ಅಥವಾ
(220) (73) (20) (3) (8) (5) (0) (0) (17) (4) (3) (15) (0) (0) ಅಂ (31) ಅಃ (31) (141) (1) (59) (8) (0) (12) (0) (14) (0) (0) (0) (0) (1) (0) (0) (66) (0) (14) (5) (89) (68) (1) (50) (40) (85) (1) (5) (0) (34) (11) (24) (1) (81) (57) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಎನ್ನ ಮನೆಯ ರಮಣನ ಮಾಧುರ್ಯವನೇನೆಂದು ಹೇಳಲಮ್ಮ. ನೆಲಮನೆಯಲ್ಲಿ ನೆರೆವ ಸುಖವ ಕಂಡವರರಿಯರು. ಮನಮಂದಿರದಲ್ಲಿ ಕೂಡುವ ಸುಖವ ವಾಗದ್ವೈತರೇನಬಲ್ಲರು ? ಸಿಖಿಮಂಟಪದಲ್ಲಿ ಸುರತದಸುಖವ ಕಣ್ಣುಗೆಟ್ಟನಾರಿಯರೇನಬಲ್ಲರು ? ಪವನಗೃಹದಲ್ಲಿ ನೆರೆವ ಸೌಖ್ಯವ ಅವರಿವರರಿಯರು. ಗಗನಮಂಟಪದಲ್ಲಿ ಸೊಗಸಿನಿಂದ ನೆರೆವ ಕುಶಲವ ಕೆಳಗಳವರರಿಯರು. ಮೇಲುಮಂದಿರ ಮಧ್ಯಮಂಟಪದಲ್ಲಿ ಲೋಲಸಂಯೋಗವ ಕಾಲಕೆಳಗಲವರರಿಯರು. ಗುರುನಿರಂಜನ ಚನ್ನಬಸವಲಿಂಗದ ನಿಜಾಂಗನೆಯಾನಲ್ಲದೆ, ಹೋಗಿಬರುವ ಸೋಗಿನ ನಾರಿಯವರೆತ್ತ ಬಲ್ಲರು, ಹೇಳಾಯಮ್ಮ.
--------------
ದೇಶಿಕೇಂದ್ರ ಸಂಗನಬಸವಯ್ಯ
ಎರಡು ಕಾಲಿನಿಂದೆ ನಡೆವಾತ ಭಕ್ತನಲ್ಲ ಎರಡು ಕಣ್ಣಿನಿಂದೆ ನೋಡುವಾತ ಭಕ್ತನಲ್ಲ. ಎರಡು ಕೈಯಿಂದೆ ಹಿಡಿವಾತ ಭಕ್ತನಲ್ಲ ಜಿಹ್ವೆ ರಸನೆಯಿಂದೆ ನುಡಿವಾತ ಭಕ್ತನಲ್ಲ. ಎರಡು ಕಿವಿಯಿಂದೆ ಕೇಳುವಾತ ಭಕ್ತನಲ್ಲ ಹೊರಗೊಳಗೆ ಗುರುನಿರಂಜನ ಚನ್ನಬಸವಲಿಂಗ ಸಮ್ಮುಖವಾಗಿ ಮಾಡುವಾತ ಭಕ್ತನಲ್ಲ.
--------------
ದೇಶಿಕೇಂದ್ರ ಸಂಗನಬಸವಯ್ಯ
ಎಲೆ ಅಯ್ಯಾ, ಆನು ನಿಮ್ಮಿಂದುದಯವಾದಕಾರಣ ನಿಮ್ಮ ವೇಷವ ಧರಿಸಿ ನಿಮ್ಮಿಚ್ಫೆಯಿಂದಾಚರಿಸಿದೆನಯ್ಯಾ. ನೀನೊಂದಾದಲ್ಲಿ ನಾನೊಂದಂಗವಾದೆ. ನೀನು ಮೂರಾದಲ್ಲಿ ನಾನು ಮೂರಂಗವಾದೆ. ನೀನಾರಾದಲ್ಲಿ ನಾನು ಆರಂಗವಾದೆ. ನೀನು ಮೂವತ್ತಾರಾದಲ್ಲಿ ನಾನು ಮೂವತ್ತಾರಂಗವಾದೆ. ನೀನು ಇನ್ನೂರಾಹದಿನಾರಾದಲ್ಲಿ ನಾನು ಇನ್ನೂರಾಹದಿನಾರಂಗವಾದೆ. ನೀನು ಪರಿಪೂರ್ಣವಾದರೆ ನಾನು ಪರಿಪೂರ್ಣ ಅಂಗವಾದೆ ನೀನು ಗುರುನಿರಂಜನ ಚನ್ನಬಸವಲಿಂಗವಾದಲ್ಲಿ ನಾನು ನಿರಾವಯನಾದೆ.
--------------
ದೇಶಿಕೇಂದ್ರ ಸಂಗನಬಸವಯ್ಯ
ಎನ್ನ ಸುಚಿತ್ತದ ಕಳೆಯಲ್ಲಿ ಬೆಳಗುವ ಲಿಂಗಕ್ಕೆ ಶ್ರದ್ಧೆವೆರೆದಂಗನೆಯಾಗಿ ಸುಖಿಸಿದೆನಯ್ಯಾ. ಎನ್ನ ಸುಬುದ್ಧಿಯ ಕಳೆಯಲ್ಲಿ ಬೆಳಗುವಲಿಂಗಕ್ಕೆ ನೈಷೆ*ವೆರೆದಂಗನೆಯಾಗಿ ಬಾಳಿದೆನಯ್ಯಾ. ಎನ್ನ ನಿರಹಂಕಾರದ ಕಳೆಯಲ್ಲಿ ಬೆಳಗುವ ಲಿಂಗಕ್ಕೆ ಸಾವಧಾನವೆರೆದಂಗನೆಯಾಗಿ ಸುಖಬಟ್ಟೆನಯ್ಯಾ. ಎನ್ನ ಸುಮನದ ಕಳೆಯಲ್ಲಿ ಬೆಳಗುವ ಲಿಂಗಕ್ಕೆ ಅನುಭಾವವೆರೆದಂಗನೆಯಾಗಿ ಶಾಂತಳಾದೆನಯ್ಯಾ. ಎನ್ನ ಸುಜ್ಞಾನದ ಕಳೆಯಲ್ಲಿ ಬೆಳಗುವ ಲಿಂಗಕ್ಕೆ ಆನಂದವೆರೆದಂಗನೆಯಾಗಿ ಪರಿಣಾಮಿಯಾದೆನಯ್ಯಾ. ಎನ್ನ ಸದ್ಭಾವದ ಕಳೆಯಲ್ಲಿ ಬೆಳಗುವ ಲಿಂಗಕ್ಕೆ ಸಮರಸವೆರೆದಂಗನೆಯಾಗಿ ಪರಿಪೂರ್ಣಪರಿಣಾಮಿಯಾದೆನಯ್ಯಾ. ಎನ್ನ ಒಳಹೊರಗಿನ ಕಳೆಯಲ್ಲಿ ಬೆಳಗುವ ಗುರುನಿರಂಜನ ಚನ್ನಬಸವಲಿಂಗಕ್ಕೆ ನಿಜಾಂಗನೆಯಾಗಿ ಅನುಪಮಸುಖಸುಗ್ಗಿಯೊಳೋಲಾಡುತಿರ್ದೆನಯ್ಯಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಎಚ್ಚರವಿರಲೆಂದು ನಿಶ್ಚಯಿಸಿದಿಷ್ಟ, ಅಷ್ಟವಾಗಿ ಅಂಗಮನಪ್ರಾಣಭಾವಂಗಳಿಗೆ ಗೋಚರವಾಗಿರಲು, ಅನ್ಯವ ನೆಚ್ಚಿ ನಾನು ಕೆಟ್ಟೆನಯ್ಯಾ ದಿಟವಾಗಿ. ಚಂದ್ರ ಸೂರ್ಯಮಾರ್ಗವಿಡಿದು ಕಟುಕರೊಳಗಿರ್ದ ಸೈತಾನಸೌಖ್ಯವೇದಿ, ಸಗುಣ ನಿರ್ಗುಣ ನಿರಾವಯವರಿದು ನಿವೇದಿಸಿಕೊಂಬ ನಿಜಪ್ರಸಾದಿಯ ದರ್ಶನ ಸ್ಪರ್ಶನ ಸಂಭಾಷಣೆಯೆಂಬ ಘನಪ್ರಸಾದವ ಕರುಣಿಸಯ್ಯಾ ಗುರುನಿರಂಜನ ಚನ್ನಬಸವಲಿಂಗಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಎನ್ನಾಧಾರಚಕ್ರದಲ್ಲಿ ನಕಾರ ಪಂಚಾಕ್ಷರಸ್ವರೂಪವಾದ ಆಚಾರಲಿಂಗವ ಕಂಡು ಉಚ್ಚರಿಸುತಿರ್ದೆನು. ಎನ್ನ ಸ್ವಾಧಿಷಾ*ನಚಕ್ರದಲ್ಲಿ ಮಕಾರ ಪಂಚಾಕ್ಷರಸ್ವರೂಪವಾದ ಗುರುಲಿಂಗವ ಕಂಡು ಉಚ್ಚರಿಸುತಿರ್ದೆನು. ಎನ್ನ ಮಣಿಪೂರಕಚಕ್ರದಲ್ಲಿ ಶಿಕಾರ ಪಂಚಾಕ್ಷರಸ್ವರೂಪವಾದ ಶಿವಲಿಂಗವ ಕಂಡು ಉಚ್ಚರಿಸುತಿರ್ದೆನು. ಎನ್ನ ಅನಾಹತಚಕ್ರದಲ್ಲಿ ವಾಕಾರ ಪಂಚಾಕ್ಷರಸ್ವರೂಪವಾದ ಜಂಗಮಲಿಂಗವ ಕಂಡು ಉಚ್ಚರಿಸುತಿರ್ದೆನು. ಎನ್ನ ವಿಶುದ್ಧಿಚಕ್ರದಲ್ಲಿ ಯಕಾರ ಪಂಚಾಕ್ಷರಸ್ವರೂಪವಾದ ಪ್ರಸಾದಲಿಂಗವ ಕಂಡು ಉಚ್ಚರಿಸುತಿರ್ದೆನು. ಎನ್ನ ಆಜ್ಞಾಚಕ್ರದಲ್ಲಿ ಓಂಕಾರ ಪಂಚಾಕ್ಷರಸ್ವರೂಪವಾದ ಮಹಾಲಿಂಗವ ಕಂಡು ಉಚ್ಚರಿಸುತಿರ್ದೆನು. ಎನ್ನ ಸರ್ವಾಂಗದಲ್ಲಿ ಷಡಕ್ಷರಸ್ವರೂಪವಾದ ಗುರುನಿರಂಜನ ಚನ್ನಬಸವಲಿಂಗವ ಕಂಡು ಉಚ್ಚರಿಸುತಿರ್ದೆನು ನಿತ್ಯವಾಗಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ಎಲೆ ಶಿವನೆ ನಿಮ್ಮನೊಲಿಸಿ ಕೂಡಬೇಕೆಂಬ ಖಂಡಿತ ಜ್ಞಾನದ ಕರ್ಮಕಾಂಡಿಗಳನು ಎಳತಟಗೊಳಿಸಿತ್ತು ಇದೇನು ನೋಡಾ ! ವ್ರತಿಗಳೆಂದು ಹೇಳಿಸಿಕೊಂಬ ಹಿರಿಯರ ಬಲೆಯೊಳೊಂದಿಸಿ ಕಡೆಗೆ ಮಾಡಿಸಿಕೊಂಡಿತ್ತು. ನಿಯಮಸ್ಥರೆನಿಸಿಕೊಂಬ ಹಿರಿಯರ ಸೀಮಿಯ ಸಂಸಾರದೊಳಿಟ್ಟು ಬೇರೆ ಮಾಡಿಸಿಕೊಂಡಿತ್ತು. ಶೀಲವಂತರೆನಿಸಿಕೊಂಬ ಹಿರಿಯರ ದುಶ್ಶೀಲದೊಳೊಂದಿಸಿ ಬಿಡಿಸಿಕೊಂಡಿತ್ತು. ಯತಿಗಳೆನಿಸಿಕೊಂಬ ಹಿರಿಯರ ಸತಿಯರ ರತಿಸಂಸಾರದೋರಿ ಬಿಡಿಸಿಕೊಂಡಿತ್ತು. ಗತಿಮತಿಗಳೆಂಬ ಹಿರಿಯರ ಭಿನ್ನ ಭಿನ್ನ ಸಂಸಾರವೆರಸಿ ಕಾಡಿಕೊಂಡಿತ್ತು ನಿಮ್ಮ ಮಾಯೆ ನಿರಂಜನ ಚನ್ನಬಸವಲಿಂಗಾ ನಿಮ್ಮ ಶರಣರನುಳಿದು.
--------------
ದೇಶಿಕೇಂದ್ರ ಸಂಗನಬಸವಯ್ಯ
ಎನ್ನ ಕಾಲು ನಡೆಶೃಂಗರಿಸುತಿರ್ದವು, ಎನ್ನ ಜಿಹ್ವೆ ನುಡಿಶೃಂಗರಿಸುತಿರ್ದುದು. ಎನ್ನ ಕಂಗಳು ನೋಟಶೃಂಗರಿಸುತಿರ್ದವು, ಎನ್ನ ಕರ್ಣ ಆಲಿಸಲನುಗೈಯುತಿರ್ದವು. ಎನ್ನ ನಾಸಿಕ ಭಕ್ತಿವಾಸನೆಯ ಶೃಂಗರಿಸುತಿರ್ದುದು. ಎನ್ನ ತ್ವಕ್ಕು ಸೇವಾನುಕೂಲಿಗೆ ಶೃಂಗರಿಸುತಿರ್ದುದು. ಎನ್ನ ಭಾವ ಸಮರಸಾನಂದಸುಖವ ಕೊಂಬುವುದಕ್ಕೆ ಶೃಂಗರಿಸುತಿರ್ದುದು ಗುರುನಿರಂಜನ ಚನ್ನಬಸವಲಿಂಗವೆಂಬ ಗುರುಲಿಂಗ ಜಂಗಮಕ್ಕೆ ನಿರಂತರ.
--------------
ದೇಶಿಕೇಂದ್ರ ಸಂಗನಬಸವಯ್ಯ
ಎನ್ನ ಅಂಗ ಮನ ಪ್ರಾಣಾನಂದವೇ ನೀವು ಬಂದ ಬರವಿಂಗೆ, ನಿಮ್ಮ ಕಾಯದ ಕಾಯಕದಲ್ಲಿ ವಂಚನೆಯುಳ್ಳರೆ ತಲೆದಂಡ. ನಿಮ್ಮ ಮನದ ಕಾಯಕದಲ್ಲಿ ಕಲ್ಪನೆಯುಳ್ಳರೆ ತಲೆದಂಡ. ನಿಮ್ಮ ಪ್ರಾಣದ ಕಾಯಕದಲ್ಲಿ ಪರಿಭ್ರಾಂತನುಳ್ಳರೆ ತಲೆದಂಡ. ಗುರುನಿರಂಜನ ಚನ್ನಬಸವಲಿಂಗಕ್ಕೆ ಅಂಗ ಪ್ರಾಣ ತೆರ ಅಗಲಿದರೆ ಅದೇ ಭಂಗ.
--------------
ದೇಶಿಕೇಂದ್ರ ಸಂಗನಬಸವಯ್ಯ
ಎಚ್ಚರಿಸಿಕೊಟ್ಟ ಸಚ್ಚಿದಾನಂದ ಗುರುವಿಂಗೆ ಮುಚ್ಚುಮರೆಯಾಗದೆ ಅಚ್ಚೊತ್ತಿದಂತಿರ್ದೆ. ಅರ್ಪಿಸಲರಿಯದೆ ಕಾರಣಕ್ಕೆ ಬಂದ ಕರ್ತುಗಳನರಿದು, ಅತ್ತಿತ್ತಲರಿಯದೆ ಚಿತ್ತವೆರಸಿ ಮರೆಯದೆ ಮರದಿರ್ದೆ ಅರ್ಪಿಸಲರಿಯದೆ. ಬೋಧಾನಂದಮಯಮೂರ್ತಿಗಳನರಿದು ಭೇದವಿರಹಿತನಾಗಿ ಆದಾದಿ ಸಕಲವನಿತ್ತು ಮರೆದಿರ್ದೆ ಅರ್ಪಿಸಲರಿಯದೆ. ಗುರುನಿರಂಜನ ಚನ್ನಬಸವಲಿಂಗಕ್ಕೆ ಭೃತ್ಯನಾಗಿತ್ತು ಮರೆದಿರ್ದೆ ಅರ್ಪಿಸಲರಿಯದೆ.
--------------
ದೇಶಿಕೇಂದ್ರ ಸಂಗನಬಸವಯ್ಯ
ಎನ್ನ ಪೃಥ್ವಿಸಂಬಂಧವನಳಿಸಿ ಚಿತ್ಪೃಥ್ವಿಯಲ್ಲಿ ತನ್ನ ತೋರಿ ಸಲಹಿದನು. ಎನ್ನ ಅಪ್ಪುಸಂಬಂಧವನಳಿಸಿ ಚಿದಪ್ಪುವಿನಲ್ಲಿ ತನ್ನ ತೋರಿ ಸಲಹಿದನು. ಎನ್ನ ವಾಯುಸಂಬಂಧವನಳಿಸಿ ಚಿದ್ವಾಯುವಿನಲ್ಲಿ ತನ್ನ ತೋರಿ ಸಲಹಿದನು. ಎನ್ನಾಕಾಶಸಂಬಂಧವನಳಿಸಿ ಚಿದಾಕಾಶದಲ್ಲಿ ತನ್ನ ತೋರಿ ಸಲಹಿದನು. ಎನ್ನಾತ್ಮಸಂಬಂಧವನಳಿಸಿ ಚಿದಾತ್ಮದಲ್ಲಿ ತನ್ನ ತೋರಿ ಸಲಹಿದನು. ಎನ್ನ ಸ್ಥೂಲಾಂಗಸಂಬಂಧವನಳಿಸಿ ತ್ಯಾಗಾಂಗವೆನಿಸಿ ತನ್ನ ತೋರಿ ಸಲಹಿದನು. ಎನ್ನ ಸೂಕ್ಷ್ಮಾಂಗಸಂಬಂಧವನಳಿಸಿ ಭೋಗಾಂಗವೆನಿಸಿ ತನ್ನ ತೋರಿ ಸಲಹಿದನು. ಎನ್ನ ಕಾರಣಾಂಗಸಂಬಂಧವನಳಿಸಿ ಯೋಗಾಂಗವೆನಿಸಿ ತನ್ನ ತೋರಿ ಸಲಹಿದನು. ಎನ್ನ ಸರ್ವಾಂಗಸಂಬಂಧವನಳಿಸಿ ಸರ್ವಾಂಗದಲ್ಲಿ ಸರ್ವಾಚಾರಸಂಪತ್ತು ತೋರಿ ಸಲಹಿದ ನಿತ್ಯವಾಗಿ ನಿರಂಜನ ಚನ್ನಬಸವಲಿಂಗ.
--------------
ದೇಶಿಕೇಂದ್ರ ಸಂಗನಬಸವಯ್ಯ
ಎನ್ನರುಹಿನಲ್ಲಿ ಗುರುವಾಗಿ ಬಂದು ನಿಂದಾನು, ಎನ್ನ ಪ್ರಾಣದಲ್ಲಿ ಲಿಂಗವಾಗಿ ಬಂದು ನಿಂದಾನು, ಎನ್ನ ಜ್ಞಾನದಲ್ಲಿ ಜಂಗಮವಾಗಿ ಬಂದು ನಿಂದಾನು, ಎನ್ನ ಘ್ರಾಣದಲ್ಲಿ ಪ್ರಸಾದವಾಗಿ ಬಂದು ನಿಂದಾನು, ಎನ್ನ ಜಿಹ್ವೆಯಲ್ಲಿ ಪಾದೋದಕವಾಗಿ ಬಂದು ನಿಂದಾನು, ಎನ್ನ ನೇತ್ರದಲ್ಲಿ ರುದ್ರಾಕ್ಷಿಯಾಗಿ ಬಂದು ನಿಂದಾನು, ಎನ್ನ ತ್ವಕ್ಕಿನಲ್ಲಿ ವಿಭೂತಿಯಾಗಿ ಬಂದು ನಿಂದಾನು, ಎನ್ನ ಶ್ರೋತ್ರದಲ್ಲಿ ಪಂಚಾಕ್ಷರಿಮಂತ್ರವಾಗಿ ಬಂದು ನಿಂದಾನು, ಇಂತು ಎನ್ನಂಗದಲ್ಲಿ ಅಷ್ಟಾವರಣವಾಗಿ ಕರಸ್ಥಲಕ್ಕೆ ಇಷ್ಟಲಿಂಗವಾಗಿ ಬಂದು ನಿಂದಾನು, ನಿರಂಜನ ಚನ್ನಬಸವಲಿಂಗ ತಾನೆ ನೋಡ ; ಎನ್ನ ಗುರುವರನು.
--------------
ದೇಶಿಕೇಂದ್ರ ಸಂಗನಬಸವಯ್ಯ
ಎಂಟರೊಳಗೆ ಬಂದವರು ಸುಂಟುಮಾಡಿ ಬದುಕಿಹೋದವರೊಳರೆ ? ಅವರೊಳಗಿನ ಸಕಲಸಂಜನಿತರು ಎಂಟರೊಳಬಂದವರು ಸುಂಟುಮಾಡಿ ಬದುಕಿಹೋದವರೊಳರೆ ? ಇವರೊಳಗಿನ ಸಕಲಸಂಜನಿತರು ಮತ್ತೆ ಅವರಂತು ಇವರಿಂತು ಸಮಗಂಡ ನಿಲುವೇ ಆಚಾರಂಗ ಗುರುನಿರಂಜನ ಚನ್ನಬಸವಲಿಂಗ.
--------------
ದೇಶಿಕೇಂದ್ರ ಸಂಗನಬಸವಯ್ಯ
ಎನ್ನ ಕಾಯದಲ್ಲಿ ನಿನ್ನ ಕಂಡು ನಾನು ಕಾಣಿಸಿಕೊಳ್ಳದಿರ್ದಡೆ ಹೊತ್ತು ನಡೆಯಬಹುದು. ಎನ್ನ ಮನದಲ್ಲಿ ನಿನ್ನ ಕಂಡುನಾನು ಶೂನ್ಯನಾದಡೆ ಹೊತ್ತು ನಡೆಯಬಹುದು. ಎನ್ನ ಪ್ರಾಣದಲ್ಲಿ ನಿನ್ನ ಕಂಡು ನಾನು ವಿರಹಿತನಾದಡೆ ಹೊತ್ತು ನಡೆಯಬಹುದು. ಎನ್ನ ಭಾವದಲ್ಲಿ ನಿನ್ನ ಕಂಡು ನಾನು ಲಯವನೈದಿದಡೆ ಹೊತ್ತು ನಡೆಯಬಹುದು, ಗುರುನಿರಂಜನ ಚನ್ನಬಸವಲಿಂಗದಲ್ಲಿ ಪ್ರಾಣಲಿಂಗಿಯ ನಾಮವನು.
--------------
ದೇಶಿಕೇಂದ್ರ ಸಂಗನಬಸವಯ್ಯ
ಎನ್ನ ಕಾಯದಕಳೆ ಬಸವಣ್ಣಂಗಾಭರಣವಾಯಿತ್ತು. ಎನ್ನ ಮನದಕಳೆ ಚನ್ನಬಸವಣ್ಣಂಗಾಭರಣವಾಯಿತ್ತು. ಎನ್ನ ಪ್ರಾಣದಕಳೆ ಪ್ರಭುದೇವರಿಗಾಭರಣವಾಯಿತ್ತು. ಎನ್ನರುಹಿನಕಳೆ ಮಡಿವಾಳಯ್ಯಂಗಾಭರಣವಾಯಿತ್ತು. ಗುರುನಿರಂಜನ ಚನ್ನಬಸವಲಿಂಗವೆಂಬ ನಾಮ ನಷ್ಟವಾಯಿತ್ತು.
--------------
ದೇಶಿಕೇಂದ್ರ ಸಂಗನಬಸವಯ್ಯ
ಎನ್ನ ತನುವಿನಲ್ಲಿ ಗುರುಪ್ರಕಾಶವ ಕಂಡು ಮಾಡುವೆನಯ್ಯಾ ದಣಿವಂತೆ ಭಕ್ತಿಯ. ಎನ್ನ ಮನದಲ್ಲಿ ಲಿಂಗಪ್ರಕಾಶವ ಕಂಡು ಮಾಡುವೆನಯ್ಯಾ ದಣಿವಂತೆ ಪೂಜೆಯ. ಎನ್ನ ಭಾವದಲ್ಲಿ ಜಂಗಮಪ್ರಕಾಶವ ಕಂಡು ಮಾಡುವೆನಯ್ಯಾ ದಣಿವಂತೆ ದಾಸೋಹವ. ಗುರುಲಿಂಗಜಂಗಮವೊಂದೆಂದು ಅಭಿನ್ನಭಾವದ ಬೆಳಗಿನೊಳಗೆ ಒಪ್ಪುತಿರ್ದೆನಯ್ಯಾ ಗುರುನಿರಂಜನ ಚನ್ನಬಸವಲಿಂಗ ಸನ್ನಿಹಿತ.
--------------
ದೇಶಿಕೇಂದ್ರ ಸಂಗನಬಸವಯ್ಯ
ಎಲೆ ಸಂಸಾರಿ ಜಂಗಮವೆ ಎನ್ನ ಗೃಹಕ್ಷೇತ್ರದ ಸುಖವನರಿಯದೆ ಅರಿದವನಲ್ಲ ಬನ್ನಿ. ಎನ್ನ ಸ್ತ್ರೀಯಾದಿ ಸೌಖ್ಯವನರಿಯದೆ ಅರಿದವನಲ್ಲ ಬನ್ನಿ. ಎನ್ನ ಕನಕಾದಿ ದ್ರವ್ಯಂಗಳ ಸುಖವನರಿಯದೆ ಅರಿದವನಲ್ಲ ಬನ್ನಿ. ಗುರುನಿರಂಜನ ಚನ್ನಬಸವಲಿಂಗಾ ನಿಮ್ಮ ಬರವಿಂಗೆ ನೈಷೆ* ಮುಂದೆ ಉಲಿಯುತ್ತಿದೆ ಬನ್ನಿ.
--------------
ದೇಶಿಕೇಂದ್ರ ಸಂಗನಬಸವಯ್ಯ