ಅಥವಾ
(220) (73) (20) (3) (8) (5) (0) (0) (17) (4) (3) (15) (0) (0) ಅಂ (31) ಅಃ (31) (141) (1) (59) (8) (0) (12) (0) (14) (0) (0) (0) (0) (1) (0) (0) (66) (0) (14) (5) (89) (68) (1) (50) (40) (85) (1) (5) (0) (34) (11) (24) (1) (81) (57) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಬಸವಣ್ಣನ ಮಗನಹುದೆಂಬುದು ಕಾಣಬಂದಿತ್ತು ನೋಡಾ; ಚನ್ನಬಸವಣ್ಣನ ಮಗನಮಗನೆಂಬುದು ಕಾಣಬಂದಿತ್ತು ನೋಡಾ; ಪ್ರಭುವಿನ ಮಗನಮಗನಮಗನೆಂಬುದು ಕಾಣ ಬಂದಿತ್ತು ನೋಡಾ; ಅವಸ್ಥಾತ್ರಯದಲ್ಲಿ ಗುರುನಿರಂಜನ ಚನ್ನಬಸವಲಿಂಗ ತಾನೆಂಬುದು ಕಂಡು ಮರೆಯಿತ್ತು ನೋಡಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಬಹುಜನ್ಮಭಾರಿಗಳ ಕರತಂದು ಹಿರಿಯತನದಾಸೆಗೆ ಹರಿದು ಉಪದೇಶವ ಕೊಟ್ಟರೆ ಗುರುಶಿಷ್ಯಭಾವ ಸರಿಯಪ್ಪುದೆ ? ಕಣ್ಣಿಲ್ಲದ ಗುರು, ಕುರುಡ ಶಿಷ್ಯ, ಅವರಿಗಾಚಾರ ವಿಚಾರ ಸಮಯಾಚಾರಸಂಬಂಧವೆಂತಪ್ಪುದಯ್ಯಾ, ಭೂತ ಅದ್ಭೂತ ಅವಿಚಾರ ಘಟಿತರಿಗೆ ಗುರುನಿರಂಜನ ಚನ್ನಬಸವಲಿಂಗಾ ?
--------------
ದೇಶಿಕೇಂದ್ರ ಸಂಗನಬಸವಯ್ಯ
ಬಂಗಾರವನೊಲ್ಲೆ, ಶೃಂಗಾರವನೊಲ್ಲೆ, ಇಹದ ದಾರಿಯನೊಲ್ಲೆ, ಪರದ ನೆರವಿಯನೊಲ್ಲೆ, ಮತ್ತೇನುವೊಲ್ಲೆ ಕಂಗಳ ಮುಂದೆ ಸಂಗಯ್ಯ ಬಂದುದೆನಗೆ ಸಾಕು. ಮನಹೆಚ್ಚಿ ಮಾಡಿ ನೇಮಿಸಿದ ಘನರತಿಯನು, ಹೆಂಗಳೆಯರ ಸಹವಾಗೆನ್ನಕೂಡಿ ಪರಿಣಾಮಿಸಿದರೆ ಸಾಕು. ಗುರುನಿರಂಜನ ಚನ್ನಬಸವಲಿಂಗವೆನಗೆ ಮೆಚ್ಚಿದರೆ ಸಾಕು.
--------------
ದೇಶಿಕೇಂದ್ರ ಸಂಗನಬಸವಯ್ಯ
ಬೆಳಗಿಲ್ಲದ ಬೆಳಗಿನ ಮನೆಯಲ್ಲಿ ಇಳೆಯಾಂಬರ ನಿಸ್ಸಾರದೇವ ಬಳಿವಿಡಿಯೆ ಕರ್ಮಕ್ಕನುಗೆಯ್ದ ಸುಖರತಿಯ ಬೆಳಗ ಹೇಳಲಾರಳವಲ್ಲ ಕೇಳಲಾರಳವಲ್ಲ ನೋಡಲಾರಳವಲ್ಲ ಕೂಡಲಾರಳವಲ್ಲ ಗುರುನಿರಂಜನ ಚನ್ನಬಸವಲಿಂಗವ ಬ್ಥಿನ್ನವಿಟ್ಟು.
--------------
ದೇಶಿಕೇಂದ್ರ ಸಂಗನಬಸವಯ್ಯ
ಬಯಲು ನಲುಗಿ ಬಯಲು ನಿಂದು ಬಯಲರುಹಿಸಿ, ಬಯಲಿಂಗೆ ಬಯಲು ಬಲಿದು, ಬಯಲಿಂದೆ ಬಯಲಳಿದು, ಬಯಲು ಬಯಲ ಕೂಡಿ ನಿರ್ವಯಲು ಹುಟ್ಟಿ ಬಯಲಸಮರಸದಲ್ಲಿ ಬಯಲು ನಿರ್ವಯಲಾಗಿ ನಿರವಯವಾಯಿತ್ತು ಗುರುನಿರಂಜನ ಚನ್ನಬಸವಲಿಂಗಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಬಸವಣ್ಣನ ಕೃಪೆ ಎನ್ನ ಶ್ರದ್ಧೆ ಕೂಡಿದಲ್ಲಿ ಎನ್ನಂಗವೆಲ್ಲ ಶುದ್ಧಪ್ರಸಾದ. ಮಡಿವಾಳಯ್ಯನ ಕೃಪೆ ಎನ್ನ ನಿಷ್ಠೆಕೂಡಿದಲ್ಲಿ ಎನ್ನಾತ್ಮವೆಲ್ಲ ಅಮಲಪ್ರಸಾದ. ಚನ್ನಬಸವಣ್ಣನ ಕೃಪೆ ಎನ್ನ ಸಾವಧಾನ ಕೂಡಿದಲ್ಲಿ ಪ್ರಾಣವೆಲ್ಲ ಸಿದ್ಧಪ್ರಸಾದ. ಸಿದ್ಧರಾಮಯ್ಯನ ಕೃಪೆ ಎನ್ನ ಅನುಭಾವ ಕೂಡಿದಲ್ಲಿ ಕರಣವೆಲ್ಲ ನಿಜಪ್ರಸಾದ. ಉರಿಲಿಂಗಪೆದ್ದಣ್ಣಗಳ ದಯೆ ಎನ್ನಾನಂದ ಕೂಡಿ[ದಲ್ಲಿ] ವಿಷಯಂಗಳೆಲ್ಲ ಪ್ರಸಿದ್ಧಪ್ರಸಾದ. ಅಜಗಣ್ಣನ ಕೃಪೆ ಎನ್ನ ಸಮರಸ ಕೂಡಿ[ದಲ್ಲಿ] ತೃಪ್ತಿಯೆಲ್ಲ ಮಹಾಪ್ರಸಿದ್ಧಪ್ರಸಾದ. ಇಂತು ಎನ್ನೊಡೆಯರ ಪ್ರಸಾದವನು ಮಂಡೆಯೊಳಿಟ್ಟು ಮುಳುಗಿ ಪ್ರಸಾದವೆಂಬ ಭಾವದೋರದೆ ಗುರುನಿರಂಜನ ಚನ್ನಬಸವಲಿಂಗದೊಳಡಗಿರ್ದೆನು
--------------
ದೇಶಿಕೇಂದ್ರ ಸಂಗನಬಸವಯ್ಯ
ಬಹಿರಂಗದಲ್ಲಿ ದುರಾಚಾರ ಅಂತರಂಗದಲ್ಲಿ ದುಃಸಂಕಲ್ಪ ಉಭಯಗೂಡಿದ ವರ್ತಕದಲ್ಲಿ ಷಡ್ಗುಣ ಸಾರಸಂಬಂಧ ದುರ್ಭಾವತ್ರಯಗೂಡಿ ಜೀವಿಸುವ ಪ್ರಾಣಿಯು ಕಂಡಾಡುವ ಕಟ್ಟಳೆಯ ಸೋಗುಹೊತ್ತು ನಡೆದರೇನು, ಅದನು ನುಡಿದರೇನು? ಆ ನಡೆನುಡಿಯ ವಾಸನೆಯನರಿಯದಿರ್ಪ ಸಜದ್ಭಕ್ತಿಚರಿತೆಯ ಸುಖದೊಳಗೆ ಸದ್ಗುರು ಚನ್ನವೃಷಭೇಂದ್ರಲಿಂಗವು.
--------------
ದೇಶಿಕೇಂದ್ರ ಸಂಗನಬಸವಯ್ಯ
ಬಯಲಿಂದ ಬಂದ ತಳ್ಳೆಕಾರಂಗೆ ಉಳ್ಳುದೆಲ್ಲವನಿತ್ತು ಒಳ್ಳೆಯವನಾಗಿ ಕಾಲವಿಡಿದು ಕಾಳಬೆಳಗಿಲ್ಲದ ಬಿಸಿಲು ಬೆಳದಿಂಗಳದಲ್ಲಿ ಸನ್ನಿಹಿತ ಬರುವವರಾರು ನೋಡಾ! ಹೊರಗುಳ್ಳವರಿಗೆ ಹೊರಗಾದ ಒಳಗುಳ್ಳವರಿಗೊಳಗಾದ ಅರಿದು ಬನ್ನಿ ಗುರುನಿರಂಜನ ಚನ್ನಬಸವಲಿಂಗಕ್ಕೆ ರೂಪಿಲ್ಲದೆ.
--------------
ದೇಶಿಕೇಂದ್ರ ಸಂಗನಬಸವಯ್ಯ
ಬಯಲಬೀಜ ಭೂಮಿಯಲ್ಲಂಕುರಿಸಿ ಎಲೆಯೆರಡಾದುವು, ಎಸಳು ಮೂರಾದವು, ಕುಸುಮ ಆರಾದವು, ಕಾಯಿ ಮೂವತ್ತಾರಾದವು, ಹಣ್ಣು ಇನ್ನೂರಾಹದಿನಾರಾದವು. ತೊಟ್ಟು ತುಂಬಿ ವಿಶ್ವಪರಿಪೂರ್ಣವಾಗಿ ತೊಟ್ಟು ಕಳಚಿ ಇನ್ನೂರಹದಿನಾರರೊಳು ನಿಂದು ಆ ಮೂವತ್ತಾರರಲ್ಲಿ ಅಡಗಿ ಆರರಲ್ಲಿ ಅಳಿದು ಮೂರರಲ್ಲಿ ಮುಳುಗಿ ಎರಡರಲ್ಲಿ ನಿಂದು ಒಂದಾಗಿ ಮರೆದುಳಿದು ಗುರುನಿರಂಜನ ಚನ್ನಬಸವಲಿಂಗದೊಳಗೆ.
--------------
ದೇಶಿಕೇಂದ್ರ ಸಂಗನಬಸವಯ್ಯ
ಬೆಡಗಿನ ಕೀಲಿವಿಡಿದು ಬಂದು ಕಂಡವರ ಕಲ್ಯಾಣದ ಅಡಿಗತಿಯನರಿಯದೆ ಅನಿತ್ಯಕಲ್ಯಾಣವೆಂದು ಸುಡುಗಾಡದಲ್ಲಿ ಅಟ್ಟುಂಬ ಕಸಮನುಜರು ನಿತ್ಯಕಲ್ಯಾಣದ ಸತ್ಯ ಶರಣರಿಗಿತ್ತು ಕೊಂಬ ಚಿತ್ತವನವರೆತ್ತಬಲ್ಲರಯ್ಯಾ ಗುರುನಿರಂಜನ ಚನ್ನಬಸವಲಿಂಗಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಬಸವ ಶಗಣಿಯಿಂದಾದ ಅಸಮ ಶ್ರೀಮಹಾಭಸಿತವ, ನೊಸಲಾದಿ ಪಾದಾಂತ್ಯವಾಗಿ ನಾಲ್ವತ್ತೆಂಟು ಸ್ಥಾನಂಗಳನರಿದು ಧರಿಸಿ, ಪಸರಿಸಿ ಪ್ರಜ್ವಲಿಸುವ ಪಶುಪತಿಯ ಗತಿಮತಿಯೊಳೊಪ್ಪಿ, ಎಸೆವ ಶಿವಶರಣರಂಘ್ರಿಯ ಜಲಶೇಷವನು ಸಸಿನೆಯಿಂದ ಸೇವಿಸುವ ಶಿಶುವಾಗಿರ್ದೆ ಅನುದಿನ ನಿರಂಜನ ಚನ್ನಬಸವಲಿಂಗ ಸನ್ನಿಹಿತ.
--------------
ದೇಶಿಕೇಂದ್ರ ಸಂಗನಬಸವಯ್ಯ
ಬೆಂದವ ಬೇಯಿಸಬಂದವರ ನಿಂದವರ ನಿಲಿಸಬಂದವರ ಸತ್ತವರ ಕೊಂದು ಕಂಗಳನೀರ ತಲೆಗೆ ಎರೆದವರ, ಕೈಯೊಳು ಕೈಭಾಷೆಯನಿತ್ತು ಕಡೆಗಾಣಿಸಿಕೊಂಡವರ ನಡೆಗತಿಯ ಮಂಡೆಯೊಳಿಟ್ಟು ಸಡಗರದ ಸುಖದ ಸೊನ್ನೆಯಲ್ಲಿ ಸಯವಾದೆ ಗುರುನಿರಂಜನ ಚನ್ನಬಸವಲಿಂಗದಾದಿಯ ಪಡೆದವರ.
--------------
ದೇಶಿಕೇಂದ್ರ ಸಂಗನಬಸವಯ್ಯ
ಬಹಿರ್ಮುಖಸುಖವಿರಹಿತಂಗೆ ಸಗುಣಾರ್ಪಿತ ಶೂನ್ಯ ಕಾಣಾ. ಅಂತರ್ಮುಖಸುಖವಿರಹಿತಂಗೆ ನಿರ್ಗುಣಾರ್ಪಿತ ಶೂನ್ಯ ಕಾಣಾ. ಸಮತೆಮುಖಸುಖವಿರಹಿತಂಗೆ ಸನ್ನಿಹಿತಸುಖಾರ್ಪಿತ ಶೂನ್ಯ ಕಾಣಾ. ಈ ತ್ರಿವಿಧಾರ್ಪಿತ ನಾಸ್ತಿಯಾಗಿ ಗುರುನಿರಂಜನ ಚನ್ನಬಸವಲಿಂಗ ಪ್ರಸಾದಿಯೆಂದಡೆ ನಾಯಕನರಕ ತಪ್ಪದು ಕಾಣಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಬಯಲ ರಥ ಬಯಲ ಸ್ಥಾವರ ಬಯಲ ಬೊಂಬೆಯ ಸಡಗರ ಜಾಣತನವ ಮಾಣಬಾರದು. ರುದ್ರನ ಕಟ್ಟಳೆಯ ಕಾಣದ ಮುನ್ನ ಭದ್ರ ಗುರುನಿರಂಜನ ಚನ್ನಬಸವಲಿಂಗ.
--------------
ದೇಶಿಕೇಂದ್ರ ಸಂಗನಬಸವಯ್ಯ
ಬಸವಣ್ಣ ಎನ್ನ ತಂದೆಯಾಗಿ ಬಂದನಯ್ಯಾ, ಚನ್ನಬಸವಣ್ಣ ಎನ್ನಜ್ಜನಾಗಿ ಬಂದನಯ್ಯಾ, ಪ್ರಭುದೇವರು ಎನ್ನ ಮುತ್ತಯ್ಯನಾಗಿ ಬಂದನಯ್ಯಾ, ಈ ಮೂವರ ಮುಂದಣಾಭರಣ ಹೊದಿದುಕೊಂಡು ಗುರುನಿರಂಜನ ಚನ್ನಬಸವಲಿಂಗದೊಳಡಗಿರ್ದೆನಯ್ಯಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಬಸವಣ್ಣನ ಮುಖದಿಂದೆ ಅಸಂಖ್ಯಾತ ಪ್ರಮಥರ ಕಂಡೆನಯ್ಯಾ, ಚನ್ನ ಬಸವಣ್ಣನ ಮುಖದಿಂದೆ ಗಣಸನ್ನಿಹಿತಮಹಾನುಭಾವಸುಖಿಯಾದೆನಯ್ಯಾ. ಪ್ರಭುವಿನ ಮುಖದಿಂದೆ ಮಹದಾನಂದಪರಿಣಾಮಿಯಾಗಿರ್ದೆನಯ್ಯಾ. ಈ ತ್ರಿವಿಧವನೊಡಗೂಡಿ ಗುರುನಿರಂಜನ ಚನ್ನಬಸವಲಿಂಗ ಶರಣೆಂದು ನಿಮ್ಮೊಳಗಾದೆನಯ್ಯಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಬ್ರಹ್ಮನಂಶವ ಸವರಿ ಸತ್ಯಲೋಕವ ಸುಟ್ಟು ಅಲ್ಲಿಪ್ಪಜನರ ಕೊಳುಕೊಟ್ಟು, ವಿಷ್ಣುವಿನಂಶವ ಸವರಿ ವೈಕುಂಠವ ಸುಟ್ಟು ಅಲ್ಲಿಪ್ಪ ಜನರ ಕೊಳುಕೊಟ್ಟು, ರುದ್ರನಂಶವ ಸವರಿ ಕೈಲಾಸವ ಸುಟ್ಟು ಅಲ್ಲಿಪ್ಪ ಜನರ ಕೊಳುಕೊಟ್ಟು, ಹಾಳು ದೇಶದೊಳಗಿರ್ದ ಮೂರುಪುರವ ತುಂಬಿಸಿ ಮೂರುದೊರೆಗಳ ಮುಂದಿಟ್ಟು ತೂಗಿಸ್ಯಾಡಬಲ್ಲರೆ ಅದೇ ಕಾಣಾ ಗುರುನಿರಂಜನ ಚನ್ನಬಸವಲಿಂಗದಲ್ಲಿ ಪ್ರಾಣಲಿಂಗಸಂಬಂಧ.
--------------
ದೇಶಿಕೇಂದ್ರ ಸಂಗನಬಸವಯ್ಯ
ಬಾಗಿ ಬಳುಕಿ ಬೀಗಿ ಬಿರಿದು ತೂಗಿಕೊಂಡು ಬಂದ ಭೋಗಿ ಸಾಕ್ಷಿಯಾಗಿ ತ್ಯಾಗ ಭೋಗ ಯೋಗವೆಂಬ ಮಹದೈಶ್ವರ್ಯದೊಳಗಿರ್ದೆನಯ್ಯಾ. ಬಂದು ಕೊಳ್ಳಿರಿ ಬಗೆಬಗೆಯಿಂದೆ, ಚಂದವಾದರೆ ನಿಂದುದು ನಿಷೆ* ಗುರುನಿರಂಜನ ಚನ್ನಬಸವಲಿಂಗದಲ್ಲಿ ಆನು ಭಕ್ತನೆಂಬೆ.
--------------
ದೇಶಿಕೇಂದ್ರ ಸಂಗನಬಸವಯ್ಯ
ಬಾಲಯವ್ವನವೃದ್ಭಶೂನ್ಯ ಶರಣಂಗೆ ಜನನ ಸ್ಥಿತಿ ಲಯವೆಂಬುದೇನು ಹೇಳಾ ! ಗಳಿಸಲಿಲ್ಲದ ಹಾಕದ ಕಳೆಯಲಿಲ್ಲದ ಅಸಲುಮುಳುಗಿದ ಮತ್ತೆ ಬಡ್ಡಿಯ ಬರೆಯಲುಂಟೆ. ಲೀಲೆಯಾದರೆ ಲೋಲ ಗುರುನಿರಂಜನ ಚನ್ನಬಸವಲಿಂಗಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಬಂದು ನಿಂದಲ್ಲಿ ಕಾರಿರುಳು ಕವಿದು ನಿದ್ರಗೈವ ಕಾಲದೊಳು ಚರಣಾಯುಧ ಕೂಗಲು ನಿದ್ರೆಗಳೆಯಲು ರವಿಯ ಮಧ್ಯೆ ಕತ್ತಲೆಗೆಡೆಯಿಲ್ಲ ನೋಡ. ಕೆಂಡಕ್ಕೆ ಬಂದೊರಲೆ ನಿಂದಿರಲೆಡೆಯಿಲ್ಲ ! ಜ್ಞಾನೋದಯವಾದ ಶರಣನ ಮುಂದೆ ತಮ್ಮ ಶರಣವೃಂದ ಗಾಲುಮೇಲುಗಳ ನಾಶ ನಿರಂಜನ ಚನ್ನಬಸವಲಿಂಗಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಬಚ್ಚಲದ ತಂಪಿನಲ್ಲಿ ಬಿದ್ದು ಸುಖಿಸುವ ಸೂಕರ ಸುಗಂಧಪಂಕದ ಸುಸೌಖ್ಯವ ಸುಖಿಸಲೇನು ಬಲ್ಲುದು ಹೇಳಾ. ಮಲತ್ರಯದ ಗೊಜ್ಜಿನ ತಂಪುಗೊಂಡ ಮಾನವ ಲಿಂಗತ್ರಯವೆರೆದ ಸುಖಾನುಭಾವದ್ವಾಸನೆಯೆಂಬ ಪರಮಶಾಂತ ಪರಿಣಾಮವನವನೆತ್ತ ಬಲ್ಲ ಹೇಳಾ. ಅರಿದವರರಿಯಬಾರದು ಗುರುನಿರಂಜನ ಚನ್ನಬಸವಲಿಂಗ ನಿಮ್ಮನು.
--------------
ದೇಶಿಕೇಂದ್ರ ಸಂಗನಬಸವಯ್ಯ
ಬೇರಿಲ್ಲದ ಗಂಡಂಗೆ ತೋರಿಮಾಡುವರಾರೂ ಇಲ್ಲ. ಈ ಧರೆಯಿಂದಲರಿದು ಶರಣುಹೊಕ್ಕು ಸುಖಿಯಾದೆ. ಈ ಜಲದಿಂದಲರಿದು ಶರಣುಹೊಕ್ಕು ಸುಖಿಯಾದೆ. ಈ ತೇಜದಿಂದಲರಿದು ಶರಣುಹೊಕ್ಕು ಸುಖಿಯಾದೆ. ಈ ಪವನದಿಂದಲರಿದು ಶರಣುಹೊಕ್ಕು ಸುಖಿಯಾದೆ. ಈ ಅಂಬರದಿಂದಲರಿದು ಶರಣುಹೊಕ್ಕು ಸುಖಿಯಾದೆ. ಗುರುನಿರಂಜನ ಚನ್ನಬಸವಲಿಂಗಾ ನಿನ್ನ ಪಂಚಮುಖದಿಂದೆ ನಿನ್ನನರಿದು ಶರಣುಹೊಕ್ಕು ಪರಮಸುಖಪರಿಣಾಮಿಯಾಗಿರ್ದೆನು ಕಾಣಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಬಹಿರಂಗವನಿಟ್ಟು ಮಾಡುವರು, ಅಂತರಂಗವನಿಟ್ಟು ನೋಡುವರು, ಈ ಉಭಯವನರಿಯದೆ ಕೂಡುವುದು ಇದು ಅಮಳತೇಜಾಂಗದ ನಿಲವು. ಅಪ್ರತಿಮ ಮಹಿಮ ಶಾಂತ ಚನ್ನವೃಷಭೇಂದ್ರಲಿಂಗದಲ್ಲಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ಬೇರಿಲ್ಲದ ವೃಕ್ಷಕ್ಕೆ ಹಾರಲಿಲ್ಲದ ಪಕ್ಷಿ ಸಾರಿರ್ದ ಸಂಬಂಧವ ನೋಡಾ! ನೀರಿಲ್ಲದೆ ಪಸರಿಸಿ ಗಂಧವಿಲ್ಲದ ಕುಸುಮದಿಂದಾದ ಸಾರವಿಲ್ಲದ ಹಣ್ಣ ಸೇವಿಸುವದು ನೋಡಾ. ಊರಿಲ್ಲದ ಹಾರುವ ಬೇರಿಲ್ಲದ ಉಂಗುಷ*ದಿಂದೆ ತೋರಿ ತೋರಿಕೊಂಡು ಸುಖಿಸಿದ ಗುರುನಿರಂಜನ ಚನ್ನಬಸವಲಿಂಗದಲ್ಲಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ಬಸವಣ್ಣನ ಪಾದವನ್ನು ಕರ ಮನ ಭಾವದಲ್ಲಿ ಕಂಡು ಸರ್ವಾಂಗ ಬೆಚ್ಚಿ ಬೇರಿಲ್ಲ ದರ್ಚಿಸಿ ಸುಖಿಯಾಗಿದ್ದೆನಯ್ಯಾ. ಚನ್ನಬಸವಣ್ಣನ ಪಾದವನ್ನು ಮನ ಭಾವದಲ್ಲಿ ಕಂಡು ಕರಣಕೊಬ್ಬಿ ಅಭಿನ್ನವಾಗಿ ಅರ್ಚಿಸಿ ಸುಖಿಯಾಗಿರ್ದೆನಯ್ಯಾ. ಪ್ರಭುವಿನ ಪಾದವನ್ನು ಭಾವ ಕರ ಮನದಲ್ಲಿ ಕಂಡು ಬೆಚ್ಚಿ ಭೇದವಳಿದರ್ಚಿಸಿ ಸುಖಿಯಾಗಿರ್ದೆನಯ್ಯಾ. ತ್ರಿವಿಧವನೊಂದುಮಾಡಿ ಸಕಲ ಪರಿಣಾಮ ಪರವಶವ ನೆರೆದು ಆರಾಧಿಸುತಿರ್ದೆನು ಗುರುನಿರಂಜನ ಚನ್ನಬಸವಲಿಂಗಕ್ಕಂಗವಾಗಿ.
--------------
ದೇಶಿಕೇಂದ್ರ ಸಂಗನಬಸವಯ್ಯ

ಇನ್ನಷ್ಟು ...