ಅಥವಾ
(214) (139) (48) (7) (13) (3) (0) (0) (105) (12) (12) (37) (5) (0) ಅಂ (44) ಅಃ (44) (163) (1) (60) (9) (0) (12) (0) (64) (0) (0) (0) (0) (0) (0) (0) (104) (0) (49) (10) (128) (74) (5) (68) (61) (158) (17) (10) (0) (47) (55) (61) (4) (129) (75) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಆ ಅಕ್ಷರವನು ಆರೈದು ತೋರಿರಿ ಓರಂತೆ ಎನ್ನ ಸದುಹೃದಯನೆನಿಸಿ ನಾದ ಕಳೆಗಳನೆನ್ನ ಆಕರದೊಳಗಿಟ್ಟು ಅಭೇದ್ಯ ಪರಮಾನಂದ ಸತ್ಯರೂಪ ನಿತ್ಯಾನಂದ ಶ್ರೀ ಗುರು ಚೆನ್ನಬಸವಣ್ಣನುನ್ನತವನಾರು ಬಲ್ಲರು ಹೇಳಾ, ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಆನೆತ್ತಲಯ್ಯಾ, ಕ್ರಿಮಿಕೀಟಕನಾಗಿ ಹುಟ್ಟುವನ ಹುಟ್ಟ ಕೆಡಿಸಿದೆ. ಇನ್ನಹುದಾನೇನರಿದು ಹೇಳಾ, ಎಲೆ ಅಯ್ಯಾ. ಶುದ್ಧಸಿದ್ಧಪ್ರಸಿದ್ಧವನು ತೋರಿ ಪ್ರಾಪ್ತಭೋಕ್ತಭುಕ್ತಿಯೆಂಬುದಕ್ಕೆ ಹೊರಗು ಮಾಡಿದೆ. ಇನ್ನು ನಾನಿನಪ್ಪುದೇನರಿದೈ, ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಆಗುವುದನು ತಪ್ಪಿಸೆಹೆನೆಂದಡೆ ತಪ್ಪಲರಿಯದು. ಆಗು ಭೋಗಂಗಳ ತಪ್ಪಿಸುವಡೆ ಸಚ್ಚಿದಾನಂದ ಶಿವಯೋಗಿಗಲ್ಲದೆ ನರರಿಗೆಲ್ಲಿಯದೊ, ಕಪಿಲಸಿದ್ಧಮಲ್ಲಯ್ಯಾ !
--------------
ಸಿದ್ಧರಾಮೇಶ್ವರ
ಆಗದಾಗದು ಮಾಡದವಂಗೆ ಬ್ರಹ್ಮಪದವಿ. ಆಗದಾಗದು ಮಾಡದವಂಗೆ ವಿಷ್ಣುಪದವಿ. ಆಗದಾಗದು ಮಾಡದವಂಗೆ ಶಿವಪದವಿ. ಆಗದು ಮಾಡದವಂಗೆ ತೂರ್ಯಾತೀತ ನಿರ್ಮಲ ನಿಜಾನಂದ, ಕಪಿಲಸಿದ್ಧಮಲ್ಲಿಕಾರ್ಜುನನ ಅರಿವು.
--------------
ಸಿದ್ಧರಾಮೇಶ್ವರ
ಆರೇನು ಮಾಡಿದುದನಂತಿರೆ, ಅಂತಕ್ಕು ಇಂತಕ್ಕುಯೆಂತಕ್ಕುಯೆನಬೇಡ. ಚಿಂತಿಸರು ಎಲೆ ಮನವೆ, ಅಂತಕಹರ ಕಪಿಲಸಿದ್ಧಮಲ್ಲಿನಾಥಯ್ಯ ಮಾಡಿದಂತಲ್ಲದೆ ತಾನು ಅಪ್ಪುಲ್ಲ.
--------------
ಸಿದ್ಧರಾಮೇಶ್ವರ
ಆವನಾಗಿ ಒಬ್ಬನು ಅವಿಚಾರದಿಂದ ಶಿರಸ್ಸಿನ ಮೇಲೆ ಕೈದುವಿಕ್ಕುಗೆಯ, ಮೇಣು ಗಂಧಾಕ್ಷತೆ ಪುಷ್ಪದ್ಲ ಪೂಜೆ ಮಾಡುಗೆಯ; ಪೂಜೆ ಮಾಡಿದಡೆ ಮನ ವಿಚ್ಛಂದವಾಗದೊಂದೆಯಂದದಲ್ಲಿಪ್ಪಂತಪ್ಪ ನಿಮ್ಮದೊಂದು ಸಮತಾಗುಣ ಎನ್ನನೆಂದು ಬಂದು ಪೊದ್ದಿಪ್ಪುದು ಹೇಳಾ ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಆಜ್ಯಲೋಕದಲ್ಲಿ ಅಬಲೆ ಅಮೃತಕೊಡನನೆ ಹೊತ್ತು ಸದಮದಜ್ಞಾನಿಯಾಗಿ ತಂ ರೂಪಿನಾ ದಾಯೆ ದಾಯವ ನುಂಗಿ ಬಣ್ಣ ಬಣ್ಣವ ನುಂಗಿ ಸರ ಸರಯ ಮೇಲೆ ಉತ್ಕøಷ್ಟದಾ, ಐಲೋಕಂ ಮೇಲೆ ಆ ಕೊಡನನಿಳುಹಲ್ಕೆ ಕೊಡನೊಡದು ಅತ್ಯಂತ ಪ್ರವಾಹದಾ ನುಡಿಯ ಗಡಣವ ಮೀರಿ ಅಕ್ಷರದ್ವಯದ ಮೃಡನೊಡನೆ ಓಲಾಡಿದೆ, ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಆವನಾನೊಬ್ಬನು ತಗುಳ್ದಟ್ಟಿ ಕಲ್ಲುಗುಂಡಿನಲ್ಲಿಡುಗೆಲ್ಲಿಯ್ವ ಮೇಣು ಪೂವಿನಡಿಡುಗೆಯ. ಇಟ್ಟಡೆ ಮನ ವಿಚ್ಛಂದವಾಗದೊಂದೆಯಂದದಪ್ಪಂತಪ್ಪ ನಿಮ್ಮದೊಂದು ಸಮತಾಗುಣ ಎನ್ನನೆಂದು ಬಂದು ಪ್ದೊಪ್ಪುದು ಹೇಳಾ, ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಆವಾವ ದೆಸೆಗೆ ಬಾಯ ಬಿಟ್ಟು ಅರಸಿ ಕಾಣದೆ ಕಂಗೆಡ್ಕ್ತುದ್ದೆನಯ್ಯಾ. ದೇವಾ, ಈ ಬಾಯ ಬಿಡುವುದ ಮಾಣಿಸಿ, ಎನಗೆ ಪರಮಪ್ರಸಾದವ ಕರುಣಿಸಿ ರಕ್ಷಿಸಯ್ಯಾ; ಕಪಿಲಸಿದ್ಧಮಲ್ಲಿನಾಥಯ್ಯಾ, ನಿಮ್ಮ ಧರ್ಮವಯ್ಯಾ.
--------------
ಸಿದ್ಧರಾಮೇಶ್ವರ
ಆಯತವಾದ ಆರು ಗ್ರಾಮಕ್ಕೆ ಅರುವರು ತಳವಾರನಿಕ್ಕಿದ ನಮ್ಮರಸು. ಆ ಅರಸಿಂಗೆ ಕಟ್ಟಿತ್ತು ತೊಟ್ಟಿಯ ಮುಖಸಾಲೆಯ ಮಂಟಪ. ಆ ತಳವಾರರಿಗೆ ಕಟ್ಟಿತ್ತು ಕೈಸಾಲೆಯ ಮಂಟಪ. ಆ ಒಬ್ಬೊಬ್ಬ ತಳವಾರಂಗೆ ಆರಾರು ಗೆಣೆಯರ ಕೂಡಿಸಿ ಕೊಡಲು, ಆ ಗೆಣೆಯರು ತಮಗೊಬ್ಬೊಬ್ಬರಿಗೆ ಆರಾರು ಸಖರ ಕೂಡಿಕೊಂಡ ಪರಿಯ ನೋಡಾ. ಆ ಸಖರು ಆ ಗೆಣೆಯರೊಳಡಗಿ, ಆ ಗೆಣೆಯರು ಆ ತಳವಾರರೊಳಡಗಿ, ಆ ತಳವಾರರ ಕಂಡು ಅರಸು ತನ್ನ ಹೆಂಡತಿಯ ತಬ್ಬಿಕೊಂಡು ಉರಿಯ ಪೊಗಲಾಗಿ, ಎನ್ನ ಗಂಡ ಕಪಿಲಸಿದ್ಧಮಲ್ಲಿಕಾರ್ಜುನನ ನಾ ಕೇಳಲು ಬಯಲ ಬಿತ್ತಿ ಎಂದನು
--------------
ಸಿದ್ಧರಾಮೇಶ್ವರ
ಆ ನಿಮ್ಮ ನೆನೆಯಲು ಪೋಪೆನೆಂದಡೆ ತಾನೆನ್ನ ಕೈವಿಡಿದು ಇದ್ದೆಸೆಗಂ ಕೈದೋರ್ಪಳು. ಈ ಆಸೆಯಿಂದವೆ ನಿಮ್ಮೆಡೆಗಾಣೆನು. ಈ ಆಸೆಯೆಂಬವಳನೆಂಂಗೆ ನೀಗಿ, ಎಂದು ನಿಮ್ಮನೊಡಗೂಡಿ ಬೇರಾಗದೆಂದಿಪ್ಪೆನು ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಆ ಮಧ್ಯಾವಸಾನವನರಿಯದೆ ನಾನು ಭಕ್ತ, ನಾನು ಜಂಗಮವೆಂದು ನುಡಿವ ಉದ್ದೇಶದ ಬರುಬಾಯ ಭುಂಜಕರ ನಾನೇನೆಂಬೆನಯ್ಯಾ. ಆಯನರಿದಡೆ ಗುರುಕರಜಾತನೆಂಬೆ; ಮಧ್ಯವನರಿದಡೆ ಜಂಗಮಸಹಚಾರಿಯೆಂಬೆ; ಅವಸಾನವನರಿದಡೆ ಮಹಾಲಿಂಗೈಕ್ಯನೆಂಬೆ. ಇಂತೀ ತ್ರಿವಿಧವನರಿದಡೆ ತುರ್ಯನೆಂಬೆ. ಅರಿವರತು ಮರಹು ನಷ್ಟವಾದಡೆ ಕಪಿಲಸಿದ್ಧ ಮಲ್ಲಿಕಾರ್ಜುನದೇವರು ತಾನೆಂಬೆ.
--------------
ಸಿದ್ಧರಾಮೇಶ್ವರ
ಆದಿಯಲ್ಲಿ ಬಯಲು, ಅಂತ್ಯದಲ್ಲಿ ಬಯಲು, ಮಧ್ಯದಲ್ಲಿ ತೋರಿ ಕೆಡುವುದದು ನೋಡಾ, ಈ ಘಟವು. ತೋರಿ ತೋರಿ ಕೆಡುವುದಕ್ಕೆ, ಈ ಜಗದ್ಲ ಇದೆ ದೃಷ್ಟ ನೋಡಾ ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಆಚಾರ ಪ್ರಾಣವಾದ ಬಳಿಕ ಅನಾಹತವಿದೆಂದರಿಯಬೇಕು. ಅನಾಹತವಿದೆಂದರಿದ ಬಳಿಕ ಶುದ್ಧ ಸಿದ್ಧ ಪ್ರಸಿದ್ಧವಿದೆಂದರಿಯಬೇಕು. ಶುದ್ಧ ಸಿದ್ಧ ಪ್ರಸಿದ್ಧವಿದೆಂದರಿದ ಬಳಿಕ ಸರ್ವವೂ ತಾನೆಯಾಗಿರಬೇಕು. ಸರ್ವವೂ ತಾನೆಯಾದ ಬಳಿಕ ಅಪ್ಪುದೊಂದರಿದುಂಟೆ? ಕಪಿಲಸಿದ್ಧಮಲ್ಲಿಕಾರ್ಜುನ ಆತನು ಸ್ವಾತಂತ್ರನಲ್ಲದೆ.
--------------
ಸಿದ್ಧರಾಮೇಶ್ವರ
ಆನಂದವೆಂಬ ತರತರಂಗಳಲಿ ಒಡನೆ ಆಡಿದೆನಯ್ಯಾ. ಆಡಿದ ಚಿತ್ರವು ವಿಚಿತ್ರವಾಯಿತಯ್ಯಾ, ನಿನ್ನ ಕೂಟದ ಸಂಗಮ ಆರರಲ್ಲಿ ಮೀದಿದ್ದ ಕಾರಣ ಎನಗೆ ಸಮನಿಸಿತು ಕಾಣಾ ಕಪಿಲಸಿದ್ಧಮಲ್ಲಿಕಾರ್ಜುನಯ್ಯ.
--------------
ಸಿದ್ಧರಾಮೇಶ್ವರ
ಆಗುವ ಭೋಗಂಗಳಿಗೆ ಮೈಗೊಟ್ಟುದು ಎಂದಡೆ, ಮೈಗೊಡೆದು ನೋಡಾ, ಲಿಂಗಾರ್ಚನಾಫಲ. ಆಗಬಾರದ ಕಾರ್ಯ ಮಾಡೆನೆಂದಡೆ, ಮೈಗೊಡುವುದು ನೋಡಾ, ಲಿಂಗಾರ್ಚನಾಫಲ. ದೃಢವಿರಬೇಕು ಲಿಂಗಾರ್ಚನೆಯಲ್ಲಿ! ದೃಢವಿಲ್ಲದವನ ಹೆಡಗುಡಿಯ ಕಟ್ಟಿ ಎಡಹಿಬಿಡುವ ಭವದಡಿಗೆ, ಎಮ್ಮ ಮೃಡಮೂರ್ತಿ ಕಪಿಲಸಿದ್ಧಮಲ್ಲಿಕಾರ್ಜುನಲಿಂಗವು
--------------
ಸಿದ್ಧರಾಮೇಶ್ವರ
ಆದಿಯ ಮೂರ್ತಿಯಲ್ಲ, ಅನಾದಿಯ ಬಚ್ಚಬರಿಯ ಶೂನ್ಯವಲ್ಲ, ಅಂಗವಿದ್ದು ಅಂಗವಿಲ್ಲದ ಸಂಗ ಘನಪದದ್ಲ ವೇದ್ಯವಾದ ಮರುಳಶಂಕರದೇವರ ನಿಲವ ಪ್ರಭು ಬಸವಣ್ಣನಿಂದ ಕಂಡು ಬದುಕಿದೆನು ಕಾಣಾ, ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಆವನಾಗಿ ಒಬ್ಬನು ಪಿಡಿದೊಯ್ದು ಕಾಳಕೂಟ ವಿಷವನೆರುಗೆಯ ಮೇಣು ಪಾಯಸಾಮೃತವನೆರುಗೆಯ. ಎರದಡೆ ಮನ ವಿಚ್ಛಂದವಾಗದೊಂದೆಯಂದದಲ್ಲಿಪ್ಪಂತಪ್ಪ ನಿಮ್ಮದೊಂದು ಸಮತಾಗುಣ ಎನ್ನನೆಂದು ಬಂದು ಪೊದ್ದಿಪ್ಪುದು ಹೇಳಾ, ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಆನಂದಸ್ಥಳದಲ್ಲಿ ಊಧ್ರ್ವ ಕಂಜಕನ್ನಿಕೆಗೆ ಇಂದುವಿನ ಕೊಡನ ಹೊತ್ತಾಡುತ್ತೈದಾಳೆ. ಮೂಲಪಟ್ಟಣದಲ್ಲಿ ಮೂವರಿಗೆ ರತಿಯ ಹುಟ್ಟಿಸುತ್ತೈದಾಳೆ. ಅಪರಪಟ್ಟಣದಲ್ಲಿ ಹಲವರಿಗೆ ಆಶ್ರಯವಾಗಿ ಐದಾಳೆ. ಮಧ್ಯಮಪಟ್ಟಣದಲ್ಲಿ ಮಹಾಮಹೀಶ್ವರರಿಗೆ ಮಹಾದಾಶ್ರಯವಾಗಿ ಐದಾಳೆ. ಇಂತು ಪಟ್ಟಣ ಹದಿನೆಂಟಕ್ಕ ಸೀಮೆ ಇಪ್ಪತ್ತೈದು, ಗ್ರಾಮ ಮೂವತ್ತಾರು ಸಂಯೋಗವೆಂಬ ನಗರಿಯಲ್ಲಿ ನಿತ್ಯಸಾನಂದನೆಂಬಾತ ಕುಳ್ಳಿದ್ದು, ಪಟ್ಟಣ ಹನೆಂಟರ ವ್ಯಾಪ್ತಿಯ ತಳವಾರರೆಂಟು ಮಂದಿಯ ಗ್ರಾಮ ಬಂಧನೆಯ ಮಾಡಲೀಯದೆ ಸುಚಿತ್ತದಿಂ ನಡಸುತ್ತೈದಾನೆ. ನೆನೆವ ಮನಸ್ಸಿನಲ್ಲಿ ಅವಿತಥವಿಲ್ಲದೆ ಚಿತ್ತವೃತ್ತಿಯನ್ನರಿತು ಮಹಾಲೋಕದಲಿಪ್ಪ ಮೂನ್ನೂರ ಮೂವತ್ತಮೂರು ಕುಲದುರ್ಗಂಗಳಂ ಪಾಟಿಸಿ ಸುಯಿಧಾನಿಯಾಗಿರುತ್ತೈದಾನೆ. ಅಜಲೋಕದಲ್ಲಿ, ಶುದ್ಧಸಂಯೋಗ ಸಂಗಮನೆಂಬ ಗೃಹದಲ್ಲಿ, ಮೂಲಕ ಮುಕ್ತಕಾ ರುದ್ರಕ ಅನುಮಿಷಕ ಆಂದೋಳಕ ವಿಚಿತ್ರಕ ಸಕಲ ಮುಕ್ತ್ಯಕ್ಕ, ಸಾನಂದ ಸತ್ಯಕ್ಕ ಇಂತಪ್ಪ ಮಹಾಸ್ತ್ರೀಯರ ಚಿತ್ತಕ್ಕೆ ಸಗುಣವಪ್ಪುದನೊಂದನೆ ಕೂಡಿ ಭೋಗಿಸುತ್ತೈದಾನೆ. ಅವರು ಸ್ತ್ರೀಯರು, ತಾ ಪುರುಷನಾಗಿ ಕೂಡುತ್ತೈದಾನೆ, ಅವಿತಥವಿಲ್ಲದೆ ಆ ಕೂಟದ ಸುಖವನು ಶಿಶು ಬಲ್ಲ, ಶಿಶುವಿನ ಜನನವನು ಅವ್ವೆ ಬಲ್ಲಳು. ಅವ್ವೆಯ ಇಚ್ಛಾ ಮಾತ್ರದಲ್ಲಿದ್ದು ಕಪಿಲಸಿದ್ಧಮಲ್ಲಿಕಾರ್ಜುನಯ್ಯನೆಂಬ ತೈಲಿಂಗಕ್ಕೆ ಮೂಲವಾದಳವ್ವೆ.
--------------
ಸಿದ್ಧರಾಮೇಶ್ವರ
ಆಯಿಸ ಬಗುಸೆಯ ಬಲವು ತಮಗಿಲ್ಲ ಕೇಳಿರಣ್ಣಾ. ತಮ್ಮ ಬಲ ಅವಕುಂಟು ಕೇಳಿರಣ್ಣಾ. ಆಯಿಸ ತನಗಿನಿಸೆಂಬುದಿಲ್ಲ ಕೇಳಿರಣ್ಣಾ. ಬಗುಸೆ ತನಗಿನಿಸೆಂಬುದಿಲ್ಲ ಕೇಳಿರಣ್ಣಾ. ಕೇಳಿರಣ್ಣಾ, ಅಣ್ಣಾ, ಅಣ್ಣಾ, ಕೇಳಿರಣ್ಣಾ. ಕಪಿಲಸಿದ್ಧಮಲ್ಲಿನಾಥಯ್ಯ ನಿಸ್ಸೀಮ ಕೇಳಿರಣ್ಣಾ.
--------------
ಸಿದ್ಧರಾಮೇಶ್ವರ
ಆಗಮವಿಚಾರ ಅಪ್ರಮಾಣ, ನಮೋ ಬಸವಾ ಬಸವಾ, ನಮೋ ಜಯತು ಜಯತು ಕರುಣಾಕರ, ಪಾಹಿಮಾಂ ಬಸವಾ ಬಸವಾ, ಮಾರ್ಗವಲಯ ನಿಯಮಾಚಾರ ಸಮಯಭಕ್ತ ಭಕ್ತ ನಮೋ ಬಸವಾ, ಕಪಿಲಸಿದ್ಧಮಲ್ಲಿನಾಥಯ್ಯಾ
--------------
ಸಿದ್ಧರಾಮೇಶ್ವರ
ಆವ ಕಳೆಯೆಂಬುದು ನೀನೆಯಾದೆ, ಬಸವಲಿಂಗವೆ. ಮುಕ್ತಿಗೆ ಮೂಲಸ್ವರೂಪು ನೀನಾಗಿ ನಿಂದ ರೂಪು. ನಿನ್ನ್ಲಲ್ಲಿಯೆ ತ್ಲೀಯವಾಯಿತ್ತು, ಬಸವಗುರುವೆ. ನಿಯಮಾಚಾರದ ರೂಪು ನಿನ್ನ್ಲಲ್ಲಿಯೆ ತಲ್ಲಿಯವಾಯಿತ್ತಯ್ಯಾ, ಕಪಿಲಸಿದ್ಧಮ್ಲನಾಥನ ಗುರು ಬಸವಾ.
--------------
ಸಿದ್ಧರಾಮೇಶ್ವರ
ಆತ ಬಂದಾನಂದ ಅಕ್ಷರ ದೀಕ್ಷೆಯನು ಗೋಪ್ಯತರಂದದನು ಸಂಭವಿಸಲು, ಖ್ಯಾತ ಮೂವತ್ತಾರು ಬೆರಸಿ ಬೆರೆಯದ ತತ್ವ, ಆ ಗುರುವ ಪಾಲಿಸಿದ ಶಿಷ್ಯ ಜ್ಯೋತಿರ್ಮಯನೈ ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಆಯಿತ್ತಾಯಿತ್ತು ಗುರುಸ್ವಾಯತ; ಆಯಿತ್ತಾಯಿತ್ತು ಲಿಂಗ ನಿಜನಿಷ್ಠೆ; ಆಯಿತ್ತಾಯಿತ್ತು ಜಂಗಮದರಿವು ಸಂಭಾಷಣೆ; ಆಯಿತ್ತಾಯಿತ್ತು ಪ್ರಸಾದದ ರುಚಿಭೋಗ; ಆಯಿತ್ತಾಯಿತ್ತು ಸಯವಾದ ಭಕ್ತಿ ಜ್ಞಾನ ವೈರಾಗ್ಯದ ನಿರಿಗೆ. ಆಯಿತ್ತಾಯಿತ್ತು ಸರ್ವಾಚಾರ ಸಂಪ್ಕ್ತನ ಸೌಖ್ಯವೆನಗೆ ಕಪಿಲಸಿದ್ಧಮಲ್ಲಿಕಾರ್ಜುನ ದೇವರ ದೇವಾ ನೀವು ಗುರುಮೂರ್ತಿಯಾದ ಕಾರಣ.
--------------
ಸಿದ್ಧರಾಮೇಶ್ವರ
ಆ ಅಕ್ಷರದಾನು ಭೇದಕ್ಕೆ ಅರಿಯನು, ಆದರಿಂದಲಾದ ಬಿಂದುಗಳೆಲ್ಲ ಅನ್ನರೂಪು. ಆಮೋದದಕ್ಷರದ ಭೇದವನು ಅರುಹಿದಾತನೆ ಗುರುವಕ್ಕು ಅಯ್ಯಾ, ಶ್ರೀ ಗುರುವೆ ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ

ಇನ್ನಷ್ಟು ...