ಅಥವಾ
(220) (73) (20) (3) (8) (5) (0) (0) (17) (4) (3) (15) (0) (0) ಅಂ (31) ಅಃ (31) (141) (1) (59) (8) (0) (12) (0) (14) (0) (0) (0) (0) (1) (0) (0) (66) (0) (14) (5) (89) (68) (1) (50) (40) (85) (1) (5) (0) (34) (11) (24) (1) (81) (57) (0)

ಪದದಿಂದ ಪ್ರಾರಂಭವಾಗುವ ವಚನಗಳು:

ರಾಜ್ಯವಿರಹಿತ ರಾಜ, ರಾಜವಿರಹಿತ ರಾಜ್ಯ, ರಾಜತ್ವವಿದೇನೋ? ಊರುಗಳ ಸಂದೋಹ ಬೇರೆ ಸೀಮೆ ನಾಮಗಳು ಬೇರೆದೋರಿ, ಹಸಿಯುರಿಯೊಳಗೆ ಬೆಸಿಗೆಗೊಂಡ ಮಸಿಮನದಾಸೆಗಳ ದೆಸೆದೆಸೆಭಾವದ ಯುದ್ಭವ ನೋಡಾ. ಸೋಲು ಗೆಲುವೆಂಬ ರಣಭೂಮಿಯಲ್ಲಿ ಕಣ್ಣಿಲಿ ನೋಡಿ ಕಾಲಗೆಡುವಲ್ಲಿ ಸಕಲಾಯುಧವು ನಗುತಿರ್ದವು ನೋಡಾ. ಬದುಕು ಬದುಕುರಿ ಕಾಲಕಾಲ ಬಂದು ನಿಂದು ಹೊಂದುವ ಭಾವ ಬೆರೆಯದೆ ಸಂದೇಹದೊಳಗೆ ಸಮಾಪ್ತಿ ನೋಡಿ ನೋಡಿ ನೋಡಿ ಗುರುನಿರಂಜನ ಚನ್ನಬಸವಲಿಂಗವಾದಡೆ.
--------------
ದೇಶಿಕೇಂದ್ರ ಸಂಗನಬಸವಯ್ಯ
ರಾಜನ ಭೂಮಿಯಲ್ಲಿ ಗ್ರಾಮ ಕ್ಷೇತ್ರ ಪ್ರಬಲಿತವಾಗಿ ಜನರು ಸುಖಿಸಿದರೆ ಭಿನ್ನವೆಲ್ಲಿಹದೋ! ಪರಿಣಾಮವಲ್ಲದೆ ಪರಶಿವಾಂಶಿಕರು ಅಂಗವಿಡಿದು ಸರ್ವಾಚಾರಸಂಪತ್ತಿನೊಳಗಿರ್ದರೆ ಭಿನ್ನವೆಲ್ಲಿಹದೊ, ಗುರುನಿರಂಜನ ಚನ್ನಬಸವಲಿಂಗಕ್ಕೆ ಪತ್ನಿಯ ಸೌಭಾಗ್ಯಸುಖ ಪತಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ರಾಜಯೋಗಿ ಶಿವಯೋಗಿಗಳೆಂದು ಹೆಸರಿಟ್ಟು ನುಡಿವರು. ಆ ಭಾವವನರಿಯದ ಉಪಭ್ರಾಂತರುಗಳ ಮಾತು ಸೊಗಸದಯ್ಯಾ. ಪುಚ್ಚಗುಂಡಾಟದ ಬಾಲರಂತಿರಲಿ, ಅನಬಹುದು ಸರ್ವಾಚಾರಸಂಪತ್ತಿನ ಲೋಲರಿಗೆ ರಾಜಯೋಗಿಗಳೆಂದು. ಅನಬಹುದು ಪರಿಪೂರ್ಣಜ್ಞಾನಾನಂದ ಸುಖಮುಖಲೋಲರಿಗೆ ಶಿವಯೋಗಿಗಳೆಂದು. ಈ ದ್ವಂದ್ವೈಶ್ವರ್ಯ ಕಾಣಿಸಿಕೊಳ್ಳದೆ ಮುಂದೇನರಿಯದ ಮಂದಮತಿಗಳ ಹಿಡಿದು ತಂದು ಕರ್ಮಕಟ್ಟಳೆಯಿಂದೆ ಕೂಡಿಸಿಕೊಂಡು ತಮ್ಮ ಅಹಂಭಾವನಿಮಿತ್ಯಕ್ಕೆ ಪರಮವಿರಾಗತಿಗಳೆಂದು ಹೇಳಿಸಿಕೊಂಬ ಕಣ್ಮನಭಾವದ ಕಲ್ಮಷವ ನೋಡಾ. ಹುಸಿಯಿಂದೆ ಹೊಡದಾಡಿ ಮಠ ಕ್ಷೇತ್ರವೆಂದು ಆಮಿಷ ಮೋಹದಲ್ಲಿ ಮುಳುಗಿ ಪೂರ್ವಪಕ್ಷಾಳಿಯ ಸಂಸಾರದುರ್ನಡತೆಯೊಳ್ನಿಂದು ಮೆರೆವ ಮಲತ್ರಯರತಿ ಮೆಚ್ಚಿರುವವರಿಗೆ ರಾಜಯೋಗಿಗಳೆನ್ನಬಹುದೆ ? ಜಿಹ್ವೋಚ್ಫಿಷ್ಟ, ಪ್ರಾಣಿಗಳಿರಾ ! ಕ್ರುದ್ಧಮೃಗದಂತೆ ತಿರುತಿರುಗಿ ಬಳಲಿ ಒಂದು ಸ್ಥಾನವಿಡಿದು ಪೂರ್ವದ ದುಸ್ಸಾರರತಿಯ ನೆನವಿನೊಳಿಟ್ಟು ವೇಷಜಾಣಿಕೆಯನರಿದು ಕಂಡು ಕಂಡು ಸೋಗು ತಾಳುವ ಕೀಳುಜಾತಿ ಕಿಲ್ಬಿಷಭರಿತರಿಗೆ ಶಿವಯೋಗಿಗಳೆನ್ನಬಹುದೆ ? ತನು ಮನ ಭಾವೋಚ್ಫಿಷ್ಟ ಪ್ರಾಣಿಗಳಿರಾ, ಇದು ಕಾರಣ, ಆಟದವರು, ನೋಟದವರು, ಕೂಟದವರು ಕೂಡಿಯೈದುವರು ಸಂಘಾತವನು. ಮತ್ತೆ ಗುರುನಿರಂಜನ ಚನ್ನಬಸವಲಿಂಗಸನ್ನಿಹಿತ ಶರಣರೆ ರಾಜಯೋಗಿ ಶಿವಯೋಗಿಗಳಲ್ಲದೆ ಮಿಕ್ಕ ಭವಭಾರಿಗಳ ತರಲಾಗದು ಘನದ ಮುಂದೆ.
--------------
ದೇಶಿಕೇಂದ್ರ ಸಂಗನಬಸವಯ್ಯ
ರೇಚಕ ಪೂರಕ ಕುಂಭಕವಿಡಿದು ಮಾಡಿ ಮಾಡಿ ಕೆಟ್ಟರು ಅನಂತ ಬರಿಯ ಹಿರಿಯರು. ಅರಿದು ಮರೆದು ನೆರೆದು ನಿಂದಲ್ಲಿ ಹೊರಗೊಳಗೆ ತುಂಬಿ ತೋರಿತ್ತು ಗುರುನಿರಂಜನ ಚನ್ನಬಸವಲಿಂಗದ ಬೆಳಗು.
--------------
ದೇಶಿಕೇಂದ್ರ ಸಂಗನಬಸವಯ್ಯ
ರಜೋಗುಣದಷ್ಟವಿಧದಂಗವಳಿದುಳಿದುದೇ ಶಿವಾಂಗ. ಸತ್ವಗುಣದ ದಶವಿಧದಂಗವಳಿದುಳಿದುದೇ ಶಿವಾಂಗ. ತಮೋಗುಣದಷ್ಟವಿಧದಂಗವಳಿದುಳಿದುದೇ ಶಿವಾಂಗ. ಮತ್ತೆ ಬಹಿರಂಗದ ಅಷ್ಟಮದವಳಿದುಳಿದುದೇ ತ್ಯಾಗಾಂಗ. ಅಂತರಂಗದಷ್ಟಮದವಳಿದುಳಿದುದೇ ಭೋಗಾಂಗ. ಆತ್ಮನಷ್ಟಮದವಳಿದುಳಿದುದೇ ಯೋಗಾಂಗ. ಇದು ಕಾರಣ ಈ ಅಂಗಸಂಗಸನ್ನಿಹಿತ ಚನ್ನ ಶುದ್ಧಸಿದ್ಧಪ್ರಸಿದ್ಧ ಪ್ರಭುಲಿಂಗವು.
--------------
ದೇಶಿಕೇಂದ್ರ ಸಂಗನಬಸವಯ್ಯ