ಅಥವಾ
(214) (139) (48) (7) (13) (3) (0) (0) (105) (12) (12) (37) (5) (0) ಅಂ (44) ಅಃ (44) (163) (1) (60) (9) (0) (12) (0) (64) (0) (0) (0) (0) (0) (0) (0) (104) (0) (49) (10) (128) (74) (5) (68) (61) (158) (17) (10) (0) (47) (55) (61) (4) (129) (75) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಉಂಡು ಉಂಡು ಹೋಗುವವರ ನೋಡಿ ನೋಡಿ ನಾಚಿತ್ತಯ್ಯಾ ಎನ್ನ ಮನ. ಎಡಹಿ ಎಡಹಿ ಹೋಗುವವರ ನೋಡಿ ನೋಡಿ ನಾಚಿತ್ತಯ್ಯಾ ಎನ್ನ ಮನ. ಉಣದೆ ಎಡಹದೆ ಹೋದಡೆ ಅವರೆ ಬಸವಾದಿ ಪ್ರಮಥರೆಂಬೆ; ಅವರೆ ನೀವೆಂದು ಭಾವಿಸುವೆನಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಾ!
--------------
ಸಿದ್ಧರಾಮೇಶ್ವರ
ಉತ್ತರ ದಕ್ಷಿಣ ಪೂರ್ವ ಪಶ್ಚಿಮವೆಂಬ ದಿಕ್ಕಿನ ಹಂಗು ಹರಿದೆ. ನೀನುತ್ತರದಲ್ಲಿ ಓಂಕಾರ ಪ್ರದೀಪನಾಗಿ ಉತ್ತರದ್ವಾರದಲ್ಲಿ ಬಪ್ಪಾಗ ಆನೊಡನೆ ಬಂದೆ. ನೀನು ಅರಿತೂ ಅರಿಯದ ಹಾಂಗೆ ಇದ್ದೆ. ದಕ್ಷಿಣದ್ವಾರದಲ್ಲಿ ಜನಿತ ನಾಶವಾಗಿ ಬಪ್ಪಂದು ಆನೊಡನೆ ಬಂದು ನೀನರಿಯದಂತಿದ್ದೆ. ನೀನು ಪೂರ್ವದ್ವಾರದಲ್ಲಿ ಅಕ್ಷರದ್ವಯದ ವಾಹನವೇರಿಬಪ್ಪ್ಲ ಆನೊಡನೆ ಬಂದೆ. ನೀ ಪಶ್ಚಿಮದ್ವಾರದ್ಲ ಅವ್ವೆಯ ಮನದ ಕೊನೆಯ ಮೇಲೆ ಅವ್ಯಕ್ತಶೂನ್ಯವಾಗಿ ಬಪ್ಪಾಗ ಒಡನೆ ಬಂದೆ ಎಲೆ ಅಯ್ಯಾ. ಎನ್ನನು ಅನ್ಯಕ್ಕೊಪ್ಪಿಸುವ, ಎನ್ನನು ಶುದ್ಧ ನಾನು ನಿನ್ನವನಲ್ಲಾ. ಆನು ಬಂದ ಬರವ, ಇದ್ದ ಇರುವ ಆನರಿಯೆನಲ್ಲದೆ ನೀ ಬಲ್ಲೆ. ಅರಿದು ಕಾಡುವುದುಚಿತವೆ? ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಉದಯವೆಲ್ಲ ಒಂದೆ: ಈ ಚಲವ ಆಶ್ರಯಿಸಿ ಮದ್ಯಪಾನವೆನಿಸಿತ್ತು ; ಸುರತರುವ ಆಶ್ರಯಿಸಿ ಅಮೃತವೆನಿಸಿತ್ತು. ದೇಹವೆಲ್ಲ ಒಂದೆ: ಅಂಗನೆಯರ ಆಶ್ರಯಿಸಿ ಭವಕ್ಕೆ ಬೀಜವಾಯಿತ್ತು ; ಅಂಗವ ಆಶ್ರಯಿಸಿ ಭವಾರಣ್ಯಕ್ಕೆ ದಾವಾನಲವೆನಿಸಿತ್ತು ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಉದಕ ಹೋಗಿ ಗುರುಪಾದೋದಕವೆನಿಸಿತ್ತು; ಗುರುಪಾದೋದಕ ಹೋಗಿ ಕ್ರಿಯಾಪಾದೋದಕವೆನಿಸಿತ್ತು; ಕ್ರಿಯಾಪಾದೋದಕ ಹೋಗಿ ಜ್ಞಾನಪಾದೋದಕವೆನಿಸಿತ್ತು; ಜ್ಞಾನಪಾದೋದಕವೆ ಶರಣನ ಮನದ ಮೊನೆಯಲ್ಲಿ ಕಪಿಲಸಿದ್ಧಮಲ್ಲಿಕಾರ್ಜುನನಾಗಿ ನಿಂದಿತ್ತು.
--------------
ಸಿದ್ಧರಾಮೇಶ್ವರ
ಉದಕದಿಂದ ಅಭಿಷೇಕಂಗೈವಡೆ, ಒದವಿದವು ನೋಡಾ ನಿನ್ನುತ್ತಮಾಂಗದಲ್ಲಿ ಅರುವತ್ತೆಂಟುಕೋಟಿ ನದಿಗಳು. ಪುಷ್ಪವ ಧರಿಸುವಡೆ, ಚಂದ್ರಕಲಾ ಪ್ರಕಾಶವುಂಟು ನೋಡಾ ಜಟಾಗ್ರದಲ್ಲಿ. ನೀರಾಜನವೆತ್ತುವಡೆ ಸೂರ್ಯಚಂದ್ರಾಗ್ನಿನೇತ್ರ ನೋಡಾ. ಸ್ತೋತ್ರವ ಮಾಡುವಡೆ, ವೇದಂಗಳು ಹೊಗಳಿ ಹೊಗಳಿ ಮೂಗುವಟ್ಟವು ನೋಡಾ. ನಿನ್ನ ಮುಂಭಾಗದಲ್ಲಿ ನಾಟ್ಯವನಾಡುವಡೆ, ಅದುರಿದವು ನೋಡಾ ಅಜಾಂಡಂಗಳು ನಿನ್ನ ಪಾದಸ್ಪರ್ಶನಂದ. ಚಾಮರವ ಬೀಸುವಡೆ, ನೋಡಾ ಹನ್ನೊಂದು ಕೋಟಿ ರುದ್ರಕನ್ನಿಕೆಯರ ಕೈತಾಳಧ್ವನಿಯು. ಚಂದನವ ಧರಿಸುವಡೆ, ನೋಡಾ ಮಲಯಾಚಲನಿವಾಸಿ. ವಸ್ತ್ರವ ಧರಿಸುವಡೆ, ನೋಡಾ ವ್ಯಾಘ್ರಾಸುರ ಗಜಾಸುರ ಚರ್ಮವಾಸಿ. ಭಸ್ಮವ ಧರಿಸುವಡೆ, ನೋಡಾ ಕಾಮನಸುಟ್ಟ ಭಸ್ಮ ಅಂಗದಲ್ಲಿ. ಅಕ್ಷತೆಯ ಧರಿಸುವಡೆ, ನೋಡಾ ಅಜಾಂಡಂಗಳ ದಾಟಿದ ಮಸ್ತಕ. ಅಂತಪ್ಪ ವಿಗ್ರಹವ ಪೂಜಿಸುವಡೆನ್ನಳವೆ? ಶರಣನ ಮುಖದಿಂದ ಬಂದ ಪದಾರ್ಥವ ಕೈಕೊಂಡು ಪೂಜಾ ಪ್ರೀತನಾಗಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಉತ್ಪತ್ತಿ ಸ್ಥಿತಿಲಯವಿಲ್ಲದಭವ ನೀನು ಕಂಡಯ್ಯಾ. ಎನಗೆ ಬೇರೆ ಸ್ವತಂತ್ರವಿಲ್ಲ ಕೇಳಾ. ನಿನ್ನಿಚ್ಛಾಮಾತ್ರದಲ್ಲಿ ನಾನಿಪ್ಪೆನು. ಹಿರಿಯ ನೀನೇ ದೇವಾ, ಕಪಿಲಸಿದ್ಧಮಲ್ಲಿಕಾರ್ಜುನಾ, ನಾನೇತರೊಳಗಪ್ಪೆನು ಹೇಳಾ, ಪ್ರಭುವೆ!
--------------
ಸಿದ್ಧರಾಮೇಶ್ವರ
ಉಸುರುಸುರ ಸರಹಿನೊಳಗಡಗಿಕೊಂಡು ಬೆಳೆವುತಿಪ್ಪುದು ಲೋಕ! ಇದನು ನೀನೆಂತು ಅರಿದೆ ಹೇಳಾ. ಆ ನಿನ್ನ ಪ್ರಸಾದಂದರಿತೆ ನಾ, ಎನ್ನ ಕಪಿಲಸಿದ್ಧಮಲ್ಲಿನಾಥಯಾ
--------------
ಸಿದ್ಧರಾಮೇಶ್ವರ
ಉಟ್ಟಡೇನು ತೊಟ್ಟಡೇನು ಮಲಮೂರು ಮುಟ್ಟದನ್ನಕ್ಕ? ಉಟ್ಟು ತೊಟ್ಟು ಬೆಟ್ಟುಣಿಗಿ ಕಟ್ಟಳೆ ಷಟ್ಸ ್ಥಲಗುರುವರ್ಯ ಚೆನ್ನಬಸವಣ್ಣ ಮೆರೆಯಲ್ಲವೆ? ಕಪಿಲಸಿದ್ಧಮಲ್ಲಿಕಾರ್ಜುನಂಗವೆ.
--------------
ಸಿದ್ಧರಾಮೇಶ್ವರ
ಉತ್ತರಕೋಣೆಯ ಉತ್ತರೋತ್ತರ ವಾಕ್ಯವ ಕೇಳಿ ಧನ್ಯನಾದೆನಯ್ಯಾ. ಉತ್ತರಕೋಣೆಯ ನಿಮಿತ್ತ ಪರಮಗುರುವಿನ ದೂಷಣೆಯ ಕೇಳಿ ಪಾಪಿಯಾದೆನಯ್ಯಾ. ಇದುಕಾರಣ, ಶರಣರ ದೂಷಣೆಯಿಂದ ಶರಣರ ಮನಕ್ಕೆ ಭೂಷಣವೆ? ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಉಪದೇಶವ ಮಾಡಿದಲ್ಲಿ ಗುರುವೆನಿಸಿದನು. ಕಾಮಿತ ಫಲಂಗಳ ಕೊಟ್ಟ್ಲಲ್ಲಿ ಲಿಂಗಮೂರ್ತಿ ಎನಿಸಿದನು. ನಿತ್ಯನಿರ್ವಾಣದ ಸಕೀಲವ ತೋರಿದಲ್ಲಿ ಜಂಗಮವೆನಿಸಿದನಯ್ಯಾ, ಎಲೆ ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಉಸುರ ಹಿಡಿದು ಮಜ್ಜನಕ್ಕೆರೆವೆನಯ್ಯಾ ನಿಮಗೆ; ವಿಷಯ ಮಾದು ಗಂಧವನೀವೆನಯ್ಯಾ ನಿಮಗೆ; ನೆನೆಹ ನೆಲೆಗೊಳಿಸಿ ಕೊಡುವೆನು ಕುಸುಮವನು; ತನುಗುಣಾದಿಗಳನುರುಹಿ ದಶಾಂಗಧೂಪವನಿಕ್ಕುವೆನು. ಎನ್ನನೆ ನಿಮಗೆ ಬೋನಕ್ಕೆ ಸವೆವೆನಯ್ಯಾ ಕಪಿಲಸಿದ್ಧಮಲ್ಲಿಕಾರ್ಜುನ, ಹೊರ ಬಳಕೆಯ ಪೂಜೆಗೆ ಎರಗದೆನ್ನ ಮನವು
--------------
ಸಿದ್ಧರಾಮೇಶ್ವರ
ಉಣ್ಣದ ಊಡದ ಫಲಪ್ರಾಣಿಗಳ ನಾ ಕಂಡು ನೋಡುತಿರ್ದೆ. ಅಂಧಕ ರೂಪಿನ ಉರಗನ ಮೋಹಕ್ಕೆ ಬೆರಗಾಗಿ ನೋಡುತಿರ್ದೆ. ಎರಡರ ಮೋಹಕ್ಕೆ ನೋಡಿ ತಾನು ನಗುತಿರ್ದ, ಕಪಿಲಸಿದ್ಧಮಲ್ಲಿನಾಥಾ.
--------------
ಸಿದ್ಧರಾಮೇಶ್ವರ
ಉಪಮೆ ಅನುಪಮೆ ಎಂಬುದು ನಿಮ್ಮಧೀನ ಕಂಡಯ್ಯಾ. ಹೇಳಿ ಕೇಳಿಹೆನೆಂಬುದು ನೀವು ಕಂಡಯ್ಯಾ. ಎನ್ನಂತರಂಗಕ್ಕೆ ಬಹಿರಂಗಕ್ಕೆ ನೀವೆ ಕರ್ತರಾದ ಕಾರಣ, ನಿಮ್ಮ ನಿಜವ ಹೇಳದರ್ದಡೆ ಎಂತುಳಿವೆನಯ್ಯಾ, ಕಪಿಲಸಿದ್ಧಮಲ್ಲಿನಾಥಯ್ಯಾ
--------------
ಸಿದ್ಧರಾಮೇಶ್ವರ