ಅಥವಾ
(220) (73) (20) (3) (8) (5) (0) (0) (17) (4) (3) (15) (0) (0) ಅಂ (31) ಅಃ (31) (141) (1) (59) (8) (0) (12) (0) (14) (0) (0) (0) (0) (1) (0) (0) (66) (0) (14) (5) (89) (68) (1) (50) (40) (85) (1) (5) (0) (34) (11) (24) (1) (81) (57) (0)

ಅಃ ಪದದಿಂದ ಪ್ರಾರಂಭವಾಗುವ ವಚನಗಳು:

ಅಂಗವಿಲ್ಲದ ಬಾಳಿಗೆ ಅಂಗವೆಂಬುದಿಲ್ಲ, ಅಂಗವಿಲ್ಲದ ಬಾಳಿಗೆ ಲಿಂಗವೆಂಬುದಿಲ್ಲ, ಸಂಗದ ಸುಖಮಯದ ಬಾಳಿಗೆ ತಾನಿಲ್ಲ ನೀನಿಲ್ಲ. ತಾನುಯೆಂಬುದು ಆಶ್ಚರ್ಯದ ಗತಿ, ಗುರುನಿರಂಜನ ಚನ್ನಬಸವಲಿಂಗಾ ನಿಮ್ಮ ಶರಣನಗತಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ಅಂಗವನರಿಯದೆ ಗುರುಭಕ್ತಿಯ ಮಾಡಲೊಪ್ಪಿದೆನು. ಮನವನರಿಯದೆ ಲಿಂಗಪೂಜೆಯ ಮಾಡಲೆಸವುತಿರ್ದೆನು. ಪ್ರಾಣವನರಿಯದೆ ಜಂಗಮದಾಸೋಹವ ಮಾಡಲು ಪ್ರಕಾಶವಾದೆನು. ಸತ್ತುಚಿತ್ತಾನಂದಕೆ ನಿತ್ಯ ಅಂಗ ಮನ ಪ್ರಾಣ ನಿರಂತರ ಶೋಭನ ಗುರುನಿರಂಜನ ಚನ್ನಬಸವಲಿಂಗ ಸಾಕ್ಷಿಯಾಗಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ಅಂತರಂಗದನುವ ಬಹಿರಂಗಕ್ಕೆ ಬೆರಸಿತಂದು ಹಿಡಿ ಹಿಡಿದು ನಡೆವುದೊಂದು ಕಡುಜಾಣದಾಗು, ಈ ಕುರುಹಿನೊಳು ನಿಂದು ಹೊರಗಣನೆರವಿಯ ಗುದ್ದಾಟಕ್ಕೆ ಸೆರೆಸೂರೆಹೋಯಿತ್ತು ಒಳಗಣ ಒಡವೆ ಊರು ಹಾಳಾದಲ್ಲಿ ಕ್ಷೇತ್ರದ ಸುಖವಾರಿಗೆ ? ಗುರುನಿರಂಜನ ಚನ್ನಬಸವಲಿಂಗ ಒಳಹೊರಗೆ ತನ್ನ ತಾ ನೋಡುತಾಡುತಿರ್ಪನು.
--------------
ದೇಶಿಕೇಂದ್ರ ಸಂಗನಬಸವಯ್ಯ
ಅಂತರಂಗದಲ್ಲಿ ಪರಿಪೂರ್ಣಜ್ಞಾನವಿರ್ದು ಬಹಿರಂಗದಲ್ಲಿ ವಿನೋದ ಕಾರಣ ಚರಿಸಿದೊಡೆ, ಅಂತರಂಗದಲ್ಲಿ ವಿಪರೀತ ದುಸ್ಸಾರಭರಿತವಾ ಬಹಿರಂಗದ ವೇಷರು ಹೆಂಡದ ಭಾಂಡದಂತೆ ತಮ್ಮ ತಾವರಿಯದೆ ಮುಂದುಗಾಣದೆ ನೋಯಿಸಿ ನುಡಿವರಯ್ಯಾ, ಅದು ತಾಗಲಮ್ಮದು. ಉಷ್ಣಕ್ಕೆ ನೊಂದು ಸೂರ್ಯಂಗೆ ಭೂಬಂಡು ನೆಗೆದೊಗೆದರೆ ತನಗಲ್ಲದೆ ತಾಗಲರಿಯದು. ಇದು ಕಾರಣ ಈ ಒಡಲಗಿಚ್ಚಿನ ತುಡುಗುಣಿಗಳ ಎನ್ನತ್ತ ತೋರದಿರಯ್ಯಾ ಗುರುನಿರಂಜನ ಚನ್ನಬಸವಲಿಂಗಾ, ನಿಮ್ಮ ಧರ್ಮ ನಿಮ್ಮ ಧರ್ಮ.
--------------
ದೇಶಿಕೇಂದ್ರ ಸಂಗನಬಸವಯ್ಯ
ಅಂಗದಲ್ಲಿ ಆಚಾರಲಿಂಗಪ್ರಸಾದ ತಾನೆ, ಆತ್ಮನಲ್ಲಿ ಗುರುಲಿಂಗಪ್ರಸಾದ ತಾನೆ, ಪ್ರಾಣನಲ್ಲಿ ಶಿವಲಿಂಗಪ್ರಸಾದ ತಾನೆ, ಕರಣಂಗಳಲ್ಲಿ ಜಂಗಮಲಿಂಗಪ್ರಸಾದ ತಾನೆ, ವಿಷಯಂಗಳಲ್ಲಿ ಪ್ರಸಾದಲಿಂಗಪ್ರಸಾದ ತಾನೆ, ತೃಪ್ತಿಯಲ್ಲಿ ಮಹಾಲಿಂಗಪ್ರಸಾದ ತಾನೆ, ಸ್ಥೂಲಾಂಗದಲ್ಲಿ ನಿಷ್ಕಲಲಿಂಗಪ್ರಸಾದ ತಾನೆ, ಸೂಕ್ಷ್ಮಾಂಗದಲ್ಲಿ ಶೂನ್ಯಲಿಂಗಪ್ರಸಾದ ತಾನೆ, ಕಾರಣಾಂಗದಲ್ಲಿ ನಿರಂಜನಲಿಂಗಪ್ರಸಾದ ತಾನೆ, ಎನ್ನ ಒಳಹೊರಗೆ ತೆರಹಿಲ್ಲದೆ ಪರಿಪೂರ್ಣವಾಗಿಪ್ಪ ಗುರುನಿರಂಜನ ಚನ್ನಬಸವಲಿಂಗಪ್ರಸಾದ ತಾನೆ.
--------------
ದೇಶಿಕೇಂದ್ರ ಸಂಗನಬಸವಯ್ಯ
ಅಂಕೋಲೆಯ ಬಿತ್ತು ಪೃಥ್ವಿಯ ಮೇಲೆ ಬಿದ್ದು, ಆ ಕಾಲಕ್ಕೆ ಬಂದು ನೈಯ್ದುವಂತೆ, ತನ್ನ ನಿಮಿತ್ತ ತಾನು ತನುವಿಡಿದಿರ್ದು ಸರ್ವಾಚಾರಸಂಪತ್ತೆಂಬ ಸೌಖ್ಯದಿಂ ವಿನೋದಿಸಿ ಲೀಲೆ ನಿಂದಲ್ಲಿ ಗುರುನಿರಂಜನ ಚನ್ನಬಸವಲಿಂಗ ತಾನೆಯಾಗಿ ನಿರ್ವಯಲಾದುದೇ ಒಂದಾಶ್ಚರ್ಯವು.
--------------
ದೇಶಿಕೇಂದ್ರ ಸಂಗನಬಸವಯ್ಯ
ಅಂಗವಲ್ಲದ ಅಂಗಸಂಗವಾದ ಸರ್ವಜ್ಞ ಮಹಿಮಂಗೆ ನಿರ್ವಿಕಲ್ಪ ನಿಜವಾಗಿ ಭಾವ್ಯ ಭಾವ ಭಾವಕವೆಂಬುವೇನುಯಿಲ್ಲದ ನಿರ್ಭಾವದ ನಿಲುವೇ ನಿಂದು ನೆರೆಯರಿಯದಿರ್ದುದು ಗುರುನಿರಂಜನ ಚನ್ನಬಸವಲಿಂಗ ತಾನೆಂಬ.
--------------
ದೇಶಿಕೇಂದ್ರ ಸಂಗನಬಸವಯ್ಯ
ಅಂಗವಾರರಲ್ಲಿ ಬೆಳಗ ನಿಲ್ಲಿಸಿ, ಪ್ರಾಣಾಂಗವಾರರಲ್ಲಿ ಬೆಳಗ ನಿಲ್ಲಿಸಿ, ಎರಡೊಂದು ಪಾದವಿಡಿದು ಸಕಲರು ಕೂಡಿ ಬಂದು ಶರಣೆಂದು ಮರೆದರೆ, ಗುರುನಿರಂಜನ ಚನ್ನಬಸವಲಿಂಗದಲ್ಲಿ ಅದೇ ಪ್ರಾಣಲಿಂಗಸಂಬಂಧವು.
--------------
ದೇಶಿಕೇಂದ್ರ ಸಂಗನಬಸವಯ್ಯ
ಅಂಗವನರ್ಪಿಸಿದ ಮಂಗಲರೆಂದು ಹೇಳಿ ನಡೆವರಯ್ಯಾ ಉಚ್ಛಿಷ್ಟವನರಿಯದೆ. ಮನವನರ್ಪಿಸಿದ ಮಹಿಮರೆಂದು ಹೇಳಿ ನಡೆವರಯ್ಯಾ ಮಲಸಂಬಂಧವನರಿಯದೆ. ಪ್ರಾಣವನರ್ಪಿಸಿದ ಜಾಣರೆಂದು ಹೇಳಿ ನಡೆವರಯ್ಯಾ ಮಾಯಾಮೋಹದ ಮಚ್ಚು ಬಿಚ್ಚದೆ. ಭಾವವನರ್ಪಿಸಿದ ಮಹಾನುಭಾವಿಗಳೆಂದು ಹೇಳಿ ನಡೆವರಯ್ಯಾ ಭ್ರಾಂತಿಹಿಂಗದೆ. ಇಂತು ಚತುರಾರ್ಪಿತವಿಹೀನವಾಗಿ ಚತುರ್ವಿಧಸಾರಾಯರೆಂದರೆ ಗುರುಲಿಂಗಜಂಗಮಪ್ರಸಾದ ಮರೆಯಾಗಿರ್ದವು ಲಯಗಮನದತ್ತ ಕೆಡಹಿ ಗುರುನಿರಂಜನ ಚನ್ನಬಸವಲಿಂಗಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಅಂತರಂಗದವಿರಳಾನಂದ ಜ್ಯೋತಿರ್ಮಯ ಭಸಿತವನು ಪಾದಾದಿ ಮಸ್ತಕಕೆ ಸರ್ವಾಂಗದಲಿ ಧರಿಸಿ ಆದಿ ಮಧ್ಯ ಕಡೆಯೆಂಬ ಕರ್ಕಸವ ನೂಂಕಿ, ಕರ್ತು ನಿರಂಜನ ಚನ್ನಬಸವಲಿಂಗದಲ್ಲಿ ಸುಖಿಯಾದೆನು.
--------------
ದೇಶಿಕೇಂದ್ರ ಸಂಗನಬಸವಯ್ಯ
ಅಂಗಭವಿಯೊಡನೆ ಕ್ರಿಯೆಗೂಡಿ ನಡೆಯಲಾಗದು. ಮನಭವಿಯೊಡನೆ ಮಾತನಾಡಿ ಸುಖಿಸಿಕೊಳ್ಳಲಾಗದು. ಪ್ರಾಣಭವಿಯೊಡನೆ ಮಹಾನುಭಾವಪ್ರಸಾದ ಸಮರಸ ಮಾಡಲಾಗದು. ಅದೇನು ಕಾರಣವೆಂದಡೆ. ಅವರು ತ್ರಿವಿಧ ದ್ರೋಹಿಯಾದಕಾರಣ. ಗುರುಮಾರ್ಗಶೂನ್ಯರು ಗುರುನಿರಂಜನ ಚನ್ನಬಸವಲಿಂಗಕ್ಕೆ ದೂರ.
--------------
ದೇಶಿಕೇಂದ್ರ ಸಂಗನಬಸವಯ್ಯ
ಅಂದು ಬಂದ ಮುಸುಕು ತೆರೆದು ಹೊಂದಿಸಿಕೊಂಡು ಅಂದಂದಿಂಗವಧಾನ ಸುಖಾನಂದಮಯದೊಳಗೆ ಸುಳಿವುತಿರ್ದನಾಚಾರಲಿಂಗವೆನ್ನ ಸುಚಿತ್ತಪಾಣಿಯಲ್ಲಿ. ಶ್ರದ್ಧೆಸುಖಪರಿಣಾಮಿಯಾಗಿ ಮುಂದ ನೋಡುತ್ ಸುಳಿಯುತಿರ್ದ ಗುರುಲಿಂಗವೆನ್ನ ಸುಬುದ್ಧಿಹಸ್ತದಲ್ಲಿ. ನಿಷೆ* ಸುಖಪರಿಣಾಮಿಯಾಗಿ ಮುಂದೆ ನೋಡುತ್ತ ಸುಳಿಯುತಿರ್ದ ಶಿವಲಿಂಗವೆನ್ನ ನಿರಹಂಕಾರ ಪಾಣಿತಾಣದಲ್ಲಿ. ಸಾವಧಾನಸುಖಪರಿಣಾಮಿಯಾಗಿ ಮುಂದೆ ನೋಡುತ್ತ ಸುಳಿಯುತಿರ್ದ ಜಂಗಮಲಿಂಗವೆನ್ನ ಸುಮನಹಸ್ತದಲ್ಲಿ. ಅನುಭಾವಸುಖಪರಿಣಾಮಿಯಾಗಿ ಮುಂದೆ ನೋಡುತ್ತ ಸುಳಿಯುತಿರ್ದ ಪ್ರಸಾದಲಿಂಗವೆನ್ನ ಸುಜ್ಞಾನಕರಸ್ಥಲದಲ್ಲಿ. ಆನಂದಸುಖಪರಿಣಾಮಿಯಾಗಿ ಮುಂದೆ ನೋಡುತ್ತ ಸುಳಿಯುತಿರ್ದ ಮಹಾಲಿಂಗವೆನ್ನ ಸದ್ಭಾವಹಸ್ತದಲ್ಲಿ. ಸಮರಸಸುಖಪರಿಣಾಮಿಯಾಗಿ ಮುಂದೆ ನೋಡುತ್ತ ಸುಳಿಯುತಿರ್ದ ಗುರುನಿರಂಜನ ಚನ್ನಬಸವಲಿಂಗವೆನ್ನ ಪ್ರಾಣಲಿಂಗಿಯೆಂದೆನಿಸಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ಅಂಗವೆಂಬುವುದಿಲ್ಲ ಲಿಂಗವೇದಿ ಶರಣಂಗೆ, ಲಿಂಗವೆಂಬುವುದಿಲ್ಲ ಅಂಗಸಂಗಸನ್ನಿಹಿತ ಶರಣಂಗೆ, ಹಸ್ತವೆಂಬುವುದಿಲ್ಲ ಲಿಂಗನಿವಾಸ ಶರಣಂಗೆ, ಮುಖವೆಂಬುವುದಿಲ್ಲ ಸುಖಭರಿತ ಶರಣಂಗೆ, ಶಕ್ತಿಯೆಂಬುವುದಿಲ್ಲ ಮುಕ್ತಾಂಗ ಶರಣಂಗೆ, ಭಕ್ತಿಯೆಂಬುವುದಿಲ್ಲ ನಾದಬಿಂದು ಕಲಾಶೂನ್ಯ ಶರಣಂಗೆ. ಪದಾರ್ಥವೆಂಬುವುದಿಲ್ಲ ಗುರುಭಾವವಿರಹಿತ ಶರಣಂಗೆ, ಪ್ರಸಾದವೆಂಬುವುದಿಲ್ಲ ಗುರುನಿರಂಜನ ಚನ್ನಬಸವಲಿಂಗ ತಾನು ತಾನಾದ ಶರಣಂಗೆ.
--------------
ದೇಶಿಕೇಂದ್ರ ಸಂಗನಬಸವಯ್ಯ
ಅಂಗವಿಲ್ಲದೆ ಸಂಗಸನ್ನಿಹಿತ ಜಂಗಮವೆನ್ನಲ್ಲಿಗೈತಂದರೆ, ಮಂಗಳಾರತಿಯನೆತ್ತಿ, ಎನ್ನ ಸಂಗ ಎನ್ನ ಅಂಗ ಮನ ಭಾವಂಗಳೊಪ್ಪಿ ಕರೆತರುವೆ ಕೇಳಿರವ್ವಾ ! ಬಂದ ಬರವ ಕಂಡು ಕರಣತ್ರಯ ಕೈಗೂಡಿ ಮಾಡುವೆ ನೀವು ಮೆಚ್ಚುವಂತೆ ಕೇಳಿರವ್ವ ಕೆಳದಿಯರೆಲ್ಲ. ಮತ್ತೆ ನಿಮ್ಮ ನಿಲವೆನ್ನವೊಳಹೊರಗೆ ಸಯವಾದರೆ ಗುರುನಿರಂಜನ ಚನ್ನಬಸವಲಿಂಗದೊಲುಮೆ ನಿತ್ಯ ಕಾಣಿರವ್ವಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಅಂಗನೆಯ ಸಂಗಮೋಹಿಗೆ ಗುರುನಿಷೆ*ಯಿಲ್ಲ, ಲಿಂಗನಿµ*ಯಿಲ್ಲ, ಜಂಗಮನಿಷೆ*ಯಿಲ್ಲ, ಪಾದೋದಕಪ್ರಸಾದನಿಷೆ*ಯಿಲ್ಲ, ಈ ಪಂಚವಿಧ ಪ್ರಸನ್ನಸುಖವರಿಯದ ಮಲಸುಖಿಯು ತಾನೊಂದು ಕಾರ್ಯವರಿದುಬಂದು ಕಾರಣಿಕಪುರುಷನೆಂದರೆ ಈ ಹುಸಿ ಬಾಯಿಗೆ ಮುಂದೆ ಕಸಮಲ ಹುಡಿಯ ತುಂಬುವುದೇ ಸಾಕ್ಷಿ. ಇದು ಕಾರಣ, ಈ ಹುಸಿನಾಲಿಗೆಯನು ಇದರ ಚೇತನವನು ಅದರಾಸ್ವಾದವನು ಸುಟ್ಟು ಬಟ್ಟಿಟ್ಟಲ್ಲದೆ ಭಕ್ತಾದಿಕುಳವೆಂದರೆ ಅಘೋರನರಕ ತಪ್ಪದು ಕಾಣಾ ಗುರುನಿರಂಜನ ಚನ್ನಬಸವಲಿಂಗಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಅಂಗ ಮನ ಪ್ರಾಣ ಹುಸಿಯೆಂಬುದ ಕಂಡೆಯಲ್ಲ ಮೂಗಣ್ಣಿಂದೆ. ಗುಣವರ್ಗ ಊರ್ಮಿ ಭೂತೇಂದ್ರಿಯ ಕರಣವಿಷಯಾದಿ ಸಕಲನಿಃಕಲವೆಲ್ಲ ಹುಸಿಯೆಂಬುದ ಕಂಡೆಯಲ್ಲ ಮೂಗಣ್ಣಿಂದೆ. ತನುತ್ರಯ ಮಲತ್ರಯ ಈಷಣತ್ರಯ ಜೀವತ್ರಯ ಅವಸ್ಥಾತ್ರಯವೆಂಬ ಪಂಚಾದಶ ಮಾಯಾಪಟಲಾದಿ ತಾಮಸವೆಲ್ಲ ಹುಸಿಯೆಂಬುದ ಕಂಡೆಯಲ್ಲ ಮೂಗಣ್ಣಿಂದೆ. ಕಂಡೆ ಕಾಣೆ ಬೇಕು ಬೇಡ ನಾನು ನೀನೆಂಬ ದ್ವಂದ್ವಕರ್ಮದ ಕತ್ತಲೆ ಹುಸಿಯೆಂಬುದ ಕಂಡೆಯಲ್ಲ ಮೂಗಣ್ಣಿಂದೆ. ಇಂತಿವೆಲ್ಲ ಕಂಡ ಕಾಣಿಕೆ ನಿಶ್ಚಯವಾದಲ್ಲಿ ನಿಜ ನಿರ್ವಾಣದ ನಿಲವು ನೀನೆಂಬೆ ಗುರುನಿರಂಜನ ಚನ್ನಬಸವಲಿಂಗದಲ್ಲಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ಅಂಗಕ್ಕೆ ಲಿಂಗವ ಭಿನ್ನವಿಟ್ಟು ಆರಾಧಿಸಿ ಅರಿವ ಕುನ್ನಿಸಿದ್ಧಾಂತಿಯ ಭಾವಕ್ಕೆ ಚಿನ್ಮಯಪ್ರಕಾಶ ಪ್ರಾಣಲಿಂಗವು ಅಗೋಚರ ನೋಡಾ. ಅಂಗದಮೇಲೆ ಲಿಂಗಶೂನ್ಯವಾಗಿ ಆತ್ಮನೇ ಲಿಂಗವೆಂದು ಅಹಂಕಾರದಿಂದರಿವ ಅವಲಕ್ಷಣಪಸು ಗೊಡ್ಡು ವೇದಾಂತಿಯ ಭಾವಕ್ಕೆ ಮಹಾಪ್ರಕಾಶಮಯ ಪ್ರಾಣಲಿಂಗವು ಅಪ್ರಮಾಣವಾಗಿಹುದು ನೋಡಾ. ಮತ್ತೆಂತೆಂದೊಡೆ, ಅಂಗಕ್ಕೆ ಆಚಾರಸಂಬಂಧವಾಗಿ ಮನಕ್ಕೆ ಸುಜ್ಞಾನಸಂಬಂಧವಾಗಿ ಭಾವಕ್ಕೆ ಮಹಾನುಭಾವಸಂಬಂಧವಾದಲ್ಲಿ ಗುರುನಿರಂಜನ ಚನ್ನಬಸವಲಿಂಗದಲ್ಲಿ ಪ್ರಾಣಲಿಂಗಸಂಬಂಧ ನೋಡಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಅಂತರಂಗದಲ್ಲಿ ಅರಿಯದಿರ್ದ ಪರಮಮಹಾಲಿಂಗವು ಗುರುಮುಖದಿಂದೆ ಕರ ಮನ ಭಾವದಲ್ಲಿ ಥಳಥಳಿಸಿ ಬೆಳಗುತ್ತಿರಲು, ಅಲ್ಲಿಯೇ ಮುಕ್ತಿಯ ಪಡೆದಾನಂದಿಸಲರಿಯದೆ, ಕಾಶಿ ಗೋಕರ್ಣ ರಾಮೇಶ ನದಿ ಕಡಲತೀರವೆಂಬ ಪುಣ್ಯಕ್ಷೇತ್ರಂಗಳೆಂದು ಕಾಗೆ ಶಿಖರವನೇರಿ ಕರ್ರೆಂದು ಹೋದಂತೆ ಕಂಡರೇನು ಕಾಣಿಸಿಕೊಂಡರೇನು ಹೋಗಿ ಬರುವ ಮಾರ್ಗ ತಪ್ಪದು ಗುರುನಿರಂಜನ ಚನ್ನಬಸವಲಿಂಗ ಸಾಕ್ಷಿಯಾಗಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ಅಂಗಯ್ಯಲಿಂಗದನುವರಿದು ಅನಿಮಿಷಸುಖಿಯಾಗಲರಿಯದೆ, ತುಂಗಭದ್ರೆಯ ಹಂಪೆ, ನಂಜುಂಡಪರ್ವತ, ಕಾಶಿ, ಸಂಗಮಾದಿ ಪುಣ್ಯಕ್ಷೇತ್ರವ ಕಂಡು ಬದುಕುವೆನೆಂದು ಮಂಡಲವ ಸುತ್ತಿ ಬೆಂಡಾಗಿ ಅಸುವಳಿದು ಹೋಗುವ ಕಸಮನುಜರು, ಅವರೆತ್ತ ಬಲ್ಲರಯ್ಯಾ ಗುರುನಿರಂಜನ ಚನ್ನಬಸವಲಿಂಗದ ಘನವ.
--------------
ದೇಶಿಕೇಂದ್ರ ಸಂಗನಬಸವಯ್ಯ
ಅಂಗಕ್ಕೆ ಅಷ್ಟಾವರಣ, ಮನಕ್ಕೆ ಮಂತ್ರ, ಪ್ರಾಣಕ್ಕೆ ಪಂಚಾಚಾರ, ಭಾವಕ್ಕೆ ಅರಿವುಸಂಬಂಧವಾದ ಭಕ್ತ ಎಂತು ನಡೆದಂತೆ ಸಂತು, ಹಿಂದುಮುಂದೆಂಬ ಸಂದೇಹಿಗಳ ಮಾತು ಹಿಂದಕೆ ಸರಿ. ಗುರುನಿರಂಜನ ಚನ್ನಬಸವಲಿಂಗದಂಗವಾದ ಅಗಮ್ಯರಿಗೆ ಅಂತಿಂತೆನ್ನಲಾಗದು.
--------------
ದೇಶಿಕೇಂದ್ರ ಸಂಗನಬಸವಯ್ಯ
ಅಂಗ ಆಚಾರಂಗವಾಗದನ್ನಕ್ಕರ, ಮನಸು ಉನ್ಮನಸಾಗದನ್ನಕ್ಕರ, ಪ್ರಾಣ ಚಿತ್ಪ್ರಾಣವಾಗದನ್ನಕ್ಕರ, ಭಾವ ಮಹಾನುಭಾವವಾಗದನ್ನಕ್ಕರ, ಜೀವ ಸಜ್ಜೀವವಾಗದನ್ನಕ್ಕರ, ಇಹಪರಕಾಂಕ್ಷೆ ಅಳಿಯದನ್ನಕ್ಕರ, ಎಂತು ಮಾಹೇಶ್ವರನಪ್ಪನಯ್ಯಾ? ಕಾಯದಲ್ಲಿ ಗುರುಭಕ್ತಿ ಕಾಣದನ್ನಕ್ಕರ, ಮನದಲ್ಲಿ ಲಿಂಗಭಕ್ತಿ ಕಾಣದನ್ನಕ್ಕರ, ಪ್ರಾಣದಲ್ಲಿ ಜಂಗಮಭಕ್ತಿ ಕಾಣದನ್ನಕ್ಕರ, ಭಾವದಲ್ಲಿ ಪ್ರಸಾದಭಕ್ತಿ ಕಾಣದನ್ನಕ್ಕರ ಎಂತು ಮಾಹೇಶ್ವರನಪ್ಪನಯ್ಯಾ ? ಗುರುನಿರಂಜನ ಚನ್ನಬಸವಲಿಂಗದಲ್ಲಿ ಶರಣರ ಸಂಗವಿಲ್ಲದನ್ನಕ್ಕರ ಎಂತು ಮಾಹೇಶ್ವರನಪ್ಪನಯ್ಯಾ ?
--------------
ದೇಶಿಕೇಂದ್ರ ಸಂಗನಬಸವಯ್ಯ
ಅಂಗವಿಲ್ಲದ ನಿಲುವಿಂಗೆ ಆಚಾರವಿಲ್ಲ. ಆಚಾರವಿಲ್ಲದ ನಿಲುವಿಂಗೆ ನೆನಹಿಲ್ಲ. ನೆನಹು ಇಲ್ಲದ ನಿಲುವಿಂಗೆ ಅರುಹಿಲ್ಲ. ಅರುಹು ಇಲ್ಲದ ನಿಲುವಿಂಗೆ ಗುರುನಿರಂಜನ ಚನ್ನಬಸವಲಿಂಗವಿಲ್ಲದ ನಿಜೈಕ್ಯ ತಾನೆ ನೋಡಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಅಂಗದಲ್ಲಿ ಲಿಂಗಸನ್ನಿಹಿತನಾಗಿ, ಲಿಂಗದಲ್ಲಿ ಅಂಗಸನ್ನಿಹಿತನಾಗಿ, ಅಂಗಲಿಂಗಸಂಗದಲ್ಲಿ ಪರಮಪರಿಣಾಮಿಯಾಗಿ, ಇಹಪರವರಿಯದ ಪರಿಪೂರ್ಣಸುಖಾನಂದ ಶರಣಂಗೆ ನಮೋ ನಮೋ ಎಂದು ಬದುಕಿದೆನಯ್ಯಾ ಗುರುನಿರಂಜನ ಚನ್ನಬಸವಲಿಂಗಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಅಂಗವಿಲ್ಲದ ಭಕ್ತನ ಶೃಂಗಾರವ ನೋಡಾ ! ಮನವಿಲ್ಲದ ಭಕ್ತನ ಮಚ್ಚು ನೋಡಾ ! ಪ್ರಾಣವಿಲ್ಲದ ಭಕ್ತನ ಘನವ ನೋಡಾ ! ಭಾವವಿಲ್ಲದ ಭಕ್ತನ ಸುವಿಚಾರವ ನೋಡಾ ! ಪರಿಜ್ಞಾನವಿಲ್ಲದ ಭಕ್ತನ ಇರವ ನೋಡಾ ! ಗುರುನಿರಂಜನ ಚನ್ನಬಸವಲಿಂಗದಲ್ಲಿ ಸಮರಸವ ನೋಡಾ !
--------------
ದೇಶಿಕೇಂದ್ರ ಸಂಗನಬಸವಯ್ಯ
ಅಂತಾಲಯದೊಳೊಂದಿ ಚರಿಸುವ ಭ್ರಾಂತಿಮಾಯೆಯ ನಿಂತು ನೋಡುವರನಾರನು ಕಾಣೆನು, ನೋಡುವ ನೋಟಕರ ನುಂಗುತ್ತ ಉಗುಳುತ್ತ ಉಚ್ಫಿಷ್ಟ ರೂಪನೆ ಮಾಡಿ ಕಾಡಿತ್ತು ಷಡುದರ್ಶನಾದಿ ಸಕಲರನು ; ಇನ್ನುಂಟೆ ನಿನಗಿದಿರು ನಿರಂಜನ ಚನ್ನಬಸವಲಿಂಗ ಶರಣರಲ್ಲದೆ ?
--------------
ದೇಶಿಕೇಂದ್ರ ಸಂಗನಬಸವಯ್ಯ

ಇನ್ನಷ್ಟು ...