ಅಥವಾ
(214) (139) (48) (7) (13) (3) (0) (0) (105) (12) (12) (37) (5) (0) ಅಂ (44) ಅಃ (44) (163) (1) (60) (9) (0) (12) (0) (64) (0) (0) (0) (0) (0) (0) (0) (104) (0) (49) (10) (128) (74) (5) (68) (61) (158) (17) (10) (0) (47) (55) (61) (4) (129) (75) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಯೋಗವ ಸಾದ್ಥಿಸಿದವನೊಬ್ಬ ನಿಜಗುಣ; ಯೋಗವ ಸಾದ್ಥಿಸಿದವನೊಬ್ಬ ವೃಷಭಯೋಗೀಶ್ವರ; ಯೋಗವ ಸಾದ್ಥಿಸಿದವನೊಬ್ಬ ಶಿವನಾಗಮಯ್ಯ; ಯೋಗವ ಸಾದ್ಥಿಸಿದೆ ನಾನೊಬ್ಬ ಕಪಿಲಸಿದ್ಧಮಲ್ಲಿಕಾರ್ಜುನನಲ್ಲಿ ಕೂಡುವ ಯೋಗವ.
--------------
ಸಿದ್ಧರಾಮೇಶ್ವರ
ಯತ್ರ ಯತ್ರ ಮಾಹೇಶ್ವರರಿರ್ದ ಗ್ರಾಮ ತತ್ರ ತತ್ರ ಶಿವಲೋಕ ನೋಡಾ, ಎಲೆ ಅಯ್ಯಾ. ಸತ್ಯ! ವಚನ ತಪ್ಪುವುದೆ ಅಯ್ಯಾ! ಕಪಿಲಸಿದ್ಧಮಲ್ಲಿನಾಥಾ, ನಿಮ್ಮ ಶರಣರು ಮೆಟ್ಟಿ ನಿಂದ ಧರೆ ಪಾವನವೆಂಬುದು ಇಂದೆನಗೆ ಅರಿಯಬಂದಿತ್ತಯ್ಯಾ.
--------------
ಸಿದ್ಧರಾಮೇಶ್ವರ
ಯಜಮಾನಂ ಸಾಜ ಜೋಯಿಸಕಾರ ತಾನೆಯಾಗಿ ಲಗುನವೆ? ತಿಟ್ಟವಿಟ್ಟಂತೆ ಕುಂದದಿಕ್ಕಿ ಆಕಾಶ ಆಕಾಶಲಿಂಗವಾಗುತ್ತಿಕ್ಕೆಲನ ಸಿಂಹಾಸನಗೊಂಡು ನಡುವೆ ನಿಂದಾ ಪಶುರೂಪುಗೊಂಡು ಸಲಕ್ಷಣವಿಡಿದು ಎಲ್ಲ ಲಿಂಗಮಯವಾಗಲು ಓಡಿ ನಡೆವೆ ಕಪಿಲಸಿದ್ಧಮಲ್ಲಿನಾಥನಾದ!
--------------
ಸಿದ್ಧರಾಮೇಶ್ವರ
ಯೋಗವನರಿದೆನೆಂಬೆ, ಯೋಗವನರಿದೆನೆಂಬೆ ; ಯೋಗದ ನೆಲೆಯನಾರು ಬಲ್ಲರು? ಯೋಗದ ನೆಲೆಯ ಹೇಳಿಹೆ ಕೇಳಾ- ತಾತ್ಪರ್ಯಕರ್ಣಿಕೆಯ ಮಸ್ತಕದಲ್ಲಿದ್ದ ಕುಂಭದೊಳಗೆ ತೋರುತ್ತದ್ಞೆ; ಹಲವು ಬಿಂಬ ಹೋಗುತ್ತಿದೆ, ಹಲವು ರೂಪ ಒಪುತ್ತಿದೆ ; ಏಕ ಏಕವಾಗಿ ಆನಂದಸ್ಥಾನದಲ್ಲಿ ಅನಿಮಿಷವಾಗುತ್ತಿದೆ ; ಪೂರ್ವಾಪರ ಮಧ್ಯ ಶುದ್ಧ ಪಂಚಮವೆಂಬ ಸ್ಥಾನಂಗಳಲ್ಲಿ ಪ್ರವೇಶಿಸುತ್ತಿದೆ ತಾನು ತಾನೆಯಾಗಿ. ಅರಿಯಾ ಭೇದಂಗಳ- ಬಿಂದು ಶ್ವೇತ ಪೂರ್ವಶುದ್ಧ ಆನಂದ ಧವಳ ಅನಿಮಿಷ ಸಂಗಮ ಶುದ್ಧ ಸಿದ್ಧ ಪ್ರಸಿದ್ಧ ತತ್ವವೆಂಬ ಪರಮಸೀಮೆ ಮುಖಂಗಳಾಗಿ, ಅಜಲೋಕದಲ್ಲಿ ಅದ್ವಯ, ನೆನಹಿನ ಕೊನೆಯ ಮೊನೆಯಲ್ಲಿ ಒಪ್ಪಿ ತೋರುವ ಧವಳತೆಯ ಬೆಳಗಿನ ರಂಜನ ಪ್ರವಾಹ ಮಿಗಿಲಾಗಿ, `ತ್ವಂ' ಪದವಾಯಿತ್ತು, ಮೀರಿ `ತ್ವಮಸಿ'ಯಾಯಿತ್ತು ಕಪಿಲಸಿದ್ಧಮಲ್ಲಿಕಾರ್ಜುನನೆಂಬ ನಾಮವ ನುಂಗಿಲೀಯವಾಯಿತ್ತು.
--------------
ಸಿದ್ಧರಾಮೇಶ್ವರ
ಯೋಗಿಯ ಹೊಲಬು ಯೋಗಿಯಾದವಂಗಲ್ಲದೆ, ಇತರ ನರರಿಂಗೆ ಸಾದ್ಥಿಸಬಾರದು ಕೇಳಯ್ಯಾ. ಧಾತುವಾದವದು ರಸವಾದಿಯಾದವಂಗಲ್ಲದೆ, ಇತರ ನರಂಗದು ಸಾದ್ಥಿಸಬಾರದು ಕೇಳಯ್ಯಾ. ನೋಡಿ ಮಾಡುವುದಾದಡೆ ಭವವೆಲ್ಲಿಹುದು, ದರಿದ್ರವೆಲ್ಲಿಹುದು ಹೇಳಯ್ಯಾ, ಕಪಿಲಸಿದ್ಧಯ್ಯಾ.
--------------
ಸಿದ್ಧರಾಮೇಶ್ವರ
ಯೋಗದ ಹೊಲಬ ನಾನೆತ್ತ ಬಲ್ಲೆನಯ್ಯಾ? ಯೋಗ ಶಿವಶಕ್ತಿ ಸಂಪುಟವಾಗಿಪ್ಪುದಲ್ಲದೆ, ಶಿವಶಕ್ತಿವಿಯೋಗವಪ್ಪ ಯೋಗವಿಲ್ಲವಯ್ಯಾ. ಹೃದಯಕಮಲದಲಿ ಇಪ್ಪಾತ ನೀನೆಯಲ್ಲದೆ, ಎನಗೆ ಬೇರೆ ಸ್ವತಂತ್ರವಿಲ್ಲ ಕೇಳಾ, ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಯಾವಾದರೂ ತೀರ್ಗಡೆಯಂತ್ಯದಲ್ಲಿ ಜಪ ತಪ ಶಿವಾರಾಧನೆ ಫಲಪದವು. ತೇರ್ಗಡೆಯಾ[ಗ]ದಲ್ಲಿ ಫಸದು ಫಸದು ಪುಣ್ಯಪಾಪಗಳವು. ದೇಹಶುದ್ಧವಾದವಂಗೆ ರಸಸಿದ್ಧಿ ರಸಸ್ಧಿಯಾದವಂಗೆ ದೇಹಶ್ಧುದ್ಧಿ ದೇಹಶುದ್ಧವಿಲ್ಲದವಂಗೆ ರಸಸಿದ್ಧಿಯಾಗದು; ರೋಗ ಪರಿಹಾರ[ವಾಗದು] ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಯೋಗಿನಾಥನ ಒಲುಮೆ ಯೋಗಿಯಾದವಂಗಲ್ಲದೆ, ಭೋಗಿಯಾದಾತಂಗೆಲ್ಲಿಹುದಯ್ಯಾ? ಪಂಚಮಸ್ವರದಾಯತ ಕೋಗಿಲೆಗಲ್ಲದೆ ಕಾಗೆಗೆಲ್ಲಿಹುದೊ? ಕಪಿಲಸಿದ್ಧಮಲ್ಲಿಕಾರ್ಜುನ ಯೋಗಿನಾಥಾ
--------------
ಸಿದ್ಧರಾಮೇಶ್ವರ
ಯೋಗಭೂಷಣ, ನಿಮ್ಮ ಆ ಅಕ್ಷರಭೇದ ಆದಿಯಾಧಾರಂಗಳಿಲ್ಲದಂದು, ಆನಂದಸ್ಥಾನದಲ್ಲಿಪ್ಪ ಗುರು ಬಸವಣ್ಣ, ತಾನೆನ್ನ ಕರುಣಂ ನಿತ್ಯನೆನಿಸಿ; ಯೋಗಸಿದ್ಧಾಂಗದಲ್ಲಾದ ಪಂಚಬ್ರಹ್ಮದಿಂ ದಾಗಾದೆನೈ ಚೆನ್ನಬಸವ ತಂದೆ; ಯೋಗಮೂರುತಿಯೆ ನೀನೆನ್ನ ಗುರುವಾಗಿ ಶಿವಯೋಗಿಯಾನಾದೆನಯ್ಯಾ. ನಿನ್ನವರ ಹೊರೆಗೈದೆ ಯೋಗಿಗುರು ಪ್ರಭುರಾಯ ನಾ ನಿಮ್ಮ ಕರುಣಲ್ಲಿ ಶಿವಯೋಗಮುದ್ರೆಯನೆ ನೆನೆದು ಸುಖಿಯಾದೆನೈ ಆಗಮಕ್ಕೊಳಗಾದ ಆಗಮಕೆ ಹೊರಗಾದ ಆನಂದಸ್ಥಾನದ ಸ್ವಯವಾದೆನೈ ದೇವ ಯೋಗಜ್ಞಾನ ಕಪಿಲಸಿದ್ಧಮಲ್ಲಿನಾಥನ ಕರುಣ ನಿಮಗಾಯಿತ್ತು, ಶ್ರೀಗುರು ಚೆನ್ನಬಸವಣ್ಣ ತಂದೆ.
--------------
ಸಿದ್ಧರಾಮೇಶ್ವರ
ಯೋಗಭೂಷಣನೆ, ನಿಮ್ಮ ನೆರೆಯಲು ಬೇಕು ಬೇಕೆಂಬ ಸದ್ಭಕ್ತರ ಮನದ ಕೊನೆಯಲ್ಲಿ ತಿಳುಹುವೆ ಅಕ್ಷರವ. ಬಸವ ಬಸವ ಬಸವ ಎಂಬ ಮಧುರಾಕ್ಷರತ್ರಯದೊಳಗೆ ತಾನೆ ತೆಂಗ ಒಪ್ಪಿಕ್ಕು ಘನಗುರುವೆ ಬಸವಣ್ಣಾ, ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಯುಗ ಜುಗ ಮಡಿವಂದು ಧಗಿಲು ಭುಗಿಲೆಂದು ಮುಸುಕಿದ ಮಹಾಜ್ವಾಲೆ ಇದೇನೊ! ಇಂದೆನ್ನ ಕಣ್ಗೆ ಗೋಚರವಾಯಿತ್ತೆಲೆ ಅಯ್ಯಾ! ನೀವೆಂದರಿಯೆನಯ್ಯಾ. ನಾನೆನ್ನ ಕಾಯದ ಕಳವಳದಲ್ಲಿದ್ದೆನಲ್ಲದೆ ನೀವೆಂಬ ಬಗೆದೋರದೆ ಕೆಟ್ಟೆನೆಲೆ ಅಯ್ಯಾ. ಆಳ್ದನೊಡನೆ ಆಳು ಮುನಿದಡೆ, ಆರು ಕೆಡುವರು ಹೇಳಾ, ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಯೋಗಿಗೆ ಕೋಪವೆ ಮಾಯೆ; ರೋಗಿಗೆ ಅಪಥ್ಯವೆ ಮಾಯೆ; ಜ್ಞಾನಿಗೆ ಮಿಥ್ಯವೆ ಮಾಯೆ; ಅರಿದೆನೆಂಬವಂಗೆ ನಾನು ನೀನೆಂಬುದೆ ಮಾಯೆ, ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಯಮನಿಯಮಾಸನಧ್ಯಾನರೂಢ ಪ್ರಾಣಾಯಾಮ ಪ್ರತ್ಯಾಹಾರವೆಂಬ ಪಂಚಸಮಾಧಿಯಿಂ ಸಿಕ್ಕಿ ಅಜಲೋಕದ ಸುದ್ದಿಯನರಿವವರು ಎತ್ತಾನೊಬ್ಬರು. ಸುಲಭವೆ ಎಲ್ಲರಿಗೆ ಶಿವಲಿಂಗಭಕ್ತಿ? ಸುಲಭವೆ ಎಲ್ಲರಿಗೆ ಗುರುಚರಭಕ್ತಿ? ಸುಲಭವೆ ಎಲ್ಲರಿಗೆ ಜೀವ ಜಂತುವಿನ ಮೇಲೆ ದಯವುಳ್ಳದು? ಶಿವಂಗಾರ್ಚನೆಯ ಮಾಡಿ ಗುರುಚರಭಕ್ತಿ ಅಳವಟ್ಟ ಬಳಿಕ ಸರ್ವವು ತಾನಾಗಿರಬೇಕು. ಸದಾಚಾರ ಶಿವಾಚಾರ ನಿಹಿತಾಚಾರ ದಯಾಚಾರವುಳ್ಳವರಿಗೆ ಸರ್ವಯೋಗವಪ್ಪುದು; ಅವ್ಯಯಂಗೆ ಯೋಗ್ಯರಪ್ಪರು ನಿಮ್ಮ ಕೂಡಿ ದ್ವಯವಿಲ್ಲದೆ ಏಕವಪ್ಪರಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಾ
--------------
ಸಿದ್ಧರಾಮೇಶ್ವರ
ಯೋಗಮೂರುತಿ ಸಮತೆ, ನಾದಬ್ರಹ್ಮದ ಸಮತೆ, ಆದಿಯಾಧಾರಕ್ಕೆ ಮಾತೆ ಸಮತೆ. ಮೂದೇವರಿಗೆ ಕುಲಗುರು ತಾನು. ಸಮತೆಯನು ಭೇದಿಸಿದ ಸಿದ್ಧ ಸುಮತಿಯ ಸಂಗಮಾ ಆಯಕ್ಷರದಲ್ಲಿ ಆಮೋದ ಬಿಂದುವಿನ ಆನಂದ ಧಾತು ತಾ ಸಮತೆರೂಪು. ಸುಜ್ಞಾನಭರಿತನು ಕಪಿಲಸಿದ್ಧಮಲ್ಲೇಶ್ವರನ ರೂಪು ಮಾಡಿದ ಗುರು ಸಮತೆ ರೂಪು.
--------------
ಸಿದ್ಧರಾಮೇಶ್ವರ
ಯೋಗಿಯ ಶರೀರ ವೃಥಾಯ ಹೋಗಲಾಗದಯ್ಯಾ. ಪುಣ್ಯವ ಪುಣ್ಯವ ಮಾಡುವುದು ಲೋಕಕ್ಕೆ. ಆಯ ಹಾಯ ಹತ್ತುವುದಯ್ಯಾ. ಆ ಲೋಕಕ್ಕೆ ಸೋಪಾನವ ಕೊಡುವ ಎನ್ನ ಕಪಿಲಸಿದ್ಧಮಲ್ಲಿನಾಥಯ್ಯನು.
--------------
ಸಿದ್ಧರಾಮೇಶ್ವರ
ಯಾವನ ಗತಿಯವನ ಮತಿಯಾನಪ್ಪೆ ಅವ ನಿಂದಲ್ಲಿ ನಿಲುವೆ, ಅವ ಬಿಟ್ಟಡೆ ಬಿಡುವೆ, ಅವ ಹಿಡಿಯಿತ್ತ ಹಿಡಿವೆ, ಬೆನ್ನ ಬಳಿಯ ಸಲುವೆ. ಪ್ರಾಣವ ಮೇಲಿಕ್ಕಿ ನೆರವೆ ಕಪಿಲಸಿದ್ಧಮಲ್ಲಿನಾಥಯ್ಯನ.
--------------
ಸಿದ್ಧರಾಮೇಶ್ವರ
ಯೋಗದ ನೆಲೆಯನರಿದೆನೆಂಬಾತ ಲಿಂಗಾರ್ಚನೆಯ ಮಾಡಯ್ಯ. ಮನತ್ರಯ ಮದತ್ರಯ ಮಲತ್ರಯಂಗಳ ಕಳೆದು ತನುತ್ರಯಂಗಳನೇಕೀಭವಿಸಿ ಲಿಂಗತ್ರಯದಲ್ಲಿ ಶಬ್ದಮುಗ್ಧನಾಗಿ ಲಿಂಗಾರ್ಚನೆಯ ಮಾಡಯ್ಯಾ. ಅದು ನಿಸ್ತಾರ ಸಮಸ್ತ ಯೋಗಿಗಳ ಮೀರಿದದು ನಿಮ್ಮ ಕೂಡಿ ಬೆರಸುವ ಶಿವಯೋಗವಿಂತುಟಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ