿ ಕಂಡು, ಕೆಂಡವ ಸುಟ್ಟು ಬಯಲಮಾಡಿ ಕಂಡು, ಎರಡು ಆಟವಾಡಿ ಬಯಲಾಟದಲ್ಲಿ ನಿಂದು ನೋಡಲು, ಆಟನೋಟದೊಳು ಕೂಡಿ ಕೋಟೆಯಮೇಲಣ ಕೋಟಿ ಸೂರ್ಯಚಂದ್ರಾಗ್ನಿ ಪ್ರಕಾಶಮಂಡಲಗಳಮಧ್ಯ ಝಗಝಗಿಸುತಿರ್ದ ಗುರುನಿರಂಜನ ಚನ್ನಬಸವಲಿಂಗವ ಕಂಡು ಕಣ್ಮುಚ್ಚಿ ಕರಗಿದ ನೋಡಾ ಅಚ್ಚಪ್ರಾಣಲಿಂಗಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ಭ್ರಷ್ಟಬೀಜದಾಗು ನಷ್ಟವಾದಂತೆ ಇರ್ದಡೇನು ಹೋದಡೇನು ಶಬ್ದಶೂನ್ಯ ಶರಣ ಉಂಡು ಉಪವಾಸಿ ಬಳಸಿ ಬ್ರಹ್ಮಚಾರಿ. ನಾದಬಿಂದುಕಲಾ ನಿರಂಜನ ಗುರುನಿರಂಜನ ಚನ್ನಬಸವಲಿಂಗಾ ನಿಮ್ಮ ಶರಣ.
--------------
ದೇಶಿಕೇಂದ್ರ ಸಂಗನಬಸವಯ್ಯ
ಭೂಮಿಯೊಳಗಿಂದಲುದಯಿಸಿ ರವಿ ಮೂಡಿಬರಲು ನೆಲ-ಜಲಾಗ್ನಿ ಮರುತಾಕಾಶಕ್ಕಾವರಿಸಿದ ಕತ್ತಲೆ ಹರಿದು ಹೋಯಿತ್ತು ನೋಡಾ ! ಸಕಲ ಜನರೆಲ್ಲ ಎಚ್ಚತ್ತು ಯುಕುತಿ ವ್ಯಾಪಾರ ಲೆಕ್ಕವನು ಗೈಯಲು ಲೋಕನಾಥನ ರಾಣಿವಾಸ ಮಡಿಯಿತ್ತು. ಚಿತ್ರಾಣಿ ಲೋಕನಾಥನ ಸೋಂಕಲು ದೇವಲೋಕನಾಥನಾದುದನೇನೆಂಬೆ ನಿರಂಜನ ಚನ್ನಬಸವಲಿಂಗಾ !
--------------
ದೇಶಿಕೇಂದ್ರ ಸಂಗನಬಸವಯ್ಯ
ಭೂಪಾಲನ ಹೆಂಡತಿಯ ಭುಜದ ಮೇಲಿರ್ದ ಕೋಡಗ ಗಾಲುಮೇಲಾದ ಶಾಖೆಗಳಿಗೆ ಲಂಘಿಸುವದು ನೋಡಾ! ಕೋಡಗನ ನಾಭಿಯಲ್ಲಿ ಚಿಕ್ಕೆಮೂಡಿ ಚಂದ್ರನ ಕೂಡಲು ದೇವಗನ್ನೆಯರು ಆರತಿಯ ಬೆಳಗುತಿರ್ದರು ನೋಡಾ! ಆ ಬೆಳಗಿನೊಳಗೆ ಗುರುನಿರಂಜನ ಚನ್ನಬಸವಲಿಂಗವನಿದಿರುಗೊಳ್ಳಬಲ್ಲರೆ ಪ್ರಾಣಲಿಂಗಿಯೆಂಬೆ ಕಾಣಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಭಿಕ್ಷಕ್ಕೆ ಬಂದಾ ಚರಮೂರ್ತಿಗಳ ಕಂಡು ಕುಕ್ಷಿಯಲ್ಲಿ ಮರಗುವ ಯಕ್ಕಲನರಕಿಗಳಿಗೆತ್ತಣ ಉಪದೇಶವಯ್ಯಾ? ಸುತ್ತಿರ್ದ ಪ್ರಪಂಚಕ್ಕೆ ಸವೆದು ಕರ್ತುಗಳಿಗೆ ಅರೆಕಾಸು ಸವೆಯದೆ ನಾವು ನಿತ್ಯಭಕ್ತರೆಂದರೆ ಒತ್ತಿ ಹಾಕುವರು ಬಾಯಲ್ಲಿ ಹುಡಿಯಯ್ಯಾ ಯಮನವರು ಗುರುನಿರಂಜನ ಚನ್ನಬಸವಲಿಂಗಕ್ಕೆ ದೂರವಾದ ದುರ್ಮುಖಿಗಳೆಂದು.
--------------
ದೇಶಿಕೇಂದ್ರ ಸಂಗನಬಸವಯ್ಯ
ಭೂಮಿಯ ಮೇಲೆ ಸೂರ್ಯಚಂದ್ರರ ಹಿಡಿದು ತಂದು ಕೂಡಿಸಿ ನಿಮಿಷವಳಿದು ನಿಂದಲ್ಲಿ, ಅತಿಶಯಾನಂದಪ್ರಕಾಶಪ್ರಾಣಲಿಂಗ ತಾನೆ ಗುರುನಿರಂಜನ ಚನ್ನಬಸವಲಿಂಗ.
--------------
ದೇಶಿಕೇಂದ್ರ ಸಂಗನಬಸವಯ್ಯ
ಭುವನಾಪಸಂಪರ್ಕಶೂನ್ಯವಾದಲ್ಲಿ ಬೀಜದಲ್ಲಿ ಅಂಕುರ ಪಲ್ಲೈಸದು. ತನುಜ್ಞಾನಸಂಗಶೂನ್ಯಶರಣಂಗೆ ಸರ್ವಾಚಾರ ಪಲ್ಲೈಸದು. ಮರಹನಳಿದುಳಿದ ಗುರುನಿರಂಜನ ಚನ್ನಬಸವಲಿಂಗ ಸಮರಸಕ್ಕೆ.
--------------
ದೇಶಿಕೇಂದ್ರ ಸಂಗನಬಸವಯ್ಯ
ಭಿನ್ನವಿಲ್ಲದೆ ಶರಣೆಂಬೀ ಚನ್ನಭಕ್ತರು ಎನ್ನರಸುತ್ತ ಬಂದರೆ ಬೆನ್ನ ಹತ್ತಿ ಬಂದ ಎನ್ನಯ್ಯ ಸಾಕ್ಷಿಯಾಗಿ. ಎಲ್ಲವೂ ನಿಮ್ಮದೆಂಬೆಯೆಂದಲ್ಲಿ ವಂಚನೆಯುಳ್ಳರೆ ಬಂಧನ ಬಪ್ಪುದು ತಪ್ಪದು. ಅಂದಂದಿನ ಮಾತು ಇಂದುಳಿವನಲ್ಲ, ಸಂದುಸಂಶಯ ನಿಂದುರುಹಿದ ನಿಷೆ*ಯೆನಗುಂಟು ಗುರುನಿರಂಜನ ಚನ್ನಬಸವಲಿಂಗದಲ್ಲಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ಭೂ ಪೃಥ್ವಿಯ ಸುಖ ಜಲದೊಳು ನಿಂದು, ಅಗ್ನಿವಿಡಿದು, ಅನಿಲವೆರೆದು, ಅಂಬರಗೂಡಿ, ಆತ್ಮ ಗುರುನಿರಂಜನ ಚನ್ನಬಸವಲಿಂಗದಲ್ಲಿ ಸಮರಸಾನಂದಸುಖಿ ನಿಮ್ಮ ಭಕ್ತ.
--------------
ದೇಶಿಕೇಂದ್ರ ಸಂಗನಬಸವಯ್ಯ
ಭಕ್ತಿ ಜ್ಞಾನ ವೈರಾಗ್ಯ ಕ್ರಿಯಾಪೀಠಕರ್ತುಮೂರ್ತಿಯ ವರ್ತನೆಯ ಹೊತ್ತು ನಿಂದಲ್ಲಿ ಸತ್ಯಾಸತ್ಯ ವಿವೇಕಮುಖನಾಗಿರಬೇಕು. ಬಂದ ನಿಜಜ್ಞಪ್ತಿನಿಲುವನರಿವಡೆ ಸುಜ್ಞಪ್ತಿ ಮುಕುರವೆಂಬ ಹೃದಯವೊಳಗುಂಟು. ಮತ್ತೆ ನಾದವನೊರೆದು ನೋಡುವರೆ ಜ್ಞಾನಪದವುಂಟು. ಬಿಂದುವನೊರೆದು ನೋಡುವರೆ ಕ್ರಿಯಾಪದವುಂಟು. ಕಳೆಯನೊರೆದು ನೋಡುವರೆ ಚರ್ಯಾಪದವುಂಟು. ಆತ್ಮನನೊರೆದು ನೋಡುವರೆ ಅನಾದಿರೂಪುಂಟು. ಮತ್ತೆ ಹೀಗಿರ್ದು ಇದರ ರುಚಿಯನುಳಿದು ರೂಪವ ಹೊತ್ತುವಂದು ವಿಷಯಕೆ ಸಂದಿಸಿಕೊಂಡು ಮಾಡಿ ತೋರಿ ನಿಲಿಸಿದೆವೆನುತ ಬೇಡಿ ಕಾಡಿ ಬೇರೆ ಕೂಡೆಂದು ಸೆಳೆಸೆಳೆದು ಒಡಲ ಹೊರವ ತುಡುಗುಣಿಗಳು ಗುರುತ್ವಕ್ಕೆ ಸಲ್ಲ ಕಾಣಾ ಗುರುನಿರಂಜನ ಚನ್ನಬಸವಲಿಂಗಾ ನಿಮ್ಮಲ್ಲಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ಭಾವವುಳ್ಳರೆ ಭಕ್ತನಾಗಲಿ, ಭಾವವುಳ್ಳರೆ ವಿರಕ್ತನಾಗಲಿ, ಭಾವವುಳ್ಳರೆ ಮತ್ತೇನೇನಾದರು ಆಗಲಿ. ಭಾವವೊಂದನುಳಿದು ಬಂದರೇನು ನಿಂದರೇನು ಹೋದರೇನು ಮಾರುತ ಮಾರುತ ಗುರುನಿರಂಜನ ಚನ್ನಬಸವಲಿಂಗ.
--------------
ದೇಶಿಕೇಂದ್ರ ಸಂಗನಬಸವಯ್ಯ
ಭಂಗಭರಿತರ ಮಾತನೇನೆಂಬೆ ನೋಡಾ. ಭವಸಂಪ್ರೀತರ ಮಾತನೇನೆಂಬೆ ನೋಡಾ. ಯೋನಿಸೂತಕರ ಮಾತನೇನೆಂಬೆ ನೋಡಾ. ಪ್ರಮಥರ ನಡೆನುಡಿಯೈಕ್ಯ ಪ್ರಮಥರಿಗೆ ಸರಿ ನಮಗಾಗಬಲ್ಲುದೇ ಹೇಳಾ ಎಂಬುವರು. ತನುವೊಂದು ಜ್ಞಾನವೊಂದು ವೈರಾಗ್ಯವೊಂದು ಭಕ್ತಿಯೊಂದು ಕಾರುಣ್ಯವೊಂದು ಆಚಾರವೊಂದು ಅನುಭಾವವೊಂದು ಸಮರಸವೊಂದು ಮತ್ತೆ ಇನ್ನೊಂದು ಬೇರುಂಟೆ ಶಿವಾಂಶಿಕರಿಗೆ ಹೇಳಾ ? ಇಂತಾ ಜಡಮೂಢಪ್ರಾಣಿಗಳ ಮಾತಿಂಗೆ ಮಾತ ನೀಡಲಾಗದು ಕಾಣಾ ಪರಿಣಾಮ ಭರಿತಾಂಗರು ನಿಜಾಂತಃಪ್ರಿಯ ಚನ್ನಬಸವಲಿಂಗಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಭಕ್ತಿಸ್ಥಲವುಳ್ಳಂಗೆ ತನುಮನಧನದಾಸೆ ಶತ್ರು ಕಾಣಾ. ಮಹೇಶ್ವರಸ್ಥಲವುಳ್ಳವಂಗೆ ಪರಧನ ಪರಸತಿ ಪರದೈವವೆಂಬಿವರ ಕಾಂಕ್ಷೆಯೇ ಶತ್ರು ಕಾಣಾ. ಪ್ರಸಾದಿಸ್ಥಲವುಳ್ಳವಂಗೆ ಸದ್ವಿವೇಕ ಸಾವಧಾನದ ಮರವೆಯೇ ಶತ್ರು ಕಾಣಾ. ಪ್ರಾಣಲಿಂಗಸ್ಥಲವುಳ್ಳವಂಗೆ ವಾಯ್ವೇಂದ್ರಿಯಪ್ರಕೃತಿಯೇ ಶತ್ರು ಕಾಣಾ. ಶರಣಸ್ಥಲವುಳ್ಳವಂಗೆ ಸಕಲವು ಬಿಡುಗಡೆವಿರಹಿತವೆ ಶತ್ರು ಕಾಣಾ. ಐಕ್ಯಸ್ಥಲವುಳ್ಳವಂಗೆ ಉಭಯದ ಕುರುಹೇ ಶತ್ರು ಕಾಣಾ. ಇಂತು ಸ್ಥಲವರಿತು ನಿಂದ ಶರಣಂಗೆ ಸಕಲ ನಿಃಕಲಸನುಮತ ಗುರುನಿರಂಜನ ಚನ್ನಬಸವಲಿಂಗದಲ್ಲಿ ಕಾಣಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಭುವನಾದಿ ಜನಿತ ನಿರ್ಮಲ ಪದಾರ್ಥವ ಮಾಡಿ ಪರಮಾನಂದಪ್ರಸಾದಿ ಪರಿಪೂರ್ಣಲಿಂಗಕ್ಕೆ ಸಮರ್ಪಿಸಿ ಕೊಂಬುವನಲ್ಲದೆ, ಭುವನಾದಿ ಜನಿತ ಗುಣಸಂಭವಿತನಾಗಿ ಅನ್ಯಪದಾರ್ಥವನರಿದರಿದಾಯಾಸಗೊಂಡು ಕೊಂಬ ದುರ್ವಿವೇಕಿಯಲ್ಲ ಗುರುನಿರಂಜನ ಚನ್ನಬಸವಲಿಂಗದಲ್ಲಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ಭಕ್ತಿಯೆಂಬುದು ತನುಗತಿ, ಯುಕ್ತಿಯೆಂಬುದು ಮನಗತಿ, ವಿರಕ್ತಿಯೆಂಬುದು ಭಾವಗತಿ - ಇವು ಒಂದೊಂದು ಲೀಲೆ. ಈ ಲೀಲೆಯನರಿದಿರುವನ್ನಕ್ಕರ ಲೋಲಮುಖಮಯ ಮುಂದಿಪ್ಪುದು ಇದು ಕಾರಣ ಈಸುವನೋಸರಿಸದೆ ನೀವಾಗಿರ್ದ ಭಾವ ಅದೇ ಸದ್ಭಾವ ಗುರುನಿರಂಜನ ಚನ್ನಬಸವಲಿಂಗಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಭಕ್ತಿತ್ರಯದಲ್ಲಿ ಯುಕ್ತರಾದ ಮಹಿಮರು : ಇಹಪರದಲ್ಲಿ ಚಂದ್ರನ ಇರವು ಸಕಲರಿಗೆ, ಇಹಪರದಲ್ಲಿ ಸೂರ್ಯನಿರವು ಸಕಲರಿಗೆ, ಇಹಪರದಲ್ಲಿ ಅಗ್ನಿಯಿರವು ಸಕಲರಿಗೆ, ಇಹಪರದಲ್ಲಿ ಗುರುನಿರಂಜನ ಚನ್ನಬಸವಲಿಂಗದಂಗದಿರವು ಸಕಲನಿಃಕಲರಿಗೆ.
--------------
ದೇಶಿಕೇಂದ್ರ ಸಂಗನಬಸವಯ್ಯ
ಭಕ್ತನೆಂದು ಯುಕ್ತನೆಂದು ವ್ಯಕ್ತನೆಂದು ಮುಕ್ತನೆಂದು ಹೇಳುವರಲ್ಲದೆ ಬಾಳುವರಿಲ್ಲ ನೋಡಾ. ಬಾಳುವೆ ಬರಿದಾಯಿತ್ತು ಮೂರು ಘಳಿಗೆಯೊಳಗೆ ಶರಣೆಂದು ನಿಂದಲ್ಲಿ. ಶರಣನು ಶರಣೆನ್ನಬಲ್ಲರೆ ಭಕ್ತ, ತಾರದಿರ್ದಡೆ ಯುಕ್ತ, ನೋಡದಿರ್ದಡೆ ವ್ಯಕ್ತ, ಹೀಗೆಂಬುದ ಮರೆದಡೆ ಮುಕ್ತ ನೋಡಾ ಗುರುನಿರಂಜನ ಚನ್ನಬಸವಲಿಂಗಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಭಕ್ತಿಯಲ್ಲಿ ಬಂದು, ಜ್ಞಾನದಲ್ಲಿ ಬೆಳೆದು, ವೈರಾಗ್ಯದಲ್ಲಿ ಅಡಗಿರ್ದ ಅಪ್ರತಿಮಶರಣ. ಅರಿದು ಮಾಡುವನಲ್ಲ, ಹರಿದುಬಿಟ್ಟವನಲ್ಲ, ತೋರಿಸಿಕೊಂಬುವನಲ್ಲ. ಲೋಕದೊಳಗಿರ್ದು ಲಿಂಗದೊಳಗಿರ್ದ ನಿಲವನಾರು ಬಲ್ಲರು ಹೇಳಾ ! ಬೇಕುಬೇಡೆನ್ನದ ಮೂಕಮಾತನಲ್ಲ ಗುರುನಿರಂಜನ ಚನ್ನಬಸವಲಿಂಗಾ ನಿಮ್ಮ ಶರಣ.
--------------
ದೇಶಿಕೇಂದ್ರ ಸಂಗನಬಸವಯ್ಯ

ಇನ್ನಷ್ಟು ...