ಅಥವಾ
(220) (73) (20) (3) (8) (5) (0) (0) (17) (4) (3) (15) (0) (0) ಅಂ (31) ಅಃ (31) (141) (1) (59) (8) (0) (12) (0) (14) (0) (0) (0) (0) (1) (0) (0) (66) (0) (14) (5) (89) (68) (1) (50) (40) (85) (1) (5) (0) (34) (11) (24) (1) (81) (57) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಆದಿಭಕ್ತಿವಿಡಿದು ಮೆಲ್ಲಮೆಲ್ಲನೆ ಸಾದ್ಥಿಸಿ ಕೈಗೊಟ್ಟ ಪರಿಯ ನೋಡಾ ! ಹಾದಿ ಬಟ್ಟೆಯ ಸಾಧಕರತ್ತ ಸವೆಯದೆ ಮೂದೇವರ ಮಾಟದೊಳಗಿರ್ದು ಕೂಟಕೈದಿದ ಗುರುನಿರಂಜನ ಚನ್ನಬಸವಲಿಂಗದಲ್ಲಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ಆಡಾಡಿ ಉಂಡುಹೋಗುವರ ನಾಡಸಂಪನ್ನರ ಮಾಡಿಟ್ಟರೆ ನೋಡ ಬಂದವರನುವನವರೆತ್ತ ಬಲ್ಲರಯ್ಯಾ? ಬಾ ಎನ್ನ ಕೂಡಿ ಉಂಡು ಕುಲವ ನೋಡಯ್ಯಾ ನಿಮ್ಮಲ್ಲಿ ಗುರುನಿರಂಜನ ಚನ್ನ ಬಸವಲಿಂಗಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಆಚಾರಲಿಂಗದೊಳಗಿಪ್ಪೆವೆಂಬರು ಪೃಥ್ವಿಯ ಕತ್ತಲೆಯೊಳಡಗಿಹರು. ಗುರುಲಿಂಗದೊಳಗಿಪ್ಪೆವೆಂಬರು ಅಪ್ಪುವಿನ ಕತ್ತಲೆಯೊಳಡಗಿಹರು. ಶಿವಲಿಂಗದೊಳಗಿಪ್ಪೆವೆಂಬರು ಅಗ್ನಿಯ ಕತ್ತಲೆಯೊಳಡಗಿಹರು. ಜಂಗಮಲಿಂಗದೊಳಗಿಪ್ಪೆವೆಂಬರು ವಾಯುವಿನ ಕತ್ತಲೆಯೊಳಡಗಿಹರು. ಪ್ರಸಾದಲಿಂಗದೊಳಗಿಪ್ಪೆವೆಂಬರು ಆಕಾಶದ ಕತ್ತಲೆಯೊಳಡಗಿಹರು. ಮಹಾಲಿಂಗದೊಳಗಿಪ್ಪೆವೆಂಬರು ಆತ್ಮನ ಕತ್ತಲೆಯೊಳಡಗಿಹರು. ಇವರನೆಂತು ಶರಣೈಕ್ಯರೆನ್ನಬಹುದು ಹುಸಿಡಂಭಕ ಹೇಸಿಮಾನವರ ? ಗುರುನಿರಂಜನ ಚನ್ನಬಸವಲಿಂಗಾ
--------------
ದೇಶಿಕೇಂದ್ರ ಸಂಗನಬಸವಯ್ಯ
ಆಹಾ ಎನ್ನಪುಣ್ಯದ ಫಲ ! ನಿರಾಕಾರ ಗುರುವೆನಗೆ ಸಾಕಾರವಾಗಿ ಬಂದುದು. ಆಹಾ ಎನ್ನ ಬಹುಜನ್ಮದ ತಪಸ್ಸಿನ ಫಲ ! ನಿರವಯಾನಂದ ನಿಜವೆನಗೆ ಸಾಧ್ಯವಾದುದು. ಆಹಾ ಎನ್ನ ಭಾಗ್ಯದ ನಿದ್ಥಿಯೆನಗಿತ್ತ ನಿರಂಜನ ಚನ್ನಬಸವಲಿಂಗವೆಂಬ ಸದ್ಗುರುದೇವನು.
--------------
ದೇಶಿಕೇಂದ್ರ ಸಂಗನಬಸವಯ್ಯ
ಆಣವಮಲವ ಕರುಣಜಲದಿಂದೆ ತೊಳೆದು ಸದ್ಗುರುಲಿಂಗವೆನ್ನ ಅಂಗದಲ್ಲಿರಲು, ಸಕಲಕ್ರಿಯಂಗಳೆಲ್ಲ ಸತ್ಕ್ರೀಯಾಸ್ವರೂಪವಾಗಿ ಕಾಣಿಸುತಿರ್ದವು. ಮಾಯಾಮಲವ ವಿನಯಜಲದಿಂದೆ ತೊಳೆದು ಚಿದ್ಗುರುಲಿಂಗವೆನ್ನ ಪ್ರಾಣದಲ್ಲಿರಲು, ಸಕಲಜ್ಞಾನಂಗಳೆಲ್ಲ ಸುಜ್ಞಾನಸ್ವರೂಪವಾಗಿ ಕಾಣಿಸುತಿರ್ದವು. ಕಾರ್ಮಿಕಮಲವ ಸಮತಾಜಲದಿಂದೆ ತೊಳೆದು ಆನಂದಗುರುಲಿಂಗವೆನ್ನ ಭಾವದಲ್ಲಿರಲು, ಸಕಲಭಾವಂಗಳೆಲ್ಲ ಮಹಾನುಭಾವವಾಗಿ ಕಾಣಿಸುತಿರ್ದವು. ಇಂತು ಸತ್ಕ್ರಿಯಾ ಸಮ್ಯಕ್‍ಜ್ಞಾನ ಮಹಾನುಭಾವ ಸನ್ನಿಹಿತನಾಗಿ ಒಳಹೊರಗೆ ಪರಿಪೂರ್ಣ ಪ್ರಕಾಶಮಯವಾಗಿರ್ದೆನು ಕಾಣಾ ಗುರುನಿರಂಜನ ಚನ್ನಬಸವಲಿಂಗಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಆಚಾರವನರಿಯದ ನಡೆ ದುರ್ನಡೆ. ಆಚಾರವನರಿಯದ ನೋಟ ಭವದಕೂಟ. ಆಚಾರವನರಿಯದ ಅಂಗ ವಿಚಾರಭಂಗ. ಆಚಾರವನರಿಯದ ಅನುಭಾವ ಅಪ್ರಮಾಣ ದುರ್ಭಾವ. ಇದು ಕಾರಣ ಗಣಕೂಟಕೆ ಆಚಾರವೇಬೇಕು ಕಾಣಾ ಚನ್ನ ಕಾಯಮನಭಾವಪ್ರಿಯ ಮಹಾಲಿಂಗದಲ್ಲಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ಆಚಾರಶೂನ್ಯ ಅಂಗ ಗುರುದ್ರೋಹಿ ಮಾಡಲಾಗದು ಭಕ್ತಿಯ. ಆಚಾರಶೂನ್ಯ ಮನ ಲಿಂಗದ್ರೋಹಿ ಮಾಡಲಾಗದು ಪೂಜೆಯ. ಆಚಾರಶೂನ್ಯ ಭಾವ ಜಂಗಮದ್ರೋಹಿ ಮಾಡಲಾಗದು ದಾಸೋಹವ. ಆಚಾರತ್ರಯವಿರಹಿತವಾದ ಅನಾಚಾರ ಭ್ರಷ್ಟರುಗಳ ಶ್ರೇಷ್ಠರೆಂದು ಪೂಜೆಯ ಮಾಡಿದರೆ ಭವತಪ್ಪದು ಕಾಣಾ ಗುರುನಿರಂಜನ ಚನ್ನಬಸವಲಿಂಗಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಆದ್ಯರನುಭಾವವನರಿದು ಕಂಡೆನೊಂದು ಮುಖದಲ್ಲಿ, ವೇದ್ಯರನುಭಾವವನರಿದು ಕಂಡೆನೊಂದು ಮುಖದಲ್ಲಿ, ಸಾಧ್ಯರನುಭಾವವನರಿದು ಕಂಡೆನೊಂದು ಮುಖದಲ್ಲಿ, ನೂತನ ಪುರಾತನರು ಕೂಡಿ ಸೋತು ಮಾಡಿದನುಭಾವದಲ್ಲಿ ಪರಮಸುಖಿಯಾಗಿರ್ದೆನು ಗುರುನಿರಂಜನ ಚನ್ನಬಸವಲಿಂಗಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಆಳಿದೊಡೆಯರು ಮೇಳೈಸಿ ಕೆಳಗೆ ಬಂದಲ್ಲಿ ನಾಳೆಂದರೆ ಹಾಳಾಗಿ ಹೋಯಿತ್ತೆನ್ನ ಪತಿಭಾವದ ಬಾಳುವೆ. ಅಳಿಯಾಸೆಯೆಂಬ ಸುಳುಹೆನ್ನ ಕೆಡಿಸಿತ್ತು, ಎನಗೆಂತು ಭಕ್ತಿಸಂಭವಿಸುವದು ! ಎನಗೆಂತು ಯುಕ್ತಿ ಸಂಭವಿಸುವದು ! ತಪ್ಪೆನ್ನದು ತಪ್ಪೆನ್ನದು ಬಟ್ಟೆಗೆಟ್ಟು ಬಿದ್ದೆ ನಿಮ್ಮೊಳಗೆ ಗುರುನಿರಂಜನ ಚನ್ನಬಸವಲಿಂಗಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಆಚಾರವಿಲ್ಲದಂಗ, ವಿಚಾರವಿಲ್ಲದ ಮನ, ಸಂಬಂಧವರಿಯದ ಪ್ರಾಣ, ಪರಿಣಾಮವರಿಯದ ಭಾವ, ಈ ಚತುರ್ವಿಧದಲ್ಲಿರ್ದ ಚಾಪಲ್ಯರು ಸಲ್ಲರಯ್ಯಾ ಗುರುನಿರಂಜನ ಚನ್ನಬಸವಲಿಂಗದಲ್ಲಿ ಶರಣಸ್ಥಲಕ್ಕೆ.
--------------
ದೇಶಿಕೇಂದ್ರ ಸಂಗನಬಸವಯ್ಯ
ಆರಾರು ಸಕಲಸನ್ನಿಹಿತರರಿತಕ್ಕಗೋಚರ ಪರಶಿವಲಿಂಗವನು, ಆರೈದು ಅಂಗಪ್ರಾಣಾತ್ಮ ಸಂಗಸಮರಸಾನಂದ ಶರಣಂಗೆ ಒಂದೂ ಆಶ್ಚರ್ಯ ತೋರದು, ಅದೇನು ಕಾರಣವೆಂದೊಡೆ, ತಾನೆ ಹರಿ ವಿದ್ಥಿ ಸುರಾದಿ ಮನುಮುನಿ ಸಕಲಕ್ಕೂ ಆಶ್ಚರ್ಯವಾದ ಕಾರಣ. ಅಂತಪ್ಪ ಶರಣನೇ ಶಿವನಲ್ಲದೆ ಬೇರಿಲ್ಲ ಕಾಣಾ. ಅದಲ್ಲದೆ ಮತ್ತೆ ಗಿರಿಗೋಪುರ ಗಂವರ ಶರದ್ಥಿತಾಣ ಸ್ಥಾವರಕ್ಷೇತ್ರ ನರಕುಶಲ ಕುಟಿಲ ಭೂತಾದಿ ಕಿಂಚಿತಕ್ಕಾಶ್ಚರ್ಯವೆಂಬ ಬಾಲಮರುಳ ಅಜ್ಞಾನಿಗಳಿಗೆ ಲಿಂಗಶರಣರೆಂಬ ನಾಮ ಬಹು ಭಾರ ಕಾಣಾ ಗುರುನಿರಂಜನ ಚನ್ನಬಸವಲಿಂಗಕ್ಕೆ.
--------------
ದೇಶಿಕೇಂದ್ರ ಸಂಗನಬಸವಯ್ಯ
ಆಡಬಂದ ಮೂರ್ತಿಗೆ ಕೂಡಿ ಮಾಡಬಲ್ಲವರಾರಯ್ಯಾ ? ಮಾತು ನೀತಿಯ ಕೇಳಿ, ಜಾತಿ ಮೂಲ ಜಂಜಡವೊಂದೆ ಮಾಡಿ ಲಾಭವನುಂಬ ಹಾದಿಯ ಹಿರಿಯರಂತಿರಲಿ ನೀಡಿಯಾಡದೆ ಕೊಟ್ಟು ಕಾಣುವ ದಿಟ್ಟಗಲ್ಲದೆ ಬಟ್ಟೆಗಳ್ಳರಿಗೆಂತೊಲಿವ ನಮ್ಮ ಗುರುನಿರಂಜನ ಚನ್ನಬಸವಲಿಂಗ ?
--------------
ದೇಶಿಕೇಂದ್ರ ಸಂಗನಬಸವಯ್ಯ
ಆಸೆಯುಳ್ಳರೆ ಭಕ್ತನೆಂಬೆ, ರೋಷವುಳ್ಳರೆ ಮಹೇಶ್ವರನೆಂಬೆ, ಆಲಸ್ಯವುಳ್ಳರೆ ಪ್ರಸಾದಿಯೆಂಬೆ, ಹಿಂಸೆಯುಳ್ಳರೆ ಪ್ರಾಣಲಿಂಗಿಯೆಂಬೆ, ಸಂಸಾರವುಳ್ಳರೆ ಶರಣನೆಂಬೆ, ಸಂಗವುಳ್ಳರೆ ಐಕ್ಯನೆಂಬೆ. ಇಂತಿವು ಶೂನ್ಯವಾದರೆ ಆರೂಢನೆಂಬೆ ಗುರುನಿರಂಜನ ಚನ್ನಬಸವಲಿಂಗದ ಸಂಗಕ್ಕೆ ಬೇಕಾದ ಕಾರಣ ಬೇಕೆಂಬ ಶರಣಂಗೆ.
--------------
ದೇಶಿಕೇಂದ್ರ ಸಂಗನಬಸವಯ್ಯ
ಆದಿಮುಖದಿಂದೆ ಅಂಗ ಮನ ಪ್ರಾಣಂಗಳಲ್ಲಿ ಅನುಭಾವಿಯಾಗಿ ಅರಿದುಂಬ ಘನವನರಿಯದೆ, ಆ ಮಹಾಘನಪ್ರಕಾಶವ ಭಿನ್ನವಿಟ್ಟು ಕಂಡು ಕೂಡಿ ಸುಖಿಸೆನೆಂಬ ಅಪಶಬ್ದ ನುಡಿಯ ಅಜ್ಞಾನಿಗಳಿಗತ್ತತ್ತಲಾದ ಗುರುನಿರಂಜನ ಚನ್ನಬಸವಲಿಂಗ.
--------------
ದೇಶಿಕೇಂದ್ರ ಸಂಗನಬಸವಯ್ಯ
ಆಡಿ ದಣಿವರಿಯವಯ್ಯಾ ಎನ್ನ ಕಾಲುಗಳು, ಮಾಡಿ ದಣಿವರಿಯವಯ್ಯಾ ಎನ್ನ ಕೈಗಳು, ನೋಡಿ ದಣಿವರಿಯವಯ್ಯಾ ಎನ್ನ ಕಂಗಳು, ಹಾಡಿ ದಣಿವರಿಯದಯ್ಯಾ ಎನ್ನ ಜಿಹ್ವೆಯು. ಕೇಳಿ ದಣಿವರಿಯವಯ್ಯಾ ಎನ್ನ ಶ್ರೋತೃ, ಬೇಡಿ ದಣಿವರಿಯವಯ್ಯಾ ಗುರುನಿರಂಜನ ಚನ್ನಬಸವಲಿಂಗ ನಿಮ್ಮ ಶರಣರೊಲವೆ ಎನ್ನಭಾವ.
--------------
ದೇಶಿಕೇಂದ್ರ ಸಂಗನಬಸವಯ್ಯ
ಆಸೆಗೆ ಹುಟ್ಟಿದ ಭಾಷೆಹೀನ ವೇಷಧಾರಿಗಳು ಸಹಜವನೆತ್ತ ಬಲ್ಲರಯ್ಯಾ ? ಭಕ್ತಿ ಯುಕ್ತಿ ವಿರಕ್ತಿಯ ಪಥವನರಿಯದೆ ಸತ್ತು ಹುಟ್ಟುವ ಮುಕ್ತಿಗೇಡಿಗಳೆತ್ತ ಬಲ್ಲರಯ್ಯಾ ಲಿಂಗದ ನಿಜವ ? ಅರ್ಥವ ಹಿಡಿದು, ಅರಿವ ಮರೆದು, ಕರ್ತುಗಳಾಪ್ಯಾಯನವರಿಯದ ಅನುಮಾನಭರಿತ ಅಧಮರುಗಳೆತ್ತ ಬಲ್ಲರಯ್ಯಾ ಗುರುನಿರಂಜನ ಚನ್ನಬಸವಲಿಂಗ ಶರಣರ ಘನವ.
--------------
ದೇಶಿಕೇಂದ್ರ ಸಂಗನಬಸವಯ್ಯ
ಆಕಾಶದ ಬಣ್ಣವನೋಕರಿಸಿ ತೋರಲು ತಾಕಲಾರದು ತಾರೇಂದು ರವಿ ಮೇಘ ಗಡಣವನುಳಿದು. ತನುಮನಪ್ರಾಣಭಾವಶೂನ್ಯ ಗುರುನಿರಂಜನ ಚನ್ನಬಸವಲಿಂಗ.
--------------
ದೇಶಿಕೇಂದ್ರ ಸಂಗನಬಸವಯ್ಯ
ಆಕಾಶದಲ್ಲಿರ್ದ ತಾವರೆಯೊಳಗಿನ ಮುತ್ತಿನ ನೀಲದ ಮುಮ್ಮೊನೆಯೊಳು ಥಳಥಳನೆ ಹೊಳೆವ ಪರಮ ಪುರುಷನ ನೆರೆದು ಸುಖಿಸಬಲ್ಲ ಮಹಿಮನೆ ಪ್ರಾಣಲಿಂಗಿ ಕಾಣಾ ಗುರುನಿರಂಜನ ಚನ್ನಬಸವಲಿಂಗಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಆದಿ ಮಧ್ಯ ಅವಸಾನವನರಿದು ಅಪ್ರತಿಮಲಿಂಗಸನ್ನಿಹಿತನಾದ ಶರಣ ಒಳಗೆಂಬ ಕಳವಳವನರಿಯ. ಪಂಚಾಚಾರಸ್ವರೂಪ ಕಂಗಳು ಹಿಂಗದಿರ್ದುದಾಗಿ ಹೊರಗೆಂಬ ಸಟೆಭಾವ ದಿಟವಿಲ್ಲ. ಪ್ರಾಣಲಿಂಗವೇದಿ ಪರಿಪೂರ್ಣ ತಾನಾಗಿ ಕಂಡರ್ಪಿಸಿಕೊಂಡು ಸುಖಿಸಬೇಕೆಂಬ ಸಂಕಲ್ಪ ಸಂವಿತ್ತನಲ್ಲ. ಗುರುನಿರಂಜನ ಚನ್ನಬಸವಲಿಂಗವೆಂಬ ಅಖಂಡಪ್ರಸಾದಕ್ಕೆ ಅಂಗವಾಗಿರ್ದ ಅನುಪಮಪ್ರಸಾದಿ ಶರಣ.
--------------
ದೇಶಿಕೇಂದ್ರ ಸಂಗನಬಸವಯ್ಯ
ಆತ್ಮನೇ ಲಿಂಗವೆಂದು ಕಂಡುಂಬ ಬಹಿರ್ಗತ್ತಲೆನುಡಿಯ ಭಾವಿಸರು. ಅದೇಕೆಂದೊಡೆ, ಅಂಗದಲ್ಲಿ ಇಷ್ಟಲಿಂಗ ಪ್ರಕಾಶಿಸುತ್ತಿಹುದಾಗಿ. ಇಟ್ಟು ಮಾಡಿ ಕೆಟ್ಟುಂಬ ಅಂತರಗತ್ತಲೆಂದು ನಡೆಯ ಭಾವಿಸರು. ಅದೇಕೆಂದೊಡೆ, ಮನ ಪ್ರಾಣಲಿಂಗದಲ್ಲಿ ತರಹರವಾದುದಾಗಿ. ಯೋಗಚರಿಯ ಭೋಗಿಗಳ ತೂಗಿ ಭಾವಿಸರು. ಅದೇಕೆಂದೊಡೆ, ಶಿವಯೋಗಭೋಗತೃಪ್ತರಾದ ಕಾರಣ. ಗುರುನಿರಂಜನ ಚನ್ನಬಸವಲಿಂಗಾ, ನಿಮ್ಮ ಪ್ರಸಾದಿಯ ಕಾರ್ಯಕಾರಣ ತಿಳಿಯಬಾರದಾರಿಗೆಯೂ.
--------------
ದೇಶಿಕೇಂದ್ರ ಸಂಗನಬಸವಯ್ಯ
ಆದಿಯಿಂದ ಹುಟ್ಟಿ ಅನಾದಿಯ ಹಿಡಿದು ನಡೆಯಬಲ್ಲೆವೆಂಬ ಹಿರಿಯರು ಕೇಳಿಭೋ. ತನುತ್ರಯ ಮನತ್ರಯ ಭಾವತ್ರಯ ಸಧರ್ಮದ್ರವ್ಯವ ಬಳಸದೆ ನವವಿಧಭಕ್ತಿಯಿಂದೆ ಸೇವಿಸಿ ಸುಖಭರಿತನಾಗಲರಿಯದೆ, ದಾಸೋಹಭಕ್ತಿಯ ಮಾಡುವೆನೆಂದು ಹೇಸದೆ ಅಧರ್ಮ ಅವಿಚಾರಾದಿಗಳ ಬಗೆಬಗೆಯಿಂದೆ ಬಣ್ಣಿಸಿ, ಕಾಸುಕಳಚಿಸಿ ಕೈಯಾಂತುಕೊಂಡು ಧೂಳಮೇಳ ಸಮೇತ ಭಕ್ತಿಯೆಂದು ಮಾಡುವದು ಶಿವ ನುಡಿದಿಲ್ಲ ಗುರುವಾಕ್ಯವಿಲ್ಲ. ಗುರುಲಿಂಗವರಿಯದ ಸಂತಸುಖಿಗಳ ಭಕ್ತಿ. ಆ ಭಕ್ತಿ ಅಯೋಗ್ಯ ಕಾಣಾ ನಿಮ್ಮ ನಿಲುವಿಗೆ ಗುರುನಿರಂಜನ ಚನ್ನಬಸವಲಿಂಗಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಆಕಾರ ನಿರಾಕಾರವಾಗಿ ಸಾಕಾರ ಸನ್ನಿಹಿತನಾದ ಸದಮಲಶರಣನ ಪರಮಶಾಂತಿಯ ಮುಂದೆ-ಹಿಂದೆ, ಬಲ-ಎಡ, ಮೇಲೆ-ಕೆಳಗೆ, ಕಿಕ್ಕಿಂದವಾಗಿ ನಿರಾಕಾರಭಕ್ತಿ ಸಾಕಾರಸದಾನಂದವಾಗಿ, ಉಲಿ ಉಲಿದಾಡುತಿರ್ದಿತ್ತು, ಗುರುನಿರಂಜನ ಚನ್ನಬಸವಲಿಂಗ ಸನ್ನಿಹಿತ.
--------------
ದೇಶಿಕೇಂದ್ರ ಸಂಗನಬಸವಯ್ಯ
ಆಸೆಗೆ ವೇಷವಹೊತ್ತು ಅಷ್ಟಮದವೇ ಅಂಗವಾಗಿ, ಪಂಚಸೂತಕವೆ ಪ್ರಾಣವಾಗಿ, ವಂಚನೆಯೇ ಮುಖವಾಗಿ, ತಾನೊಂದು ಕಾಯನಾಗಿ ಮಾಡುವ ಮಾಟ ಭವದ ಬೇಟ. ಈ ಗತಿ ದುರ್ಗತಿ, ಸ್ಥಲನಾಮ ಸಲ್ಲದು ಕಾಣಾ ಗುರುನಿರಂಜನ ಚನ್ನಬಸವಲಿಂಗಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಆಚಾರಲಿಂಗಕ್ಕೆ ಅಂಗವಾದ ಅನುಪಮ ಶರಣನ ಕಂಡರೆ ಪೂರ್ಣೇಂದುವಿಂಗಿದಿರಗಡಲದಂತಾಯಿತ್ತೆನ್ನ ತನು; ರವಿಬರವಿಂಗರಳಿದ ಪದುಮದಂತಾಯಿತ್ತೆನ್ನ ಹೃದಯ; ಮೇಘದರ್ಶನಸುಖದ ಸಿಖಿಯಂತಾಯಿತ್ತೆನ್ನ ಗಮನಗತಿ; ಚಂಪಕದರಳಿಂಗೆರಗಿದ ಭ್ರಮರದಂತಾಯಿತ್ತೆನ್ನಭಾವ; ಗುರುನಿರಂಜನ ಚನ್ನಬಸವಲಿಂಗ ಸನ್ನಿಹಿತ.
--------------
ದೇಶಿಕೇಂದ್ರ ಸಂಗನಬಸವಯ್ಯ
ಆಡುವರಯ್ಯಾ ಆಚಾರವನಳಿದು, ನೋಡುವರಯ್ಯಾ ಶಿವರತಿಯ ಮರದು, ಮಾಡುವರಯ್ಯಾ ವಂಚನೆಯ ನೆರದು ಬೇಡುವರಯ್ಯಾ ಮನದೊಳು ಮರದು, ನೆಟ್ಟನೆ ಕೂಡುವರಯ್ಯಾ ಮಲತ್ರಯಮೋಹದೊಳು ಹೇಳುವರಯ್ಯಾ ಲಿಂಗಶರಣರೆಂದು, ಇಂತಪ್ಪ ಕಾಳಕೂಳರಿಗೆ ಸಚ್ಚಿದಾನಂದ ಪರಶಿವಾಂಗ ಶರಣರೆಂತೆನ್ನಬಹುದು ಗುರುನಿರಂಜನ ಚನ್ನಬಸವಲಿಂಗಾ?
--------------
ದೇಶಿಕೇಂದ್ರ ಸಂಗನಬಸವಯ್ಯ

ಇನ್ನಷ್ಟು ...