ಅಥವಾ
(214) (139) (48) (7) (13) (3) (0) (0) (105) (12) (12) (37) (5) (0) ಅಂ (44) ಅಃ (44) (163) (1) (60) (9) (0) (12) (0) (64) (0) (0) (0) (0) (0) (0) (0) (104) (0) (49) (10) (128) (74) (5) (68) (61) (158) (17) (10) (0) (47) (55) (61) (4) (129) (75) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಚರಿಸುವ ಜನರೆಲ್ಲ ದೇವರಲ್ಲ; ಚರಿಸಿ ಚರಿಸಿ ಭ್ರಮೆಗೊಂಡರು ಮತ್ತೆ ದೇವರು ದೇವರುಎಂದು, ನೋಡಾ. ಚರಿಸುವ ಜನರು ದೇವರು, ಚರಿಸದ ವಸ್ತು ದೇವರು, ನಾ ನೀನೆಂಬುಭಯ ದೇವರು, ಕಪಿಲಸಿದ್ಧಮಲ್ಲಿಕಾರ್ಜುನದೇವರು ದೇವರು.
--------------
ಸಿದ್ಧರಾಮೇಶ್ವರ
ಚರಿಸುವ ಚರನಿಗೆ ಚರ್ಚೆಯೆ ಭೂಷಣ. ಸುಂದರ ನಾರಿಗೆ ಗಂಬ್ಥೀರ ಪುರುಷನೆ ಭೂಷಣ. ಕೊಳನಲ್ಲಿಯ ನೀರಿಗೆ ಕಲಹಂಸೆಯೆ ಭೂಷಣ. ವನದಲ್ಲಿಯ ವಸಂತಕ್ಕೆ ಕೋಕಿಲನಾದವೆ ಭೂಷಣ. ನಮ್ಮ ಕಪಿಲಸಿದ್ಧಮಲ್ಲಿಕಾರ್ಜುನನ ಶರಣರಿಗೆ ನಿರ್ಮಲ ನಿಜಾನಂದವೆ ಭೂಷಣ.
--------------
ಸಿದ್ಧರಾಮೇಶ್ವರ
ಚೌಕೋಣೆಯ ಮಂಟಪದಲ್ಲಿ ಪಂಚಕೋಣೆಯ ದೇವ, ತ್ರಿಕೋಣೆಯಲ್ಲಿ ನಿಂತು ಸುಳಿಯುತ್ತಿರ್ಪ. ಆ ತ್ರಿಕೋಣೆಗಳಿದ್ದಂತಿರ್ಪವೆಂಬುದ ಅರಿಯಬಾರದು. ಹೊತ್ತಿಗೊಮ್ಮೆ ಪರಿಪರಿಯಾಗಿ ಕೇಡುಗೊಂಡುವು ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನನಲ್ಲಿ.
--------------
ಸಿದ್ಧರಾಮೇಶ್ವರ
ಚರಿತ್ರೆಗಳನೋದುವುದೇ ವಾಕ್ಸಿದ್ಧಿ ಭವವಳಿದು ಭಾಷಣೆಯ ಮಾಡುವುದೇ ವಾಕ್ಸಿದ್ಧಿ ನಮ್ಮ ಕಪಿಲಸಿದ್ಧಮಲ್ಲಿಕಾರ್ಜುನನ ಪಾದೋದಕ ಪ್ರಸಾದವ ಸ್ವೀಕರಿಸುವುದದೆ ವಾಕ್ಸಿದ್ಧಿ ಕಂಡಯ್ಯಾ, ಅಣ್ಣ ಮಡಿವಾಳ ಮಾಚಯ್ಯಾ.
--------------
ಸಿದ್ಧರಾಮೇಶ್ವರ
ಚರ್ಮವ ಧರಿಸಿಪ್ಪನೆಂಬರು, ಅದು ಪುಸಿಯೇನಯ್ಯಾ? ಪಂಚ ದೇಹಾಂತರ್ಯಾಮಿಯೆಂಬುದು ಶ್ರುತಿಸಿದ್ಧ. `ಕೃತಿವಾಸಸೇ ನಮಃ, ಜಗದಂತರ್ಯಾಮಿನೇ ನಮಃ' ಬ್ರಹ್ಮಕಪಾಲವ ಧರಿಸಿ ತೃಪ್ತಿಯಪ್ಪನೆಂಬರು, ಅದು ಪುಸಿಯೇನಯ್ಯಾ? ಸರ್ವಮುಖದಲ್ಲಿ ಭೋಜಿಸುವುದಾಗಿ. ``ಮಹಾದೇವೀ ಚರಣಂ ಚ ಮುಖೇನಾಸ್ವಾದನಂ ಚಿರಂ| ಕರೋಮಿ ಪ್ರಮುದಾ ಲೇಹ್ಯಂ ಚೋಹ್ಯಂ ಭಿಕ್ಷಾದಿಕಂ ಮಹತ್||' ಎಂಬುದು ಆಗಮಸಿದ್ಧ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ
--------------
ಸಿದ್ಧರಾಮೇಶ್ವರ
ಚೌಗ್ರಾಮಕೊಳದಲ್ಲಿ ಎಸೆವ ಚಾದಗವಕ್ಕಿ ಒಸರುವಮೃತವನು ಕೊಳ್ಳಾ. ಸೀಮೆಗೆಟ್ಟ ಅಮೃತವನು ಆರೈದು ಕೊಳಬಲ್ಲಡೆ ಇದ್ದೆಸೆಯ ಸೀಮೆಗೆಡುವೆ ನೀನು ಕಂಡಾ. ಮರಾಳ ಮರಾಳನೆಂಬ ಹಕ್ಕಿ ಹಾರದ ಮುನ್ನ ನೀನೆಯ್ದು ಅವ್ಯಯ ಪದವ ಕಪಿಲಸಿದ್ಧಮಲ್ಲಿನಾಥನೆಂಬ ಸುಖಸಮುದ್ರದಲಾಳಾ
--------------
ಸಿದ್ಧರಾಮೇಶ್ವರ
ಚಾತುಷ್ಟ ಬ್ರಹ್ಮದಲಿ ಅನೇಕ ವಿಧ ಸಂಗಮದ ಸಾಕಲ್ಯ ದೇಹವನು ಕಳೆದು, ಸತ್ಯಾನಂದ ಏಕಮಯನೆನಿಪ ಭವದೂರನು. ಆತನನು ತಂದು ಮನಮಧ್ಯದೊಳಿರಿಸಿದ ಅಜಾತ ಗುರುವೈ ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಚರಿಸಿ ಜಂಗಮವೆನಿಸಿತ್ತಯ್ಯಾ ಲಿಂಗವು. ನೆಲಸಿ ಲಿಂಗವೆನಿಸಿತ್ತಯ್ಯಾ ಲಿಂಗವು. ಇದರಿರವ ಅರುಹಿದಲ್ಲಿ ಗುರುವೆನಿಸಿತ್ತಯ್ಯಾ ಲಿಂಗವು. ಗುರು ಲಿಂಗ-ಜಂಗಮಕ್ಕೆ ತಿಲಾಂಶ ಭೇದವಿಲ್ಲ ನೋಡಾ, ಎಲೆ ದೇವಾ. ಭೇದಿಸದವಗೆ ಭವಬಾದೆ ತಪ್ಪುವದೆ, ದೇವರ ದೇವ ಕಪಿಲಸಿದ್ಧಮಲ್ಲಿಕಾರ್ಜುನದೇವಾ?
--------------
ಸಿದ್ಧರಾಮೇಶ್ವರ
ಚಿರಂಜೀವಿ ಎಂದಡೆ ನಿರೋಗಿ; ಚಿರಂಜೀವಿ ಎಂದಡೆ ಸಶಕ್ತ; ಚಿರಂಜೀವಿ ಎಂದಡೆ ಬಹುಕಾಲ ಬದುಕುವವನು. ಚಿರಂಜೀವಿ ಎಂದಡೆ ಪ್ರಳಯವ ಮೀರುವವನಲ್ಲ. ಕಪಿಲಸಿದ್ಧಮಲ್ಲಿಕಾರ್ಜುನ, ಬ್ರಹ್ಮವೆಂಬ ಶಬ್ದ ಬೇರುಂಟೆ?
--------------
ಸಿದ್ಧರಾಮೇಶ್ವರ
ಚತುರ್ವರ್ಣಿಯಾದಡೇನು, ಚತುರ್ವರ್ಣ್ಕಾೀತನೆ ವೀರಶೈವ ನೋಡಾ. ಚತುರ್ವೇಯಾದಡೇನು, ್ಲಚರಮ್ವ ದೇಹವಳಿಯದವನೆ ಚಾಂಡಾಲ ನೋಡಾ. ಚತುರಂಗಬಲಯುಕ್ತನಾದಡೇನು, ಚತುರಗುಣವಿಲ್ಲದ್ದಡೆ ದೇಶವನಾಳ್ವ ಪರಿಯ ನೋಡಾ. ್ಲಚರಮ್ವ ದೇಹಿಯಾಡೇನು, ಗಜಚರ್ಮಧರ ಕಪಿಲಸಿದ್ಧಮಲ್ಲಿಕಾರ್ಜುನ ಪ್ರಸನ್ನವಾಗದನ್ನಕ್ಕ ಬಾಳುವೆ ನೋಡಾ.
--------------
ಸಿದ್ಧರಾಮೇಶ್ವರ
ಚರಣ ಲಿಂಗವಾಗಿ ಕರ ಜಿಹ್ವೆಯಾಗಿ ಮಸ್ತಕದಲ್ಲಿ ಸಕಲ ಬ್ರಹ್ಮಾಂಡಗಳ ವ್ಯಾಪ್ತಿಯನು ಅಕ್ಷರವೆರಡರಲ್ಲಿ ಆಂದೋಳವಂ ಮಾಡಿ ಹರಿಯಲೀಯ್ಯದೆ ಹದುಳ ಮಾಡಿದಾತ ಗುರು! ಎನ್ನ ಶಬ್ದ-ಸ್ಪರ್ಶ-ರೂಪು-ರಸ-ಗಂಧ- ಧಾನ್ಯ-ಧಾರಣ-ಸಮಾಧಿ ಸನ್ನಿಹಿತ ಗುರು! ದೀಕ್ಷೆ ಶಿಕ್ಷೆ ಸ್ವಾನುಭಾವ ಸಂಪನ್ನತೆಯನುಳ್ಳಾತ ಗುರು! ಆದ್ಯಂತರದಲ್ಲಿ ಸಹಸ್ರ ಕಮಲದೊಳಗಣ ಕಂಜಕರ್ಣಿಕೆಯ ಮನ್ಮಸ್ತಕದ್ಲ ಒಪ್ಪಿಪ್ಪ ಅಕ್ಷರದ್ವಯದ ಆಂದೋಳನವನುಳ್ಳಾತ ಗುರು! ಅನಾಮಯಸ್ಥಾನದಲ್ಲಿ ಬಹುದಳದ ಕಮಲದೊಳಗೆ ಒಪ್ಪಿಪ್ಪ ಹಮ್ಮೆಂಬ ಬಿಂದುವಿನ ಆನಂದ ಮಧ್ಯಸ್ಥಾನದ ಶುದ್ಧ ಸಿಂಹಾಸನವನಿಕ್ಕಿ ಅದೆ ಮನೆಯಾಗಿರಲುಳ್ಳಾತ ಗುರು! ನಿತ್ಯ ನಿರಂಜನರೂಪೆ ತದ್ರೂಪಾಗಿ ಶಕ್ತಿಪಂಚಕದ ಆಜ್ಞೆಯ ಹೊದ್ದಪ್ಪಾತ ಗುರು! ಅನಿಮಿಷಸ್ಥಾನದಲ್ಲಿ ಇಪ್ಪ ಶಕ್ತಿತ್ರಯದ ಕ್ರಿಯಾಕಾರವ ನಡೆಸುವಾತ ಗುರು! ತನುಗುಣಪ್ರಾಪಂಚಿಕವನತಿಗಳೆದು ಸೀಮೆಯ ಮೀರಿದ ಸಂಬಂಧಿ ಪ್ರಮಾಣಿಲ್ಲದ ಪರಮಗುರುವೆ ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಚಿಂತೆ ನಿಶ್ಚಿಂತವಾಗದಯ್ಯಾ, ನಿಶ್ಚಿಂತ ನೆಲೆಮನೆಯಯ್ಯಾ, ಎನಗೆಂದಪ್ಪುದು ಹೇಳಾ. ಆನಂದಸ್ಥಾನದಲ್ಲಿ ತಾತ್ಪರಿಯದಿಂದ ನೀ ನಾನೆಂದಪ್ಪೆನು ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ.
--------------
ಸಿದ್ಧರಾಮೇಶ್ವರ