ಅಥವಾ
(220) (73) (20) (3) (8) (5) (0) (0) (17) (4) (3) (15) (0) (0) ಅಂ (31) ಅಃ (31) (141) (1) (59) (8) (0) (12) (0) (14) (0) (0) (0) (0) (1) (0) (0) (66) (0) (14) (5) (89) (68) (1) (50) (40) (85) (1) (5) (0) (34) (11) (24) (1) (81) (57) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಗಿಳಿಯ ಗರ್ಭದಲ್ಲಿ ಮಾರ್ಜಾಲ ಹುಟ್ಟಿ ಹಾವಿನ ತಲೆಯ ಮುಟ್ಟಲು ಹೆಡೆಯನೆಗೆದು ಮಾಣಿಕವ ಕಚ್ಚಿ ಎರಡುದಾರಿಯ ಕಟ್ಟಿ ಆಡಲು ಪುರದ ಜನರು ಭೀತಿಗೊಂಡು ನೋಡುವ ಸಮಯದಲ್ಲಿ ಮಾಣಿಕ ಹಾವ ನುಂಗಿ ಜನರ ಹೊಯ್ದು ಒಯ್ಯಲು, ಗಿಳಿ ಸತ್ತು ಗುರುನಿರಂಜನ ಚನ್ನಬಸವಲಿಂಗ ತಾನೆಯಾಯಿತು.
--------------
ದೇಶಿಕೇಂದ್ರ ಸಂಗನಬಸವಯ್ಯ
ಗುರುಕರಜಾತರೆಂದು ಬರಿಯ ಬೊಮ್ಮದ ಮಾತ ನುಡಿದು ಮನಬಲ್ಲಂತೆ ಹರಿದಾಡಿ, ಹಿರಿಯರನರಿಯದೆ ಹಳಿದು ಮರೆಯಿಂದೆ ದುರ್ಬುದ್ಧಿಯ ಮಡುಗಿ ಹೆಮ್ಮೆ ಮುಮ್ಮೊಗನಾಗಿ ಮೆರೆದು ಹೋಗುವ ಬರಿವೇಷಭಾರಕರಿಗೆ ಪರಮಕ್ರಿಯಾ ನಿಜಜ್ಞಾನದ ನಿಲುವೆಂತು ಸಾಧ್ಯವಪ್ಪುದಯ್ಯಾ ಗುರುನಿರಂಜನ ಚನ್ನಬಸವಲಿಂಗಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಗುರುಲಿಂಗಜಂಗಮದ ಭಕ್ತನಾದೆನೆಂದು, ಪಂಚವಿಧ ಪತಾಕಿಯ ಮುಂದೆ ನಿಲಿಸಿ ಮಾತನಾಡುವರಯ್ಯಾ. ಪಂಚಾಂಗವ ಕೇಳಿ ನಡೆದಲ್ಲಿ ಗುರುದ್ರೋಹಿಯೆಂಬೆ. ಅನ್ಯ ಸ್ಥಾವರ ಘನವೆಂದು ನಡೆದಲ್ಲಿ ಲಿಂಗದ್ರೋಹಿಯೆಂಬೆ. ಅಪಾತ್ರ ದ್ರವ್ಯನಿತ್ತಲ್ಲಿ ಜಂಗಮದ್ರೋಹಿಯೆಂಬೆ. ತದ್ದಾದಿ ಕುಷ್ಟರೋಗಕ್ಕೆ ಕಸಮಲೌಷಧ ಹಚ್ಚಿದಲ್ಲಿ ಭಸ್ಮದ್ರೋಹಿ. ಚಿನ್ನ ಬೆಳ್ಳಿ ಮೊದಲಾದ ಸಕಲಾಭರಣವ ಧರಿಸಿದಲ್ಲಿ ರುದ್ರಾಕ್ಷಿದ್ರೋಹಿ. ತೀರ್ಥಯಾತ್ರೆ ಘನವೆಂದುಕೊಂಡಲ್ಲಿ ಪಾದೋದಕದ್ರೋಹಿ. ಸಕಲರಿಂದೆ ಔಷಧವ ಭಕ್ಷಿಸಿದಲ್ಲಿ ಪ್ರಸಾದದ್ರೋಹಿ. ಯಂತ್ರ ಮಂತ್ರ ತಂತ್ರಗಳಿಂದೆ ಚರಿಸಿದಲ್ಲಿ ಪಂಚಾಕ್ಷರಿದ್ರೋಹಿ. ಇಂತು ಅಷ್ಟಾವರಣವ ಹೊತ್ತು ಅಷ್ಟದ್ರೋಹಿಯಾದ ಭ್ರಷ್ಟಭವಿಗಳಿಗೆತ್ತಣ ಮುಕ್ತಿಯಯ್ಯಾ ಗುರುನಿರಂಜನ ಚನ್ನಬಸವಲಿಂಗಾ ?
--------------
ದೇಶಿಕೇಂದ್ರ ಸಂಗನಬಸವಯ್ಯ
ಗಂಬ್ಥೀರ ಗುರುವೆನ್ನ ಸಂಗಸಮರಸವ ಮಾಡಿ, ಅಂಗದೊಳಡಗಿರ್ದ ಕಂಗಳ ಬೆಳಗ ಕರುಣದಿಂದೆತ್ತಿ ಪಣೆಗಿಡಲು, ಗಣಿತಲಿಖಿತವು ಕಾಣದೋಡಿದವು, ಕಳೆ ಬಿಂದು ನಾದ ಸಂಭ್ರಮೆಯಗೊಂಡು, ನಿರಂಜನ ಚನ್ನಬಸವಲಿಂಗಕ್ಕೆ ತಲೆಯಿಡಲಮ್ಮದೆ.
--------------
ದೇಶಿಕೇಂದ್ರ ಸಂಗನಬಸವಯ್ಯ
ಗುರುಸ್ಥಲವುಳ್ಳನ್ನಕ್ಕರ ಶಿಷ್ಯ, ಲಿಂಗಸ್ಥಲವುಳ್ಳನ್ನಕ್ಕರ ಭಕ್ತ, ಜಂಗಮಸ್ಥಲವುಳ್ಳನ್ನಕ್ಕರ ಶರಣ, ಇಂತು ಗುರುಲಿಂಗಜಂಗಮವನರಿದು ಮರೆದಲ್ಲಿ ಲಿಂಗೈಕ್ಯ ತಾನೆ ಗುರುನಿರಂಜನ ಚನ್ನಬಸವಲಿಂಗದಲ್ಲಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ಗುರುವಿನ ಪ್ರಸಾದವ ಬೇಡಿದರೆ ಆಡ್ಯಾಡಿ ಉಣ್ಣೆಂದು ಕೊಟ್ಟ. ಅಲ್ಲಿ ನಿನ್ನ ಹಿರಿಕಿರಿಯರ ಮರೆದರೆ ಹರಿದು ಹಾಕುವನೆಂದು- ನೆರೆದುಂಬೆ ನಿರ್ವಾಚಕದಿಂದೆ ಗುರುನಿರಂಜನ ಚನ್ನಬಸವಲಿಂಗಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಗುರುವರನಿಂದುದಿಸಿ, ಜಂಗಮಪಾದೋದಕಪ್ರಸಾದದಿಂದೆ ಬೆಳೆದು, ಪರಮಲಿಂಗೈಕ್ಯವು ನಮಗುಂಟೆಂದು ನುಡಿವ ನಾಲಿಗೆ ನೀಟಾಗಿಹುದು; ಗುರುವಿಗಿತ್ತ ತನುವು ನೀಟಾಗಿಹುದು. ಲಿಂಗದ ಮನ ಚೆಲುವಾಗಿಹುದು. ಜಂಗಮದ ಧನ ಸ್ವಚ್ಛವಾಗಿಹುದು. ಆಡಿರ್ದಂತೆ ಆಚರಿಸಿ ಅರ್ಪಿತವಾಗಲರಿಯದೆ ನಾಲಿಗೆ ಮರಳಿದರೆ ಕೀಳರೆ? ತನು ವಂಚಿಸಿ ಬಿದ್ದರೆ ದುರ್ಗತಿಗೆ ಎಳೆದುಹಾಕರೆ? ಮನಸ್ಸು ಮರಳಿ ಬಿದ್ದರೆ ನಾಚಿಕೆಯ ಕೊಳ್ಳರೆ? ದ್ರವ್ಯವ ಮರಳಿ ಸುಖಿಸಿದರೆ ವೈತರಣಿಯೊಳು ದುಃಖಬಡಿಸರೆ? ಇದು ಕಾರಣ ನಿಮ್ಮ ನಡತೆ ಯಮನಿಗೆ ಹಿಡಿತ ಗುರುನಿರಂಜನ ಚನ್ನಬಸವಲಿಂಗ ಸಾಕ್ಷಿಯಾಗಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ಗಂಡನಿಂದೆ ಹುಟ್ಟಿದ ಕೂಸ ತೊಟ್ಟಿಲೊಳಗಿಟ್ಟು ಮುದ್ದಾಡಿದರೆ ಮೊಲೆ ತೊರೆದು ಹಾಲು ಸುರಿಯಲು ಅದರ ಸವಿಯ ಕಾಲಲ್ಲಿ ಕಂಡು ತಾಯಿಮಗಸಹಿತ ಗುರುನಿರಂಜನ ಚನ್ನಬಸವಲಿಂಗನ ಶರಣರೊಳು ಸುಖಿಸಿದರು.
--------------
ದೇಶಿಕೇಂದ್ರ ಸಂಗನಬಸವಯ್ಯ
ಗುರುವನರಿದು ಮರೆದವರೆಂದು ಗುರುಭಕ್ತಿಯ ನಾಶಮಾಡುವರು, ಆಣವ ಮಲಮೋಹಿತರು, ಲಿಂಗವನರಿದು ಮರೆದವರೆಂದು ಲಿಂಗಭಕ್ತಿಯ ನಾಶಮಾಡುವರು, ಮಾಯಾಮಲಮೋಹಿತರು. ಜಂಗಮವನರಿದು ಮರೆದವರೆಂದು ಜಂಗಮಭಕ್ತಿಯ ನಾಶಮಾಡುವರು ಕಾರ್ಮಿಕಮಲಮೋಹಿತರು. ಇವರನೆಂತು ಶರಣರೆನ್ನಬಹುದು ? ಮಲತ್ರಯವನಳಿದು ಲಿಂಗತ್ರಯವನರಿದು ಮಾಡುವ ಮಾಟ ಮಹಾಘನದ ಕೂಟ ಗುರುನಿರಂಜನ ಚನ್ನಬಸವಲಿಂಗಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಗುರುವಿನಲ್ಲಿ ಗುಣವನರಸಿ ಕಡಿದುಹಾಕಿದಲ್ಲಿ ಎನಗೆ ಶುದ್ಧಪ್ರಸಾದ ಸಾಧ್ಯವಾಯಿತ್ತು. ಲಿಂಗದಲ್ಲಿ ಶಿಲೆಯನರಸಿ ಸುಟ್ಟು ಬಿಸಾಟಿದಲ್ಲಿ ಎನಗೆ ಸಿದ್ಧಪ್ರಸಾದ ಸಾಧ್ಯವಾಯಿತ್ತು. ಜಂಗಮದಲ್ಲಿ ಕುಲವನರಸಿ ಕೊಂದು ಹಾಕಿದಲ್ಲಿ ಎನಗೆ ಪ್ರಸಿದ್ಧಪ್ರಸಾದ ಸಾಧ್ಯವಾಯಿತ್ತು. ಇಂತು ಇವರ ದುರ್ಗುಣ ಕಠಿಣ ಅಕುಲವನರಸದೆ ಕೊಡುಕೊಳ್ಳೆ ಸಮರಸದೊಳಿರ್ದೆನಾದಡೆ ಕಡೆಯಿಲ್ಲದ ನರಕವೆಂಬ ಶ್ರುತಿ ಗುರುಸ್ವಾನುಭಾವದಿಂದರಿದು ನೂಂಕಿ ಗುರುನಿರಂಜನ ಚನ್ನಬಸವಲಿಂಗದಲ್ಲಿ ಸಮರಸಪ್ರಸಾದಿಯಾಗಿರ್ದೆನಯ್ಯಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಗತಿಮತಿಯೊಳೊಡವೆರೆದ ಪರಮಾನಂದ ಶರಣ ಪುತ್ರ ಮಿತ್ರ ಕಳತ್ರಾದಿಗಳನರಿಯ ನೋಡಾ. ಜಾತಿ ಗೋತ್ರ ಕುಲ ಆಶ್ರಮ ನಾಮ ವರ್ಣಂಗಳಿಲ್ಲದೆ ಭಕ್ತಾಂಗನೆ ಮುಕ್ತಾಂಗನೆಯ ನೆರೆದು ಯುಕ್ತಿಯನಳಿದುಳಿದು ಗುರುನಿರಂಜನ ಚನ್ನಬಸವಲಿಂಗದಲ್ಲಿ ತಾನು ತಾನಾದ ಭಾವಶೂನ್ಯನ ಏನೆಂದುಪಮಿಸಬಹುದು ಹೇಳಾ !
--------------
ದೇಶಿಕೇಂದ್ರ ಸಂಗನಬಸವಯ್ಯ
ಗುರುಲಿಂಗವು ಬಂದೆನ್ನ ಕರಸ್ಥಲಕೈದಿದ ಮೇಲೆ, ಸಿರಿಸಂಪತ್ತು ಸಂಭ್ರಮವಾಯಿತ್ತು ; ಸಕಲ ಗಣತಿಂತಿಣಿ ನೆರೆಯಿತ್ತು. ಅನುಸರಣೆ ಅಡಗಿತ್ತು, ಆಚಾರ ಬೆಳಗಿತ್ತು, ಪುರದರಮನೆ ಪರಿಪರಿ ಶೃಂಗರಿಸಿತ್ತು, ಎನ್ನ ಸುಚಿತ್ತವೆಂಬ ಹಸ್ತ ಸುಬುದ್ಧಿಯನೈದಲು, ಗುರುನಿರಂಜನ ಚನ್ನಬಸವಲಿಂಗದಾಣತಿಗೆ ಮಹೇಶ್ವರತ್ವ ಮುಂದುವರಿಯಿತ್ತು.
--------------
ದೇಶಿಕೇಂದ್ರ ಸಂಗನಬಸವಯ್ಯ
ಗುರುಕರಜಾತನಾಗಿ ಸಕಲಚೈತನ್ಯವೇ ಜಂಗಮವೆಂದರಿದ ಬಳಿಕ, ಕ್ರಿಯೆಯಲ್ಲಿ ಜಂಗಮ ಸನ್ನಿಹಿತ ಸುಖಿಸಬೇಕಲ್ಲದೆ ವಿರಹಿತ ನಡೆ ಹೀನವಯ್ಯಾ. ಧರೆಯೊಳು ಚೈತನ್ಯವನಗಲಿ ಜೀವಿಸಲುಂಟೆ? ಹಸಿಯ ಭೂತದ ವಶಗತರ ಮಾತು ಮುಟ್ಟಲರಿಯದು ಗುರುನಿರಂಜನ ಚನ್ನಬಸವಲಿಂಗ ಭಕ್ತಿಯ.
--------------
ದೇಶಿಕೇಂದ್ರ ಸಂಗನಬಸವಯ್ಯ
ಗುರುವ ಕಂಡು ಗುರುವಿನಲ್ಲಿ ಅನುಸರಣೆಯ ಮಾಡಿದರೆ ಗುರುದ್ರೋಹವೆಂದು ಕೈದುವ ಪಿಡಿದು ಕಡಿದು ಗೆಲುವೆನಯ್ಯಾ. ಲಿಂಗವ ಕಂಡು ಲಿಂಗದಲ್ಲಿ ಅನುಸರಣೆಯ ಮಾಡಿದರೆ ಲಿಂಗದ್ರೋಹವೆಂದು ಕೈದುವ ಪಿಡಿದು ಕಡಿದು ಗೆಲುವೆನಯ್ಯಾ. ಜಂಗಮವ ಕಂಡು ಜಂಗಮದಲ್ಲಿ ಅನುಸರಣೆಯ ಮಾಡಿದರೆ ಜಂಗಮದ್ರೋಹವೆಂದು ಕೈದುವ ಪಿಡಿದು ಕಡಿದು ಗೆಲುವೆನಯ್ಯಾ. ಪ್ರಸಾದವ ಕಂಡು ಪ್ರಸಾದದಲ್ಲಿ ಅನುಸರಣೆಯ ಮಾಡಿದರೆ ಪ್ರಸಾದದ್ರೋಹವೆಂದು ಕೈದುವ ಪಿಡಿದು ಕಡಿದು ಗೆಲುವೆನಯ್ಯಾ. ಶರಣಭಕ್ತರ ಕಂಡು ಶರಣಭಕ್ತರಲ್ಲಿ ಅನುಸರಣೆಯ ಮಾಡಿದರೆ ಶರಣ ಭಕ್ತದ್ರೋಹವೆಂದು ಕೈದುವ ಪಿಡಿದು ಕಡಿದು ಗೆಲುವೆನಯ್ಯಾ ಗುರುನಿರಂಜನ ಚೆನ್ನಬಸವಲಿಂಗ ಸಾಕ್ಷಿಯಾಗಿ ಅರಿಯದೆ ಮಾಡುವಭಕ್ತಿ ಮರುಳನಯುಕ್ತಿ. ಮಸಣದ ಬೂದಿ ಕಾರ್ಯಕಾರಣಕ್ಕೆ ಬಾರದು. ಅರಿದು ಮಾಡಿ ಮರೆದಿರು ಗುರುನಿರಂಜನ ಚನ್ನಬಸವಲಿಂಗವಾಗಬೇಕಾದರೆ.
--------------
ದೇಶಿಕೇಂದ್ರ ಸಂಗನಬಸವಯ್ಯ
ಗಂಭೀರ ಗುಹೆಯೊಳಗಿಪ್ಪ ನಿರವಯ ಪರಮಾತ್ಮಲಿಂಗವನು ಅರುವಿನಮುಖದಿಂದ ಅಂಗ ಭಾವದ ಕಳೆಯೊಳು ನಿಂದು ಕರಸ್ಥಲಕ್ಕೆಯ್ದಿಸಿ, ನಯನಸ್ಥಲವೆರಸಿ ಹೃದಯಸ್ಥಲಕ್ಕೊಯ್ದು ಭೃಕುಟಿಸ್ಥಲದಲ್ಲಿರಿಸಿ ಮಂತ್ರಸ್ಥಲ ಕೂಡಿ ಲಯಸ್ಥಲದಲ್ಲಿ ಘನಸುಖಪರಿಣಾಮಿಯಾಗಿರ್ದ ಕಾಣಾ ನಿಮ್ಮ ಶರಣ. ಇಂತೀ ಸಗುಣ ನಿರವಯಾನಂದ ನಿಜಸುಖವನರಿಯಲರಿಯದೆ ಶೈವಾಗಮದ ನುಡಿಯವಿಡಿದು ಗಿರಿ ಗಹ್ವರ ನದಿಮೂಲ ಶರಧಿ ಕಾಂತಾರ ಕಾಶಿ ಮೊದಲಾದ ಕಂಡ ಕಂಡದುದಕ್ಕೆ ಹರಿದು ಹೋಗಿ ಅನ್ನೋದಕವ ಸಣ್ಣಿಸಿ ಸೊಪ್ಪು ಪಾಷಾಣಪುಡಿಯ ಕೊಂಡು ಕಷ್ಟಬಟ್ಟು ಕಾಣಲರಿಯದೆ ಕೆಟ್ಟುಹೋಗುವ ಭ್ರಷ್ಟರಿಗೆ ಜ್ಞಾನಿಯೆಂದು ನುಡಿವ ಶುನಕರಿಗೆ ನಾಯಕ ನರಕ ತಪ್ಪದು ಕಾಣಾ ಗುರುನಿರಂಜನ ಚನ್ನಬಸವಲಿಂಗಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಗುರುವುಳ್ಳನ್ನಕ್ಕರ ಶಿಷ್ಯನೆಂಬೆ, ಲಿಂಗವುಳ್ಳನ್ನಕ್ಕರ ಭಕ್ತನೆಂಬೆ, ಜಂಗಮವುಳ್ಳನ್ನಕ್ಕರ ಶರಣನೆಂಬೆ, ಈ ತ್ರಿವಿಧವು ಕಾಣದಿರ್ದಡೆ ಗುರುನಿರಂಜನ ಚನ್ನಬಸವಲಿಂಗವೆಂಬೆ.
--------------
ದೇಶಿಕೇಂದ್ರ ಸಂಗನಬಸವಯ್ಯ
ಗುರುಮುಟ್ಟಿ ಗುರುವಾಗಿ ನಡೆವ ಅಪ್ರತಿಮ ಭಕ್ತನ ಅನುಸಂಧಾನದ ಬೆಳಗನೇನೆಂದುಪಮಿಸಬಹುದಯ್ಯಾ! ಗತಿಮತಿಯೋಗದ ರಂಜನೆಯ ವಾಸನೆಗೆ ನಿಲುಕದಿರ್ದ ನಿರಾಗಮದ ನಿಯತ ಗಂಪನೇನೆಂದರಿಯಬಹುದು! ನೆನಹ ನಿಜದಲ್ಲಿಟ್ಟು ಮನವ ಘನದಲ್ಲಿಟ್ಟು ಘನವ ಕರದಲ್ಲಿಟ್ಟು ವಿನಯ ಚರದಲ್ಲಿಟ್ಟು ಮಾಡುವ ಮಾಟತ್ರಯದೊಳಗೆ ನೀಟವಾಗಿರ್ದ ನಿರಂತರ ಗುರುನಿರಂಜನ ಚನ್ನಬಸವಲಿಂಗವು.
--------------
ದೇಶಿಕೇಂದ್ರ ಸಂಗನಬಸವಯ್ಯ
ಗುರುಮುಖದಿಂದೊಗೆದ ನಿರವಯಾನಂದ ಪ್ರಸಾದಮೂರ್ತಿಗೆ ಪರಿಯಿಂದೆಸೆವ ತನು ಮನ ಭಾವಾದಿ ಸಚ್ಚಿತ್ಪದಾರ್ಥವನು ಸಂಚಲವಿಲ್ಲದೆ ಸಾವಧಾನಿಯಾಗಿ, ಭಿನ್ನವಳಿದರ್ಪಿಸಿಯಾನಂದಿಸಬಲ್ಲಾತನೆ ಪ್ರಸಾದಿಯಯ್ಯಾ ಗುರುನಿರಂಜನ ಚನ್ನಬಸವಲಿಂಗದಲ್ಲಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ಗಂಡನಿಂದ ಗಳಿಸಿದರ್ಥವನು ಹಗಲಿರುಳಗೂಡಿ, ಮಂಡಲದೊಳಗುಳ್ಳ ಮಿಂಡರ ನೋಡಿ ನೋಡಿಯಿತ್ತಡೆ ಗಂಡನೈಶ್ವರ್ಯದ ಬೆಳಗು ಘನವಾಯಿತ್ತು ಮೂರು ಲೋಕದೊಳಗೆ ; ವಿನಯವಾಯಿತ್ತು ಸಕಲಸನ್ನಿಹಿತರಿಗೆ ; ಸನುಮತವಾಯಿತ್ತು ಗುರುನಿರಂಜನ ಚನ್ನಬಸವಲಿಂಗಕ್ಕೆ.
--------------
ದೇಶಿಕೇಂದ್ರ ಸಂಗನಬಸವಯ್ಯ
ಗೆಲ್ಲಸೋಲೆಂಬ ಕಲಿಧರ್ಮದಲ್ಲಿ ಗೆಲಬೇಕೆಂಬ ನರ ಸುರ ಖಗ ಮೃಗ ಕೀಟ ಕ್ರಿಮಿಗಳೆಲ್ಲ ಹೆಣಗುತಿಪ್ಪವಲ್ಲದೆ ಸೋಲಬೇಕೆಂಬ ಕುರುಹುಗಾಣದು ನೋಡಾ. ಸೋಲದಲ್ಲಿ ಭವಮಾಲೆ ಬಲಿಯಿತ್ತು ಕಲಿಯುಗ ಕಳೆವೊಡೆಯಿತ್ತು. ಅಂತಂತೆ ಶರಣಶಿವಾನುಕೂಲ. ಸೋಲಬಾರದ ಕರ್ತು ಸೋತುಬಂದಲ್ಲಿ ಸೋತುಗೆಲ್ಲುವುದಪೂರ್ವ. ಸೋತುಗೆಲ್ಲುವ ಸುಲಭವಳಿದು ಖ್ಯಾತಿವಡೆದು ಹೋಗಿ ಬಂದು ಹೋದರು ಗುರುನಿರಂಜನ ಚನ್ನಬಸವಲಿಂಗಕೀತೆರವಾಗಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ಗಜಬಜೆಯ ನೀಗಿ ನಿಜಬೆಳಗಿನಲ್ಲಿ ಸುಳಿವ ಸುಜ್ಞಾನಿ ಶರಣನಂಗವು ಆಚಾರಪ್ರಭೆಯೊಳಡಗಿಪ್ಪುದು. ಮನವು ಮಹಾನುಭಾವಪ್ರಕಾಶದೊಳಡಗಿರ್ಪುದು. ಪ್ರಾಣವು ಸಂಗಸುಖವಾಗಿರ್ಪುದು. ಅರಿವು ಗುರುನಿರಂಜನ ಚನ್ನಬಸವಲಿಂಗವಾಗಿರ್ಪುದು.
--------------
ದೇಶಿಕೇಂದ್ರ ಸಂಗನಬಸವಯ್ಯ
ಗುರುಮುಖದಿಂದುದಯವಾಗಿ ಬಂದ ಪ್ರಣವಾದಿ ಪಂಚಾಕ್ಷರವನು, ತನು ಮನ ಭಾವವಿರಹಿತನಾಗಿ ನೆನಹು ನಿಂದರೆ ಚಿನುಮಯ ಪರಶಿವಲಿಂಗ ತಾನೆ ಬೇರಿಲ್ಲ ನಿರಂಜನ ಚನ್ನಬಸವಲಿಂಗ ಸಾಕ್ಷಿಯಾಗಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ಗುರುಪ್ರಸಾದವನು ಪಡೆವೆನೆ ಎನಗಂಗವಿಲ್ಲ ಕಾಣಾ ! ಲಿಂಗಪ್ರಸಾದವ ಪಡೆವೆನೆ ಎನಗೆ ಮನವಿಲ್ಲ ಕಾಣಾ ! ಜಂಗಮಪ್ರಸಾದವ ಪಡೆವೆನೆ ಎನಗೆ ಪ್ರಾಣವಿಲ್ಲ ಕಾಣಾ ! ಗುರುನಿರಂಜನ ಚನ್ನಬಸವಲಿಂಗಾ ನೀವೆನ್ನಂಗ ಮನ ಪ್ರಾಣವಾಗಿ ತೆರಹಿಲ್ಲದಿರ್ಪ ಪರಮಸುಖಪ್ರಸಾದದೊಳೋಲಾಡುತಿರ್ದೆನು ಕಾಣಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಗುರುನಿರಂಜನ ಪರಮಕಟಾಕ್ಷಮಣಿಯೆನಗೆ ಸರ್ವಾಚಾರ ಸಂಪತ್ತ ತೋರ ಬಂದುದು ನೋಡಾ. ಆಚಾರಲಿಂಗವಾಗಿ ಶ್ರದ್ಧಾಭಕ್ತಿಯೊಳು ಸುಖಿಸಿ ಎನ್ನ ಸುಚಿತ್ತಹಸ್ತವ ಕೊಳಬಂದ ನೋಡಾ. ಗುರುಲಿಂಗವಾಗಿ ನೈಷಿ*ಕಭಕ್ತಿಯೊಳು ಪರಿಣಾಮಿಸಿ ಎನ್ನ ಸುಬುದ್ಧಿಹಸ್ತವ ಕೊಳಬಂದುದು ನೋಡಾ. ಶಿವಲಿಂಗವಾಗಿ ಸಾವಧಾನಭಕ್ತಿಯೊಳು ಆನಂದಿಸಿ ಎನ್ನ ನಿರಹಂಕಾರಹಸ್ತವ ಕೊಳಬಂದುದು ನೋಡಾ. ಜಂಗಮಲಿಂಗವಾಗಿ ಅನುಭಾವಭಕ್ತಿಯೊಳು ಸಂತೋಷಬಟ್ಟು ಎನ್ನ ಸುಮನಹಸ್ತವ ಕೊಳಬಂದುದು ನೋಡಾ. ಪ್ರಸಾದಲಿಂಗವಾಗಿ ಆನಂದಭಕ್ತಿಯೊಳು ಹರುಷಬಟ್ಟು ಎನ್ನ ಸುಜ್ಞಾನಹಸ್ತವ ಕೊಳಬಂದುದು ನೋಡಾ. ಮಹಾಲಿಂಗವಾಗಿ ಸಮರಸಭಕ್ತಿಯೊಳು ತೃಪ್ತಿಬಟ್ಟು ಎನ್ನ ಸದ್ಭಾವಹಸ್ತವ ಕೊಳಬಂದುದು ನೋಡಾ. ಇಂತು ಷಡುಲಿಂಗವಾಗಿ ಷಟ್‍ಸ್ಥಲವನ್ನಿತ್ತು ಷಡುಭಕ್ತಿಯೊಳಾನಂದಿಸಿ ನಿರಂಜನ ಚನ್ನಬಸವಲಿಂಗ ಸಂಬಂಧಿಯೆನಿಸಬಂದುದು ನೋಡಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಗಂಡಗಿಕ್ಕದೆ ಮಾಡಿ ತಪ್ಪಿಸಿ ತಿಂಬ ದಿಂಡೆಹೆಂಗಳೆಯಂತೆ ಕರ್ತುಗಳಿಗೆ ಅರ್ಥವ ಸವೆಯದೆ ಸಟೆವೆರೆದು ಬಾಳುವ ಕುಟಿಲಗಳ್ಳರಿಗೆಂತಪ್ಪುದಯ್ಯಾ ಭಕ್ತಿ ? ಸತ್ಯ ಧನವ ನಿತ್ಯ ನಿತ್ಯವರಿದು ಮರೆದಿತ್ತಡೆ ಕರ್ತುವೊಲಿವ ನಮ್ಮ ಗುರುನಿರಂಜನ ಚನ್ನಬಸವಲಿಂಗಾ.
--------------
ದೇಶಿಕೇಂದ್ರ ಸಂಗನಬಸವಯ್ಯ

ಇನ್ನಷ್ಟು ...