ಅಥವಾ
(214) (139) (48) (7) (13) (3) (0) (0) (105) (12) (12) (37) (5) (0) ಅಂ (44) ಅಃ (44) (163) (1) (60) (9) (0) (12) (0) (64) (0) (0) (0) (0) (0) (0) (0) (104) (0) (49) (10) (128) (74) (5) (68) (61) (158) (17) (10) (0) (47) (55) (61) (4) (129) (75) (0)

ಪದದಿಂದ ಪ್ರಾರಂಭವಾಗುವ ವಚನಗಳು:

ವರ್ಗ ಪಟ್ಟಣದಲ್ಲಿ ಎರಡೆಂಟು ಕಳೆಗಳನು ಹದುಳ ಪಟ್ಟಣಮಾಡಿ ಒಪ್ಪಿತೋರಿ ಸಮತೆ ಅದ್ಥಿಕಾರದ ಸುಮತಿಯಾದುದು. ಗ್ರಾಮ ಭ್ರಮೆಗೆಟ್ಟುದೈ ಬಿಡು ಜ್ಯೋತಿಮತಿರ್ಮಯವೈ. ಆನಂದ ಪಾತ್ರೆಯ ಸಮತೆ ತೈಲವನೆರೆಯೆ ಬೆಳಗು ಪ್ರಭೆಯಾಗಿ ದೆಸೆದೆಸೆಗೆವರಿದು, ಅತಿಶಯದ ನಿತ್ಯ ಕಪಿಲಸಿದ್ಧಮಲ್ಲಿಕಾರ್ಜುನನ ಎಯ್ದಿದ ಬೆಳಗು ಸಮತೆಯಾದೆ.
--------------
ಸಿದ್ಧರಾಮೇಶ್ವರ
ವಿಷಮ ವಿಷಯ ಗಾಳಿಯಲ್ಲಿ ದೆಸೆಗೆಟ್ಟೆನಯ್ಯಾ ತಂದೆ. ಆಮಿಷ ರೋಷಂಗಳೆನ್ನುವ ಕಾಡಿಹವು. ಶಾಶ್ವತ ನಿತ್ಯ ನಿತ್ಯ ನೀನೆ ನಿಜಪದವನೀಯಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ವೇದವನೋದಿ ವೇದಾಧ್ಯಯನವ ಮಾಡಿದಡೇನು, ಬ್ರಾಹ್ಮಣನಾಗಬಲ್ಲನೆ? ಬ್ರಹ್ಮವೇತ್ತುಗಳ ಶುಕ್ಲಶೋಣಿತಂದ ಜನಿಸಿದಡೇನು, ಬ್ರಾಹ್ಮಣನಾಗಬಲ್ಲನೆ? ಯಜನಾ[ದಿಇ] ಷ್ಟ ಷಟ್ಕರ್ಮಂಗಳ ಬಿಡದೆ ಮಾಡಿದಡೇನು, ಬ್ರಾಹ್ಮಣನಾಗಬಲ್ಲನೆ? `ಬ್ರಹ್ಮ ಜಾನಾತಿ ಇತಿ ಬ್ರಾಹ್ಮಣಃ' ಎಂಬ ವೇದವಾಕ್ಯವನರಿದು, ಬ್ರಹ್ಮಭೂತನಾದಾತನೆ ಬ್ರಾಹ್ಮಣ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ವೇದ ವೇದಂಗಳೆಲ್ಲ ಶಿವನ ಹೊಗಳಿ ನಿರ್ಮಲವಾದವು ನೋಡಾ `ಓಂ ನಮಃ ಸೋಮಾಯ ಚ ರುದ್ರಾಯ ಚ' ಎಂದು ವೇದವಾಕ್ಯ ನೋಡಾ. `ನಮಸ್ತಾಮ್ರಾಯ ಚಾರುಣಾಯ ಚ' ಎಂದು ಪಂಡಿತಮುಖಪ್ರಸಿದ್ಧ ನೋಡಾ. `ನಮಃ ಶೃಂಗಾಯ ಚ ಪಶುಪತಯೇ ಚ' ಎಂದು ವೇದಾಧ್ಯಾಯಿಗಳರಿಕೆ ನೋಡಾ. `ನಮಃ ಶಿವಾಯ ಚ ಶಿವತರಾಯ ಚ' ಎಂದು ಕಪಿಲಸಿದ್ಧಮಲ್ಲಿಕಾರ್ಜುನನ ಪಂಚಮುಖದಲ್ಲಿ ನಿತ್ಯ ನಿತ್ಯ ಘೋಷ ನೋಡಾ, ಕೇದಾರಯ್ಯಾ.
--------------
ಸಿದ್ಧರಾಮೇಶ್ವರ
ವಾರಾಸಿಯಿಂದತ್ತಲಾರು ಬಲ್ಲರು ದೇವಾ? ಈರೇಳನತಿಗಳೆದ ನಿತ್ಯ ನಿತ್ಯ ಕಾರುಣ್ಯಭಾವದಲಿ ಆ ಮರುಳುಗೊಂಡಡೆ ಆರು ಏವಿದ್ಥಿಯಾದಡೇನಯ್ಯ? ಕಾರುಣ್ಯಕರ ಕಪಿಲಸಿದ್ಧಮಲ್ಲೇಶ್ವರಾ ಓರಂತೆಯಾದ ಬಳಿಕಾನಂದನು.
--------------
ಸಿದ್ಧರಾಮೇಶ್ವರ
ವೃಕ್ಷ-ಬೀಜದಂತೆ ಇಪ್ಪೆ ನೀನು ಅಯ್ಯಾ, ಅಯ್ಯಾ, ನಿರಾಕಾರದೊಳಗೆ ಮೂರ್ತಿ ಮೂರ್ತಿಯೊಳಗೆ ನಿರಾಕಾರ ನೀನು. ಅಯ್ಯಾ, ಮೂರ್ತಿ ಮೂರ್ತಿಗಳನೆ ತೋರಿ ಆಡಿ ಬಯಲಲಿಪ್ಪೆಯೈ, ಎನ್ನ ಕಪಿಲಸಿದ್ಧಮಲ್ಲೇಶ್ವರದೇವಾ.
--------------
ಸಿದ್ಧರಾಮೇಶ್ವರ
ವಿಷ ಉಂಡು ದಣಿಯಲಾರದೆ, ವಿಷ ನೈವೇದ್ಯವ ಮಾಡಿಕೊಂಡ ನೋಡಾ, ಈ ದೇವಾ. ತ್ರಿಪುರಾಂತಕ ಕೆರೆಯಗುಳಿ ದಣಿಯಲಾರದೆ, ಹಲವು ಗುಡ್ಡ ರೂಪಾಗಿ ಕೆರೆಯಗುಳಿಸಿಕೊಂಡ ನೋಡಾ [ಈ ದೇವ] ಇದ್ದ ದೇವಾಲಯವಲ್ಲದೆ ಮತ್ತೆ ದೇವಾಲಯವ ಮಾಡಿಸಿಕೊಂಡ ನೋಡಾ, ಈ ದೇವ, ತಾನಾಖಂಡಮೂರ್ತಿಯ ರೂಪು ಧರಿಸದೆ, ಲಕ್ಷ ತೊಂಬತ್ತಾರು ಸಾಸಿ[ವಾಗಿ]ನೆಲಸಿಪ್ಪ ನೋಡಾ ಈ ದೇವ, ಕಪಿಲಸಿದ್ಧಮಲ್ಲಿಕಾರ್ಜುನದೇವ.
--------------
ಸಿದ್ಧರಾಮೇಶ್ವರ
ವೀರನಾದಡೆ ವೈರಿಗಳ ಕಾಟ ಬಹಳವಯ್ಯಾ, ದಾನಶೂರನಾದಡೆ ಯಾಚಕರ ಗೋಳು ಬಹಳವಯ್ಯಾ. ಅತಿರೂಪನಾದಡೆ ಅಂಗನೆಯರ ಕಾಟ ವಿಶೇಷವಯ್ಯಾ. ಮೂರರಲ್ಲಿ ನಿಂತಡೆ ಮಲತ್ರಯಂಗಳ ಘೋರ ಹೆಚ್ಚಾಯಿತಯ್ಯಾ. ಅಂಗದಲ್ಲಿ ಲಿಂಗಸಂಬಂಧವಾಗಬಾರದು; ಆದ ಬಳಿಕ ವೀರನಾಗಿ ವಿಷಯಂಗಳನಳಿವುದು, ಬಹುಘೋರವು ಬಹುಘೋರವು ನೋಡಯ್ಯಾ, ಎಲೆ ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ವಿದ್ಯೆ ಎಂದಡೆ ಭಾರತ-ರಾಮಾಯಣವಲ್ಲ. ಭಾರತವೆಂದಡೆ ಭರತದೇಶದಲ್ಲಿ ಜನಿಸಿ, ಕಾಮಿನಿಯರ ಸೋಗುಹಾಕಿ, ಆ ದೇಶಕ್ಕದ್ಥಿಪ್ಕಯಾದ ಕಥೆಯೆ ಭಾರತವಯ್ಯಾ. ರಾಮಾಯಣವೆಂದಡೆ, ಆದಿನಾರಾಯಣನು ಪೃಥ್ವಿಯೊಳು ಹುಟ್ಟಿ, ರಾಮನೆಂಭಧಾನವ ಧರಿಸಿ, ಸರ್ವರಂತೆ ಪ್ರಪಂಚವ ಮಾಡಿ, ರಾಕ್ಷಸರ ಗರ್ವವನಳಿದುದೆ ರಾಮಾಯಣ. ಮಾಡಿ ಉದ್ಧಟವಾದಲ್ಲಿ ಕಾಲಾಂತರದಲಾದರೂ ಕುರುಹಿನೊಳಗಾದವಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ವಾಕ್ಸಿದ್ಧಿಯುಳ್ಳವರು ಕೋಟ್ಯಾನುಕೋಟಿ; ಮನೋರಥಸಿದ್ಧಿಯುಳ್ಳವರು ಕೋಟ್ಯಾನುಕೋಟಿ; ಭಾವಸಿದ್ಧಿಯುಳ್ಳವರು ಕೋಟ್ಯಾನುಕೋಟಿ. ನಿಮ್ಮ ಸ್ಥಿತಿಯುಳ್ಳವರು ಇಲ್ಲ ಕಂಡಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ವೇದ್ಯ ಸಾದ್ಥಿಸುವಲ್ಲಿ ನಾದಬ್ರಹ್ಮದ ಮುಂದೆ ಆಯಾದಕ್ಷರದ ಆಮೋದದಾ ನಾದ ಬಿಂದು ಕಳೆಯ ಭೇದಕ್ಕೆ ಆವ ದೂರ ಮುಕ್ತ್ಯಾಧಾರ ಕಪಿಲಸಿದ್ಧಮಲ್ಲಿಕಾರ್ಜುನನು.
--------------
ಸಿದ್ಧರಾಮೇಶ್ವರ
ವೇದಂಗಳು ದೈವವಾದಡೆ ಕುಕ್ಕುರ ಕುದುರೆಗಳಾಗಲೇಕೋ? ಶಾಸ್ತ್ರಂಗಳು ದೈವವಾದಡೆ ಹೊರಜು ಕಣ್ಣಿಗಳಾಗಲೇಕೋ? ಆಗಮಂಗಳು ದೈವವಾದಡೆ ಕೀಲುಗುಣಿಕೆಗಳಾಗಲೇಕೋ? ಪುರಾಣಂಗಳು ದೈವವಾದಡೆ ಅಚ್ಚು ಹೊರಜೆಯಾಗಲೇಕೋ? ಚಂದ್ರಸೂರ್ಯರು ದೈವವಾದಡೆ ಗಾಲಿಗಳಾಗಲೇಕೋ? ಇವ ಹಿಡಿದಾಡಿ ಭಜಿಸಿ ಪೂಜೆಮಾಡಿದವರು ದೈವವಾದಡೆ, ಪುಣ್ಯ-ಪಾಪಕ್ಕೀಡಾಗಲೇಕೋ? ಇದು ಕಾರಣ, ವೇದಂಗಳು ದೈವವಲ್ಲ, ಶಾಸ್ತ್ರಂಗಳು ದೈವವಲ್ಲ, ಆಗಮಂಗಳು ದೈವವಲ್ಲ, ಪುರಾಣಂಗಳು ದೈವವಲ್ಲ, ಚಂದ್ರ ಸೂರ್ಯರು ದೈವವಲ್ಲ, ಆತ್ಮನು ದೈವವಲ್ಲ, ಕಪಿಲಸಿದ್ಧಮಲ್ಲಿಕಾರ್ಜುನಾ, ನೀನೊಬ್ಬನೇ ದೈವ
--------------
ಸಿದ್ಧರಾಮೇಶ್ವರ
ವೃಕ್ಷಛಾಯೆಯಲ್ಲಿಹಂಗೆ ನೀನು, ಸಕಲರಿಗೆ ಸ್ವಾತಂತ್ರ ್ಯ ಪದವನೀವೆ, ನಿನಗಿಲ್ಲ. ನೀನು ನಿಷ್ಕಲದಲ್ಲಿ ನಿರ್ಣೈಸಿ ಸಕಲದ ಸ್ವಾತಂತ್ರಿಸಿ ಇಪ್ಪೆ. ಆನಂದವೆಂಬ ಗತಿಯಲ್ಲಿ, ಸಾನಂದವೆಂಬ ತಾಳವಿಡಿದು ಆಡಲಾಗಿ, ಕೊಟ್ಟೆನೆಂಬ ಪದವ ಅವರೊಲ್ಲದಿದ್ದಡೆ ನೀನೆ ಒಚ್ಚತ ಹೋಹೆ, ಕಪಿಲಸಿದ್ಧಮಲ್ಲಿಕಾರ್ಜುನಾ ನಿನಗಿದು ಸಹಜ.
--------------
ಸಿದ್ಧರಾಮೇಶ್ವರ
ವಾಕ್ಸಿದ್ಧಿಯಿಂದ ದೋಷವುಂಟು, ವಾಕ್ಸಿದ್ಧಿಯಿಂದ ಪುಣ್ಯವುಂಟು. ದೋಷದಿಂದ ಭವಕ್ಕೆ ಬೀಜ, ಪುಣ್ಯದಿಂದ ಪದಕ್ಕೆ ಬೀಜ. ಇವೆಲ್ಲ ಪ್ರಳಯದಲ್ಲಿ, ನಿತ್ಯನೋಡಾ ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ವೇದ ಪಾಠಕರೆಲ್ಲಾ ಕೇಳಿಭೋ! ವೇದ ಸ್ವಯಂಭು ಎನಲೊಡನೆ ಅಯ್ಯಾ ಎನ್ನ ಎದೆ ರುsುಲ್ಲೆಂದವಯ್ಯ. ಎಲೆ ಅಜ್ಞಾನಿ ಕೇಳು, ಕಪಿಲಸಿದ್ಧಮಲ್ಲಿಕಾರ್ಜುನ ಒಬ್ಬನೆ ಸ್ವಯಂಭು.
--------------
ಸಿದ್ಧರಾಮೇಶ್ವರ
ವಾಸಿ ವಾಸಿ ಗುರುಕ್ರಿಯೆಯ ಹಿಡಿದಡೆಯೂ ವಾದ ಮಾಣದು; ಬಿಟ್ಟಡೆಯೂ ವಾದ, ಹಿಡಿದಡೆಯೂ ವಾದ. ಕಪಿಲಸಿದ್ಧಮಲ್ಲಿಕಾರ್ಜುನಯ್ಯನ ಕೂಟ ಒಮ್ಮೆ ಕಾಲಕೂಟ, ಒಮ್ಮೆ ಅಮೃತದ ನೋಟ, ಕೇಳಾ ಕಿನ್ನರಯ್ಯಾ.
--------------
ಸಿದ್ಧರಾಮೇಶ್ವರ
ವಚನಾನುಭವ ವಾಗ್ರಚನೆಯಲ್ಲ ಮನವೆ, ವಚನಾನುಭವ ವಾಗ್ರಚನೆಯಲ್ಲ. `ವಚನಾನುಭವೋ ವಚೋ ನ' ಎಂಬುದು ಶ್ರುತಿಸಿದ್ಧ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ವೇಶವ ಧರಿಸಿ ಫಲವೇನಯ್ಯಾ, ವೇಷದಂತಾಚರಣೆ ಇಲ್ಲದನ್ನಕ್ಕ? ವೇದಾಂತವನೋದಿ ಫಲವೇನಯ್ಯಾ, ಬ್ರಹ್ಮ ತಾವಾಗದನ್ನಕ್ಕ? ನಾನಾ ಕೆರೆಯ ತೋಡಿ ಫಲವೇನಯ್ಯಾ, ಪುಣ್ಯತೀರ್ಥಂಗಳು ಬರದನ್ನಕ್ಕ? ಕಪಿಲಸಿದ್ಧಮಲ್ಲಿನಾಥಾ.
--------------
ಸಿದ್ಧರಾಮೇಶ್ವರ
ವರ್ಮವನರಿತು ನಿಮ್ಮ ಕಾಬವರು ಸುಲಭವೆ ಲೋಕದ್ಲ? ಲಿಂಗಭಕ್ತಿ ಜಂಗಮಭಕ್ತಿ ಗುರುಭಕ್ತಿ ಸುಲಭವೆ? ಲಿಂಗಭಕ್ತ ಪ್ರಭುದೇವ, ಜಂಗಮಭಕ್ತ ಬಸವಣ್ಣ. ಗುರು ಮೊದಲಾದ ಪ್ರಸಾದವ ಸರ್ವಕ್ಕೆ ಅನುಭಾವಿ ಚೆನ್ನಬಸವಣ್ಣ. ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ, ಇಂತಿವರ ಪಾದಕ್ಕೆ ನಮೋ ನಮೋ ಎಂಬೆ.
--------------
ಸಿದ್ಧರಾಮೇಶ್ವರ
ವಾಙ್ಮನಕ್ಕಗೋಚರ ವಸ್ತುವೆಂದರಿದ ಬಳಿಕ, ವಾಕ್ಯದಿಂದಾಗದು, ಮನದಿಂದಾಗದು. ಅರಿದ ಅರಿವಿನಿಂದ ನೆನೆದು, ನಿರಾಕಾರ ನಿಜವಸ್ತು ನಿರ್ಮಲ ಶುದ್ಧ ಶಬಲಾಂಶ ತಾನಾಗಬಾರದೇನಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ
--------------
ಸಿದ್ಧರಾಮೇಶ್ವರ
ವನವೊಂದರರಲ್ಲಿ ಘನಕಾಸಾರ ಬೆಳೆದುದ ಕಂಡೆ. ಆ ಘನಕಾಸಾರದಲ್ಲಿ ಮೂರು ಹೂಗಳ ಕಂಡೆ. ಆ ಮೂರು ಹೂಗಳ್ಲ ಮೂರು ಮೂರ್ತಿಗಳ ಕಂಡೆ. ಆ ಮೂರು ಮೂರ್ತಿಗಳಲ್ಲಿ ಮೂಲೋಕದರಸ ಕಪಿಲಸಿದ್ಧಮಲ್ಲಿಕಾರ್ಜುನನ ಕಂಡು ಕಣ್ದೆರೆದು ಕಂಡೆ ಕಂಡೆ, ಕಂಡೆಯಾ ಕೇದಾರ ಗುರುವೆ.
--------------
ಸಿದ್ಧರಾಮೇಶ್ವರ
ವೇಷವ ಧರಿಸಿ ಫಲವೇನಯ್ಯಾ, ವೇಷದಂತಾಚರಣೆ ಇಲ್ಲದನ್ನಕ್ಕ? ವೇದಾಂತವನೋದಿ ಫಲವೇನಯ್ಯಾ, ಬ್ರಹ್ಮ ತಾವಾಗನ್ನಕ್ಕ? ನಾನಾ ಕೆರೆಯ ತೋಡಿ ಫಲವೇನಯ್ಯಾ, ಪುಣ್ಯತೀರ್ಥಂಗಳು ಬರದನ್ನಕ್ಕ? ಕಪಿಲಸಿದ್ಧಮಲ್ಲಿನಾಥಾ.
--------------
ಸಿದ್ಧರಾಮೇಶ್ವರ
ವ್ಯಾಘ್ರದಿಂ ದಿವಾರಾತ್ರಿಗಳಲ್ಲಿಯು ಕಾಣಬಹಾಂಗೆ ಭೇರುಂಡನಾ ಭೂಮಿ ಆಕಾಶಂಗಳೆರಡರಲ್ಲಿಯೂ ಚರಿಸುವ ಹಾಂಗೆ ಶಿವಯೋಗಿಯಾ ಪ್ರಪಂಚ ಪರಮಾರ್ಥಂಗಳೆರಡರಲ್ಲಿಯೂ ಕಂಡು ಆಚರಿಸುವನೆಂಬುದು ತೋರಲ್ಪಡುತ್ತಿಹುದು. ಶಿವಾಚಾರ ಸಂಪನ್ನರಾಗಿ ಶಿವಯೋಗದ ಹೊಲಬನರಿದವರು ಲೌಕಿಕದತ್ತಲೂ ಚರಿಸುವರು, ಪರಮಾರ್ಥದತ್ತಲೂ ಚರಿಸುವರು, ಕಪಿಲಸಿದ್ಧಮಲ್ಲಿನಾಥನೆಂಬ ಮಹಾಬಯಲು ಕೂಡಿರ್ಪರು.
--------------
ಸಿದ್ಧರಾಮೇಶ್ವರ
ವಿದ್ಯೆಯನರಿಯದವ ಗುದ್ದಾಟಕ್ಕೊಳಗಾದ. ಅವಿದ್ಯೆಯನರಿಯದವ ಪ್ರಪಂಚವ ಒದ್ದುಬಿಟ್ಟ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ವಸ್ತು ನಿರಾಕಾರವೆಂದಡೆ ಆಕಾರಕ್ಕೆ ಬರುವುದೆ? ವಸ್ತು ನಿರ್ವಿಕಾರವೆಂದಡೆ ವಿಕಾರಕ್ಕೆ ಬರುವುದೆ? ವಸ್ತು ಉಭಯವೆಂದಡೆ ಉಭಯ ಸಂದೇಹತ್ವದಿಂಬಳಿವುದೆ? ವಸ್ತುವಿನ ವ್ಯವಹಾರ ಆರಿಗೂ ಅರಿಯಬಾರದು. ಕಪಿಲಸಿದ್ಧಮಲ್ಲಿಕಾರ್ಜುನಂಗ ಉಭಯಾತೀತ ನೋಡಾ, ಪ್ರಭುವೆ.
--------------
ಸಿದ್ಧರಾಮೇಶ್ವರ

ಇನ್ನಷ್ಟು ...