ಅಥವಾ
(214) (139) (48) (7) (13) (3) (0) (0) (105) (12) (12) (37) (5) (0) ಅಂ (44) ಅಃ (44) (163) (1) (60) (9) (0) (12) (0) (64) (0) (0) (0) (0) (0) (0) (0) (104) (0) (49) (10) (128) (74) (5) (68) (61) (158) (17) (10) (0) (47) (55) (61) (4) (129) (75) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಐಗ್ರಾಮ ಚೌಗ್ರಾಮ ಅಯ್ಯ ನಿನ್ನಯ ಸೀಮೆ. ಅತ್ಯೋನ್ನತದ ಫಲಕ್ಕೊಸರುತಿಹದು ಒಸರುತಿಹ ಲಿಂಗವನು ವಶಕೆ ತಂದು ಶಿಷ್ಯಂಗೆ ಹೆಸರಿಟ್ಟು ಕೊಟ್ಟಾತ ಗುರು ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಐನಾಯೆಂಬ ಅಕ್ಷರದ ಭೇದವನರಿತಡೆ ಅಪ್ಪುದರಿದೊಂದೂ ಇಲ್ಲ. ಸೀಮೆಯ ಮೀರಿದ ಸಂಬಂಧ ಸಂಬಂಧವ ಮೀರಿದ ಸೀಮೆ, ಅನುಮತದ ಮೀರಿದ ಆದ್ಥಿಕ್ಯ ಅಕ್ಷರವೆರಡರ ಅದ್ಥಿಕಾರ ಕಪಿಲಸಿದ್ಧಮಲ್ಲಿಕಾರ್ಜುನನ ಸಂಯೋಗ.
--------------
ಸಿದ್ಧರಾಮೇಶ್ವರ
ಐದಕ್ಷರ ಆದಿಯಾದ, ಇಪ್ಪತ್ತೈದಕ್ಷರ ಸಂಯೋಗದ ಮೂವತ್ತಾರಕ್ಷರವಾನಂದದ ಆನಂದ ಸಾನಂದ ಶೂನ್ಯ ತನ್ನಯ ಅಂಗ ಭಾನುವಿನ ಪ್ರಭೆಯಪ್ಪ ಹೇಮ ಕಲಶಕ್ಕೆಲಸಂದಿದ ಮೇಲೆ ಆಯಾಧಾರ ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಐದು ಪುರದ ಪಟ್ಟಣದ ಪಾದಘಾತದ ಆ ಅಯ್ಯಾ ಹಾವಸಿ ಕುಂದದಲ್ಲಾ! ಬಾವಿಯ ಹಾವಸಿ ಕುಂದದಲ್ಲಾ. ಬಾವಿಯ ಕಟ್ಟಿದ ಕಲ್ಲೆಲ್ಲಾ ಬರೆಯ ಹಾವಸೆ ನೋಡಾ ಅಯ್ಯಾ. ಹಾವಸೆ ಕುಂದದಲ್ಲಾ! ಶಿಖರದ ಮೇಲಣ ಒರತೆ ಕುಂದದೇನು ಕಾರಣ ಕಪಿಲಸಿದ್ಧಮಲ್ಲಿನಾಥಯ್ಯನೊ ಅಯಾ
--------------
ಸಿದ್ಧರಾಮೇಶ್ವರ
ಐವರ ಸಂಗಡ ಉದಯದಲ್ಲಿ ಹೊರವಂಟಿರಾದಡೆ, ಕೇಳಿರಣ್ಣಾ, ಮಧ್ಯಾಹ್ನಕ್ಕೆ ಬಂದಿರಾದಡೆ, ಕಳೆಯಳಿದು ಕಳೆಯ ತಪ್ಪದೆ ನಿಂದಿರಾದಡೆ, ಬಟ್ಟೆ ಸರಿಸ ಕಪಿಲಸಿದ್ಧಮಲ್ಲಿಕಾರ್ಜುನನಲ್ಲಿಗೆ ಹೋಯಿತ್ತು.
--------------
ಸಿದ್ಧರಾಮೇಶ್ವರ
ಐವರ ಎನ್ನ ದುಃಖ, ನಿನ್ನ ಅಡಿಮಸ್ತಕದಲೆ ಇದ್ದಲ್ಲಿ ಹುಟ್ಟು ಹೊಂದಿಲ್ಲದೆ ಹೋಗು. ಅಯ್ಯ, ನಿನ್ನ ದೆಸೆಗಱಸುತ್ತದ್ದೇನೆ ಕವಿಲೆಯ ಕಂದನಂತೆ. ನಾನಿದ್ದೇನೆಂದು ಬಾರಾ ಕಪಿಲಸಿದ್ಧಮಲ್ಲಿಕಾರ್ಜುನ
--------------
ಸಿದ್ಧರಾಮೇಶ್ವರ
ಐಕ್ಯನೆಂಬಾತ ಅನ್ಯವನರಿಯ ತನ್ನುವನರಿಯ; ಸಕಲವನರಿಯ ನಿಷ್ಕಲವನರಿಯ. ಸರ್ವಸ್ವವೂ ಲಿಂಗವಾದಾತನಾಗಿ ತನ್ನ ಮೀರಿದ ಪರತತ್ವ ಒಂದೂ ಇಲ್ಲವಾಗಿ, ಎಲ್ಲಾ ತತ್ವಂಗಳಿಗೂ ಮಾತೃಸ್ಥಾನವಾದಾತನು. ಲಿಂಗವನವಗ್ರಹಿಸಿಕೊಂಡಿಪ್ಪ ಪರಮ ಸೀಮೆ ತಾನಾಗಿ, ಕಪಿಲಸಿದ್ಧಮಲ್ಲಿಕಾರ್ಜುನನ ಕೂಡಿ ಕಳೆಗಳ ಲಿಂಗಕಳೆಗಳ ಮಾಡಿದ ಲಿಂಗೈಕ್ಯನು.
--------------
ಸಿದ್ಧರಾಮೇಶ್ವರ
ಐದಾರು ಏಳೆಂಟೆಂದೆಂಬ ಬಲೆಯಲ್ಲಿ ಸಿಲಿಕಿ ಎಯ್ದೆಗಾರಾಗುತ್ತಲಿದ್ದೇನೆ. ಮೀರಲಾರೆನು ಕರ್ಮಂಗಳನು ಹಾರು ಮಾಡಿಹವು ಎನ್ನ ಬೇರೆ ಮತ್ತೊಂದು ಉಳ್ಳಡೆ ತೋರಾ. ಸಾರುವ ಶ್ರುಗಳಿಗಿಂದತ್ತಲಾದ ಮಹಾಘನ ನೀನು ನೀರ ಕಪಿಲಸಿದ್ಧಮಲ್ಲಿಕಾರ್ಜುನಯ್ಯ ತಂದೆ.
--------------
ಸಿದ್ಧರಾಮೇಶ್ವರ
ಐ ಬ್ರಹ್ಮಂದತ್ತಲಾದ ಸೀಮೆಯ, ಆ ಸೀಮೆಯ ಮೀಱ್ಞದ ಸಂಬಂಧ, ಆ ಸಂಬಂಧ ಅಯ್ಯನ ರೂಪು, ಆ ಅಯ್ಯ ವಾಙ್ಮನಕಗೋಚರನೆಂಬರು. ಆ ಅಯ್ಯ ಭಕ್ತ ಕಾರಣ ಪರಶಿವಮೂರ್ತಿಯೆಂದೆಂಬರು. ಆವುದು ಹುಸಿ? ಆವುದು ದಿಟ? ಈ ಉಭಯದ ಸಂಸಿದ್ಧವ ನಿನ್ನವರು ನೀವು ಬಲ್ಲಿರಿ, ಅನೇಕೆಂದರಿಯೆ ಕಪಿಲಸಿದ್ಧಮಲ್ಲಿಕಾರ್ಜುನ
--------------
ಸಿದ್ಧರಾಮೇಶ್ವರ
ಐದೆ ಬಿನ್ನಾಣಿಕೆ ಬಿನ್ನಾಣಿಯ ಬಸುರಲ್ಲಿ ಹುಟ್ಟಿದವಳು ಬಾಯಲ್ಲಿ ಬಳೆದೊಟ್ಟವಳು; ಬಾಯಲ್ಲಿ ತಲೆಯಾದವಳು; ತಲೆಯೊಳಗೆ ಮೊಲೆಯಾದವಳು; ಮೊಲೆಯೊಳಗೆ ನಾಭಿಯಾದವಳು; ನಾಭಿಯೊಳಗೆ ಬಸುರಾದವಳು; ಬಸುರೊಳಗೆ ಬೆನ್ನಾದವಳು; ಬೆನ್ನೊಳಗೆ ಕಾಲಾದವಳು; ಗಂಡಂಗೆ ಕೈಯೆಂದು ಬಾಯಲಿ ಹಿಡಿದು ಹರಿದವಳು ಕಪಿಲಸಿದ್ಧಮ್ಲನಾಥನ ಬಾಯಲ್ಲಿ ಭೋಗಿಯಾದವಳು. ಇಂತಪ್ಪ ವಿದ್ಯದ ಬೇಟದ ಮಾತಿನ ಕೊಂಬ ಹೇಳಿದಡೆ, ಅಲ್ಲಿಗೆ ಬಂದಡೆ ತಾ ಕಂಡಯ್ಯಾ, ಐದೆ ಬಿನ್ನಾಣಿಕೆ!
--------------
ಸಿದ್ಧರಾಮೇಶ್ವರ
ಐದಕ್ಕರವವು ಎಮ್ಮಮ್ಮನವರು. ಮುಂದಣ ಅಕ್ಕರವದು ಜಗಜ್ಜನಕನದು. ಮುಂದೊಂದು ತಾರೆ, ಮುಂದೊಂದು ತಾರೆ ಇಡಲದು ತೋರುವಳು ಈ ಸ್ಥಾನಮೀಸಂಪದ್ವೆ ೈಭವ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಐದು ಬ್ರಹ್ಮದಲ್ಲಿ ಅಯ್ಯಾ, ನೀನು ಅತಿಶಯ ಜ್ಯೋತಿರ್ಮಯನು. ಆನಂದಸ್ಥಾನದಲ್ಲಿ ಅಯ್ಯಾ, ನೀನು ಅತಿಶಯ ನಿತ್ಯಮಯನು. ಬಾಹ್ಯಾಭ್ಯಂತರದಲ್ಲಿ ಪರಿಪೂರ್ಣನು. ನಿನ್ನಾಧಿಕ್ಯವನರಿಯಲ್ಕೆ ನಿಗಮಕ್ಕಭೇದ್ಯನು. ಗುರುವಿನ ಕರುಣದಿಂದ ಎನ್ನ ಕರಸ್ಥಲಕ್ಕೆ ಬಂದು ಚುಳುಕಾದೆ ಶಿವನೇ, ಮಹಾಲಿಂಗ ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ