ಅಥವಾ
(220) (73) (20) (3) (8) (5) (0) (0) (17) (4) (3) (15) (0) (0) ಅಂ (31) ಅಃ (31) (141) (1) (59) (8) (0) (12) (0) (14) (0) (0) (0) (0) (1) (0) (0) (66) (0) (14) (5) (89) (68) (1) (50) (40) (85) (1) (5) (0) (34) (11) (24) (1) (81) (57) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಕಾಯವಿಲ್ಲದ ಶರಣಂಗೆ ಕರ್ಮವಿಲ್ಲ ; ಕರ್ಮಶೂನ್ಯವಾದಲ್ಲಿ ಭಾವನಾಸ್ತಿ ಕಾಣಾ. ಭಾವನಾಸ್ತಿಯಾಗಿ ನಿರ್ಭಾವ ನಿಂದು ನಿಜವಾದಲ್ಲಿ ನೋಡಲಿಲ್ಲ ನುಡಿಯಲಿಲ್ಲ ಕೂಡಲಿಲ್ಲ ಅಗಲಲಿಲ್ಲ. ಗುರುನಿರಂಜನ ಚನ್ನಬಸವಲಿಂಗ ತಾನು ತಾನಾಗಿರ್ದ ಸುಖವ ತಂದು ಹೇಳುವರಾರೂ ಇಲ್ಲ ಈ ಮೂರುಲೋಕದೊಳಗೆ.
--------------
ದೇಶಿಕೇಂದ್ರ ಸಂಗನಬಸವಯ್ಯ
ಕೂಟವನರಿಯದೆ ಕೋಟಲೆಗೊಂಡಿತ್ತು ಲೋಕವೆಲ್ಲ. ಹಾದಿಯೆರಡರಲ್ಲಿ ನಡೆವ ಕುಂಟ ಕುರುಡರು ತಂಟಕರಾಗಿ ಹೋಗಿಬರುವರು. ಸಾಧಕ ಸಂದಣಿಗಳೆಲ್ಲ ಮೇದಿನಿಯೊಳುಳಿದರು. ಹಿರಿಯ ಕಿರಿಯರೆನಿಸುವರೆಲ್ಲ ಬಲೆಯೊಳು ಸಿಲುಕಿದರು. ಉಳಿದವರಂತಿರಲಿ, ಇದನರಿದು ನಾನು ಮಾಟವ ಮರೆದು ಕೂಟವ ಕಂಡು ಕಾಣದೆ ಸಮರಸಾನಂದದೊಳಿರ್ದೆನು ಗುರುನಿರಂಜನ ಚನ್ನಬಸವಲಿಂಗದೊಳಗೆ.
--------------
ದೇಶಿಕೇಂದ್ರ ಸಂಗನಬಸವಯ್ಯ
ಕಟ್ಟಕಡೆಯಲಿಂದ ನಟ್ಟನಡುಮಧ್ಯಕ್ಕೆ ಬರಲು, ಸಟ್ಟಸರಿರಾತ್ರಿ ಕವಿಯಿತ್ತು ನೋಡಾ ! ಹುಸಿಗಳ್ಳರೊತ್ತಿಬಂದಲ್ಲಿ ಹೆಸರು ಅಡಗಿ ಹೋಯಿತ್ತು. ಮತ್ತೆ ನೋಡ ಕಂಡ, ಮಿಥ್ಯದೃಷ್ಟರೊಡ ಕಂಡ, ನಿರಂಜನ ಚನ್ನಬಸವಲಿಂಗವ ನೋಡ ಕಂಡ.
--------------
ದೇಶಿಕೇಂದ್ರ ಸಂಗನಬಸವಯ್ಯ
ಕಾಮದಲ್ಲಿಮುಳುಗಿ ನುಡಿವರು ಶರಣಂಗೆ ಕಾಮಿಯೆಂದು, ಕ್ರೋಧದಲ್ಲಿಮುಳುಗಿ ನುಡಿವರು ಶರಣಂಗೆ ಕ್ರೋದ್ಥಿಯೆಂದು, ಲೋಭದಲ್ಲಿಮುಳುಗಿ ನುಡಿವರು ಶರಣಂಗೆ ಲೋಬ್ಥಿಯೆಂದು, ಮೋಹದಲ್ಲಿಮುಳುಗಿ ನುಡಿವರು ಶರಣಂಗೆ ಮೋಹಿಯೆಂದು, ಮದದಲ್ಲಿಮುಳುಗಿ ನುಡಿವರು ಶರಣಂಗೆ ಮದಭರಿತನೆಂದು, ಮತ್ಸರದಲ್ಲಿಮುಳುಗಿ ನುಡಿವರು ಶರಣಂಗೆ ಮತ್ಸರಭರಿತನೆಂದು, ಅರಿಷಡ್ವರ್ಗದಲ್ಲಿರ್ದು ಒಂದೊಂದು ನುಡಿದರೆ ಸಂದೇಹವಿಲ್ಲ ಶರಣಂಗೆ. ನಿಂದೆಯನಾಡುವ ನರನಿಗೆ ಸೂಕರಜನ್ಮವು ಇದು ಸತ್ಯ ಗುರುನಿರಂಜನ ಚನ್ನಬಸವಲಿಂಗದ ವಚನ.
--------------
ದೇಶಿಕೇಂದ್ರ ಸಂಗನಬಸವಯ್ಯ
ಕಾಯದೊಳಗೆ ಲಕ್ಷವಿರ್ದಡೆ ಕಾಣಬಾರದು. ಕರಣದೊಳಗೆ ಲಕ್ಷವಿರ್ದಡೆ ಕಾಣಬಾರದು. ಪ್ರಾಣದೊಳಗೆ ಲಕ್ಷವಿರ್ದಡೆ ಕಾಣಬಾರದು. ಭಾವದೊಳಗೆ ಲಕ್ಷವಿರ್ದಡೆ ಕಾಣಬಾರದು. ತನ್ನೊಳಗೆ ಲಕ್ಷವಿಲ್ಲದಿರ್ದೊಡೆ ಕಾಣಬಾರದು ಗುರುನಿರಂಜನ ಚನ್ನಬಸವಲಿಂಗವನು.
--------------
ದೇಶಿಕೇಂದ್ರ ಸಂಗನಬಸವಯ್ಯ
ಕ್ರಿಯಾನುಭಾವಿಗಳು ಮುಗ್ದರಲ್ಲ, ಜ್ಞಾನಾನುಭಾವಿಗಳು ಮುಗ್ಧರಲ್ಲ, ತತ್ವಾನುಭಾವಿಗಳು ಮುಗ್ಧರಲ್ಲ, ಶಿವಾನುಭಾವಿಗಳು ಮುಗ್ಧರಲ್ಲ, ಪರಮಾನುಭಾವಿಗಳು ಮುಗ್ಧರಲ್ಲ, ಮಹಾನುಭಾವಿಗಳು ಮುಗ್ಧರಲ್ಲ, ಮತ್ತಾರು ಮುಗ್ಧರೆಂದಡೆ ಮುಕ್ತಾಯಕ್ಕನಣ್ಣ ಆರೂಢನಜಗಣ್ಣ ಮುಗ್ಧ ಕಾಣಾ ಗುರುನಿರಂಜನ ಚನ್ನಬಸವಲಿಂಗಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಕಾಣಬಾರದ ಲಿಂಗ ಕೈಗೆ ಬಂದಿತ್ತಾಗಿ ಮಾಡಬಾರದ ಭಕ್ತಿಯ ಮಾಡುತಲಿರ್ದೆನು. ನಡೆಯಬಾರದ ನಡೆಯ ನಡೆವೆ, ಮತ್ತೊಂದನರಿಯೆ, ನೋಡಬಾರದ ನಡೆ ಕಣ್ಣಮುಂದೆ ಬಂದಿತ್ತಾಗಿ ಅದ್ವೈತನಡೆಯ ಕಾಣಲಿಲ್ಲ. ಗುರುನಿರಂಜನ ಚನ್ನಬಸವಲಿಂಗದಲ್ಲಿ ಕಷ್ಟಕರ್ಮದ ಬಟ್ಟೆಯ ಬೆಳಗಿನೊಳಗಿರ್ಪ ಹೊಟ್ಟೆಹೊರಕರ ಮಾತನೆಣಿಸಲಿಲ್ಲ.
--------------
ದೇಶಿಕೇಂದ್ರ ಸಂಗನಬಸವಯ್ಯ
ಕರ್ಮೇಂದ್ರಿಯಂಗಳೈದರ ತಿರುಳನುರುಹಿ ತನ್ನನರಿಯಬಲ್ಲಾತನೇ ಶರಣ. ವಿಷಯಂಗಳೈದರ ತಿರುಳನುರುಹಿ ತನ್ನನರಿಯಬಲ್ಲಾತನೇ ಶರಣ. ಜ್ಞಾನೇಂದ್ರಿಯಗಳೈದರ ತಿರುಳನುರುಹಿ ತನ್ನನರಿಯಬಲ್ಲಾತನೇ ಶರಣ. ವಾಯುಪಂಚಕಂಗಳ ತಿರುಳನುರುಹಿ ತನ್ನನರಿಯಬಲ್ಲಾತನೇ ಶರಣ. ಕರಣ ನಾಲ್ಕೊಂದರ ತಿರುಳನುರುಹಿ ತನ್ನನರಿಯಬಲ್ಲಾತನೇ ಶರಣ. ಇಂತಲ್ಲದೆ ಇವರ ತಿರುಳಿನೊಳು ಮರುಳುಗೊಂಡುರುಳುವ ಮಾನವರು ತಾವು ಶರಣರೆಂದು ನುಡಿದು ನಡೆವ ಸಡಗರವ ಕಂಡು ನಾಚಿತ್ತೆನ್ನ ಮನವು ಗುರುನಿರಂಜನ ಚನ್ನಬಸವಲಿಂಗದಲ್ಲಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ಕಾಲವನರ್ಪಿಸಿ ಕಾಲದೊಳಗಿರ್ದೆ ಕರ್ತುಗಳವಸರಕ್ಕೆ ಭೃತ್ಯನಾಗಿ. ಕರ್ಮವನರ್ಪಿಸಿ ಕರ್ಮದೊಳಗಿರ್ದೆ ಕಾರಣಕ್ಕೆ ಕಾರ್ಯನಾಗಿ. ಸ್ವಯವನರ್ಪಿಸಿ ಪರವೆಂದೆನಿಸಿರ್ದೆ ಸ್ಥಲವಿರ್ದುದಾಗಿ. ಗುರುನಿರಂಜನ ಚನ್ನಬಸವಲಿಂಗಕ್ಕೆ ಅರ್ಪಿಸುತಿರ್ದೆ ಅನ್ಯವನರಿಯದೆ ಆಯತವಾಗಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ಕತ್ತಲಾಗಿ ಹೋಯಿತ್ತು ನಿತ್ಯ ಸೂರ್ಯನಿಂದೆ. ಸತ್ಯವೆಂದಲ್ಲಿ ಮಿಥ್ಯ ಸಾಕಾರ ಸಂದಳಿಸಿ ಬೆಂದು ನಿಂದವು. ತಾಯಿ ತಂದೆಯಾಗಿ ನಿಂದ ನಿಲವ, ನಾನೆಂದು ಕಂಡು ಬದುಕುವೆನಯ್ಯಾ ನಿರಂಜನ ಚನ್ನಬಸವಲಿಂಗಾ ?
--------------
ದೇಶಿಕೇಂದ್ರ ಸಂಗನಬಸವಯ್ಯ
ಕೋಣನ ಹತ್ತಿ ನಡೆವ ಕರಿಯಸತ್ತಿಗೆಯ ಹಿರಿಯರು ನೀವು ಕೇಳಿರೊ, ನಿಮ್ಮ ದಾರಿ ಡೊಂಕು ಬಹಳ, ಹೊತ್ತುಳ್ಳಲ್ಲಿ ಹೋಗುವ ಪರಿಯಿನ್ನೆಂತೊ ? ಕೋಣನ ಉರುಹಿ, ಕೊಂಬು ಕಿತ್ತೊಗೆದು, ಸತ್ತಿಗೆಯ ಸುಟ್ಟು, ಹಾರುವನ ತಲೆಯ ಬೋಳಿಸಿ, ಊರ ದೇವತೆಯ ಕಡಿದು ನಿಂತುನೋಡಲು ನೆಲ ಒಣಗಿ, ಬಿಳಿಯ ದಾರಿ ಕಾಣಬಹುದು. ಮೆಲ್ಲಮೆಲ್ಲನೆ ದಾರಿಯ ಬಿಡದೆ ನಡೆದರೆ ಗುರುನಿರಂಜನ ಚನ್ನಬಸವಲಿಂಗದಲ್ಲಿ ಎರಡನೆಯವತಾರವೊಪ್ಪಿತ್ತು.
--------------
ದೇಶಿಕೇಂದ್ರ ಸಂಗನಬಸವಯ್ಯ
ಕಾಯದ ಬಣ್ಣವ ಸುಟ್ಟು ಮಾಡಿ ಕಡೆಗೆ ನಿಲ್ಲಬಲ್ಲರೆ ಮಾಹೇಶ್ವರ. ಮನದ ಬಣ್ಣವ ಕೆಡಿಸಿ ಮಾಡಿ ಕಡೆಗೆ ನಿಲ್ಲಬಲ್ಲರೆ ಮಾಹೇಶ್ವರ. ಭಾವದ ಬಣ್ಣವ ಅಳಿಸಿ ಮಾಡಿ ಕಡೆಗೆ ನಿಲ್ಲಬಲ್ಲರೆ ಮಾಹೇಶ್ವರ. ಗುರುನಿರಂಜನ ಚನ್ನಬಸವಲಿಂಗದಲ್ಲಿ ಹೊರೆಯಿಲ್ಲದಿರಬಲ್ಲರೆ ಆತನಚ್ಚ ಮಾಹೇಶ್ವರ.
--------------
ದೇಶಿಕೇಂದ್ರ ಸಂಗನಬಸವಯ್ಯ
ಕಾಲೊಳಗಿನ ಮುಳ್ಳ ಕಣ್ಣಿನಿಂದೆ ತೆಗೆಯಬಹುದು. ಕಣ್ಣೊಳಗಿನ ಮುಳ್ಳ ಕಾಲಲ್ಲಿ ತೆಗೆವ ಜಾಣರನಾರನು ಕಾಣೆ ಮೂರುಲೋಕದೊಳಗೆ. ಇದು ಕಾರಣ ಗುರುನಿರಂಜನ ಚನ್ನಬಸವಲಿಂಗಾ ನಿಮ್ಮ ಶರಣರು ಕಣ್ಣ ಮುಚ್ಚಿ ಕಾಲ ಮುಳ್ಳ ತೆಗೆವರು ಕಾಲಕೊಯ್ದು ಕಣ್ಣ ಮುಳ್ಳ ತೆಗೆವರು, ಮರಳಿ ನೋಡಿದರೆ ದೀಪದೊಳಡಗುವರು.
--------------
ದೇಶಿಕೇಂದ್ರ ಸಂಗನಬಸವಯ್ಯ
ಕಮಲದ ಬಂಡುಂಬ ಭೃಂಗ ಭೂಜ ರಜ ಹುಡಿಯ ಸೋಂಕಲಮ್ಮದು ನೋಡಾ. ಐದದು ನಿರಂಜನ ಅಪ್ರತಿಮ ಗಂಬ್ಥೀರ ಗುರುನಿರಂಜನ ಚನ್ನಬಸವಲಿಂಗ ನಿಮ್ಮ ಶರಣ.
--------------
ದೇಶಿಕೇಂದ್ರ ಸಂಗನಬಸವಯ್ಯ
ಕೊಟ್ಟುಕೊಂಡೆನೆಂಬುದೊಂದುಳ್ಳರೆ ಒಂದಕ್ಕೆ ಭಂಗ, ಕೊಡುಕೊಳ್ಳಿಯಳಿದುಳಿದರೆ ಎರಡಕ್ಕೆ ಬಂಗ. ಒಂದು ಭಂಗ ಭವಕ್ಕೆ ಬೀಜ, ಎರಡು ಭಂಗ ಲೀಲೆಗೇಡು, ಒಂದೆರಡರಿಯದೆ ಅಂದಂದಿಗಿತ್ತಡೆ ಅವಧಾನಿಸಿಕೊ ಗುರುನಿರಂಜನ ಚನ್ನಬಸವಲಿಂಗಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಕಂಡು ತಪ್ಪಿಸಿಕೊಂಡು ನಡೆವ ಗಮನಾಗಮನಂಗಳಂಗ, ಕಂಡು ತಪ್ಪಿಸಿಕೊಂಡು ನೋಡುವ ನೋಟದಂಗ, ಕಂಡು ತಪ್ಪಿಸಿಕೊಂಡು ಮಾಡುವ ಮಾಟದಂಗ, ಕಂಡು ತಪ್ಪಸಿಕೊಂಡು ಉಂಬುವ ಊಟದಂಗ, ಮತ್ತೆ ನಿರಂಜನ ಸತ್ಯಸಾವಧಾನದಂಗ ಸತ್ತು ಚಿತ್ತು ಆನಂದ ನಿತ್ಯಪರಿಪೂರ್ಣ ಲಿಂಗದಲ್ಲಿ ಶೇಷಾಂಗವದೆ.
--------------
ದೇಶಿಕೇಂದ್ರ ಸಂಗನಬಸವಯ್ಯ
ಕಾಲುಕಾಣಿಸಿಕೊಳ್ಳದೆ ನಡೆದು ನಿಂದನಯ್ಯಾ. ಕೈಯಕಾಣಿಸಿಕೊಳ್ಳದೆ ಮುಟ್ಟಿ ನಿಂದನಯ್ಯಾ. ಕಣ್ಣಕಾಣಿಸಿಕೊಳ್ಳದೆ ನೋಡಿ ನಿಂದನಯ್ಯಾ. ಎಡಬಲದ ಗುಂಜುಗಂಜಳಕ್ಕಡಿಯಿಡದೆ ಮಂಜುಳಮಯ ಗುರುನಿರಂಜನ ಚನ್ನಬಸವಲಿಂಗದಲ್ಲಿ ಸಮರಸವಾಗಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ಕಾಮವಿಲ್ಲ ಭಕ್ತಂಗೆ ಪರಸ್ತ್ರೀಯರ ಮೇಲೆ. ಕ್ರೋಧವಿಲ್ಲ ಭಕ್ತಂಗೆ ಗುರುಲಿಂಗಜಂಗಮದಲ್ಲಿ. ಲೋಭವಿಲ್ಲ ಭಕ್ತಂಗೆ ಹೊನ್ನು ಹೆಣ್ಣು ಮಣ್ಣಿನಲ್ಲಿ. ಮೋಹವಿಲ್ಲ ಭಕ್ತಂಗೆ ತನುಮನಧನದಲ್ಲಿ. ಮದವಿಲ್ಲ ಭಕ್ತಂಗೆ ಸಜ್ಜನಸದ್ಭಾವಿಗಳಲ್ಲಿ. ಮತ್ಸರವಿಲ್ಲ ಭಕ್ತಂಗೆ ಯಾಚಕರ ಮೇಲೆ. ಇಂತು ಷಡ್ಗುಣವಿರಹಿತನಾದ ಭಕ್ತನಲ್ಲಿ ಸನ್ನಿಹಿತನಾಗಿರುವ ನಮ್ಮ ಗುರುನಿರಂಜನ ಚನ್ನಬಸವಲಿಂಗ.
--------------
ದೇಶಿಕೇಂದ್ರ ಸಂಗನಬಸವಯ್ಯ
ಕಾಲಿಲ್ಲದ ನಡೆ, ಕೈಯಿಲ್ಲದ ಮುಟ್ಟು, ಕಣ್ಣಿಲ್ಲದ ನೋಟ, ಕರ್ಣವಿಲ್ಲದ ಕೇಳುವಿಕೆ, ನಾಸಿಕವಿಲ್ಲದ ವಾಸನೆ, ನಾಲಿಗೆಯಿಲ್ಲದ ನುಡಿ, ತಾನಿಲ್ಲದ ಸುಖ ಗುರುನಿರಂಜನ ಚನ್ನಬಸವಲಿಂಗಾ ನಿಮ್ಮ ಶರಣಲಿಂಗೈಕ್ಯವು.
--------------
ದೇಶಿಕೇಂದ್ರ ಸಂಗನಬಸವಯ್ಯ
ಕಣ್ಣಿಲ್ಲದ ಗುರುವಿನ ಕೈಯಿಂದೆ ಮಣ್ಣಿಲ್ಲದ ಮಗನಾಗಿ ತಾನೊಂದು ಕಣ್ಣ ಕೊಂಡು ಕಾವ್ಯನಾದ ಬಳಿಕ ಬಣ್ಣವಿಲ್ಲದ ಧಾನ್ಯವ ತಂದು ಚೆನ್ನಾಗಿ ಪಾಕವಮಾಡಿ ಮತ್ತಾರ ಕಾಣಗೊಡದೆ, ಸತ್ಯ ಭೋಜ್ಯಗಟ್ಟಿ ನಿತ್ಯವಾಗಿ ಕೊಟ್ಟು ಕೊಂಡು ಸುಖಿಸಿದರೆ ಗುರುನಿರಂಜನ ಚನ್ನಬಸವಲಿಂಗದಲ್ಲಿ ತಥ್ಯಪ್ರಸಾದಿಯೆಂಬೆ.
--------------
ದೇಶಿಕೇಂದ್ರ ಸಂಗನಬಸವಯ್ಯ
ಕೂಸುಳ್ಳ ವೇಶ್ಯೆ ಕಾಸಿನಾಸೆಗೆ ಕಾವನಕೇಳಿಗೆ ವಿಟನಿಗೆ ನಿಂದಲ್ಲಿ ಸಕಲ ವಿಭ್ರಮದ ಬೆಡಗು ಮೂರುಭಾಗವಾಗಿಪ್ಪುದು. ಭುಜಂಗನ ರತಿಗೆ ರತಿತಪ್ಪಿದ ರತಿಗೆ ಹಿತವಪ್ಪಲರಿಯದು. ವ್ರತಗೇಡಿಗೆ ಸತ್ಯವಹುದೆ ? ಈ ಪರಿವಿಡಿದಾಡುವ ಮಾಟ ಕೋಟಲೆಗೆ ನೀಟು ಮನದೊಡೆಯ ಗುರುನಿರಂಜನ ಚನ್ನಬಸವಲಿಂಗ ಸಾಕ್ಷಿ ತಮ್ಮ ತಮ್ಮ ಭಕ್ತಿಬೇಟಕ್ಕೆ.
--------------
ದೇಶಿಕೇಂದ್ರ ಸಂಗನಬಸವಯ್ಯ
ಕರಸ್ಥಲದಲಿಂಗದೊಳು ಮನವ ಮುಳುಗಿಸಲರಿಯದೆ, ಮಲತ್ರಯದ ಬೊಂಪಾಸದಲ್ಲಿ ಮುಳುಗಿ ಏಳಲಾರದೆ ಹೊರಳಾಡುವ ದುರ್ಗತಿಗಳಿಗಿನ್ನಾವ ಸ್ಥಲಸಂಬಂಧವಪ್ಪದು ಹೇಳಾ ! ಈ ಧರ್ಮಕರ್ಮಗಳನೆನ್ನತ್ತ ತೋರದಿರಾ ಗುರುನಿರಂಜನ ಚನ್ನಬಸವಲಿಂಗಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಕುಲಮದದಲ್ಲಿ ನಿಷ್ಠೆಯಿಲ್ಲ, ಛಲಮದದಲ್ಲಿ ನಿಷ್ಠೆಯಿಲ್ಲ, ಧನಮದದಲ್ಲಿ ನಿಷ್ಠೆಯಿಲ್ಲ, ರೂಪುಮದದಲ್ಲಿ ನಿಷ್ಠೆಯಿಲ್ಲ, ಯೌವನಮದದಲ್ಲಿ ನಿಷ್ಠೆಯಿಲ್ಲ, ವಿದ್ಯಾಮದದಲ್ಲಿ ನಿಷ್ಠೆಯಿಲ್ಲ, ರಾಜಮದದಲ್ಲಿ ನಿಷ್ಠೆಯಿಲ್ಲ, ತಪಮದದಲ್ಲಿ ನಿಷ್ಠೆಯಿಲ್ಲ. ಮತ್ತೆ ಹಿಡಿತ ಬಡಿತಗಳಲ್ಲಿ ನಿಷ್ಠೆಯಿಲ್ಲದೆ ಪಡೆದು ಹಿಡಿದು ಬಂದ ನಿಷ್ಠೆ ನಿಜಮಹೇಶ್ವರನೆಂದರೆ ಅಪಹಾಸ್ಯ ಕುರುಹಿನೊಳಗೆ ಇಂತಲ್ಲ ಶರಣ ಅಷ್ಟಮದ ನಿಷ್ಠೆ ನಿಜೇಷ್ಠಲಿಂಗಸನ್ನಿಹಿತ ಗುರುನಿರಂಜನ ಚನ್ನಬಸವಲಿಂಗದಲ್ಲಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ಕಾಡಡವಿಯೊಳೋರ್ವನೆ ದೆಸೆಯಗಾಣದೆ ಅಸುವಳಿವ ಕಾಲದಲ್ಲಿ, ಒಸೆದೋರ್ವ ಬಂದು ಬಾ ಬಾ ಎಂದೆತ್ತಿ ಪೊಳಲುಬಳಗದ ಮಧ್ಯ ನಿಲಿಸುವಂತೆ, ಎನ್ನಾದಿಮಧ್ಯವಸಾನವಳಿದು, ಭವಾರಣ್ಯ ಬ್ಥೀತಿತ್ರಯದೊಳಿರ್ಪ ಆತ್ಮನನು ಅಭಯದಿಂದೆತ್ತಿ, ಅರಿ ಸಕಲ ಪರಿಸಿ ತಲೆದಡಹಿ, ಮೋಹದ ಮಾತಿನಿಂ ಕೈಯೊಳಗೆ ಕೈಯನಿತ್ತು ಕರುಣಿಸಿದ ಒಳಹೊರಗೆ ಸಹಜದಲ್ಲಿ ನಿರಂಜನ ಚನ್ನಬಸವಲಿಂಗವೆಂಬ ಸದ್ಗುರುನಾಥನು.
--------------
ದೇಶಿಕೇಂದ್ರ ಸಂಗನಬಸವಯ್ಯ
ಕಾಯ ದಣಿವರಿಯದು; ಮಾಡಿ ಮಾಡಿ ಮುಂದೆ ಉಲಿವುದು. ಮನ ದಣಿವರಿಯದು; ಮಾಡಿ ಮಾಡಿ ಮುಂದೆ ಉಲಿವುದು. ಭಾವ ದಣಿವರಿಯದು; ಮಾಡಿ ಮಾಡಿ ಮುಂದೆ ಉಲಿವುದು. ಸರ್ವಾಂಗ ದಣಿವರಿಯದು ಮಾಡಿ ಮಾಡಿ ಗುರುನಿರಂಜನ ಚನ್ನಬಸವಲಿಂಗದಲ್ಲಿ ತಾನೆಯಾಗಿ.
--------------
ದೇಶಿಕೇಂದ್ರ ಸಂಗನಬಸವಯ್ಯ

ಇನ್ನಷ್ಟು ...