ಅಥವಾ
(220) (73) (20) (3) (8) (5) (0) (0) (17) (4) (3) (15) (0) (0) ಅಂ (31) ಅಃ (31) (141) (1) (59) (8) (0) (12) (0) (14) (0) (0) (0) (0) (1) (0) (0) (66) (0) (14) (5) (89) (68) (1) (50) (40) (85) (1) (5) (0) (34) (11) (24) (1) (81) (57) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಲಿಂಗವು ಜ್ಞಾನಸಂಸಾರಿ, ಜಂಗಮವು ವೈರಾಗ್ಯಸಂಸಾರಿ. ಈ ಸಂಸಾರದ ಸಂದನುರುಹಿ ನಿಃಸಂಸಾರಿಯಾದ ನಿರುಪಮಾನಂದೈಕ್ಯನ ಪದವ ತೋರಿಸಾ ನಿಮ್ಮ ಧರ್ಮ ಗುರುನಿರಂಜನ ಚನ್ನಬಸವಲಿಂಗಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಲಿಂಗಮುದ್ರೆಯ ಕ್ಷೇತ್ರದೊಳಗೊಂದು ಬಾಳೆಯ ಬನವಿಪ್ಪುದು. ಆ ಬನಕೊಂದು ಏಳು ಸೋಪಾನದ ಬಾವಿಯಿಪ್ಪುದು. ಆ ಬಾವಿಯ ಉದಕವನು ಎತ್ತುವ ಮನುಜರಿಲ್ಲದೆ, ಸತ್ವಕೈಯಿಂದೆತ್ತಿ ಸುತ್ತಲಿಕ್ಕೆ ಸೂಸದೆ ನಿವೇದಿಸಿಕೊಂಡರೆ ನಿತ್ಯ ಫಲವು ಸವಿಚಿತ್ರವಾಗಿಪ್ಪುದು. ಒಡೆಯ ಬಂಟರ ನಡೆಯಲ್ಲದೆ ನೋಡಿರೆ ಪರಿಣಾಮಪರವಲ್ಲ ಗುರುನಿರಂಜನ ಚನ್ನಬಸವಲಿಂಗಾ ನಿಮ್ಮ ಶರಣಂಗೆ.
--------------
ದೇಶಿಕೇಂದ್ರ ಸಂಗನಬಸವಯ್ಯ
ಲಕ್ಷವಂದನು ಲಕ್ಷಿಸಿ ಲಕ್ಷಿಸಲರಿಯದೆ ಅಂತರ್ಲಕ್ಷ, ಮಧ್ಯರ್ಲಕ್ಷ, ಬಹಿರ್ಲಕ್ಷವೆಂದು ತನುಕರಣೇಂದ್ರಿಯಾಯಾಸದಿಂದರಿವುದೇನು? ಆದದ್ದೇನು? ಅವಿರಳಪ್ರಭಾನಂದ ಪ್ರಾಣಲಿಂಗವನರಿವಡೆ ಆಯಾಸವಿಲ್ಲದೆ ಅರಿದಾನಂದಿಸಬೇಕು ಕಾಣಾ ಗುರುನಿರಂಜನ ಚನ್ನಬಸವಲಿಂಗಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಲಿಂಗವೆಂಬ ಭಾವವಂಗದಲ್ಲರತು, ಅಂಗವೆಂಬ ಭಾವ ಲಿಂಗದಲ್ಲರತು, ಲಿಂಗ ಅಂಗವೆಂಬ ಭಾವ ನಿಜದಲ್ಲರತು, ನಿರ್ವಾಣಪದದಲ್ಲಿ ನಿವಾಸವಾದ ನಿರ್ಭೇದ್ಯಂಗೆ, ನಡೆದುದೇ ಸತ್ಕ್ರಿಯೆ, ನುಡಿದುದೇ ಶಿವಾನುಭಾವ, ಹಿಡಿದುದೇ ಮಹಾಜ್ಞಾನ. ಗುರುನಿರಂಜನ ಚನ್ನಬಸವಲಿಂಗಾ, ನಿಮ್ಮ ಶರಣ ಅಪೂರ್ವಚರಿತನು.
--------------
ದೇಶಿಕೇಂದ್ರ ಸಂಗನಬಸವಯ್ಯ
ಲಿಂಗಸಂಬಂದ್ಥಿಗಳೆಂದು ಹೇಳಿಕೊಂಬ ಹೆಂಗಳೆ ಹೇಮಲೋಷ್ಠ್ರ ರತಿಸಂಯುಕ್ತ ಮತಿನಾಶ ಮಲಭುಂಜಕರು, ಅತೀತಪ್ರಸಾದವನರಿದರ್ಪಿಸಿಕೊಂಬ ಭೇದವನರಿಯದೆ ಹಸುವಿನೊಡಲಿಗೆ ಹವಣವರಿಯದೆ ಜಿನುಗುವ ಜಿಹ್ವೆಲಂಪಟಗೂಡ್ಥಿ ಕೈದುಡುಕಿಗಳಿಂದೆ ನೆಗೆನೆಗೆದು ಕೊಂಬ ಅಘಬಂಧರೆತ್ತ? ಅಪ್ರತಿಮನೆತ್ತ? ಸಲೆ ತತ್ವವೆತ್ತ? ಗುರುನಿರಂಜನ ಚನ್ನಬಸವಲಿಂಗಕ್ಕಂಗವಾಗಿರ್ದ ಅನುಪಮ ಪ್ರಸಾದಿಯೇ ನಿತ್ಯ ಕಾಣಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಲಿಂಗಜಂಗಮ ಸಂಗಸನ್ನಿಹಿತನಾದ ಶರಣಂಗೆ ಭಾವವಿಲ್ಲದ ಕಾಯ, ಕಲ್ಪನೆಯಿಲ್ಲದ ಮನ, ಗುಣಶೂನ್ಯ ಪ್ರಾಣ, ಭ್ರಾಂತಿವಿರಹಿತ ಭಾವ, ಧರ್ಮವಿಲ್ಲದ ಇಂದ್ರಿಯ, ಇಂತು ಸಕಲ ವಿಷಯ ಹೊಂದಿ ಶರಣೆಂದು ನೈಷ್ಠೆವೆರೆದು ನಲಿಯುತಿರ್ದವು ಗುರುನಿರಂಜನ ಚನ್ನಬಸವಲಿಂಗಕ್ಕೆ.
--------------
ದೇಶಿಕೇಂದ್ರ ಸಂಗನಬಸವಯ್ಯ
ಲೀಲೆಯ ನೇಮಕ್ಕೆ ಹುಟ್ಟಿ ಬೆಳೆದು ಅಳೆಯ ಬಂದಾಣತಿಗೆ ಕಟ್ಟಳೆಯ ಕಡೆಗಿಡದೆ ಕಾಣಬೇಕು. ಹುಟ್ಟಿದೆನೆನಬಾರದು ಬೆಳೆದೆನೆನಬಾರದು ಅಳಿದೆನೆನಬಾರದು, ಅದೇ ಕೊರತೆ ನೋಡಾ. ಅನುಪಮ ನಾಮಕ್ಕೆ ಗುರುನಿರಂಜನ ಚನ್ನಬಸವಲಿಂಗ ತಾನಾದ ಶರಣ ಅರಿದರಿದಾಡುತಿರ್ದ.
--------------
ದೇಶಿಕೇಂದ್ರ ಸಂಗನಬಸವಯ್ಯ
ಲಿಂಗವೇ ತಾನಾದ ಶರಣ ತಾನೊಂದು ಕಾಯನಾಗಿ ಲಿಂಗವ ಬ್ಥಿನ್ನವಿಟ್ಟು ಅಷ್ಟವಿಧಾರ್ಚನೆ ಷೋಡಶೋಪಚಾರವೆಂಬ ಸಂಸಾರ ಗುಂಜಿನಲ್ಲಿ ತೊಡಕಿ ಬಳಲುವನಲ್ಲ. ಎಂತಿರ್ದಂತೆ ಪೂಜೆ ನಿತ್ಯ ಪರಿಪೂರ್ಣಪರಿಣಾಮಿ ಗುರುನಿರಂಜನ ಚನ್ನಬಸವಲಿಂಗ ತಾನೆ ಕಾಣಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಲಿಂಗಾಂಗಸಮರಸಾನುಭಾವವ ಬಲ್ಲೆನೆಂದು ನುಡಿದು ಕೊಂಬ ಖುಲ್ಲ ಕುಚೇಷಿ*ಗಳ ವಾಕ್ಪಟುವ ನೋಡಾ! ಕಾಯಸಂಗವರಿದಬಳಿಕ ಕರ್ಮಕ್ರಿಯಾವೇಷಧಾರಿಯಾಗಿ ಡಂಭಕನಡೆಯುಂಟೆ? ಮನಸಂಗವನರಿದಬಳಿಕ ಸೂತಕ ಪಾತಕ ಸಂಕಲ್ಪ ಸಂಶಯವೆಂಬ ಸಂಸ್ಕøತಿಯೊಳೊಡವೆರೆಯಲುಂಟೆ? ಪ್ರಾಣಸಂಗವನರಿದಬಳಿಕ ವಾಯುಪ್ರಕೃತಿಯ ವರ್ತಕವುಂಟೆ? ಭಾವಸಂಗವನರಿದಬಳಿಕ ಮಾಯಾಮೋಹ ವಿಷಯ ಭ್ರಾಂತಿನಸುಳುಹುಂಟೆ? ಕಾಯ ಮನ ಪ್ರಾಣ ಭಾವ ಕಳೆ ಹಿಂಗದೆ ಸಂಗಭಾವಿಯೆಂದರೆ ಹಿಂಗುವದು ಗುರುನಿರಂಜನ ಚನ್ನಬಸವಲಿಂಗಾನುಭಾವ.
--------------
ದೇಶಿಕೇಂದ್ರ ಸಂಗನಬಸವಯ್ಯ
ಲಿಂಗನಿಷ್ಪತ್ತಿಗಳಾಚರಣೆಯ ಕಂಡು, ಸಂಗಹೇಯ ಮಾಡದೆ, ಗುರುಮುಟ್ಟಿ ಗುರುವಾದೆವೆಂದು ಬಿಟ್ಟು ಹಿಡಿದು ಹಿಡಿದು ಬಿಟ್ಟು ಹೊಟ್ಟೆಯ ಹೊರೆಯಲೋಸುಗ ನಂಟುಬಿಚ್ಚಿ ಗಂಟಿಕ್ಕುವ ತುಂಟು ಹೊಯ್ಮಾಲಿಗಳನೆಂತು ಶರಣರೆನ್ನಬಹುದು ? ಕಾಸಿನಾಸೆಗೆ ದೇಶವ ತಿರುಗಿ, ಬೇಸರಿಲ್ಲದೆ ಬೇಡಿ ಬೇಡಿ ಘಾಸಿಯಾಗಿ, ಮುಂದಣ ಹೇಸಿಕೆ ಕಂಡು ಕಂಡು ಬೀಳುವ ಖೂಳ ಕುಟಿಲ ಕಾಳಮಾನವರನೆಂತು ಶರಣರೆನ್ನಬಹುದು ? ಬಾಳಿ ಬದುಕಲರಿಯದೆ ಕೇಳಿ ಮೇಳವ ಮಾಡಿ ಹಾಳುಗೋಷಿ*ಯಕಲಿತು, ಕಲಿಯುಪಾಧಿಯೊಳು ನಿಂದು ನಿಜಭಕ್ತಿ ಸುಜ್ಞಾನ ಪರಮವೈರಾಗ್ಯವನರಿಯದೆ ಹಿರಿಯರೆನಿಸಿಕೊಂಡು, ಹೋಗಿ ಬಂದುಂಬ ಕುರಿಗಳನೆಂತು ಶರಣರೆನ್ನಬಹುದು ? ನಮ್ಮ ಗುರುನಿರಂಜನ ಚನ್ನಬಸವಲಿಂಗದಂಗವೆಂಬ ಘನಪ್ರಸಾದವ ಹಿಂಗದಿರ್ದ ತ್ರಿವಿಧಶೂನ್ಯಶರಣರಂತಲ್ಲದ ಮರುಳುಗಳನೆಂತು ಶರಣರೆನ್ನಬಹುದು ?
--------------
ದೇಶಿಕೇಂದ್ರ ಸಂಗನಬಸವಯ್ಯ
ಲಕ್ಷಾನುಲಕ್ಷರು ಅವರು ನಿಮಗೆ ಮಾಡಲರಿಯರು. ಲಕ್ಷ ನೂರು ವರಪ್ರಸಾದಿಗಳೆಂಬೆ. ಮೂರು ಲಕ್ಷ ಕೋಟಿಗಳು ತ್ರಿವಿಧಪ್ರಸಾದಿಗಳೆಂಬೆ. ಆರು ಲಕ್ಷ ಕೋಟಿಗಳು ಷಟ್ಪ್ರಸಾದಿಗಳೆಂಬೆ ಮುನ್ನೂರು ಲಕ್ಷ ಕೋಟಿಯೊಳಗೆ ಗುರುನಿರಂಜನ ಚನ್ನಬಸವಲಿಂಗ ಶರಣಸನ್ನಿಹಿತ.
--------------
ದೇಶಿಕೇಂದ್ರ ಸಂಗನಬಸವಯ್ಯ
ಲಿಂಗದಿಂದುದಯ ನಮಗೆ, ಹೇಗಿರ್ದಡು ಲಿಂಗದಿಂದ ಬೆಳಿಗೆ ಎಂದು ಹೆಡಕೆತ್ತಿ ಆಚರಿಸಲಾಗದು. ಸತ್ತು ಹುಟ್ಟಿ ಬೆಳೆದು ಬೆಳೆಯೊಳು ಸುಯಿಧಾನಿ ಸುಖನರಿದು ಮರೆದು. ಮಡಿಯಬಲ್ಲ ಮಹಿಮಂಗಲ್ಲದಿಲ್ಲವೈಕ್ಯಪದ ಗುರುನಿರಂಜನ ಚನ್ನಬಸವಲಿಂಗದಲ್ಲಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ಲಿಂಗಬೆಳಗಿನೊಳು ಗಂಧವನಿತ್ತು ಕೊಂಬ ಮಂಗಲಮಹಿಮನ ನೋಡಾ. ಲಿಂಗಬೆಳಗಿನೊಳು ರಸವನಿತ್ತು ಕೊಂಬ ಚದುರಗುಣಯುತನ ನೋಡಾ. ಲಿಂಗಬೆಳಗಿನೊಳು ರೂಪವನಿತ್ತು ಕೊಂಬ ಸುಪ್ರಭಾಮಯನ ನೋಡಾ. ಲಿಂಗಬೆಳಗಿನೊಳು ಸ್ಪರ್ಶನವನಿತ್ತು ಕೊಂಬ ಪರುಷಮಯನ ನೊಡಾ. ಲಿಂಗಬೆಳಗಿನೊಳು ಶಬ್ದವನಿತ್ತು ಕೊಂಬ ಶುದ್ಧಪ್ರಭಾಮಯನ ನೋಡಾ. ಲಿಂಗಬೆಳಗಿನೊಳು ತೃಪ್ತಿಯನಿತ್ತು ಕೊಂಬ ಚಿತ್ಪ್ರಕಾಶಮಯನ ನೋಡಾ. ಗುರುನಿರಂಜನ ಚನ್ನಬಸವಲಿಂಗ ಬೆಳಗಿನೊಳು ಸಮರಸಪ್ರಸಾದಿಯ ಸಾವಧಾನವ ನೋಡಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಲೋಕದೊಳಗಿನ ಲೌಕಿಕವ ಕಂಡು ನೋಡಿ ನಿರಾಕಾರವನು ಸಾಕಾರದ ಕೈಯಿಂದ ಕೊಂಡು, ಸಂಪದಲೋಲ ಸಗುಣ ನಿರ್ಗುಣಯಾತ್ರಿಯ ಘನವ ನೋಡಾ ! ಘನವ ಮನ ವೇದಿಸಿ ಗಂಭೀರವಗತನದಾಗುವಾಗಿ ಆಗಿನ ಸೌಭಾಗ್ಯ ತಾನಾಗಿ ನಿಂದ ಗುರುನಿರಂಜನ ಚನ್ನಬಸವಲಿಂಗವು ಶರಣ.
--------------
ದೇಶಿಕೇಂದ್ರ ಸಂಗನಬಸವಯ್ಯ
ಲೋಕಚೋದ್ಯ ಶರಣಂಗೆ ಕುಂದಣ ತೆತ್ತಿಸಿದ ನವರತ್ನದ ಪದಕ ನೋಡಾ ಕೊರಳಲ್ಲಿ. ಮೂವತ್ತಾರು ಬಣ್ಣದ ನವಿನತರದಂಬರವ ಪೊದ್ದಿರ್ದನು ನೋಡಾ. ಕಲಿತ ನುಡಿ ಕಾಲೆರಡರಿಂದೆ ನೂರೊಂದು ಕುಲದ ಮನೆಗಳ ಪೊಕ್ಕು ಹೆಣ್ಣುಗಂಡಿನಾಟದೊಳಗೆ ತೇಕಾಡುತಿರ್ದನು ನೋಡಾ. ತಾಯಿಯ ತರ್ಕೈಸಿ ತಂದೆಯ ನೋಡಲು ಗುರುನಿರಂಜನ ಚನ್ನಬಸವಲಿಂಗ ಬೇರಿಲ್ಲ.
--------------
ದೇಶಿಕೇಂದ್ರ ಸಂಗನಬಸವಯ್ಯ
ಲೋಕಮಚ್ಚು ನಡೆಯ ಬಲಿಸುವನು, ಲೋಕಮಚ್ಚು ನುಡಿಯ ಕಲಿವನು. ಲೋಕದ ಮಚ್ಚು ಸೂತಕಾದಿ ಸಕಲಸನ್ನಿಹಿತನಾಗಿ ಪಾತಕದಲ್ಲಿ ಮುಳುಗಿ ಹೋಗುವ ವೇಷಗಳ್ಳನಂತಲ್ಲ. ಮತ್ತೆಂತೆಂದಡೆ, ಲಿಂಗಮಚ್ಚು ನಡೆಸಾಧಿಸುವ, ಲಿಂಗಮಚ್ಚು ನುಡಿಯ ಗಳಿಸುವ, ಲಿಂಗಮಚ್ಚು ಸೂತಕಪಾತಕಂಗಳ ವಿಸರ್ಜಿಸಿ ಅಜಾತ ಅಪ್ರತಿಮನಾಗಿಪ್ಪ ಗುರುನಿರಂಜನ ಚನ್ನಬಸವಲಿಂಗಾ ನಿಮ್ಮ ಶರಣ.
--------------
ದೇಶಿಕೇಂದ್ರ ಸಂಗನಬಸವಯ್ಯ
ಲಿಂಗದಲ್ಲಿ ಅಂಗವು ಸವೆದು, ಅಂಗದಲ್ಲಿ ಲಿಂಗವು ಸವೆದು, ಲಿಂಗಾಂಗದಲ್ಲಿ ಸಂಗಸಮನಿಸಿ ಸಮರಸವಾದ ಶರಣನೇ ಲಿಂಗೈಕ್ಯ. ಇಂತಲ್ಲದೆ ಸಂತೆಯ ಸ್ಥಲಕ್ಕೆಡೆಯಾಡುವ ಭ್ರಾಂತುಭವಿಗಳು ಬಂದ ಭಾವದಲ್ಲಡಗುವ ಸುಖವನರಿವರೆ ಗುರುನಿರಂಜನ ಚನ್ನಬಸವಲಿಂಗಾ.?
--------------
ದೇಶಿಕೇಂದ್ರ ಸಂಗನಬಸವಯ್ಯ
ಲಿಂಗಸಂಬಂಧಿಗಳೆಂಬ ಭಂಗಗೇಡಿ ಭವಿಗಳನೇನೆಂಬೆನಯ್ಯಾ? ಲಿಂಗಸಂಬಂಧಿಗಳ ಅಂಗದಲ್ಲಿ ಆಸೆ ಆಮಿಷ ಪ್ರಕೃತಿ ಪರಿಗಳೆಲ್ಲಿಹದೊ? ಲಿಂಗಪ್ರಾಣಿಗಳಿಗೆ ಮನದ ಸಂಕಲ್ಪವಿಕಲ್ಪಗಳೆಲ್ಲಿಹದೊ? ಪ್ರಾಣಲಿಂಗಿಗಳಿಗೆ ಪ್ರಾಣೇಂದ್ರಿಯ ವಿಷಯಸುಖವೆಲ್ಲಿಹದೊ? ಗುರುನಿರಂಜನ ಚನ್ನಬಸವಲಿಂಗದಲ್ಲಿ ಹುಸಿಡಂಭಕ ಹುಳುಕನಲ್ಲ ಪ್ರಾಣಲಿಂಗಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ಲಿಂಗವನರಿದ ನಿರ್ಮಲಾತ್ಮಕ ಶರಣನು ಕಂಗಳಬೆಳಗುಕೂಡಿ ನುಡಿವ, ಕಂಗಳಬೆಳಗುಕೂಡಿ ಹಿಡಿವ, ಕಂಗಳಬೆಳಗ ಕಡೆಗಿಟ್ಟು ಸಂಗಸನ್ನಿಹಿತನೆಂದು ಹಂಗಿನಲ್ಲಿ ಬಾಳುವ ಭಂಗಭಾವನಲ್ಲ, ಗುರುನಿರಂಜನ ಚನ್ನಬಸವಲಿಂಗ ಪ್ರಾಣಿಯಯ್ಯಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಲಕ್ಷ ಮೂರರಿಂದೆ ಸಿಕ್ಕಿಸಿ ಕಂಡು ಕೂಡಬೇಕೆಂದು ಮರುಳಜ್ಞಾನಯುಕ್ತಮನುಜರು ಮಹಾಘನಪ್ರಕಾಶಲಿಂಗವ ಕಾಣದಾದರಲ್ಲ! ಲಿಂಗಮೂರರಿಂದೆ ಸಂಗಸಂಬಂಧ ಸುಲಭಾನುಭಾವಬೆಳಗಿನೊಳು ಆದಿಬೆಳಗ ಬಿಂದುವಿನಲ್ಲಿ ನೋಡಿ, ನಾದಬಿಂದುಕಳಾತೀತ ಗುರುನಿರಂಜನ ಚನ್ನಬಸವಲಿಂಗದಲ್ಲಿ ಮಹಾಮಹೇಶ್ವರನೊಪ್ಪುತಿರ್ದನು.
--------------
ದೇಶಿಕೇಂದ್ರ ಸಂಗನಬಸವಯ್ಯ
ಲಿಂಗದ ನಿಜವರಿದು ಮರೆದು ಮಾಡುವ ಭಕ್ತನಿಂಗಿತವನೇನೆಂಬೆನಯ್ಯಾ ! ಕರ್ಮವಿಲ್ಲದ ಕಾಯ, ಕಲ್ಪನೆಯಿಲ್ಲದ ಮನ, ಮನವಿಲ್ಲದ ನೋಟ, ನೋಟವಿಲ್ಲದ ರುಚಿ, ರುಚಿಯಿಲ್ಲದ ಸೋಂಕು, ಸೋಂಕಿಲ್ಲದ ಸೊಮ್ಮು, ಸೊಮ್ಮುಯಿಲ್ಲದ ಸುಖ, ಸುಖವಿಲ್ಲದ ಶಬ್ದ, ಶಬ್ದವಿಲ್ಲದ ಗಂಧ, ಗಂಧವಿಲ್ಲದ ವಾಸನೆ, ವಾಸನೆಯಿಲ್ಲದ ಮಾಟ ಗುರುನಿರಂಜನ ಚನ್ನಬಸವಲಿಂಗದೊಳಗೆ ಕೂಟ.
--------------
ದೇಶಿಕೇಂದ್ರ ಸಂಗನಬಸವಯ್ಯ
ಲಿಂಗದಲ್ಲೈಕ್ಯವನರಿದ ಶರಣನ ಅಂಗ ಕರ್ಮದಲ್ಲಿ ಮುಳುಗದು, ಮನ ಮಾಯೆಯಲ್ಲಿ ಮುಳುಗದು, ಪ್ರಾಣ ದುಸ್ಸುಖದಲ್ಲಿ ಮುಳುಗದು, ಭಾವ ಭ್ರಮೆಯಲ್ಲಿ ಮುಳುಗದು. ಇಂತು ಚತುರ್ವಿಧಸನ್ನಿಹಿತನಾಗಿ ಗುರುನಿರಂಜನ ಚನ್ನಬಸವಲಿಂಗೈಕ್ಯ ನೋಡಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಲೋಹದ ಕುಲವ ಕೆಡಿಸುವಂದು, ಕೀಟನ ರೂಪವನಳಿಸುವಂದು, ಕರ್ಪುರದ ಕುರುಹ ಖಂಡಿಸುವಂದು, ಅಲ್ಲಿಗಲ್ಲಿಗೆ ತಂದು ಸ್ಥಾಪಿಸುವಂದು, ನಾಮಧಾರಕರು ನೀವು ಅರಿಯಲಿಲ್ಲವೆ ? ಆದಿ ಮಧ್ಯಾವಸಾನದೆಚ್ಚರಿಕಿಲ್ಲವೆ ? ನೀ ನಿಜಗುರುವಲ್ಲವೆ ? ನೋಡಿ ಅವಧಾನಿಸಿಕೊ, ಕೂಡಿ ಕಾಡಿದರೆ ಕುರುಹಿಂಗೆ ಹಾನಿ. ಬಂದಂತೆ ಪರಿಣಾಮಿಸಿಕೋ. ಗುರುತನದ ತೇಜ ಭೂಷಣದಿಂದೆ ಮರೆಯಬೇಕಾದರೆ ಗುರುನಿರಂಜನ ಚನ್ನಬಸವಲಿಂಗ ಸೂತ್ರದಿಂದೆ.
--------------
ದೇಶಿಕೇಂದ್ರ ಸಂಗನಬಸವಯ್ಯ
ಲಿಂಗದಲ್ಲಿ ನಿಷೆ* ನಿಬ್ಬೆರಸಿದ ನಿಜೈಕ್ಯಂಗೆ ತೋರುವವೇ ಅರಿಷಡ್ವರ್ಗಂಗಳು ? ತೋರುವವೇ ಷಡೂರ್ಮಿಗಳು ? ತೋರುವವೇ ಕುಲಾದಿ ಮದಂಗಳು ? ಸಾರಿಪ್ಪವೇ ಇಂದ್ರಿಯ ವಿಷಯ ರಚನೆಗಳು ? ಮೀರಿಪ್ಪವೇ ಮನಾದಿ ಕರಣವೃಂದಕಲೆತು ? ಗುರುನಿರಂಜನ ಚನ್ನಬಸವಲಿಂಗದಲ್ಲಿ ಅರತು ನಿಜವಾಗಿರ್ದುವು ಕಾಣಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಲಿಂಗವನರಿದ ಶರಣಂಗೆ ತನುಕ್ರಿಯೆಯೆಂಬುದೇನು ನಿಲ್ಲದು. ಮನಜ್ಞಾನಮಥನವರತು ಮಹವನೊಡವೆರೆದು, ಮಹತ್ವ ಮಹತ್ವ ಸ್ವಯವಾದ ಮಹಾಂತ ಗುರುನಿರಂಜನ ಚನ್ನಬಸವಲಿಂಗ ಮತ್ತಿಲ್ಲ ಸಮ್ಮುಖವಾಗಿ.
--------------
ದೇಶಿಕೇಂದ್ರ ಸಂಗನಬಸವಯ್ಯ

ಇನ್ನಷ್ಟು ...