ಅಥವಾ
(214) (139) (48) (7) (13) (3) (0) (0) (105) (12) (12) (37) (5) (0) ಅಂ (44) ಅಃ (44) (163) (1) (60) (9) (0) (12) (0) (64) (0) (0) (0) (0) (0) (0) (0) (104) (0) (49) (10) (128) (74) (5) (68) (61) (158) (17) (10) (0) (47) (55) (61) (4) (129) (75) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಗುರುವಿಡಿದು ತನುವಾಯಿತ್ತು ; ಲಿಂಗವಿಡಿದು ಮನವಾಯಿತ್ತು ; ಜಂಗಮವಿಡಿದು ಧನವಾಯಿತ್ತು ; ಬಸವಣ್ಣವಿಡಿದು ಭಕ್ತಿಯಾಯಿತ್ತು ; ಕಪಿಲಸಿದ್ಧಮಲ್ಲಿನಾಥಯ್ಯ
--------------
ಸಿದ್ಧರಾಮೇಶ್ವರ
ಗುರು ತೋರಿದನು ಲಿಂಗ- ಜಂಗಮವ. ಪಾದೋದಕ-ಪ್ರಸಾದವ ಕೊಳಹೇಳಿದನಲ್ಲದೆ ಇವ ತೊರೆಯ ಹೇಳಿದನೆ? ಅಹಮ್ಮೆಂದು ಪ್ರಸಾದದ್ರೋಹಿಗಳಾಗಿ, ನಾನೆ ಎಂದು ಲಿಂಗದ್ರೋಹಿಗಳಾಗಿ, ವಿಭೂತಿ-ರುದ್ರಾಕ್ಷಿ ಸಾಕ್ಷಾತ್ ಶಿವನೆಂದರಿಯದೆ, ಅವರಾಚರಣೆಯ ನೋಡಿ ನಿಂದಿಸಿ ಜಂಗಮದ್ರೋಹಿಗಳಾಗ ಹೇಳಿದನೆ? ಜಂಗಮದಲ್ಲಿ ಜಾತಿಯ, ಪ್ರಸಾದದಲ್ಲಿ ರುಚಿಯ, ಂಗದ್ಲ ಮೃದುವನರಸುವ, ಸಮಯದ್ಲ ವಿಶ್ವಾಸವಿಲ್ಲದ ಮಿಟ್ಟಿಯ ಭಂಡರ ತೋರರಯ್ಯಾ ಎನಗೆ ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಗಮನವರಿತು ಸುಳಿಯಬಲ್ಲಡೆ ಆಪ್ಯಾಯನವರಿತು ಉಣಬಲ್ಲಡೆ ಇಚ್ಛೆಯರಿತು ಬೇಡಬಲ್ಲಡೆ ಈ ತ್ರಿವಿಧ ಗುಣದ ಅನುವ ಬಲ್ಲವರು ದೇವರಿಗೆ ದೇವರಾಗಿಪ್ಪರು ಕಾಣಾ, ಕಪಿಲಸಿದ್ಧಮಲ್ಲಿಕಾರ್ಜುನ ದೇವರ ದೇವಾ.
--------------
ಸಿದ್ಧರಾಮೇಶ್ವರ
ಗುರುವಿನ ಕೃಪೆಯಿಂದ ಸಾಧಾರಣ ತನುವ ಮರೆದೆ; ಗುರುವಿನ ಕೃಪೆಯಿಂದ ಮಲತ್ರಯದ ಪಂಕವ ತೊಳೆದೆ; ಗುರುವಿನ ಕೃಪೆಯಿಂದ ದೀಕ್ಷಾತ್ರಯದಿಂದ ಅನುಭಾವಿಯಾದೆ; ಗುರುವಿನ ಕೃಪೆಯಿಂದ ಶುದ್ಧ ಸಿದ್ಧ ಪ್ರಸಿದ್ಧ ಪ್ರಮಾಣವನರಿದೆ; ಎನಗಾದ್ಥಿಕ್ಯವಪ್ಪ ವಸ್ತು ಬೇರೊಂದಿಲ್ಲ. ಅದೇನುಕಾರಣ? ಅವ ನಾನಾದೆನಾಗಿ. ಗುರುವೆ ಎನ್ನ ತನುವಿಂಗೆ ಲಿಂಗೀಕ್ಷೆಯ ಮಾಡಿ, ಎನ್ನ ಜ್ಞಾನಕ್ಕೆ ಸ್ವಾನುಭಾವ ದೀಕ್ಷೆಯ ಮಾಡಿ, ಎನ್ನ ತನು-ಮನ-ಧನದಲ್ಲಿ ವಂಚನೆಯಿಲ್ಲದೆ ಮಾಡಲೆಂದು ಜಂಗಮದಿಕ್ಷೆಯ ಮಾಡಿ, ಎನ್ನ ಸರ್ವಾಂಗವು ನಿನ್ನ ವಿಶ್ರಾಮಸ್ಥಾನ, ಶುದ್ಧಮಂಟಪವಾದ ಕಾರಣ, ಲೋಕವ್ಯಾಪ್ತಿಯನರಿಯದೆ ಲೋಕ ಎನ್ನೊಳಗಾಯಿತ್ತು, ಆ ಲೋಕಕ್ಕೆ ಹೊರಗಾದೆನಾಗಿ. ಅದೇನು ಕಾರಣ? ಜನನ-ಮರಣ-ಪ್ರಳಯಕ್ಕೆ ಹೊರಗಾದೆನಾಗಿ. ಗುರುವೆ ಸದ್ಗುರುವೆ ಎನ್ನ ಭವದ ಬೇರ ಹರಿದ ಗುರುವೆ, ಭವಪಾಶ ವಿಮೋಚನ, ಅವ್ಯಯ, ಮನದ ಸರ್ವಾಂಗ ಲೋಲುಪ್ತ, ಭಕ್ತಿ ಮುಕ್ತಿ ಫಲಪ್ರದಾಯಕ ಗುರುವೆ, ಬಸವಣ್ಣ, ಕಪಿಲಸಿದ್ಧಮಲ್ಲಿಕಾರ್ಜುನಾ, ಚೆನ್ನಬಸವಣ್ಣನಾಗಿ ಪ್ರಭು ಮೊದಲಾಗಿ ಅಸಂಖ್ಯಾತರೆಲ್ಲರನು ತೋರಿದೆ ಗುರುವೆ.
--------------
ಸಿದ್ಧರಾಮೇಶ್ವರ
ಗಂಧವೃಕ್ಷವ ಕಡಿದಲ್ಲಿ ನೊಂದೆನೆಂದು ಗಂಧವ ಬಿಟ್ಟಿತ್ತೆ ಅಯ್ಯಾ? ಚಂದದ ಸುವರ್ಣವ ತಂದು ಕಾಸಿ ಬಡಿದಡೆ, ನೊಂದನೆಂದು ಕಳಂಕ ಹಿಡಿಯಿತ್ತೆ ಅಯ್ಯಾ? ಸಂದು ಸಂದು ಕಡಿದ ಕಬ್ಬು ಯಂತ್ರದಲ್ಲಿಟ್ಟು ತಿರುಹಿ ಕಾಸಿದಡೆ, ನೊಂದೆನೆಂದು ಸಿಹಿಯಾಗುವುದ ಬಿಟ್ಟಿತ್ತೆ ಅಯ್ಯಾ? ತಂದು ತಂದು ಭವಕಟ್ಟಿಬಿಟ್ಟಡೆ, ನಿಮ್ಮರಿವು ಬಿಟ್ಟೆನೆ ಅಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಾ
--------------
ಸಿದ್ಧರಾಮೇಶ್ವರ
ಗುಣ ನೋಡುವಡೆ ಕೀಳು ಗುಣವಯ್ಯಾ ಧೇನುವಿನಲ್ಲಿ. ನಿಂದಿಸುವ, ಬಂದ ಭಕ್ತರ ಹಾದು ಹೋಗುವ ಕುಂದುವಡೆಯದೆ, ಮಲತ್ರಯ ಪೊಂದದ ಸಚ್ಚಿದಾನಂದ ಗುಣವುಂಟಯ್ಯಾ ಮಹೇಶನಲ್ಲಿ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಗುರು ಶಿಷ್ಯಾನಂದವ ಮನಸಿಗೆ ಬಂದಂತೆ ಹೇಳುವೆನು ಎಲೆ ಅವ್ವಾ. ಬಾಲನ ಮಾತಿಗೆ ಮಾತೆಪಿತರಿಗೆ ಪ್ರೀತಿಯಪ್ಪಂತೆ ಎನ್ನ ಮಾತ ಆಲಿಸುವವರು ಶಿವಭಕ್ತರು, ಎನ್ನ ಮಾತಾ ಪಿತರು ಕಾಣಾ ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಗುರುಮುಖಂದಾಗ, ಶಾಸ್ತ್ರಮುಖಂದಾಗ, ಮತ್ತಾವ ಮುಖಂದಾಗ ್ಕಳಿದನುಭಾವಿಯೆ ಸಂಸ್ಕಾರಿ ನೋಡಾ. ಆತನೆ ಪರಮವೀರಶೈವ ನೋಡಾ. ಆತನೆ ಕಪಿಲಸಿದ್ಧಮಲ್ಲಿಕಾರ್ಜುನ ನೋಡಾ, ಕಲ್ಲಯ್ಯಾ.
--------------
ಸಿದ್ಧರಾಮೇಶ್ವರ
ಗುರುಸಾಹಿತ್ಯ ಚೆನ್ನಬಸವಂಗಾಯಿತ್ತು ; ಲಿಂಗಸಾಹಿತ್ಯ ಬಸವಂಗಾಯಿತ್ತು ; ಜಂಗಮಸಾಹಿತ್ಯ ಅಲ್ಲಮದೇವಂಗಾಯಿತ್ತು ; ಪ್ರಸಾದಸಾಹಿತ್ಯ ಬಿಬ್ಬಿಬಾಚರಸಂಗಾಯಿತ್ತು ; ಪಾದೋದಕಸಾಹಿತ್ಯ ಹೊಡೆಹುಲ್ಲ ಬಂಕಯ್ಯಂಗಾಯಿತ್ತು ; ಭಸ್ಮಸಾಹಿತ್ಯ ಅಕ್ಕನಾಗಮ್ಮಂಗಾಯಿತ್ತು ; ರುದ್ರಾಕ್ಷಿಸಾಹಿತ್ಯ ಸರ್ವಪ್ರಮಥರಿಗಾಯಿತ್ತು. ಮಂತ್ರಸಾಹಿತ್ಯದವರ ಕಂಡಡೆ, ಕಪಿಲಸಿದ್ಧಮಲ್ಲಿಕಾರ್ಜುನಯ್ಯನಿವರೆ ಎಂದು ಎನ್ನ ಮನ ನಂಬಿತ್ತು ನೋಡಾ, ಮಡಿವಾಳ ಮಾಚಯ್ಯ.
--------------
ಸಿದ್ಧರಾಮೇಶ್ವರ
ಗುರುವೆ ಎನ್ನ ತನುವಿಂಗೆ ಲಿಂಗೀಕ್ಷೆಯ ಮಾಡಿ ಎನ್ನ ಜ್ಞಾನಕ್ಕೆ ಸ್ವಾನುಭಾವೀಕ್ಷೆಯ ಮಾಡಿ ಎನ್ನ ತನು ಮನ ಧನದಲ್ಲಿ ವಂಚನೆಯಿಲ್ಲದೆ ಮಾಡಲೆಂದು ಜಂಗಮದೀಕ್ಷೆಯ ಮಾಡಿ ಎನ್ನ ಸರ್ವಾಂಗವು ನಿನ್ನ ವಿಶ್ರಾಮಸ್ಥಾನ ಶುದ್ಧಮಂಟಪವಾದ ಕಾರಣ, ಲೋಕವ್ಯಾಪ್ತಿಯನರಿಯದೆ ಲೋಕ ಎನ್ನೊಳಗಾಯಿತ್ತು, ಆ ಲೋಕಕ್ಕೆ ಹೊರಗಾದೆ. ಅದೇನು ಕಾರಣ? ಜನನ ಮರಣ ಪ್ರಳಯಕ್ಕೆ ಹೊರಗಾದೆನಾಗಿ. ಗುರುವೆ ಸದ್ಗುರುವೆ ಎನ್ನ ಭವದ ಬೇರ ಹರಿದೆ ಗುರುವೆ, ಭವಪಾಶವಿಮೋಚ[ನ]ನೆ, ಅನ್ವಯ ಮನದ ಸರ್ವಾಂಗಲೋಲುಪ್ತ, ಭುಕ್ತಿಮುಕ್ತಿ ಫಲಪ್ರದಾಯಕ ಗುರುವೆ ಬಸವಣ್ಣ, ಕಪಿಲಸಿದ್ಧಮಲ್ಲಿಕಾರ್ಜುನ ಚೆನ್ನಬಸವಣ್ಣನಾಗಿ ಪ್ರಭು ಮೊದಲಾಗಿ ಅಸಂಖ್ಯಾತರನೆಲ್ಲರನು ತೋರಿದ ಗುರುವೆ.
--------------
ಸಿದ್ಧರಾಮೇಶ್ವರ
ಗುರುವಿಂಗಾದಡೆಯು ಬಸವಣ್ಣನೆ ಬೇಕು; ಲಿಂಗಕ್ಕಾದಡೆಯು ಬಸವಣ್ಣನೆ ಬೇಕು; ಜಂಗಮಕ್ಕಾದಡೆಯು ಬಸವಣ್ಣನೆ ಬೇಕು. ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ, ನಿಮಗೂ ಎನಗೂ ನಿಮ್ಮ ಶರಣರಿಗೂ ಬಸವಣ್ಣನೆ ಬೇಕು.
--------------
ಸಿದ್ಧರಾಮೇಶ್ವರ
ಗಿರಿಗಹ್ವರದೊಳಗರಸಿ ತೊಳಲಿ ಬಳದೆನವ್ವಾ. ನೋಡಿ ನೋಡಿ ಕಣ್ಣು ನಟ್ಟಾಲಿ ಬಿದ್ದವವ್ವಾ. ನೀನು ಗುರುವಾಗಿ ಬಂದು ಎನ್ನ ಭವವ ಹರಿದೆ. ನೀನು ಭಕ್ತ ಕಾರಣ ಪರಶಿವಮೂರ್ತಿಯೆಂದರಿದೆ ಕಾಣಾ, ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಗುಣವ ನೋಡದೆ ಹೊಗಳುವ ಜಂಗಮವು ಬ್ರಹ್ಮನ ಸಂತತಿ. ಕಾಡಿ ಬೇಡುವ ಜಂಗಮವು ನಾರಾಯಣನ ಸಂತತಿ. ವ್ಯಾಪಾರಿಕ ಜಂಗಮವು ಈಶ್ವರನ ಸಂತತಿ. ಹೊಗಳದೆ, ಕಾಡದೆ, ಬೇಡದೆ, ಬಲಾತ್ಕಾರದಿಂದುಣ್ಣದೆ, ವ್ಯವಹರಿಸದೆ, ಬ್ಥಿಕ್ಷಮುಖದಿಂದುಂಬ ಜಂಗಮವ ನೋಡಿ, ಎನ್ನ ಮನ ನೀವೆಂದು ನಂಬಿತ್ತಯ್ಯಾ, ಎಲೆ ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಗಂಡ ಬಾರನು ಎನ್ನ ತವರೂರಿಗೆ ಹೋಗುವೆವೆನಲು, ನೋಡೆ, ನೋಡೆಲಗವ್ವಾ ಬೇಟೆಯನಾಡುವ ನಾಯತಲೆಯ ಕೊಯ್ದಿಟ್ಟು, ತಾ ಬೇರೆ ಬೇಟಕಾರನಾದ. ನಮ್ಮ ಕಪಿಲಸಿದ್ಧಮಲ್ಲಿಕಾರ್ಜುನ ನೆಲೆಯಲ್ಲಿ ನಿಲವ ಕೊಂಡನು; ಹುಚ್ಚನ ಸಂಗ ನಿಶ್ಚಯವಾಯಿತು.
--------------
ಸಿದ್ಧರಾಮೇಶ್ವರ
ಗುರುವಿಂಗೆ ಗುರುವಿಲ್ಲ, ಲಿಂಗಕ್ಕೆ ಲಿಂಗವಿಲ್ಲ ; ಜಂಗಮಕ್ಕೆ ಜಂಗಮವಿಲ್ಲ, ನನಗೆ ನಾನಿಲ್ಲ. ಕಣೆರೆದು ನೋಡುವಡೆ ಆರಿಗೆ ಆರೂ ಇಲ್ಲ, ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಗುರುಪಾದುಕೆಯ ಮೆಟ್ಟಿ ಅಮರಗುಂಡದ ಮಲ್ಲಿಕಾರ್ಜುನಭೃತ್ಯ ಭಂಗಬಟ್ಟು ಗುರುಕರುಣವ ಪಡೆಯಲಿಲ್ಲವೆ? ಗುರುಪಾದುಕೆಯ ಮೆಟ್ಟಿ ಅಮರಶೇಖರನೆಂಬರಸು ಪಾದವ ಕಡಿಸಲ್ಲವೆ? ಗುರುಪಾದುಕೆಯ ಮೆಟ್ಟಿ ರಾಜೇಂದ್ರಚೋಳ ತನ್ನ ರಾಣಿಯ ಸಂಗ ಬಿಡಲ್ಲವೆ? ಗುರುಪಾದುಕೆಯ ಮೆಟ್ಟಿ ಸಿಂಹಚೋಳ ಪಂಡಿತರ ಪಾದ ತುಂಡಿಸಲ್ಲವೆ? ಇದು ಕಾರಣ, ಗುರುಪಾದುಕೆ ಶ್ರೀಗುರು ಕಪಿಲಸಿದ್ಧಮಲ್ಲಿಕಾರ್ಜುನನ ಪೂಜೆಯ ಚಮ್ಮಾವುಗೆಂದು ನಂಬಿದೆ. ಹುಸಿಯಾದಡೆ, ಪ್ರಮಥಸಂಕುಲದಲ್ಲಿ ಗುರು ಕೊಟ್ಟ ಗುರುಮೂರ್ತಿ ಇಲ್ಲದಂತೆ ಮಾಡಾ ಪ್ರಭುವೆ.
--------------
ಸಿದ್ಧರಾಮೇಶ್ವರ
ಗ್ರಾಮ ಪಟ್ಟಣವೈದು ಐದೈದು ನಾಯಕರು ತೋರಿಪ್ಪರದ ಕಂಡು ಪ್ರತ್ಯಯವನು. ಸೀಮೆ ಸಂಬಂಧವನು ಮೀರಿಪ್ಪ ನಾಯಕರು ತಾವು ನಿಂದರು ಗಡಿಯ ಸಂಬಂಧವ ಪರದಳವು ಬರಲಾಗಿ ಅರಿಯದೆ ಇದಿರಾಡಿ ಅರಿತು ಬಿಟ್ಟರು ವೀರದ್ಥೀರರಾಗಿ. ಅರಿವುಮರಹನೆ ನುಂಗಿ ಕುರುಹುಗೆಟ್ಟಾ ಸೀಮೆ ತೆರಹಿಲ್ಲದಾತ [ತಾ] ಪರಮಯೋಗಿ ಕಪಿಲಸಿದ್ಧಮಲ್ಲಿಕಾರ್ಜುನಯ್ಯನೆಂಬ ತೆರಹಿನ ಪಟ್ಟಣದ ಪ್ರಭೆಯಿಂತುಟು.
--------------
ಸಿದ್ಧರಾಮೇಶ್ವರ
ಗುದ್ದಾ[ಡಿ] ರತ್ನವ ಕದ್ದು ಒಯ್ಯಬಲ್ಲಡೆ ಭಕ್ತನೆಂಬೆ. ಮುದ್ದುಳ್ಳನ್ನವ ಮೆದ್ದಬಲ್ಲಡೆ ಮಹೇಶನೆಂಬೆ. ಜಿದದಿನ ಭಕ್ತಿಯ ಗೆದ್ದು ಒಯ್ದಡೆ, ಕಪಿಲಸಿದ್ಧಮಲ್ಲನ ಮನೆಯ ಮುದ್ದುಕುಮಾರನೆಂಬೆ ನೋಡಾ, ಮಡಿವಾಳ ಮಾಚಣ್ಣನೆ.
--------------
ಸಿದ್ಧರಾಮೇಶ್ವರ
ಗುರುವಾಗಿ ಬಂದೆನೆಗೆ ದೀಕ್ಷೆಯ ಮಾಡಿರಿ; ಲಿಂಗವಾಗಿ ಬಂದೆನ್ನ ಮನದ ಮನವ ಕಳೆದಿರಿ; ಜಂಗಮವಾಗಿ ಬಂದೆನ್ನ ಪ್ರಪಂಚಕತನವ ಕಳೆದು ಪರಮ ಸೀಮೆಯ ಮಾಡಿರಿ. ಇಂತಿವೆಲ್ಲವೂ ಬಸವಣ್ಣನಾಗಿ ಎನಗೆ ಪ್ರಸಾದವ ನೀಡಿ ಸಲಹಿದ, ಕಪಿಲಸಿದ್ಧಮಲ್ಲಿಕಾರ್ಜುನ. ಇನ್ನೆನಗತಿಶಯವೇನೂ ಇಲ್ಲ.
--------------
ಸಿದ್ಧರಾಮೇಶ್ವರ
ಗುರುಸ್ವಾಮಿ ಧರಿಸುವ ಮಡಿಯ ನಾ ಸುತ್ತಿದೆನಾದಡೆ, ಶಿರವು ಬಿರಿದು ಬೀಳಾಗಲಿ ದೇವಾ. ಗುರುಸ್ವಾಮಿ ಧರಿಸುವ ಕಂಠಮಾಲೆಯ ನಾ ಧರಿಸಿದೆನಾದಡೆ, ಕಂಠ ಕತ್ತರಿಸಿ ಹೋಗ ದೇವಾ. ಗುರುಸ್ವಾಮಿ ಪಾನವ ಮಾಡುವ ಗಿಂಡಿಯ ನಾ ಪಾನವ ಮಾಡಿದೆನಾದಡೆ ನಾಲಗೆ ಸೀಳಿಹೋಗ ದೇವಾ. ಗುರುಸ್ವಾಮಿ ಶಯನಿಸುವ ಸುಪ್ಪಿತ್ತಿಗೆಯಲ್ಲಿ ನಾ ಶಯನ ಮಾಡಿದೆನಾದಡೆ ಎನ್ನಂಗದಲಿ ಕ್ರಿಮಿಗಳು ಬೀಳ ದೇವಾ, ಕಪಿಲಸಿದ್ಧಮಲ್ಲಿಕಾರ್ಜುನದೇವಾ.
--------------
ಸಿದ್ಧರಾಮೇಶ್ವರ
ಗುರು ಸಮಾಧಿಯ ಸಮ ತನ್ನ ಸಮಾಧಿಯ ಮಾಡಲಂದು, ವೀರವಿಕ್ರಮಚೋಳನ ದೇಹ ಬಯಗೆ ಬಾಯಿದೆರೆದು ಬರಲಿಲ್ಲವೆ? ಗುರು ಸಮಾಧಿಯ ಮುಂದೆ ತನ್ನ ಸಮಾಧಿಯ ಮಾಡಲಂದು, ರಾಜೇಂದ್ರಚೋಳನ ದೇಹ ಎದ್ದು ನಮಿಸಿ ಸಮಾಧಿಯ ಹೋಗಲಿಲ್ಲವೆ? ಇದರ ಕೀಲ ಪ್ರಮಥರು ಅರಿಯರೆ? ಇದರಂದವ ಗೌರಿ ನಾಗಾಯಿ ಅರಿಯಳೆ? ಇದರ ಕೀಲ ಕಪಿಲಸಿದ್ಧಮಲ್ಲಿಕಾರ್ಜುನ ಶರಣನ ರಾಣಿ ನೀಲಾಂಬಿಕೆಯರಿಯಳೆ ಸೊಡ್ಡಯ್ಯಾ?
--------------
ಸಿದ್ಧರಾಮೇಶ್ವರ
ಗಂಗೆಯೆ ಘನ ಮುಟ್ಟಿದ ಪ್ರಾಣಿಗಳೆಲ್ಲಾ ದೇವತೆಗಳೆಂದಡೆ, ಗಂಗೆಯ ಸಂಚಾರ ಸಾವಿರಾರು ಗಾವುದ. ಅದರಲ್ಲಿಯ ಪ್ರಾಣಿಗಳು ಅನಂತಾನಂತ. ಇಷ್ಟು ಜೀವಿಗಳೆಲ್ಲಾ ದೇವರಾದಡೆ, ಸ್ವರ್ಗದಲ್ಲಿ ನಿಯಮಿತ ದೇವತೆಗಳೆಂಬುದು ಅಪ್ರಸಿದ್ಧ ನೋಡಾ ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಗ್ರಾಮವೆಂಟರ ಒಳಗೆ ಆನಂದದಾಳಾಪ ಸ್ವಾನುಭೂತ್ರೈತೆಕದಲಿ ಸೌಖ್ಯವಾಗಿ ಭಾನುವಿನುದಯದ ಪ್ರಭೆಯ ನುಂಗಿದ ದೀಪ್ತಿ ಅಜಾತ ಗುರುವಿನ ರೂಪು ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಗುರುಪಾದೋದಕದಿಂದ ಲಿಂಗಮಜ್ಜನ ಮಾಡಬಹುದಲ್ಲದೆ, ಬರಿಯುದಕದಿಂದೆರೆಯಬಹುದೆ ಕರಸ್ಥಲದ ತೇಜವ? ಮೀರಿದ ಮೀರಿದ ಮಾರ್ಗ ಹೇಳಿದರಯ್ಯಾ, ಎನ್ನ ಗುರುಗಳು. ಅನ್ಯಜಲವನೆರೆದೆನಾದಡೆ, ತಲೆ-ತಲೆದಂಡ ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಗ್ರಾಮಕ್ಕೊಬ್ಬರಸಿಲ್ಲದೆ ಗ್ರಾಮವಳುತ್ತಿದೆ ನೋಡಾ. ಗ್ರಾಮವನಾಳುವ ಅರಸಿನ ಮನೆಯ್ಲ ಸದೆ ಬೆಳೆಯಲ್ಲಿದೆಯಯ್ಯಾ. ಗ್ರಾಮಕ್ಕೆ ಬಂದ ಕಟ್ಟರಸಿಂಗೆ ಪಟ್ಟವ ಕಟ್ಟಿ, ಅರಸಿನ ಮನೆಗಳನನುಗೆಯ್ದು, ಹರುಷದಿಂದ ಕಾಣಿಕೆಯಿಕ್ಕಿಸಿಕೊಳ್ಳಾ, ಕಪಿಲಸಿದ್ಧಮಲ್ಲಿನಾಥಯ್ಯಾ.
--------------
ಸಿದ್ಧರಾಮೇಶ್ವರ

ಇನ್ನಷ್ಟು ...