ಅಥವಾ
(220) (73) (20) (3) (8) (5) (0) (0) (17) (4) (3) (15) (0) (0) ಅಂ (31) ಅಃ (31) (141) (1) (59) (8) (0) (12) (0) (14) (0) (0) (0) (0) (1) (0) (0) (66) (0) (14) (5) (89) (68) (1) (50) (40) (85) (1) (5) (0) (34) (11) (24) (1) (81) (57) (0)

ಪದದಿಂದ ಪ್ರಾರಂಭವಾಗುವ ವಚನಗಳು:

ದಾರಿಮೂರರ ತೋರಿಕೆಗೆ ಗೋಚರವಿರಹಿತ ನಿರವಯಾನಂದ ಪರಬ್ರಹ್ಮವನರಿದು ತೆರಹಿಲ್ಲದಿರ್ಪ ಶರಣ ತನ್ನ ವಿನೋದಕಾರಣ ನೋಡಿ ಮಾಡಿತ್ತಡೆ ಜಡನಲ್ಲ ಕಾಣಾ. ಸಮ್ಯಕ್‍ಜ್ಞಾನಾನಂದಪರಿಪೂರ್ಣನು ನೋಡಿ ಮಾಡೀಯದಿರ್ದಡೆ ಶೂನ್ಯನಲ್ಲ ಕಾಣಾ. ಸತ್ಕ್ರಿಯಾಂಗಪರಿಪೂರ್ಣನು ಅಂತಿಂತೆನ್ನಲೆಡೆಯಿಲ್ಲ ಗುರುನಿರಂಜನ ಚನ್ನಬಸವಲಿಂಗವಾಗಿರ್ದ ನಿಜರೂಪಕ್ಕೆ.
--------------
ದೇಶಿಕೇಂದ್ರ ಸಂಗನಬಸವಯ್ಯ
ದಿವದೊಳಗೆ ದ್ಯುಮಣಿಯೊಪ್ಪಿ ತೋರುತ್ತಿಹುದು. ರಜನಿಯೊಳಗೆ ತಾರಾಪತಿಯೊಪ್ಪಿ ತೋರುತ್ತಿಹುದು. ಗಣತಿಂತಿಣಿಯೊಳಗೆ ಶಿವಾನುಭಾವವೊಪ್ಪಿ ತೋರುತ್ತಿಹುದು. ಗುರುನಿರಂಜನ ಚನ್ನ ಬಸವಲಿಂಗದೊಳಗೆ ಎನ್ನ ಮನವೊಪ್ಪಿ ತೋರುತ್ತಿಹುದು.
--------------
ದೇಶಿಕೇಂದ್ರ ಸಂಗನಬಸವಯ್ಯ
ದಶವಾಯುಗಳ ದೆಸೆಗೆಡಿಸಿ ಮಸಿಯ ಹೆಂಗಳೆಂದು ವಿಷಯನುರುಹಿ, ಕಸಮಲವ ಕಳೆದುಳಿದು ಶಶಿಧರನ ವಶಗತ ಮಾಡಿಕೊಂಡಾಚರಿಸುವಲ್ಲಿ ಅನುಪಮ ಕ್ರಿಯಾಜ್ಞಾನಬೆಳಗಿನ ಸುಖವೇದಿಯಾಗಿ ಆದಿ ಮಧ್ಯ ಅವಸಾನದನುವರಿದಿರಬೇಕು. ಅಂಗ ಮನ ಪ್ರಾಣ ಪ್ರಕಾಶಾವಧಾನ ನಿರಂತರ ನಿಜಾನಂದ ನಿಶ್ಚಿಂತನಾಗಿರಬೇಕು. ಗುರುನಿರಂಜನ ಚನ್ನಬಸವಲಿಂಗ ಪ್ರಸಾದಕ್ಕೆ ಪ್ರಸಾದಿಯಾಗಿರಬೇಕು.
--------------
ದೇಶಿಕೇಂದ್ರ ಸಂಗನಬಸವಯ್ಯ
ದ್ವಾದಶೇಂದ್ರಿಯಂಗಳು ಶೀಲಸಂಪಾದನೆಯ ಹಿಡಿದು ನಡೆವುತಿರ್ದ ಕಾರಣ, ಇಂದ್ರಿಯಾನಂದವೆಂಬಂಗದಲ್ಲಿ ನಾನೊಪ್ಪುತಿರ್ದೆನು. ದಶವಾಯುಗಳು ಸಚ್ಚರಿತದಿಂದಾಚರಿಸುತಿರ್ದ ಕಾರಣ, ಪ್ರಾಣಾನಂದವೆಂಬಂಗದಲ್ಲಿ ನಾನೊಪ್ಪುತಿರ್ದೆನು. ಶ್ರುತಿಜ್ಞಾನ ಮತಿಜ್ಞಾನ ಅವಧಿಜ್ಞಾನ ಮನಪರ್ಯಾಯಜ್ಞಾನ ನಿರುತಜ್ಞಾನ ವಿರಾಗತೆಜ್ಞಾನಂಗಳೆಲ್ಲ ಮಹಾಜ್ಞಾನವಿಡಿದಿರ್ದವಾಗಿ ಜ್ಞಾನಾನಂದವೆಂಬಂಗದಲ್ಲಿ ನಾನೊಪ್ಪುತಿರ್ದೆನು. ಜ್ಞಾನವಿಕೃತಿಭಾವ ವರ್ತನಾವಿಕೃತಿಭಾವ ಮೋಹನವಿಕೃತಿಭಾವಂಗಳೆಲ್ಲ ಮಹಾನುಭಾವವಾಗಿ ಸೂಚಿಸುತಿರ್ದಕಾರಣ, ಭಾವಾನಂದವೆಂಬಂಗದಲ್ಲಿ ನಾನೊಪ್ಪುತಿರ್ದೆನು. ಪುರಾಣತೂರ್ಯ ದ್ವೈತತೂರ್ಯ ಅದ್ವೈತತೂರ್ಯ ತ್ರಿಪುಟಿತೂರ್ಯ ಯೋಗತೂರ್ಯಾದಿಗಳೆಲ್ಲಾ ಶಿವಯೋಗತೂರ್ಯವಾಗಿ ಪರವಶವಾಗಿರ್ದಕಾರಣ, ತೂರ್ಯಾನಂದವೆಂಬಂಗದಲ್ಲಿ ನಾನೊಪ್ಪುತಿರ್ದೆನು. ಇಂತು ಪಂಚಾಂಗದಲ್ಲಿ ಪಂಚಾಚಾರ ಪೀಠವಾಗಿ ನಾನೊಪ್ಪುತಿರ್ದಕಾರಣ ಗುರುನಿರಂಜನ ಚನ್ನಬಸವಲಿಂಗ ಸನ್ನಿಹಿತ ಮಹದಾನಂದದೊಳೋಲಾಡುತಿರ್ದೆನು.
--------------
ದೇಶಿಕೇಂದ್ರ ಸಂಗನಬಸವಯ್ಯ
ದಿವದಿವಸಾನು ಅವಸ್ಥಾತ್ರಯದೊಳಾಲೋಚನೆಯಂಗೆಯ್ಯುತಿರ್ದೆನವ್ವಾ. ಕೆಳದಿಯರೊಂದಾಗಿ ಬೆಳುದಿಂಗಳೊಳು ನಿಂದು ಕಳವಳಗೊಂಡು ಸುಳುಹನಾಲಿಸುತಿರ್ದೆನವ್ವ, ಎನ್ನಂಗಳ ಮುಂದೆ ಆತ ಸನ್ನಿಹಿತ ಬಂದರೆ ನೋತ ಫಲ ಸಂಭವಿಸಿತ್ತೆನಗವ್ವ. ಕಾಯದಣಿವಂತೆ ಮಾಡಿ ಮುಂದುಗೊಂಡಿಪ್ಪೆ, ಮನದಣಿವಂತೆ ನೋಡಿ ಮುಂದುಗೊಂಡಿಪ್ಪೆ, ಪ್ರಾಣದಣಿವಂತೆ ನೀಡಿ ಮುಂದುಗೊಂಡಿಪ್ಪೆನವ್ವ. ಭಾವದಣಿವಂತೆ ಸಮಸುಖಾನಂದದೊಳೋಲಾಡುತ್ತ ಮುಂದುಗೊಂಡಿಪ್ಪೆ. ಗುರುನಿರಂಜನ ಚನ್ನಬಸವಲಿಂಗ ಶರಣರೆನ್ನ ಮನೆಗೆ ಬರುವಂತೆ ಮಾಡಾ ಎಲೆ ಅವ್ವಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ದಾಸೋಹಿ ದಾಸೋಹಿಗಳೆಂದು ಬೇಸರಿಲ್ಲದೆ ಅಂಚೆಬೆಂತನಂತೆ ದೇಶ ದೇಶವ ತಿರುಗಿ ಆಸೆಯೆಂಬ ಅದ್ಭುತ ಅಂಗಗೊಂಡು ಹೇಸಿಕೆಯೊಳು ಬಿದ್ದೇಳದ ಮಕ್ಷುಕನಂತೆ ಮಲಬದ್ಧ ಮನುಜರ ಬೋದ್ಥಿಸಿ ಕಾಡಿ ಕರೆಕರೆಸಿ, ಕಾಸಾದಿ ದ್ರವ್ಯವ ಕೊಂಡು ಬಂದು ಹಾಸಿ ಹಬ್ಬಕಿಕ್ಕಿ, ನಾಮಾಡಿದೆನೆಂಬ ನಾಯಿಯ ತೇಜವ ಹೊತ್ತು ತೊಳಲುವ ತಥ್ಯ ಭಂಡರ ಸೋಗಿಗೆ ಸೊಗಸರಯ್ಯಾ ನಿಮ್ಮ ಭಕ್ತರು ಗುರುನಿರಂಜನ ಚನ್ನಬಸವಲಿಂಗಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ದೇಶದೇಶವ ತಿರುಗುವರು ಧನಿಕರ ಧರ್ಮದಿಂದೆ. ದೇಶವ ತಿರುಗುವರು ಒಡಲ ಪೋಷಿಸುವುದರಿಂದ. ದೇಶವ ತಿರುಗುವರು ಮಲಮೂರರ ಆಸೆ, ವೇಶ್ಯೆಯ ಮಚ್ಚು ತಲೆಗೇರಿ, ಗುರುಸೇವೆ ಮುಂದುಗೊಂಡು ದೇಶಾಂತರವ ಮಾಡಲಿಲ್ಲ. ಲಿಂಗಪೂಜೆ ಮುಂದುಗೊಂಡು ದೇಶವ ತಿರುಗಲಿಲ್ಲ. ಜಂಗಮದಾಸೋಹ ಮುಂದುಗೊಂಡು ದೇಶವ ತಿರುಗಲಿಲ್ಲ. ಇಂತು ಅಪ್ರಯೋಜನ ಪ್ರಾಣಿಗಳ ಶಿವಯೋಗಿಗಳೆಂದು ನಿರ್ಮಲ ಗಮನಮತಿಮಹಿಮರು ನುಡಿದುಕೊಳ್ಳಲಾಗದು ಗುರುನಿರಂಜನ ಚನ್ನಬಸವಲಿಂಗಕ್ಕೆ ದೂರವಾದ ದುರ್ಜನರನು.
--------------
ದೇಶಿಕೇಂದ್ರ ಸಂಗನಬಸವಯ್ಯ
ದಿವಾಕರನ ದಿನಕರ್ಮದೊಳಗೆ ನಿಮಿಷಾರ್ಧ ಲಫ್ಸುಜಡತ್ವವಿಲ್ಲದೆ ಕಾರ್ಯನಾಗಿ ಕಾರಣಾನುಕೂಲಿಯಾದಂತೆ, ನಿಶಾಕರನು ಮಾಸದ್ವಂದ್ವಕರ್ಮಾದಿ ರಾಹುಬಾಧೆಯೊಳು ಲಘುಜಡತ್ವವಿಲ್ಲದೆ ಕಾರ್ಯನಾಗಿ ಕಾರಣಾನುಕೂಲಿಯಾದಂತೆ, ಅಂತಜ್ರ್ಞಾನ ಬಾಹ್ಯ ಶಾಂತಾನ್ವಿತ ಶರಣನು ತನ್ನ ನಿತ್ಯ ಜ್ಞಾನ ಕ್ರಿಯಾವರ್ತನದೊಳಗೆ ಗುರುಲಿಂಗಜಂಗಮ ಭಕ್ತಿ ವಿಭವ ವಿನಯವೆಂಬ ವಿಮಲತ್ವವನು ಜರೆಮರಣಾದಿ ದ್ವಂದ್ವಕರ್ಮ ಮಾಯಾ ಶಂಕಾ ವಿಷಮಬಾಧೆಯನೊಗೆದು ಲಫ್ಸುಜಡತ್ವವಿಲ್ಲದೆ ಕಾರ್ಯನಾಗಿ ಕಾರಣಾನುಕೂಲಿಯಾಗಿ ಮೆರೆವ ಮಹಿಮಾತಿಶಯವನುಳ್ಳ ಭಕ್ತನೆ ಸಾಕ್ಷಾತನೆಂಬೆ. ಚೆಲುವಾತ್ಮಾಂಗ ಪ್ರಾಣಾತ್ಮಪ್ರಿಯ ಸಿದ್ಧಲಿಂಗನಲ್ಲದೆ ಬೇರಿಲ್ಲ ಕಾಣಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ದೇಶಿಕಶಿವಯೋಗಿ ಭುವನಾಕಾಶವಿಡಿದು ದೇಶಾಂತರವ ಮಾಡುವ ಪರಿಯೆಂತೆಂದೊಡೆ: ಕನ್ನಡದೇಶದಿಂದೆ ನೋಡಿ, ಮರಾಠ ಮಲಯ ದೇಶವ ಹಿಂದೆ ಬಿಟ್ಟು, ಕೊಂಕಣದೇಶವಿಡಿದು ಕಲ್ಯಾಣಪುರವರಾಧೀಶ್ವರ ಬಸವರಾಜೇಂದ್ರನ ಕಂಡು ಶರಣುಹೋಗಬೇಕೆಂದು ಮಧ್ಯದೇಶದ ಧರ್ಮರಾಯನ ಕಂಡು ಮೂಕೋಟಿ ದ್ರವ್ಯವನಿತ್ತು ತೋರೆಂದಡೆ ಮುಟ್ಟಿ ಕರ್ನಾಟಕದೇಶದಿಂದೆ ತೋರಿದ ನೋಡಾ. ಕಂಡ ಕಲ್ಯಾಣದೊಳೊಪ್ಪುವ ಬಸವಣ್ಣಂಗೆ ಹೊರಗೊಳಗೊಳಗೆ ಕರಣತ್ರಯಗೂಡಿ ಚರಣಗಳ ಪಿಡಿದು ಸಕಲ ಜನರಿಗೆ ಉತ್ತರದೇಶದ ಪರಿಯನರುಪಲು ಸುಖಮುಖಿಗಳಾದವರು. ಅಲ್ಲಿಂದೆ ಮೂಡಣದೇಶವ ತಿರುಗಿ, ಬಂಗಾಳದೇಶಕ್ಕೆ ದಕ್ಷಿಣವಾದ ನಂಜುಂಡನ ಜಾತ್ರೆಯ ನೋಡಲು, ಆ ನಂಜುಂಡನ ಜಾತ್ರೆಯ ಮುನ್ನವೆ ಕೂಡಲಸಂಗಮನಾಥನ ಜಾತ್ರೆಯಾಗಿ ಕಾಣುತಿರ್ದಿತ್ತು. ಆ ಜಾತ್ರೆಯೊಳು ನಿಂದು ಪಾಂಡವದೇಶದ ಸುಖವನು ಕುಂತಣದೇಶದತ್ತ ಆರು ಮಠವ ನಿರ್ಮಿಸಿದ ಆರು ದರ್ಶನ ಗತಿಮತಿಯನರಿದು ಕುಂಭಕೋಣೆಯ ರಂಭೆಯ ಕೈವಿಡಿದು, ಪಶ್ಚಿಮದೇಶದಲ್ಲಿ ಪರಮಹರುಷವೆರೆದು ಘನಗಂಭೀರ ಕಡಲೋಕುಳಿಯಾಡುತಿರ್ದು ಗುರುನಿರಂಜನ ಚನ್ನಬಸವಲಿಂಗಸನ್ನಿಹಿತ ಅನಂತ ದೇಶವ ಪಾವನಮಾಡಿ ಮೀರಿದ ದೇಶದತ್ತ ಸಾರಿದನು.
--------------
ದೇಶಿಕೇಂದ್ರ ಸಂಗನಬಸವಯ್ಯ
ದಂಡೆ ತೊಂಡಲವ ಕಟ್ಟಿ ಮೆರೆವ ಮುತ್ತೈದೆಯಾಗಿ, ಹಸೆಯಮೇಲಣ ಮಾತ ಹುಸಿಯದೆ, ಕಸ ಮೂರರ ಹಸಿಗೆಯ ಬಸಿಗೆ ಸಿಲ್ಕದೆ, ಭಾವಾಭಾವವಳಿದುಳಿದ ಭಾವಭರಿತನಾಗಿರ್ದುದೆ, ಪರಮ ನಿರ್ವಾಣಪದಾಸ್ಪದ ಶರಣ ತಾನೆ ಕಾಣಾ ಗುರುನಿರಂಜನ ಚನ್ನಬಸವಲಿಂಗಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ದುರ್ಜನ ರಾಜ ತನ್ನ ದೋಷವನೊಳಕೊಂಡು ತಾನೇ ತೋರುವಂತೆ, ಜೀವನಿಗುಪದೇಶವನಿತ್ತಡೆ ಚರಿತೆಯೊಳು ಸಮಯಕ್ಕೆ ನೀಚಾಶ್ರಯವೆ ತೋರುತ್ತಿಹುದು. ಅದು ಕಾರಣ, ಪ್ರಕೃತಿಭಾವಿಗೆ ಅನುಗ್ರಹ ಸಲ್ಲದು ಗುರುನಿರಂಜನ ಚನ್ನಬಸವಲಿಂಗಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ದಿನವ ಬಲ್ಲವರು ತಿಥಿಯ ಬಲ್ಲವರು ವತ್ಸರವ ಬಲ್ಲವರು ಅವರು ಬಲ್ಲವರೆಂಬೆ ನಾಲ್ಕುಯುಗದಲ್ಲಿ. ದಿನವ ಬಲ್ಲವರು ತಿಥಿಯ ಬಲ್ಲವರು ವತ್ಸರವ ಬಲ್ಲವರು ಇವರು ಬಲ್ಲವರು ಎಂಬೆ ನಾಲ್ಕುಯುಗದಲ್ಲಿ. ಅಂಗವೊಂದೆ ಅನುಭಾವವೊಂದೆ ಸಂಗವೊಂದೆ ದ್ವಂದ್ವಕೆ ಅರಿದರಾಗುವೆ ಆಚಾರಂಗ ಗುರುನಿರಂಜನ ಚನ್ನಬಸವಲಿಂಗ.
--------------
ದೇಶಿಕೇಂದ್ರ ಸಂಗನಬಸವಯ್ಯ
ದೇಹಭಾವಶೂನ್ಯ ಶರಣಲಿಂಗ, ಮನಭಾವಶೂನ್ಯ ಶರಣಲಿಂಗ, ಪ್ರಾಣಭಾವಶೂನ್ಯ ಶರಣಲಿಂಗ, ಸರ್ವಶೂನ್ಯ ಶರಣ ಮಹಾಲಿಂಗ. ಈ ಲಿಂಗೈಕ್ಯನಂತಸ್ಥವನಜಗಣ್ಣ ಬಲ್ಲನಲ್ಲದೆ ನಾಮರೂಪಕ್ರಿಯಾಸಂಭೋಗಿಗಳೆತ್ತ ಬಲ್ಲರಯ್ಯಾ ಗುರುನಿರಂಜನ ಚನ್ನಬಸವಲಿಂಗಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ದಶಪಂಚಮಾಯಾಟಲನುರುಹಿ, ಪಂಚಾಚಾರವೇ ಪ್ರಾಣವಾಗಿ, ಕಾಯದ ಕರ್ಮಕತ್ತಲೆಯ ಪರಿಸಿ, ಅಷ್ಟಾವರಣವೇ ಅಂಗವಾಗಿ, ಗುರುಭಕ್ತಿ, ಲಿಂಗಪೂಜೆ ಜಂಗಮದಾಸೋಹವೆ ಮಹಾನುಭಾವವಾದ ಘನಮಹಿಮನೆ, ಮಹಾಮಹೇಶ್ವರ ಕಾಣಾ ಗುರುನಿರಂಜನ ಚನ್ನಬಸವಲಿಂಗ.
--------------
ದೇಶಿಕೇಂದ್ರ ಸಂಗನಬಸವಯ್ಯ