ಅಥವಾ
(220) (73) (20) (3) (8) (5) (0) (0) (17) (4) (3) (15) (0) (0) ಅಂ (31) ಅಃ (31) (141) (1) (59) (8) (0) (12) (0) (14) (0) (0) (0) (0) (1) (0) (0) (66) (0) (14) (5) (89) (68) (1) (50) (40) (85) (1) (5) (0) (34) (11) (24) (1) (81) (57) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಅನಾದಿ ಪರಶಿವಲಿಂಗವನು ತಮ್ಮ ವಶಗತವ ಮಾಡಿಕೊಂಡಾಚರಿಸುವ ಅಪ್ರತಿಮ ಶರಣರಿಗೆ ಬಿನುಗು ಮಾತಿನಲ್ಲಿ ಜಿನುಗುತಲೊಂದೊಂದು ಘನವ ಕಿರಿದಿಟ್ಟು, ಕಿರಿದ ಘನವಮಾಡಿ, ಹುಸಿಹುಂಡನ ಮಾಟವನು ಢಂಬಿಗಿಕ್ಕುವ ಭಂಡ ಮೂಕೊರೆಯರು ದಂಡಧರನಾಳಿನ ಕೈಯಲ್ಲಿ ಕೊಲ್ಲಿಸಿಕೊಳ್ಳರೆ? ಮುಂದೆ ಗುರುನಿರಂಜನ ಚನ್ನಬಸವಲಿಂಗವ ಮುಟ್ಟದೆ ಕೆಟ್ಟರು.
--------------
ದೇಶಿಕೇಂದ್ರ ಸಂಗನಬಸವಯ್ಯ
ಅಚ್ಚ ಮತ್ತೈದೆರೈವರೆನ್ನಿಚ್ಫೆಯೊಳಗಿಪ್ಪರು ನಿಮ್ಮಾದಿ ಶಿಶುವಾದಕಾರಣ. ನಚ್ಚಿ ಮಾಡಿದಡಿಗೆಯು ಅಚ್ಚಳಿಯದಿದ್ದಿತ್ತು ಆಡುತ ಬನ್ನಿ ಮೂವರೊಂದಾಗಿ. ಬೇಡಿಕೊಂಬುವನಲ್ಲ, ನೀಡಿ ನೂಕಿ ನಿಲ್ಲುವೆ ನಿಮ್ಮಾಣೆ ಗುರುನಿರಂಜನ ಚನ್ನಬಸವಲಿಂಗದಲ್ಲಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ಅಂಗವಲ್ಲದ ಅಂಗಸಂಗವಾದ ಸರ್ವಜ್ಞ ಮಹಿಮಂಗೆ ನಿರ್ವಿಕಲ್ಪ ನಿಜವಾಗಿ ಭಾವ್ಯ ಭಾವ ಭಾವಕವೆಂಬುವೇನುಯಿಲ್ಲದ ನಿರ್ಭಾವದ ನಿಲುವೇ ನಿಂದು ನೆರೆಯರಿಯದಿರ್ದುದು ಗುರುನಿರಂಜನ ಚನ್ನಬಸವಲಿಂಗ ತಾನೆಂಬ.
--------------
ದೇಶಿಕೇಂದ್ರ ಸಂಗನಬಸವಯ್ಯ
ಅಯ್ಯಾ, ಭಕ್ತಲಿಂಗಸಮರಸಾಂಗವೆಂತಿರ್ಪುದು ನೋಡಾ ! ಜಲ-ಜಲಗಲ್ಲಿನ ಕೂಟದಂತೆ, ಮುತ್ತುಂಡ ನೀರಿನಂತೆ, ಜ್ಯೋತಿಯೊಳರತ ತೈಲದಂತೆ ಇರ್ದುದು ಮಹದಂಗದ ನಿಲವು, ನಿಶ್ಚಯವದು ಕಾಣಾ ಮಹಾಘನ ಚನ್ನವೃಷಭೇಂದ್ರಲಿಂಗ.
--------------
ದೇಶಿಕೇಂದ್ರ ಸಂಗನಬಸವಯ್ಯ
ಅಂಗವಾರರಲ್ಲಿ ಬೆಳಗ ನಿಲ್ಲಿಸಿ, ಪ್ರಾಣಾಂಗವಾರರಲ್ಲಿ ಬೆಳಗ ನಿಲ್ಲಿಸಿ, ಎರಡೊಂದು ಪಾದವಿಡಿದು ಸಕಲರು ಕೂಡಿ ಬಂದು ಶರಣೆಂದು ಮರೆದರೆ, ಗುರುನಿರಂಜನ ಚನ್ನಬಸವಲಿಂಗದಲ್ಲಿ ಅದೇ ಪ್ರಾಣಲಿಂಗಸಂಬಂಧವು.
--------------
ದೇಶಿಕೇಂದ್ರ ಸಂಗನಬಸವಯ್ಯ
ಅನಾದಿಸಂಸಿದ್ಧ ನಿರಂಜನಲಿಂಗದಿಂದೊಗೆದವ ನಾನಾದ ಕಾರಣ, ಜ್ಞಾನೋದಯವಾಗಿ ಮಾಯಾದಿ ಸಕಲಕರ್ಮಂಗಳ ವಿಸರ್ಜಸಿದೆನು. ಆದಿ ಮಹಾಲಿಂಗದಂಗದಿಂದುಯವಾದವ ನಾನಾದ ಕಾರಣ ಶ್ರೀ ಗುರುಕಾರುಣ್ಯವಾಗಿ ಲಿಂಗಾಂಗ ಷಟ್‍ಸ್ಥಲಜ್ಞಾನಿಯಾದೆನು. ಆದಿ ಮಧ್ಯ ಅವಸಾನದಿಂದಲತ್ತತ್ತಲಾದ ನಿರವಯಾನಂದಪರಬ್ರಹ್ಮಾಂಶಿಕ ನಾನಾದ ಕಾರಣ ತ್ರಿವಿಧ ಲಿಂಗಾನುಭಾವವೆಂಟಂಗ, ಪಂಚಪ್ರಾಣಾದಿ ಸಕಲ-ನಿಃಕಲ ಸನುಮತಾನಂದ ಪರಬ್ರಹ್ಮವೆಯಾಗಿರ್ದೆನು ನಿರಂಜನ ಚನ್ನಬಸವಲಿಂಗದಲ್ಲಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ಅಂಗವನರ್ಪಿಸಿದ ಮಂಗಲರೆಂದು ಹೇಳಿ ನಡೆವರಯ್ಯಾ ಉಚ್ಛಿಷ್ಟವನರಿಯದೆ. ಮನವನರ್ಪಿಸಿದ ಮಹಿಮರೆಂದು ಹೇಳಿ ನಡೆವರಯ್ಯಾ ಮಲಸಂಬಂಧವನರಿಯದೆ. ಪ್ರಾಣವನರ್ಪಿಸಿದ ಜಾಣರೆಂದು ಹೇಳಿ ನಡೆವರಯ್ಯಾ ಮಾಯಾಮೋಹದ ಮಚ್ಚು ಬಿಚ್ಚದೆ. ಭಾವವನರ್ಪಿಸಿದ ಮಹಾನುಭಾವಿಗಳೆಂದು ಹೇಳಿ ನಡೆವರಯ್ಯಾ ಭ್ರಾಂತಿಹಿಂಗದೆ. ಇಂತು ಚತುರಾರ್ಪಿತವಿಹೀನವಾಗಿ ಚತುರ್ವಿಧಸಾರಾಯರೆಂದರೆ ಗುರುಲಿಂಗಜಂಗಮಪ್ರಸಾದ ಮರೆಯಾಗಿರ್ದವು ಲಯಗಮನದತ್ತ ಕೆಡಹಿ ಗುರುನಿರಂಜನ ಚನ್ನಬಸವಲಿಂಗಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಅವರ್ಣದಾಗಿಂಗೆ ವರ್ಣದಪರಿವಿಡಿಯಿಂದೆ ಅರಿಯಲುಂಟೆ ? ರೂಪಿಂಗೆ ರೂಪಲ್ಲದೆ ಸಯವಲ್ಲ, ನಿರೂಪಿಂಗೆ ನಿರೂಪವೇ ಸಯವಯ್ಯಾ. ಕಾಣಬಾರದುದ ಕಂಡುಹಿಡಿವರಾರು ನೋಡಾ ಮೂರುಲೋಕದೊಳಗೆ ? ಮಾರಾರಿ ಮಹಿಮರು ನಿಮ್ಮ ಶರಣರಿಗಲ್ಲದೆ ಅರಿಯಬಾರದು, ಗುರುನಿರಂಜನ ಚನ್ನಬಸವಲಿಂಗವನು, ಕುರುಹಳಿದು ಕಾಣಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಅಂತರಂಗದವಿರಳಾನಂದ ಜ್ಯೋತಿರ್ಮಯ ಭಸಿತವನು ಪಾದಾದಿ ಮಸ್ತಕಕೆ ಸರ್ವಾಂಗದಲಿ ಧರಿಸಿ ಆದಿ ಮಧ್ಯ ಕಡೆಯೆಂಬ ಕರ್ಕಸವ ನೂಂಕಿ, ಕರ್ತು ನಿರಂಜನ ಚನ್ನಬಸವಲಿಂಗದಲ್ಲಿ ಸುಖಿಯಾದೆನು.
--------------
ದೇಶಿಕೇಂದ್ರ ಸಂಗನಬಸವಯ್ಯ
ಅಚ್ಚಭಕ್ತನ ಭಾವಕ್ಕೆ ಗುರುಲಿಂಗಜಂಗಮವು ಬಂದ ಬರವು- ವೃದ್ಧಂಗೆ ಯೌವ್ವನ, ಮೂರ್ಖಂಗೆ ವಿದ್ಯೆ, ಸುಖಿಗೆ ಆಯುಷ್ಯ, ಯಾಚಕಂಗರ್ಥ, ಮರಣವನೈದುವಂಗೆ ಮರುಜೀವಣಿ ಬಂದಂತೆ. ಗುರುನಿರಂಜನ ಚನ್ನಬಸವಲಿಂಗದಲ್ಲಿ ಅಬ್ಥಿನ್ನವಾದ ಕಾರಣ.
--------------
ದೇಶಿಕೇಂದ್ರ ಸಂಗನಬಸವಯ್ಯ
ಅರಿಯಲಿಲ್ಲದ ಅರಿವಿಂಗೆ ಬರಸೆಳೆದು ಕೊಟ್ಟನೊಂದು ಲಕ್ಷವನು. ಹಿರಿಯ ಮಾರ್ಗದಲ್ಲಿ ನಿಂದು ಹಗಲಿರುಳು ವ್ಯಾಪಾರ ನಡೆವಲ್ಲಿ, ಸುಂಕಿಗರೈತಂದು ನೋಡಲು ಕಾಡದ ಮುನ್ನ ಲೆಕ್ಕವ ಕೊಟ್ಟು ಕೌಲು ಕೊಂಡಲ್ಲಿ ಮೂಲದ್ರವ್ಯ ಮುಳುಗಿತ್ತು. ಹೇಳಲಿಲ್ಲ ಕೇಳಲಿಲ್ಲ, ಗುರುನಿರಂಜನ ಚನ್ನಬಸವಲಿಂಗದಲ್ಲಿ ಗಂಭೀರ ನಿಮ್ಮ ಮಹೇಶ್ವರ.
--------------
ದೇಶಿಕೇಂದ್ರ ಸಂಗನಬಸವಯ್ಯ
ಅವಿರಳ ಪರಬ್ರಹ್ಮ ಪ್ರಸಾದಮೂರ್ತಿಯು ತನ್ನ ತಾನೆ ಬೆಳಗಾಗಿ ತೋರುವ ನಿರಂತರ, ತನುತ್ರಯ ಮನತ್ರಯ ಭಾವತ್ರಯ ಕರಣತ್ರಯಾದಿ ಸಕಲರಲ್ಲಿಯು ಕೂಡಿ ಗುರುನಿರಂಜನ ಚನ್ನಬಸವಲಿಂಗದ ಶರಣನು ತನ್ನೊಳಗೆ ಪರಿಣಾಮಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ಅಷ್ಟತನುವಿನ ಕಷ್ಟದೊಳಗಿರ್ದು ದೃಷ್ಟಲಿಂಗವ ಕರದಲ್ಲಿ ಪಿಡಿದು ಕೆಟ್ಟ ವಾಕ ಜಿನುಗುತ ಮುಟ್ಟಿ ಲಿಂಗಾನುಭಾವವ ಮಾಡುವ ಭ್ರಷ್ಟಜೀವಿಗಳನೆಂತು ಶರಣರೆನ್ನಬಹುದಯ್ಯಾ? ಹುಟ್ಟಿದ ಯೋನಿಯ ಬಿಟ್ಟು ಕಳೆಯದೆ ನೆಟ್ಟನೆ ಲಿಂಗಶರಣನೆಂದೊಡೆ ಕೆಟ್ಟು ಹೋಯಿತ್ತು ಇವರರುಹು ಗುರುನಿರಂಜನ ಚನ್ನಬಸವಲಿಂಗವ ಮುಟ್ಟದೆ.
--------------
ದೇಶಿಕೇಂದ್ರ ಸಂಗನಬಸವಯ್ಯ
ಅಂಗಭವಿಯೊಡನೆ ಕ್ರಿಯೆಗೂಡಿ ನಡೆಯಲಾಗದು. ಮನಭವಿಯೊಡನೆ ಮಾತನಾಡಿ ಸುಖಿಸಿಕೊಳ್ಳಲಾಗದು. ಪ್ರಾಣಭವಿಯೊಡನೆ ಮಹಾನುಭಾವಪ್ರಸಾದ ಸಮರಸ ಮಾಡಲಾಗದು. ಅದೇನು ಕಾರಣವೆಂದಡೆ. ಅವರು ತ್ರಿವಿಧ ದ್ರೋಹಿಯಾದಕಾರಣ. ಗುರುಮಾರ್ಗಶೂನ್ಯರು ಗುರುನಿರಂಜನ ಚನ್ನಬಸವಲಿಂಗಕ್ಕೆ ದೂರ.
--------------
ದೇಶಿಕೇಂದ್ರ ಸಂಗನಬಸವಯ್ಯ
ಅಯ್ಯಾ, ಎನ್ನ ಸ್ಥಲವ ಆಚಾರಲಿಂಗವಾಗಿಬಂದು ಗರ್ಭೀಕರಿಸಿಕೊಂಡೆ ನೀನು. ಅಯ್ಯಾ, ಎನ್ನ ಸ್ಥಲವ ಗುರುಲಿಂಗವಾಗಿಬಂದು ಗರ್ಭೀಕರಿಸಿಕೊಂಡೆ ನೀನು. ಅಯ್ಯಾ, ಎನ್ನ ಸ್ಥಲವ ಶಿವಲಿಂಗವಾಗಿಬಂದು ಗರ್ಭೀಕರಿಸಿಕೊಂಡೆ ನೀನು. ಅಯ್ಯಾ, ಎನ್ನ ಸ್ಥಲವ ಜಂಗಮಲಿಂಗವಾಗಿಬಂದು ಗರ್ಭೀಕರಿಸಿಕೊಂಡೆ ನೀನು. ಅಯ್ಯಾ, ಎನ್ನ ಸ್ಥಲವ ಮಹಾಲಿಂಗವಾಗಿಬಂದು ಗರ್ಭೀಕರಿಸಿಕೊಂಡೆ ನೀನು. ಅಯ್ಯಾ, ಎನ್ನ ಷಟ್‍ಸ್ಥಲವನು ಪ್ರಸಾದಲಿಂಗವಾಗಿ ಬಂದು, ಗರ್ಭೀಕರಿಸಿಕೊಂಡೆ ನೀನು. ಗುರುನಿರಂಜನ ಚನ್ನಬಸವಲಿಂಗ ನೀನಂಗ ನಾನುಭಯಸಂಗ.
--------------
ದೇಶಿಕೇಂದ್ರ ಸಂಗನಬಸವಯ್ಯ
ಅರ್ಪಿತಾಂಗದ ಮೇಲಿಪ್ಪ ಅಖಂಡಲಿಂಗಕ್ಕೆ ಅರ್ಪಿತವನರ್ಪಿಸಿ ಆನಂದಿಸಿಕೊಂಬುವನಯ್ಯ ತನ್ನ ವಿನೋದಕ್ಕೆ. ಅರ್ಪಿತ ಪ್ರಾಣದಮೇಲಿಪ್ಪ ಅವಿರಳಲಿಂಗಕ್ಕೆ ಅರ್ಪಿತವನರ್ಪಿಸಿ ಆನಂದಿಸಿಕೊಂಬುವನಯ್ಯ ತನ್ನ ವಿನೋದಕ್ಕೆ, ಅರ್ಪಿತ ಭಾವದಮೇಲಿಪ್ಪ ಅಬ್ಥಿನ್ನ ಲಿಂಗಕ್ಕೆ ಅರ್ಪಿತವನರ್ಪಿಸಿ [ಆನಂದಿಸಿ] ಕೊಂಬುವನಯ್ಯ ತನ್ನ ವಿನೋದಕ್ಕೆ. ಅರ್ಪಿಸಿಕೊಂಡಿಪ್ಪ ಗುರುನಿರಂಜನ ಚನ್ನಬಸವಲಿಂಗಕ್ಕೆ ಅರ್ಪಿತವನರ್ಪಿತವಾಗಿರ್ಪನಯ್ಯ ತನ್ನ ವಿನೋದಕ್ಕೆ ನಿಮ್ಮ ಪ್ರಸಾದಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ಅಂದು ಬಂದ ಮುಸುಕು ತೆರೆದು ಹೊಂದಿಸಿಕೊಂಡು ಅಂದಂದಿಂಗವಧಾನ ಸುಖಾನಂದಮಯದೊಳಗೆ ಸುಳಿವುತಿರ್ದನಾಚಾರಲಿಂಗವೆನ್ನ ಸುಚಿತ್ತಪಾಣಿಯಲ್ಲಿ. ಶ್ರದ್ಧೆಸುಖಪರಿಣಾಮಿಯಾಗಿ ಮುಂದ ನೋಡುತ್ ಸುಳಿಯುತಿರ್ದ ಗುರುಲಿಂಗವೆನ್ನ ಸುಬುದ್ಧಿಹಸ್ತದಲ್ಲಿ. ನಿಷೆ* ಸುಖಪರಿಣಾಮಿಯಾಗಿ ಮುಂದೆ ನೋಡುತ್ತ ಸುಳಿಯುತಿರ್ದ ಶಿವಲಿಂಗವೆನ್ನ ನಿರಹಂಕಾರ ಪಾಣಿತಾಣದಲ್ಲಿ. ಸಾವಧಾನಸುಖಪರಿಣಾಮಿಯಾಗಿ ಮುಂದೆ ನೋಡುತ್ತ ಸುಳಿಯುತಿರ್ದ ಜಂಗಮಲಿಂಗವೆನ್ನ ಸುಮನಹಸ್ತದಲ್ಲಿ. ಅನುಭಾವಸುಖಪರಿಣಾಮಿಯಾಗಿ ಮುಂದೆ ನೋಡುತ್ತ ಸುಳಿಯುತಿರ್ದ ಪ್ರಸಾದಲಿಂಗವೆನ್ನ ಸುಜ್ಞಾನಕರಸ್ಥಲದಲ್ಲಿ. ಆನಂದಸುಖಪರಿಣಾಮಿಯಾಗಿ ಮುಂದೆ ನೋಡುತ್ತ ಸುಳಿಯುತಿರ್ದ ಮಹಾಲಿಂಗವೆನ್ನ ಸದ್ಭಾವಹಸ್ತದಲ್ಲಿ. ಸಮರಸಸುಖಪರಿಣಾಮಿಯಾಗಿ ಮುಂದೆ ನೋಡುತ್ತ ಸುಳಿಯುತಿರ್ದ ಗುರುನಿರಂಜನ ಚನ್ನಬಸವಲಿಂಗವೆನ್ನ ಪ್ರಾಣಲಿಂಗಿಯೆಂದೆನಿಸಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ಅಂಗವೆಂಬುವುದಿಲ್ಲ ಲಿಂಗವೇದಿ ಶರಣಂಗೆ, ಲಿಂಗವೆಂಬುವುದಿಲ್ಲ ಅಂಗಸಂಗಸನ್ನಿಹಿತ ಶರಣಂಗೆ, ಹಸ್ತವೆಂಬುವುದಿಲ್ಲ ಲಿಂಗನಿವಾಸ ಶರಣಂಗೆ, ಮುಖವೆಂಬುವುದಿಲ್ಲ ಸುಖಭರಿತ ಶರಣಂಗೆ, ಶಕ್ತಿಯೆಂಬುವುದಿಲ್ಲ ಮುಕ್ತಾಂಗ ಶರಣಂಗೆ, ಭಕ್ತಿಯೆಂಬುವುದಿಲ್ಲ ನಾದಬಿಂದು ಕಲಾಶೂನ್ಯ ಶರಣಂಗೆ. ಪದಾರ್ಥವೆಂಬುವುದಿಲ್ಲ ಗುರುಭಾವವಿರಹಿತ ಶರಣಂಗೆ, ಪ್ರಸಾದವೆಂಬುವುದಿಲ್ಲ ಗುರುನಿರಂಜನ ಚನ್ನಬಸವಲಿಂಗ ತಾನು ತಾನಾದ ಶರಣಂಗೆ.
--------------
ದೇಶಿಕೇಂದ್ರ ಸಂಗನಬಸವಯ್ಯ
ಅಯ್ಯಾ, ಶರಣನೆಂದಡೆ ಸಕಲನಿಃಕಲಸನುಮತನು, ಸತ್ತುಚಿತ್ತಾನಂದರೂಪನು, ಸರ್ವಕಳಾಭಾವಿತನು, ಷಟ್‍ಸ್ಥಲಾನುಭಾವಿ ಕಾಣಾ, ಸತ್ಕ್ರಿಯಾ ಸಮ್ಯಕ್‍ಜ್ಞಾನಾನುಭಾವಿ, ತ್ರಿವಿಧಲಿಂಗಾನುಭಾವಿ, ತ್ರಿವಿಧಾರ್ಪಣಾನುಭಾವಿ, ಷಡ್ವಿಧಾರ್ಪಣಾನುಭಾವಿ,ಮಹಾಜ್ಞಾನಾನುಭಾವಿ, ಪರಮ ಜ್ಞಾನಾನುಭಾವಿ ಜಂಗಮಲಿಂಗ ತಾನೇ ಕಾಣಾ ಗುರುನಿರಂಜನ ಚನ್ನಬಸವಲಿಂಗ.
--------------
ದೇಶಿಕೇಂದ್ರ ಸಂಗನಬಸವಯ್ಯ
ಅಖಂಡ ಪ್ರಕಾಶಾಲಯ ಬ್ರಹ್ಮವನರಸಿಕೊಂಡು ಆ ವೀರಸ್ಥಲದಲ್ಲಿ ಧರಿಸಪ್ಪ ಅನುಪಮ ವೀರಮಾಹೇಶ್ವರನ ನಡೆಯಲ್ಲಿ ತೋರುವುದು, ನುಡಿಯಲ್ಲಿ ತೋರುವುದು, ಹಿಡಿವಲ್ಲಿ ಕಾಣುವುದು, ಕೊಡುವಲ್ಲಿ ಕಾಂಬುವುದು, ಕೊಂಬಲ್ಲಿ ಕಾಣುವುದು, ಬರುವಲ್ಲಿ ತೋರುವುದು, ಹೋಗುವಲ್ಲಿ ತೋರುವುದು ಗುರುನಿರಂಜನ ಚನ್ನಬಸವಲಿಂಗವು ತಾನೇ ನಿರುತವಾಗಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ಅಯ್ಯಾ, ಈ ಜಾಗ್ರಾವಸ್ಥೆ ಸಕಲವ ನುಂಗಿ ಕರಸ್ಥಲದೊಳಗಡಗಿತ್ತು. ಈ ಸ್ವಪ್ನಾವಸ್ಥೆ ನಿಃಕಲವ ನುಂಗಿ ಮನಸ್ಥಲದೊಳಗಡಗಿತ್ತು. ಅಯ್ಯಾ, ಈ ಸುಷುಪ್ತಾವಸ್ಥೆ ನಿರಂಜನವ ನುಂಗಿ ಭಾವಸ್ಥಲದೊಳಡಗಿತ್ತು. ಸ್ಥಲ ಸ್ಥಲವ ನುಂಗಿ ನಿಃಸ್ಥಲದ ನಿಲವು ಗುರುನಿರಂಜನ ಚನ್ನಬಸವಲಿಂಗದಲ್ಲರತಿತ್ತು.
--------------
ದೇಶಿಕೇಂದ್ರ ಸಂಗನಬಸವಯ್ಯ
ಅಯ್ಯಾ, ಎನ್ನ ನಡೆಯಲ್ಲಿ ಶರಣೆಂಬ ಭಾವದ ಪರಿಮಳದೊಳಡಗಿರ್ದೆ ಕಾಣಾ. ಅಯ್ಯಾ, ಎನ್ನ ನುಡಿಯಲ್ಲಿ ಶರಣೆಂಬ ಭಾವದ ಪರಿಮಳದೊಳು ಮುಳುಗಿರ್ದೆ ಕಾಣಾ. ಅಯ್ಯಾ, ಎನ್ನ ಕೊಡುಕೊಳ್ಳೆಯಲ್ಲಿ ಶರಣೆಂಬ ಭಾವದ ಪರಿಮಳದೊಳು ಎರಕವಾಗಿರ್ದೆ ಕಾಣಾ. ಅಯ್ಯಾ, ಎನ್ನ ಸಕಲಸುಖದುಃಖಾದಿ ಮತ್ತೆಲ್ಲಾದರೆಯೂ ಶರಣೆಂಬ ಭಾವದ ಸುವಾಸನೆಯೊಳು ಸಮರಸವಾಗಿರ್ದೆ ಕಾಣಾ ಗುರುನಿರಂಜನ ಚನ್ನಬಸವಲಿಂಗದಲ್ಲಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ಅನುಭಾವಿ ಅನುಭಾವಿಗಳೆಂದು ನುಡಿದುಕೊಂಬ ಬಿನುಗುನರರುಗಳನೇನೆಂಬೆನಯ್ಯಾ? ಅನುಭಾವಿಯಂಗದಲ್ಲಿ ಆಶೆ ಆಮಿಷಯಿರಲುಂಟೆ? ಅನುಭಾವಿಯ ಮನದಲಿ ಮಲತ್ರಯದ ಮೋಹವುಂಟೆ? ಅನುಭಾವಿಯ ಪ್ರಾಣದಲ್ಲಿ ದುರ್ವಂಚನೆ ಸಂಕಲ್ಪವುಂಟೆ? ಅನುಭಾವಿಯ ಭಾವದಲ್ಲಿ ಕರಣೇಂದ್ರಿಯ ವಿಷಯಭ್ರಾಂತಿಯುಂಟೆ? ಇಂತು ದುರ್ಗುಣಾನುಭಾವಿತನಾಗಿ ಶಿವಾನುಭಾವಿಯೆಂದೊಡೆ ಬಾಯಲ್ಲಿ ಬಾಲ್ವುಳ ಸುರಿಯವೆ ಗುರುನಿರಂಜನ ಚನ್ನಬಸವಲಿಂಗಾ?
--------------
ದೇಶಿಕೇಂದ್ರ ಸಂಗನಬಸವಯ್ಯ
ಅವರ್ಣಾತ್ಮಕರ ಭಾಷೆಗಳನರಿದು ಭಾವಿಸಬಾರದು ವರ್ಣಾತ್ಮಕರುಗಳಿಗೆ. ವರ್ಣಾತ್ಮಕರುಗಳ ಭಾಷೆಗತಿಗಳನರಿದು ಭಾವಿಸಬಾರದು ಅವರ್ಣಾತ್ಮಕರುಗಳಿಗೆ. ಈ ತೆರನಪ್ಪ, ಲೌಕಿಕ ಪರಮಾರ್ಥವನು ಭಾವಿಸಿ ಮರೆದಿರ್ದ ಮಹಾಮಹಿಮನೇ ಶರಣ ಕಾಣಾ ಗುರುನಿರಂಜನ ಚನ್ನಬಸವಲಿಂಗಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಅಯ್ಯಾ, ಎನಗೆ ಬರುವ ಗಂಧದ್ರವ್ಯ, ನಿನ್ನನುಭಾವಿಸಿ ಬಂದ ಬರವಯ್ಯಾ. ಎನಗೆ ಬರುವ ರಸದ್ರವ್ಯ ನಿನ್ನ ಸುಖಿಸಿ ಬಂದ ಬರವಯ್ಯಾ. ಎನಗೆ ಬರುವ ರೂಪುದ್ರವ್ಯ ನಿನ್ನ ಪರಿಣಾಮಿಸಿ ಬಂದ ಬರವಯ್ಯಾ. ಎನಗೆ ಬರುವ ಸ್ಪರ್ಶದ್ರವ್ಯ ನಿನ್ನ ಆನಂದಿಸಿ ಬಂದ ಬರವಯ್ಯಾ. ಎನಗೆ ಬರುವ ಶಬ್ದದ್ರವ್ಯ ನಿನಗೆ ಸೊಗಸನಿಟ್ಟು ಬಂದ ಬರವಯ್ಯಾ. ಎನಗೆ ಬರುವ ತೃಪ್ತಿದ್ರವ್ಯ ನಿನ್ನ ತೃಪ್ತಿಯಪಡಿಸಿ ಬಂದ ಬರವಯ್ಯಾ. ಎನಗೆ ಬರುವ ಸಕಲವು ಗುರುನಿರಂಜನ ಚನ್ನಬಸವಲಿಂಗ ಸಹಿತವಯ್ಯಾ.
--------------
ದೇಶಿಕೇಂದ್ರ ಸಂಗನಬಸವಯ್ಯ

ಇನ್ನಷ್ಟು ...