ಅಥವಾ
(220) (73) (20) (3) (8) (5) (0) (0) (17) (4) (3) (15) (0) (0) ಅಂ (31) ಅಃ (31) (141) (1) (59) (8) (0) (12) (0) (14) (0) (0) (0) (0) (1) (0) (0) (66) (0) (14) (5) (89) (68) (1) (50) (40) (85) (1) (5) (0) (34) (11) (24) (1) (81) (57) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಏನೆಂಬೆನೆಂತೆಂಬೆನೆನ್ನ ಮನಕ್ಕೆ ನಾಚಿಕೆ ಬಾರದೇಕೆ ? ಆಗಮನುಡಿಯ ಕೇಳುವುದು, ಇತರ ಸಾಗಿಸಿ ಹೇಳುವುದು, ಶಿವಾನುಭಾವವ ಕೇಳುವುದು, ಅದರಂತೆ ಬೋಧೆಯ ಹೇಳುವುದು. ನಿತ್ಯಾನಿತ್ಯವನಿದಿರಿಟ್ಟು ಸತ್ಯವೇ ಮೋಕ್ಷ, ಅಸತ್ಯವೇ ನರಕವೆಂಬುದು. ಶ್ರುತಿಗುರುಸ್ವಾನುಭಾವವನುಳಿದು, ಗಿಳಿಪಶುಭಾವ ಬರಲುಂಟೆ ? ನಾಚಿಕೆ ತಾನೇಕೆ ಬಾರದು ? ಇಂತಹ ಮನವ ಸಂತೈಸುವರನಾರನು ಕಾಣೆ ಶರಣರಲ್ಲದೆ ನಿರಂಜನ ಚನ್ನಬಸವಲಿಂಗ.
--------------
ದೇಶಿಕೇಂದ್ರ ಸಂಗನಬಸವಯ್ಯ
ಏಳು ಸುತ್ತಿನ ಐದು ವರ್ಣದ ಪಟ್ಟಣಕ್ಕೆ ಒಂಭತ್ತು ಬಾಗಿಲು. ಹೊರವೊಳಯದಲೆರಡಗುಸೆಯ ಬಾಗಿಲು. ಮಂದೇಳು ದ್ವಾರ, ತುಂಬಿದ ವ್ಯಾಪಾರ, ಸರಕ ಕೊಳುಕೊಡೆಗಳುಂಟು. ಅದೆಂತೆಂದೊಡೆ : ಎರಡು ಬಾಗಿಲಲ್ಲಿ ತಳವಾರನ ವಾಸನೆಯನರಿದು ಮಾರುವದು. ಮತ್ತೆರಡು ಬಾಗಿಲಲ್ಲಿ ರಮ್ಯವಾದಖಿಳಜೀನಸು ಮಾರುವದು ಕೊತವಾಲನ ಮುಂದಿಟ್ಟು. ಮತ್ತೆರಡು ಬಾಗಿಲಲ್ಲಿ ಊರಹಿರಿಯನ ಮಾತಕೇಳಿ ಸಕಲವ ಮಾರುವದು. ಮತ್ತೊಂದು ಬಾಗಿಲಲ್ಲಿ ಶೆಟ್ಟಿ ಮುಂತಾಗಿ ಬೇಕಾದಂತೆ ಮಾರುವದು. ಇಂತು ಹೊರಗೊಳಗಿರ್ದ ಜನರು ಲೆಕ್ಕವಿಲ್ಲದೆ ಪಟ್ಟಣಶೆಟ್ಟಿಯ ಮಾತಿನೊಳಗಿರ್ದರು. ಎಂಟು ಕೊತ್ತಲ ಸುತ್ತಿ ವ್ಯಾಪಾರ ಮಾಡುವಲ್ಲಿ ಕಂಟಕ ಬಂದುದನೇನೆಂಬೆನಯ್ಯಾ! ಅಂಗೈಯೊಳರಳಿದ ಬೆಂಕಿ ಪಟುವಾಗಿ ಅಂಗಳದಲ್ಲಿ ಉರಿಯಿತ್ತು. ಪಟ್ಟಣ ಬೆಂದು, ಮಳಿಗೆಗಳು ಸುಟ್ಟು ಜನರೆಲ್ಲ ಉರಿದು ಕೊತ್ತಲೆಂಟಕ್ಕಾವರಿಸಲು ಶೆಟ್ಟಿ ಮಧ್ಯಬುರುಜನೇರಲು, ಬೆಂದ ತಲೆ ಉರಿದು ನಿಂದು ನೋಡಲು ಗುರುನಿರಂಜನ ಚನ್ನಬಸವಲಿಂಗದಲ್ಲಿ ಪ್ರಾಣಲಿಂಗಸಂಬಂಧವದು ಕಾಣಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಏನೂ ಇಲ್ಲದ ಠಾವಿನಲ್ಲಿ ನಿಂದು ಭೂಮಿಯ ನೋಡಲು ಶ್ರದ್ಧೆಯ ಕಳೆ ಕಾಣಬಂದಿತ್ತು. ನಿಂದು ಜಲವ ನೋಡಲು ನೈಷೆ*ಯ ಕಳೆ ಕಾಣಬಂದಿತ್ತು. ಬೆಂಕಿಯ ನೋಡಲು ಸಾವಧಾನಕಳೆ ಕಾಣಬಂದಿತ್ತು, ಗಾಳಿಯ ನೋಡಲು ಅನುಭಾವಕಳೆ ಕಾಣಬಂದಿತ್ತು ಆಕಾಶವ ನೋಡಲು ಆನಂದಕಳೆ ಕಾಣಬಂದಿತ್ತು ಆತ್ಮನ ನೋಡಲು ಸಮರಸದಕಳೆ ಕಾಣಬಂದಿತ್ತು. ಇದು ಕಾರಣ ತನ್ನ ತಾ ನೋಡಲು ಗುರುನಿರಂಜನ ಚನ್ನಬಸವಲಿಂಗವಾಗಿ ಕಣ್ಣುಗೆಟ್ಟು ನಿಜಲಿಂಗೈಕ್ಯವಾಯಿತ್ತು.
--------------
ದೇಶಿಕೇಂದ್ರ ಸಂಗನಬಸವಯ್ಯ
ಏಳು ಚಿಂತೆಯ ಹೊತ್ತು ಹಾಳೂರನಾಳುವ ಹಾವು ಹಾವಾಡಿಗನ ಮಡದಿಯ ಮಾಳದ ಹಬ್ಬ ಕೆರೆಯೊಳಗೆ ತಲೆಕೆಳಗಾಗಿ ಮುಳುಗಾಡುತಿಪ್ಪುದು ಮೂರು ಲೋಕವೆಲ್ಲವು. ಅದು ಕಾರಣ ತನ್ನಿಂದ ತನ್ನನರಿದ ಶರಣ ಮುನ್ನವೆ ಮುಂಗೈಯಲ್ಲಿ ಸಂಗವಮಾಡಿ ಕಳ್ಳರ ಕುಲಗೆಡಿಸಿ ಕೂಡಿ ಕೂಟಕ್ಕೆ ನೀಟವಾದಲ್ಲಿ ಸತ್ತು ಬದುಕಿ ನಿತ್ಯವಾದನು ಗುರುನಿರಂಜನ ಚನ್ನಬಸವಲಿಂಗದಲ್ಲಿ.
--------------
ದೇಶಿಕೇಂದ್ರ ಸಂಗನಬಸವಯ್ಯ