ಅಥವಾ
(214) (139) (48) (7) (13) (3) (0) (0) (105) (12) (12) (37) (5) (0) ಅಂ (44) ಅಃ (44) (163) (1) (60) (9) (0) (12) (0) (64) (0) (0) (0) (0) (0) (0) (0) (104) (0) (49) (10) (128) (74) (5) (68) (61) (158) (17) (10) (0) (47) (55) (61) (4) (129) (75) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಹಿಂದು ಮುಂದು ಸಂದಳಿದ ಬಳಿಕ ಆನು ನೀನೆಂಬ ಭೇದವೇತಕಯ್ಯ? ಆನಂದ ಅಪರಸ್ಥಾನದಲ್ಲಿ ಶುದ್ಧ ಸಂಯೋಗವಾದ ಬಳಿಕ ದಳ ಪ್ರತಿಷ್ಠೆಯ ಮಾಡಿನೆಂದು ಏನೆಂಬೆನಯ್ಯ? ಪೂರ್ವದಳದಲ್ಲಿ ಲಕ್ಷವು ಇಪ್ಪತ್ನಾಲ್ಕುಸಾವಿರ ಎಸಳು, ಅಪರದಳದಲ್ಲಿ ಹದಿನಾಲ್ಕುಸಾವಿರ ಎಸಳು, ನಾನಾ ವರ್ಣ ಆನಂದನೆಂಬ ಅದ್ಥಿದೇವತೆ ಮಧ್ಯಮಸ್ಥಾನದಲ್ಲಿ, ಸಿದ್ಧ ಸಂಯೋಗವೆಂಬ ಸರೋವರದಲ್ಲಿ, ವೈನೈಯೆಂಬ ಕೊಳಂಗಳು ಹನಾರೆಸಳಿನ ಕಮಳ ಬೀಜಾಕ್ಷರಂಗಳೆಂಟು, ಅದ್ಥಿದೇವತೆ ಸಚ್ಚಿದಾನಂದನೆಂಬ ಗಣೇಶ್ವರ ಆನಂದ ಬ್ರಹ್ಮಲೋಕದಲ್ಲಿ ಗುರುವೆಂಬ ಸರೋವರದಲ್ಲಿ ನಿತ್ಯವೆಂಬ ಕೊಳ. ಶುದ್ಥಶ್ವೇತನೆಂಬ ಅಮೃತ ಪ್ರವಾಹ, ದಳವೊಂದು, ಮೂಲ ಮೂರು, ಫಲವಾರು ಕಪಿಲಸಿದ್ಧಮಲ್ಲಿಕಾರ್ಜುನನೆಂಬ ಅದ್ಥಿದೇವತೆ.
--------------
ಸಿದ್ಧರಾಮೇಶ್ವರ
ಹೆಣ್ಣನೊಲ್ಲೆನು ಎಂದಡೆನಗೆ ಹೆಣ್ಣಾಯಿತ್ತು, ಮನ್ನಣೆಯ ದಾನಕ್ಕೆ ಗುರಿಯಾದೆನು. ಎನ್ನನಿತ್ತೆನು ಎನ್ನನೊಲ್ಲೆನು ಎಂದೆಂಬವನ ಇನ್ನು ಭವಕೆ ತಂದೆನೆಂದೆನುತಿದೆ ಮಾಯೆ ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಹಣ್ಣ ಹಿಡಿದ ಬಾಲಕಂಗೆ ಬೆಲ್ಲವ ಕೊಟ್ಟೇನು ಹಣ್ಣ ತಾ ಎಂಬಂತೆ, ಮಣ್ಣು ಮೂರನು ಹಿಡಿದ ಭಕ್ತಂಗೆ ಮುಕ್ಕಣ್ಣನ ಪದವಿ ಕೊಟ್ಟೇವೆಂಬ ತೆರನಂತೆ, ಗುರು-ಲಿಂಗ-ಜಂಗಮರು ಬೇಡುವರಲ್ಲದೆ, ತಮ್ಮಿಚ್ಛೆಗೆ ಕೈಯಾನುವರೆ ಕಪಿಲಸಿದ್ಧಮಲ್ಲಿಕಾರ್ಜುನಾ?
--------------
ಸಿದ್ಧರಾಮೇಶ್ವರ
ಹೊರಮನ ಹೊರತಾಗಿದ್ದವಳಾನಯ್ಯ. ಸುತ್ತಿ ಮುತ್ತಿ ಆತನ ಸೆರಗಿನ ಬಳಿಗಳ ಹಿಡಿದು ಹಿರಿದು ಕಂಗಳ ಕಣ್ಣಲಿ ಗೆಲಿದೆನವ್ವ, ಅವ್ವಾ! ಇಂತಹ ಮಾಯೆಯ ಬೆಡಗ ಬಲ್ಲ ಕಪಿಲಸಿದ್ಧಮಲ್ಲಿನಾಥನವ್ವ, ಅವ್ವಾ!
--------------
ಸಿದ್ಧರಾಮೇಶ್ವರ
ಹರಿ ನಾನೆಂದಲ್ಲಿ ಭವಮದಗಜಕ್ಕೆ ಹರಿಯಲ್ಲದೆ, ದಶಾವತಾರದ ಹರಿಯಲ್ಲ ನೋಡಾ. ಹರ ನಾನೆಂದಲ್ಲಿ ಸರ್ವಭಾವನಾವಿರಹಿತ ನಾನಲ್ಲದೆ, ಪಂಚಕೃತ್ಯಾದ್ಥಿಕಾರಿ ಹರನಲ್ಲ ನೋಡಾ. ನರ ನಾನೆಂದಲ್ಲಿ ಉತ್ಪತ್ತಿವಿರಹಿತ ನಾನಲ್ಲದೆ, ಉತ್ಪತ್ತ್ಯದ್ಥಿಕಾರಿ ನರ ನಾನಲ್ಲ ನೋಡಾ. ತೋರುವ ಸಚರಾಚರ ನಾನೆಂದಲ್ಲಿ ಜಡಾಜಡ ನಾನಲ್ಲದೆ, ಜನನ ಮರಣ ಪೊದ್ದಿ ಸಚರಾಚರ ನಾನಲ್ಲ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಹೆತ್ತ ತಾಯಿ ನೀನೆ ಅವ್ವಾ; ನನ್ನ ಹತ್ತಿರ ಬಂದಾಕೆ ನೀನೆ ಅವ್ವಾ; ಲಿಂಗದ ಮೊತ್ತವಾದಾಕೆ ನೀನೆ ಅವ್ವಾ; ನಮ್ಮ ಕಪಿಲಸಿದ್ಧಮಲ್ಲಿಕಾರ್ಜುನನ ರಾಣಿ ನೀನೆ ಅವ್ವಾ. ಇದರನುಭಾವವ ತಿಳಿದಾತನೆ ಜಂಗಮ; ಇದರನುಭಾವವ ಕೇಳಿದಾತನೆ ಭಕ್ತ ನೋಡವ್ವಾ; ಆತ ಪ್ರಾಣಲಿಂಗಿಯವ್ವಾ.
--------------
ಸಿದ್ಧರಾಮೇಶ್ವರ
ಹಡಗನೇರಿದವರ ಮುಂದೆ ಕಳುಹಿ ಮರಳಿ ಹೋದೆಹೆನೆಂದರೆ ಹಡಗುಂಟೆ? ಮಚ್ಚಿದಲ್ಲಿ ಮಹೋತ್ಸವವನೆಯ್ದು ಮನವೆ ಬಳಿಕ ಅರಸಿದರುಂಟೆ? ಅಯ್ಯನ ಸಂಗ ಅನಾದಿ ಸಂಸಿದ್ಧ ಯೋಗಮೂರ್ತಿ ಗುರು ಸಿಕ್ಕಿದಲ್ಲಿ ಕೂಡು ಮನವೆ, ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಹಾಡುವೆ, ಹೊಗಳುವೆ, ಬೇಡುವೆ ಸೆರಗೊಡ್ಡಿ ಆನು. ಕಾಡುವೆ ನಿಮ್ಮವರ ಸಂಗವನೆ ಕರುಣಿಸಯ್ಯಾ; ಅಯ್ಯಾ, ನಿಮ್ಮ ಬೇಡುವ ಪದವಿಂತುಟಯ್ಯಾ; ಕರುಣಾಕರ ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ, ಕೃಪೆಮಾಡಾ ಧರ್ಮಿ!
--------------
ಸಿದ್ಧರಾಮೇಶ್ವರ
ಹಿರಿದು ಆಗ್ರಹದಿಂದೆ ನೀನೆನ್ನ ಮೇಲಿಕ್ಕಿ ಒಲ್ಲೆ ಸಾರೆಂದು ಹೋಹೆ ಕಾಣಯ್ಯಾ, ಕೈಯ ಹಿಡಿದಡೆ ಅಂತು ಮುರುಚುವೆ; ಎನ್ನ ಉರದಲಪ್ಪಿ ಹಿಡಿದಡೆಂತು ಮುರುಚುವೆ? ನೀನಿಂತು ಹೋಹ ಪರಿಗಳ ನಿಲಿಸುವೆನು ಕೇಳು ಗಡಾ! ಸೂಕ್ಷ್ಮತನುವಿನಲ್ಲಿ ಹಿಡಿದಡೆ ಎಂತು ಮುರುಚುವೆ ಹೇಳಾ, ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಹರಿ ಹತ್ತು ಭವ ಬಂದ; ಸಿರಿಯಾಗಿ ತೊಳಲಿತೈ ಉರಗ ಖೇಚರರನ್ನು ಒರಸಿತಯ್ಯಾ! ಕರುಣಾಕರನು ಕಪಿಲಸಿದ್ಧಮಲ್ಲೇಶ್ವರನ ಶರಣರಿಗೆ ಅಂಜಿ ಓಡಿದುದು ಮಾಯೆ.
--------------
ಸಿದ್ಧರಾಮೇಶ್ವರ
ಹರಿಬ್ರಹ್ಮರಿಬ್ಬರೂ ಸ್ತ್ರೀಯರಯ್ಯಾ, ತಮ್ಮನೊಲಿದರೆ ಹಂಗಿಹರು, ಹೆಂಪೆ ಹೇಳಯ್ಯಾ. ಎನ್ನ ಹರಿಬತನಕ್ಕೆ ಹಾನಿ ಹೊದ್ದಿತೆಂದು ನಿಮ್ಮನಗಲಲಾರೆ, ಕಪಿಲಸಿದ್ಧಮಲ್ಲೇಶ್ವರಾ, ದೇವರ ದೇವಯ್ಯ.
--------------
ಸಿದ್ಧರಾಮೇಶ್ವರ
ಹೆಸರಿಡಬಾದ ಲಿಂಗವ ಹೆಸರಿಟ್ಟು ಎನ್ನ ಕರಸ್ಥಲಕ್ಕೆ ತಂದು ಕರತಳಾಮಳಕದಂತೆ ಮಾಡಿ ಎನ್ನ ಕರಸ್ಥಲಕ್ಕೆ ಕ್ರಿಯಾಲಿಂಗವ ಕೊಟ್ಟ. ಶ್ರೀಗುರು ಚೆನ್ನ ಬಸವಣ್ಣ ಹೆಸರಿಟ್ಟ ಲಿಂಗದ ಹೆಸರ ಹೇಳುವೆ ಕೇಳಯ್ಯಾ. ಕಂಜಕರ್ಣಿಕೆಯ ಹಣೆಯಲ್ಲಿ ವಿಹತ್ತವಸವೆಂದು ಬರೆದ ಐದಕ್ಷರವೆ ಆತನ ಪ್ರಣವನಾಮ. ಅವ್ಯಯ ಕರದೊಳಿಪ್ಪ ಆರಕ್ಷರ ಆತನ ದ್ವಿತೀಯ ನಾಮ. ಅವ್ಯಯ ಆನಂದ ಮಸ್ತಕದೊಳಿಪ್ಪ ಅಕ್ಷರವೆ ಆತನ ಆಚಾರ್ಯನಾಮ. ಎಂತೀ ನಾಮತ್ರಯಂಗಳನರಿದು ಧ್ಯಾರೂಢನಾಗಿ ಮಾಡುವರು ಎತ್ತಾನಿಕೊಬ್ಬರು. ಈ ಬಸವಣ್ಣ ಮೊದಲಾದ ಪುರಾತರು ಆ ಅವ್ಯಯ ಅನುಮತದಿಂದ ಲಿಂಗಾರ್ಚನೆಯ ಮಾಡಿ ನಿತ್ಯ ನಿಜನಿವಾಸಿಗಲಾದರು. ಆ ಶರಣರ ಅನುಮತದರಿವಿನ ಉಪದೇಶವ ಕೇಳಿ, ಎನಗಿನ್ನಾವುದು ಹದನವಯ್ಯಾ ಎಂಬ ಚಿಂತೆಯ ಬಿಟ್ಟು ಕಪಿಲಸಿದ್ಧಮಲ್ಲಿಕಾರ್ಜುನಯ್ಯನ ಕೈಯಲ್ಲಿ ಪಿಡಿದೆನು.
--------------
ಸಿದ್ಧರಾಮೇಶ್ವರ
ಹರಿಯಾಣದೊಳಗಣ ಓಗರವ ಹರಿಯವರು ಹರಿಹರಿದುಂಡರಯ್ಯಾ. ಪರ ವಧು ಬಂದು ಬೆರಸಲು ಆ ಹರಿ ಪರಹರಿಯಾದ. ಉಣಬಂದ ಹರಿಯ ಶಿರವ ಮೆಟ್ಟಿ ನಿಂದಳು ನಿಮ್ಮ ಹೆಣ್ಣು. ಇದ ಕಂಡು ನಾ ಬೆರಗಾದೆನಯ್ಯಾ, ಕಪಿಲಸಿದ್ಧಮಲ್ಲಿನಾಥಯ್ಯಾ
--------------
ಸಿದ್ಧರಾಮೇಶ್ವರ
ಹಿರಣ್ಯಚ್ಛೆಯ ಹೆಚ್ಚಿ ನುಡಿವರು ನಿನ್ನಂಗವಪ್ಪರೆ ಅಯ್ಯಾ? ಅಪ್ಪರಪ್ಪರು ಹೊನ್ನು ಹೆಣ್ಣು ಮಣ್ಣು ತ್ರಿವಿಧವ ಬಿಟ್ಟವರು. ಅಪ್ಪರಪ್ಪರು ಸತ್ಪಾತ್ರ-ಅಪಾತ್ರವೆಂದರಿದವರು. ಅಪ್ಪರಪ್ಪರು ಸದಾಚಾರ, ನಿಹಿತಾಚಾರ, ಗುರುಚರಭಕ್ತಿ, ಸ್ವಾನುಭಾವದೀಕ್ಷೆ ಸಮನಿಸಿದವರು. ನಿನ್ನಂಗ ಎಲ್ಲರಂತಲ್ಲ ಹೊಸ ಪರಿ ಎಲೆ ಅಯ್ಯಾ. ಮಸ್ತಕದಲ್ಲಿ ಪೂಜೆಯ ಮಾಡಿ ಅದ ನಿರ್ಮಾಲ್ಯವೆಂದು ತ್ಯಜಿಸಿ, ಮರಳಿ ಪಡೆದು ನಿನಗೆ ಪಾತ್ರವಾದರು. ಅಪ್ಪುದಕ್ಕನುಮಾನವೆ? ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಹಸಿವುದೋರದ ಮುನ್ನ, ತೃಷೆದೋರದ ಮುನ್ನ, ವ್ಯಾದ್ಥಿವಿಪತ್ತುಗಳು ಬಂದಡಸದ ಮುನ್ನ, ಕಪಿಲಸಿದ್ಧಮಲ್ಲಿಕಾರ್ಜುನಂಗವ ಪೂಜಿಸೋ ಮುನ್ನ ಮುನ್ನ!
--------------
ಸಿದ್ಧರಾಮೇಶ್ವರ
ಹರಬೀಜ ನಾನಾದಡೆ ಹದನವರಿಯದಿರ್ಪೆನೆ ಗುರುವೆ? ಪರಮ ಭೃತ್ಯ ನಾನಾದಡೆ ಪ್ರಾಣದಿಂದಿರ್ಪೆನೆ ಗುರುವೆ? ನರಬೀಜ ನಾನಾದೆ, ಗುರುದ್ರೋಹಿ ನಾನಾದೆ, ಇನ್ನೆಂತು ಶ್ರೀಗುರು ಕಪಿಲಸಿದ್ಧಮಲ್ಲಿಕಾರ್ಜುನಾ?
--------------
ಸಿದ್ಧರಾಮೇಶ್ವರ
ಹಿಂದೆ ಬಯಸಿದೆ ಕಾಳುತನದಲ್ಲಿ, ಎನ್ನ ಮಂದಮತಿಯ ನೋಡದಿರಯ್ಯಾ! ಕೆರೆ ಬಾವಿ ಹೂದೋ ಚೌಕ ಛತ್ರಂಗಳ ಮಾಡಿ, ಜೀವಂಗಳ ಮೇಲೆ ಕೃಪೆಯುಂಟೆಂದು ಎನ್ನ ದಾನಿಯೆಂಬರು, ಆನು ದಾನಿಯಲ್ಲವಯ್ಯಾ, ನೀ ಹೇಳಿದಂತೆ ನಾ ಮಾಡಿದೆನು. ನೀ ಬರಹೇಳಿದಲ್ಲಿ ಬಂದೆನು; ನೀ ಇರಿಸಿದಂತೆ ಇದ್ದೆನು. ನಿನ್ನ ಇಚ್ಛಾಮತ್ರವ ಮೀರಿದೆನಾಯಿತ್ತಾದಡೆ ಫಲ ಪದ ಜನನವ ಬಯಸಿದೆನಾದಡೆ ನಿಮ್ಮಾಣೆ! ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ, ಭವಕ್ಕೆ ಬರಿಸದಿರಯ್ಯಾ ನಿಮ್ಮ ಧರ್ಮ!
--------------
ಸಿದ್ಧರಾಮೇಶ್ವರ
ಹೆಣ್ಣಳಿದ ಬಳಿಕ ಮಣ್ಣಿನ ಹಂಗೇಕಯ್ಯಾ? ಮಣ್ಣಳಿದ ಬಳಿಕ ಹೊನ್ನಿನ ಹಂಗೇಕಯ್ಯಾ? ಮುಕ್ಕಣ್ಣನಾದ ಬಳಿಕ ಮೂರರ ಹಂಗೇಕಯ್ಯಾ? ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಹೇಳಿದ ಬೋಧ ಶಿಲಾಪಿಯಂತಾದಡೆ, ಶಿಲಾಸದೃಶ ನೋಡಾ ಭವಕ್ಕೆ. ಹೇಳಿದ ಬೋಧೆ ಜಲಪಿಯಾದಡೆ, ಜಲಸದೃಶ ನೋಡಾ ಭವಕ್ಕೆ. ಹೇಳಿದ ಬೋಧೆ ಗಟ್ಟಿಗೊಂಡಡೆ, ಆಳುವುದೆತ್ತ ನಿನ್ನ ಮಾಯಾಜಾಲವ, ಎಲೆ ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಹೃದಯಕಮಲದ ಅಷ್ಟದಳದ ದ್ವಾತ್ರಿಂಶತ್‍ಕುಸುಮ ಮಧ್ಯದಲ್ಲಿಪ್ಪನಾ ಸೂರ್ಯ. ಆ ಸೂರ್ಯನ ಮಧ್ಯದಲ್ಲಿಪ್ಪನಾ ಚಂದ್ರ ಆ ಚಂದ್ರನ ಮಧ್ಯದಲ್ಲಿಪ್ಪನಾ ಅಗ್ನಿ ಆ ಅಗ್ನಿಯ ಮಧ್ಯದಲ್ಲಿಪ್ಪುದಾ ಕಾಂ್ಕ. ಆ ಕಾಂ್ಕಯ ಮಧ್ಯದಲ್ಲಿಪ್ಪುದಾ ಸುಜ್ಞಾನ. ಆ ಸುಜ್ಞಾನದ ಮಧ್ಯದಲ್ಲಿಪ್ಪುದಾ ಚಿದಾತ್ಮ. ಆ ಚಿದಾತ್ಮನ ಮಧ್ಯದಲ್ಲಿಪ್ಪನಾ ಚಿತ್ಪ್ರಕಾಶರೂಪನಪ್ಪ ಪರಶಿವನು. ಇಂತಪ್ಪ ಪರಶಿವನ- ಎನ್ನ ಸುಜ್ಞಾನಕಾಯದ ಮಸ್ತಕದ ಮೇಲೆ ಹಸ್ತವನಿರಿಸಿ, ಮನ ಭಾವ ಕರಣೇಂದ್ರಿಯಂಗಳಂ ಸ್ವರೂಪೀಕರಿಸಿ, ದೃಷ್ಟಿಗೆ ತೋರಿ, ಕೈಯಲ್ಲಿ ಲಿಂಗವ ಕೊಟ್ಟ ಚೆನ್ನಬಸವಣ್ಣನ ಶ್ರೀಪಾದಕ್ಕೆ ನಮೋ ನಮೋ ಎಂದು ಬದುಕಿದೆನಯ್ಯಾ ಪ್ರಭುವೆ, ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಹರಿದು ಹತ್ತುವೆನವನ, ಹತ್ತಿ ಮನವ ಮುಟ್ಟಿ ಹಿಡಿವೆನವನ. ಮಹಾಪ್ರಚಂಡ ಮನದಿಂದ ಕಪಿಲಸಿದ್ಧಮಲ್ಲಿಕಾರ್ಜುನನ ಹಿಡಿವೆನು.
--------------
ಸಿದ್ಧರಾಮೇಶ್ವರ
ಹೆಸರಿಡಬಾರದ ಲಿಂಗವ ಕರಸ್ಥಳಕ್ಕೆ ಹೆಸರಿಟ್ಟು ತಂದನೆನ್ನ ಗುರು. ಆ ಹೆಸರಿಟ್ಟ ಲಿಂಗದ ಹೆಸರು ಹೇಳುವೆನು. ಕಂಜಕನ್ನಿಕೆಯ ಹಣೆಯಲ್ಲಿ ವಿದ್ಥಿವಶವೆಂದು ಬರೆದ ಐದಕ್ಷರವೆ ಆತನ ಪರಮನಾಮ. ಅವ್ವೆಯ ಕರಂಗಳೊಪ್ಪಿಪ್ಪ ಅಕ್ಷರಂಗಳಾರೆ ದ್ವಿತೀಯ ನಾಮ. ಅವ್ವೆಯ ಆನಂದ ಮನ್ಮಸ್ತಕದಲ್ಲಿ ಒಪ್ಪಿಪ್ಪ ಅಕ್ಷರದ್ವಯವೆ ಆತನ ಆಚಾರ್ಯನಾಮ. ಇಂತು ನಾಮತ್ರಯಂಗಳನರಿದು ಧ್ಯಾನಾರೂಢನಾಗಿ ಲಿಂಗಾರ್ಚನೆಯ ಮಾಡುವರೆತ್ತಾನೊಬ್ಬರು. ಬಸವಣ್ಣ ಮೊದಲಾದ ಸಕಲ ಪುರಾತರು, ಅವ್ವೆಯ ಅನುಮತದಿಂದ ಶುದ್ಧ ಸಿದ್ಧ ಪ್ರಸಿದ್ಧ ಲಿಂಗಾರ್ಚನೆಯಂ ಮಾಡಿ ನೀನಾದರು. ಎನಗಿನ್ನಾವುದು ಹದನೈ ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಹೂಸಲಿಲ್ಲದ ಗೋಡೆ, ಲೇಸಿಲ್ಲದವನ ಮಾಟ, ಕಂಗಳ ಸೂತಕ ಹರಿಯದವನ ಅಂಗದ ಕೂಟ, ಅದೆಂದಿಗೆ ನಿಜವಪ್ಪುದು. ಶುದ್ಧ ಸಿದ್ಧ ಪ್ರಸಿದ್ಧ ಪ್ರಸನ್ನ ಕಪಿಲಸಿದ್ಧಮಲ್ಲಿಕಾರ್ಜುನಂಗದಲ್ಲಿ ಪ್ರಭುವೆ ನೀನೆ ಬಲ್ಲೆ.
--------------
ಸಿದ್ಧರಾಮೇಶ್ವರ
ಹುಟ್ಟು ಮೆಟ್ಟೆಂಬುದು ನಿಮಗಿಲ್ಲವಯ್ಯಾ; ನಿಮ್ಮಿಂದ ನೀವೆ ಸ್ವಯಂಭುವಯ್ಯಾ. ಇಂತಾರಯ್ಯಾ, ಹರುಷದಿಂದ ನೀವಿಂತಾದಿರಯ್ಯಾ. ನಿಮ್ಮ ಮಹಾತ್ಮೆಯ ನೀವೆ ಬಲ್ಲಿರಯ್ಯಾ, ನಿಜಗುರು ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಹೆಸರಿಡಬಾರದ ಘನತರ ಲಿಂಗವ ಹೆಸರಿಟ್ಟು, ವಾಙ್ಮನಕ್ಕಗೋಚರವಪ್ಪ ಲಿಂಗವ ವಾಕ್ಯಕ್ಕೆ ತಂದು, `ಅತ್ಯ್ಕತಿಷ್ಠದ್ದಶಾಂಗುಲಂ' ಎಂಬ ಲಿಂಗವ ಚಿತ್ತಕ್ಕೆ ತಂದು, ಸುತ್ತಿರ್ದ ಮಾಯಾಪ್ರಪಂಚವ ಬಿಡಿಸಿದ ಬಸವಣ್ಣ; ಚಿತ್ತಶುದ್ಧನ ಮಾಡಿದ ಬಸವಣ್ಣ. ಮಲತ್ರಯಂಗಳ ಹರಿದು, ಶುದ್ಧ ತಾತ್ಪರ್ಯವರುಹಿ, ಮುಕ್ತನ ಮಾಡಿದ ಗುರು ಬಸವಣ್ಣ. ಕಪಿಲಸಿದ್ಧಮಲ್ಲಿಕಾರ್ಜುನಯ್ಯನೆನ್ನ ಕಾರಣ ಧರೆಗೆ ಬಂದ.
--------------
ಸಿದ್ಧರಾಮೇಶ್ವರ

ಇನ್ನಷ್ಟು ...